“ಕಿರಿಕ್ ಪಾರ್ಟಿ “ಗೆ ಬಂದ್ರು ಉಪೇಂದ್ರ ಏನಂದ್ರು ?

“ಕಿರಿಕ್ ಪಾರ್ಟಿ ” ಕೆಲವರಿಗೆ ಅಳಿದುಳಿದ ಮತ್ತಲವರಿಗೆ ಅಳಿಯದೇ ಉಳಿದ ಕಾಲೇಜು ದಿನಗಳನ್ನ ನೆನಪಿಸುತ್ತಾ, ಹರೆಯದ ಮನಸ್ಸುಗಳಿಗೆ ಓಹೋ ನಮ್ಮದೇ ಕಥೆ ಅಂತ ಕುಣಿಸುವ ಕೆಲಸಕ್ಕೆ ಕೈ ಹಾಕಿದೆ. ಯವ್ವನ ಉಕ್ಕುವ ದಿನಗಳಲ್ಲಿ ಅದೂ ಹುಡುಗರು ಆಡುವ ಆಟಗಳು , ಕೊಡುವ ಕಾಟಗಳು, ಮಾಡುವ ತಲೆಹರಟೆಗಳು ಒಂದೇ ಎರಡೇ .ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಕಾಸು ಗಿಟ್ಟಿಸಿಕೊಳ್ಳುವುದರಿಂದ ಹಿಡಿದು , ಮೊದಲ ಹುಡುಗಿಯನ್ನ ಪಟಾಯ್ಸಿ, ಪಲ್ಟಿ ಹೊಡೆಸಿ , ಅವಳಿಗಾಗಿ ಎರಡೆರಡು ಗುಂಪುಗಳು ಕಿತ್ತಾಡಿ, ಫೈಟಿಂಗ್ ಮಾಡಿ ಪೌರುಷ ತೋರಿಸಿ ,ಕ್ಲಾಸಿಗೆ ಚಕ್ಕರ್ ಹೊಡೆದು, ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ , ಜ್ಯೂನಿಯರ್ಗಳನ್ನ ಗುರಾಯ್ಸಿ,ಸೀನಿಯರ್ಗಳಿಗೆ ಸಲಾಂ ಹೊಡೆದು ಹೀಗೆ ಎಷ್ಟೆಲ್ಲಾ ಸಾಹಸಕ್ಕೆ ,ಸರಸಕ್ಕೆ ಕಾಲೇಜು ಅನ್ನೋ ಕಲರ್ ಕಲರ್ ರಂಗ ಸಾಕ್ಷಿ ಅಲ್ವಾ.

ಇಂಥಾ ಬಿಸಿಬಿಸಿ ದಿನಗಳ , ಹಸಿಹಸಿ ಭಾವಗಳ, ಬಣ್ಣ ಬಣ್ಣದ ,ಕಿರಿಕಿರಿ ಪಿರಿಪಿರಿಗಳ ಕಥೆ ಇದು ನೋಡೋಕೆ ಮಜವಿದು ಅಂತ “‘ಕಿರಿಕ್ ಪಾರ್ಟಿ ” ಚಿತ್ರದ ಟ್ರೇಲರ್ ನೋಡ್ತಿದ್ದ ಹಾಗೆ ಅನ್ನಿಸುವುದುಂಟು . ಟ್ರೇಲರ್ ಬಿಡುಗಡೆ ಮಾಡಿದ ಉಪೇಂದ್ರ ಕೂಡ ನನಗೆ ಮತ್ತೆ ಕಾಲೇಜಿಗೆ ಹೋಗಬೇಕು ಅನ್ನಿಸುತ್ತಿದೆ. ಟ್ರೈಲರ್ ನೋಡಿದ್ರೆ ಸಿನಿಮಾ ಚೆನ್ನಾಗಿ ಮಾಡಿದ್ದಾರೆ ಅನ್ಸತ್ತೆ . ಮ್ಯೂಸಿಕ್ ಚೆನ್ನಾಗಿದೆ. ಇಬ್ಬರು ಹೀರೋಯಿನ್ ಗಳು ಚೆನ್ನಾಗಿದ್ದಾರೆ. ನನಗು ಈ ರಕ್ಷಿತ್ ಶೆಟ್ಟಿಗೂ ಏನು ವ್ಯತ್ಯಾಸ ಅಂದ್ರೆ ನಾನು ಹೀರೋ ಆಗ್ಬೇಕು ಅಂತ ಸ್ಕ್ರಿಪ್ಟ್ ಬರೆದು, ಡೈರೆಕ್ಟ್ ಮಾಡಿ , ಎಲ್ಲ ಥರ ಒದ್ದಾಡಿ ಹೀರೋ ಆದೆ. ಆದ್ರೆ ಇವ್ರು ಹೀರೋ ಆಗಿರೋದೇ ಡೈರೆಕ್ಟ್ ಮಾಡಕ್ಕೋಸ್ಕರ . ಮುಂದೆ ಏನ್ ರಕ್ಷಿತ್ ಅಂದ್ರೆ ೨-೩ ಸಿನಿಮಾದಲ್ಲಿ act ಮಾಡ್ತಿದೀನಿ ಅದಾದ ಮೇಲೆ ಒಂದು ಸಿನಿಮಾ ಡೈರೆಕ್ಟ್ ಮಾಡ್ಬೇಕು ಅಂತಾರೆ. ಅದ್ರಲ್ಲೂ ಡೈರೆಕ್ಟ್ ಅನ್ನೋದನ್ನ ಸ್ಟ್ರೆಸ್ ಮಾಡ್ತಾರೆ. ಇನ್ನೊಂದು ಕಡೆ ಈ ರಿಷಬ್ ಶೆಟ್ಟಿ ಕಾಲೇಜಲ್ಲಿ ತುಂಬಾ ಹೊಡೆದಾಡ್ತಿದ್ವಿ ಇಲ್ಲಿ ಏನಾದ್ರೂ ಸಾಧಿಸೋಣ ಅಂತ ಬಂದಿದ್ದೀವಿ ಅಂತಾರೆ. ಆದ್ರೆ ಇಲ್ಲಿ ಸಿಕ್ಕಾಪಟ್ಟೆ ಬಡಿದಾಡಬೇಕ್ರಪ್ಪ ಅನ್ನುವ ಕಿವಿಮಾತನ್ನು ಹೇಳಿದ್ರು. ಅಷ್ಟೇ ಅಲ್ಲದೆ ಈ ಆಲದ ಮರ ತನ್ನ ಬಿಳಿಲುಗಳನ್ನ ಎಷ್ಟು ವಿಸ್ತಾರವಾಗಿ ಹಬ್ಬಿಸುತ್ತೆ ಅಂದ್ರೆ ನಾವ್ ಆಮೇಲೆ ಮೂಲ ಮರ ಹುಡುಕೋದೇ ಕಷ್ಟ ಅದೇ ಆಲದ ಹೆಗ್ಗಳಿಕೆ . ನೀವು ಹಾಗೆ ಬೆಳೀಬೇಕು ,ಹಬ್ಬಿಕೊಳ್ಳಬೇಕು .ನಿಮ್ಮನ್ನ ನೋಡಿ ಇನ್ನಷ್ಟು ಜನ ಚಿತ್ರರಂಗಕ್ಕೆ ಬರಬೇಕು . ಕಿರಿಕ್ ಪಾರ್ಟಿ ದೊಡ್ಡ ಹಿಟ್ ಆಗ್ಬೇಕು ಅಂತ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಸ್ಟೈಲಲ್ಲಿ ಹಾರೈಸಿದ್ರು.

ನಿರ್ದೇಶಕ ರಿಷಬ್ ಹಾಗು ನಾಯಕ ರಕ್ಷಿತ್ ಶೆಟ್ಟಿ ಪ್ರಕಾರ ಇದು ಸಂಗೀತಮಾಯವಾದ ಮನೋರಂಜನಾ ಚಿತ್ರ . ಥ್ಯಾಕ್ಸ್ ಹೇಳಿ ವಯಸ್ಸಿಗೆ ಅಂತ ಎಲ್ಲರೂ ಖುಷಿಯಾಗಿ ನೋಡಬಹುದಾದ ಸಿನಿಮಾ .

ಪತ್ರಿಕೆಯೊಂದರ ಸ್ಪರ್ಧೆಯಲ್ಲಿ ಗೆದ್ದು ರಿಷಬ್ ಕಣ್ಣಿಗೆ ಬಿದ್ದ ಕೊಡಗಿನ ಬೆಡಗಿ ರಶ್ಮಿಕಾಗೆ ಸ್ಪಷ್ಟ ಕನ್ನಡ ಬಾರದಿದ್ರೂ ಕಿರಿಕ್ ಪಾರ್ಟಿ ಯಲ್ಲಿ ಕಿರಿಕ್ ಮಾಡದೆ ನಿರ್ದೇಕರು ಕಲಿಸಿದಂತೆ ಕಲಿತು ತಾವೇ ಡಬ್ ಕೂಡ ಮಾಡಿದ್ದಾರಂತೆ. . ಅರಳು ಉರಿದಂತೆ ಮಾತಾಡುವ ಮತ್ತೊಬ್ಬ ನಾಯಕಿ ಸಂಯುಕ್ತ ಉಪೇಂದ್ರರ ಪಕ್ಕಾ ಫ್ಯಾನ್ !!ಅದರಲ್ಲೂ ಅವ್ರ ಹೇರ್ ಸ್ಟೈಲ್ ಕಾಪಿ ಹೊಡೆಯೋದ್ರಲ್ಲಿ ಎಕ್ಸ್ಪರ್ಟ್ . ರಿಷಬ್ ,ರಕ್ಷಿತ್ ತಂಡದಲ್ಲಿ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ.

ಸಂಭಾಷಣಕಾರರಾದ ಅಭಿಜಿತ್ ಮಹೇಶ್, ಧನಂಜಯ್ (೩ ಹಾಡುಗಳನ್ನು ಬರೆದಿದ್ದಾರೆ.) ಎಡಿಟರ್ ಸಚಿನ್ ಹೀಗೆ ಒಟ್ಟಾರೆ ಇಡೀ ತಂಡಕ್ಕೆ ಚಿತ್ರದ ಬಗ್ಗೆ ಹೆಮ್ಮೆ ಇದೆ.

ಮುಂದಿನ ತಿಂಗಳು ಕಿರಿಕ್ ಪಾರ್ಟಿಯ ಹಾಡುಗಳನ್ನ ಕೇಳಿಸಿ, ಡಿಸಂಬರ್ ನಲ್ಲಿ ತೆರೆಯ ಮೇಲೆ ಚಿತ್ರ ಹರಿಸಿ ಸಿನಿ ರಸಿಕರ ಮನಗೆಲ್ಲುವ ಉತ್ಸಾಹದಲ್ಲಿದೆ ಉಳಿದವರು ಕಂಡಂತ ಪ್ರತಿಭಾವಂತರ ತಂಡ .

-Ad-

Leave Your Comments