ಜೋಗಿ ಕಂಡಂತೆ : ಕಿಚ್ಚ ಸುದೀಪ್

ಸರಿಯಾಗಿ ಹದಿನಾರು ವರುಷದ ಹಿಂದೆ ಸುದೀಪ್ ನಟಿಸಿದ ಸ್ಪರ್ಶ ಚಿತ್ರ ನೋಡಿ ಕನ್ನಡಪ್ರಭದಲ್ಲಿ ವಿಮರ್ಶೆ ಬರೆದಿದ್ದೆ. ಅದರ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಸಂಕೋಚದಿಂದಲೇ ಮಾತಾಡಿದ್ದರು. ಗಾಡ್ ಫಾದರ್ ಇಲ್ಲದ, ಸಿನಿಮಾ ಹಿನ್ನೆಲೆಯೂ ಇಲ್ಲದ ಸುದೀಪ್ ಸಿನಿಮಾ ಪ್ರೀತಿಯಿಂದ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ತುಂಬ ಒದ್ದಾಡಿದ್ದುಂಟು.

ಈಗಿನ ಅನೇಕ ಹೀರೋಗಳ ಥರ ಮೂರು ಸಿನಿಮಾಕ್ಕೇ ಹೀರೋಯಿಸಮ್ ಮೈಗೂಡಿಸಿಕೊಂಡು ಕೆರವಾನ್ ಒಳಗೆ ಕೂತವರಲ್ಲ ಅವರು. ಮಾತು, ಆಲೋಚನೆ, ಅಭಿನಯ- ಎಲ್ಲದರಲ್ಲೂ ಸ್ಪಷ್ಟತೆ ಇದ್ದ ಸುದೀಪ್, ಅವರ ಸಮಕಾಲೀನರಂತೆ ಸಂಭಾವನೆ ತಗೊಂಡು ನಟಿಸಿ ತಮ್ಮ ಪಾಡಿಗೆ ಇದ್ದವರಲ್ಲ. ಸಿನಿಮಾ ಕಲಿಯಬೇಕು ಅಂತ ಹಗಲಿರುಳು ಕತೆ, ಚಿತ್ರಕತೆ, ನಿರ್ದೇಶನ, ತಾಂತ್ರಿಕತೆ, ಛಾಯಾಗ್ರಹಣ, ಎಡಿಟಿಂಗ್, ಪೋಸ್ಟರ್ ಡಿಸೈನ್, ಪ್ರಚಾರ- ಎಲ್ಲದರಲ್ಲೂ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದವರು.

ಆರಂಭದ ದಿನದಿಂದಲೇ ಭಯಂಕರ ಆತ್ಮವಿಶ್ವಾಸ ಮೈದುಂಬಿಸಿಕೊಂಡವರಂತೆ ಕಾಣಿಸುತ್ತಿದ್ದ ಸುದೀಪ್ ಸೋಲಿಗೆ ಅಂಜಿದವರಲ್ಲ. ಸ್ವಾತಿಮುತ್ತು ಸೋತಾಗ ಮಾತ್ರ ತುಂಬ ಭಾವುಕರಾಗಿ ಹೋಟೆಲ್ ಸರೋವರದಲ್ಲಿ ಕಣ್ಣೀರು ಹಾಕಿದ್ದರು.

ಮೈ ಆಟೋಗ್ರಾಫ್ ಚಿತ್ರದ ನಂತರ ಸುದೀಪ್ ಸ್ವಲ್ಪ ಮಟ್ಟಿಗೆ ಏಕಾಂಗಿಯಾಗಿಬಿಟ್ಟರು. ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಲೇ ಹೋದರು. ಆ ಏಕಾಗ್ರತೆಯೇ ಅವರನ್ನು ಇವತ್ತು ಈ ಹಂತಕ್ಕೆ ತಂದು ನಿಲ್ಲಿಸಿದೆ.

ಹದಿನೆಂಟು ವರುಷ ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡದ ನಟ ಅನ್ನಿಸಿಕೊಂಡ ನಂತರ ಸುದೀಪ್ ಪೂರ್ಣಪ್ರಮಾಣದ ತಮಿಳು ಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಜನೀಕಾಂತ್, ಕಮಲ್ ಹಾಸನ್, ಚಿರಂಜೀವಿ ಮುಂತಾದವರ ಯಶಸ್ವಿ ಸಿನಿಮಾಗಳನ್ನು ಕೊಟ್ಟ ಕೆ ಎಸ್ ರವಿಕುಮಾರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮಿಳು ನಾಯಕರ ನಡುವೆ ಕನ್ನಡದ ನಟನೊಬ್ಬ ದೊಡ್ಡ ಬಜೆಟ್ಟಿನ ಸಿನಿಮಾ ಮಾಡಿ, ದೇಶಾದ್ಯಂತ 700 ಚಿತ್ರಮಂದಿರಗಳಲ್ಲಿ , ಕರ್ನಾಟಕದ 300 ಚಿತ್ರಮಂದಿರಗಳಲ್ಲಿ ಅದನ್ನು ಬಿಡುಗಡೆ ಮಾಡುವ ಮಟ್ಟಕ್ಕೆ ಬೆಳೆದಿರುವುದೇ ಬಹುದೊಡ್ಡ ಸಾಧನೆ. ಇಂಥ ರಿಸ್ಕ್ ತೆಗೆದುಕೊಳ್ಳಬಲ್ಲ ಧೈರ್ಯ ಎಲ್ಲರಿಗೂ ಬರುವುದಕ್ಕೂ ಸಾಧ್ಯವಿಲ್ಲ. ಅನ್ಯನೆಲದಲ್ಲಿ ಕಾಲಿಡುವುದೇ ಬಹುದೊಡ್ಡ ರಿಸ್ಕು ಅಂತ ಅನೇಕ ಸಲ ಸಾಬೀತಾಗಿರುವಾಗ, ಸುದೀಪ್ ಅಂಥ ಸಾಹಸ ಮಾಡುತ್ತಿರುವುದನ್ನು ಹೆಮ್ಮೆಯಿಂದ ನೋಡಬೇಕು.

ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಧನುಷ್ -ಮುಂತಾದವರ ಸಿನಿಮಾಗಳು ಕರ್ನಾಟಕದ ತುಂಬ ಸದ್ದು ಮಾಡುತ್ತಿರುವಾಗ, ಕನ್ನಡದ ಸ್ಟಾರ್ ತಮಿಳುನಾಡಲ್ಲಿ ದಿಟ್ಟತನದಿಂದ ಚಿತ್ರರಸಿಕರ ಎದುರು ನಿಲ್ಲುವುದು ಸಣ್ಣ ಸಂಗತಿ ಅಲ್ಲ. ಇದು ಕರ್ನಾಟಕದ ಮಾರುಕಟ್ಟೆಯನ್ನು ವಿಸ್ತರಿಸುವ ಮಾತಲ್ಲ, ಕನ್ನಡದ ಪ್ರತಿಭಾವಲಯದ ವಿಸ್ತಾರವನ್ನು ತೋರುವಂಥ ಕೆಲಸ.

Congrats and Good Luck Sudeep 🙂

13754609_10154336924094941_1318993591092698745_n

ಲೇಖನ ಕೃಪೆ :  ಜೋಗಿ, ಜನಪ್ರಿಯ ಲೇಖಕರು

-Ad-

Leave Your Comments