ಪುನೀತ್ ರಾಜ್ ಕುಮಾರ್ ಮೆಚ್ಚಿದ ಮಜಾಟಾಕೀಸ್ !!

ಮಜಾ ಟಾಕೀಸ್ ಕನ್ನಡದ ನಂಬರ್ ಒನ್ ಟಾಕಿಂಗ್ ಶೋ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ.. ಆದ್ರೆ ನಟ, ನಟಿಯರನ್ನು ಕರೆದು ಸಿನಿಮಾಗಳಿಗೆ ಪ್ರಮೋಷನ್ ಮಾಡ್ತಾ ಜನರನ್ನು ನಗಿಸೋದೇ ಬೇರೆ..  ಬುದ್ಧಿ ಜೀವಿಗಳು, ಸಾಹಿತಿಗಳು, ಹಿರಿಯ ನಟರನ್ನು ಕೂರಿಸಿ ಮೇರು ನಟನ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳನ್ನು ಮನಕಲಕುವ ಹಾಗೆ ಮಾತನಾಡಿಸುವುದೇ ಬೇರೆ . ಅದರ ಎತ್ತರವೇ ಬೇರೆ !!  ೨೦೦ ಎಪಿಸೋಡ್‌ಗಳನ್ನು ಕಂಪ್ಲೀಟ್ ಮಾಡಿ ಮುನ್ನುಗ್ಗುತ್ತಿರುವ  ಮಜಾ ಟಾಕೀಸ್‌ನ ಸಾರಥಿ  ಸೃಜನ್ ಲೋಕೇಶ್  ಡಾ ರಾಜ್ ಕುಮಾರ್ ಅವರ ೮೮ನೇ ಹುಟ್ಟುಹಬ್ಬದ ಪ್ರಯುಕ್ತ  ಕನ್ನಡ ಕುಲಕೋಟಿಗೆ ಕೊಟ್ಟ ಅತ್ಯದ್ಭುತ ಕಾರ್ಯಕ್ರಮ ಡಾ.ರಾಜ್ ಕುಮಾರ್ ಸ್ಪೆಷಲ್ !! ಇದು ಅಭಿಮಾನಿಗಳನ್ನಷ್ಟೇ ಅಲ್ಲ ರಾಜ್ ಪುತ್ರ ಪುನೀತ್ ರನ್ನೂ  ಭಾವುಕರನ್ನಾಗಿಸಿದೆ. 
ಮಜಾ ಟಾಕೀಸ್ ಕೊಟ್ಟ ಎರಡು ಅಪರೂಪದ , ಮರೆಯಲಾಗದ ಸಂಚಿಕೆಗಳ ಹಲ-ಕೆಲವು ಭಾಗಗಳನ್ನು ನಿಮಗಾಗಿ ಕೊಡುತ್ತಿದ್ದೇವೆ. ಇಲ್ಲಿರುವ ಅದೆಷ್ಟೋ ಸಂಗತಿಗಳು ಅಣ್ಣಾವ್ರ ವ್ಯಕ್ತಿತ್ವಕ್ಕೆ, ಮೇರು ನಟನೆಗೆ ಹಿಡಿದ ಕನ್ನಡಿ . ಕಾರ್ಯಕ್ರಮ ನೋಡಿದ ಪುನೀತ್ ಕೂಡ ಸೃಜನ್ ಗೆ ಕರೆ ಮಾಡಿ ಶುಭಾಷಯ ಹೇಳಿದ್ದಾರೆ. ಓದ್ತಾ ಓದ್ತಾ ನಿಮ್ಮ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಓದಿ ನೋಡಿ ..
 
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಅನ್ನೋ ಹಾಡಿನ ಮೂಲಕ ನಟ ಸೃಜನ್ ಎಂಟ್ರಿ ಕೊಡ್ತಿದ್ದ ಹಾಗೆ ನೆರೆದಿದ್ದವರ ಮನಸ್ಸಲ್ಲಿ ಡಾ ರಾಜ್ ಕುಮಾರ್ ಹಾಗೆ ಒಂದು ಕ್ಷಣ ಬಂದು ಹೋದ್ರು..
 ಹಾಸ್ಯ ಕಲಾವಿದರ ಅಣ್ಣ 
ಮಜಾ ಟಾಕೀಸ್ ಗೆ   ಡಾ ರಾಜ್ ಜೊತೆ ಕೆಲಸ ಮಾಡಿದ ಕಾಮಿಡಿ ಕಲಾವಿದ ಉಮೇಶ್ ಹಾಗೂ ಹೊನ್ನಾವಳ್ಳಿ ಕೃಷ್ಣ ಬಂದಿದ್ರು. ಹೊನ್ನಾವಳಿ ಕೃಷ್ಣ ರಾಜಣ್ಣ ಅವರನ್ನು ನೋಡಿದ ಅನುಭವ ಮಾತ್ರ ಮನೋಹರ. ಒಮ್ಮೆ ಮದ್ರಾಸ್‌ನ ಗೋಲ್ಡನ್ ಸ್ಟೂಡಿಯೋದಲ್ಲಿ ನೋಡಿದ್ದು, ಅಣ್ಣಾವ್ರನ್ನ  ನೋಡ್ತಿದ್ದ ಹಾಗೆ ಓಡಿ ಹೋಗಿ ಕಾಲಿಗೆ ನಮಸ್ಕಾರ ಮಾಡಿದ್ರಂತೆ.. ಸೈಕಲ್ ಬಾಡಿಗೆಗೆ ತಂದಿದ್ದೇನೆ ೧೦ ಪೈಸೆ ಬಾಡಿಗೆ ಕೊಡ್ಬೇಕು ಅಂತಾ ಅರ್ಜೆಂಟ್‌ನಲ್ಲಿ ಹೊರಟು ಬಿಟ್ರಂತೆ. ಇನ್ನೂ ಉಮೇಶ್ ಅವರು ರಾಜಣ್ಣ ಜೊತೆ ೬೦ ವರ್ಷಗಳ ಸ್ನೇಹವಂತೆ.. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕೆಲಸ ಮಾಡುವಾಗಲೇ ರಾಜ್ ಗೊತ್ತಿದ್ರಂತೆ.. ಬೇಡರ ಕಣ್ಣಪ್ಪ ಚಿತ್ರ ಚಿತ್ರದುರ್ಗದಲ್ಲಿ ಬಿಡುಗಡೆ ಆದಾಗ ಇವರಿಗೆ ಉಚಿತ ಎಂಟ್ರಿಯಂತೆ. ಎನ್ನೊಡೆಯ ಬವಬಂಧನ ಹರಿಸೋ ಗುರಿಯ ಕಾಣದೇ ಹೇ.. ಹೇ.. ಹೇ.. .. ಹೇ.. ಅನ್ನೋ ಸಾಂಗ್‌ಗೆ ತಪ್ಪದೆ ಹಾಜರಾಗಿ ಚಪ್ಪಾಳೆ ಹಾಕ್ತಿದ್ರಂತೆ.. ನಮ್ಮ ಮುತ್ತುರಾಜಣ್ಣ ಸಿನಿಮಾ ಮಾಡಿದ್ದಾರೆ ಅನ್ನೋದೆ ಇವರಿಗೆ ಖುಷಿಯಂತೆ..
 
 ನನಗೆ ಮರೆಯಲು ಆಗದ  ಕ್ಷಣ ಅಂದ್ರೆ ಶೃತಿ ಸೇರಿದಾಗ ಚಿತ್ರದ್ದು .ಆ ಚಿತ್ರ ಗೊಂಬೆಯಾಟವಯ್ಯ ಅನ್ನೋ ಹಾಡಿನ ಚಿತ್ರೀಕರಣ ಪ್ರಸಾದ್ ಸ್ಟೂಡಿಯೋದಲ್ಲಿ ನಡೆಯುತ್ತೆ.. ನಾನು ಮುಂದೆ ಹಾಡ್ತೀನಿ ಅಣ್ಣಾವ್ರು ಹಿಂದೆ ಹಾಡ್ತಾ ಇರ್‍ತಾರೆ.. ಅದು ನಂಗೆ ಸಿಕ್ಕ ದೊಡ್ಡ ಸೌಭಾಗ್ಯ ಅಂದ್ರು ಉಮೇಶ್. ಜೊತೆಗೆ ಅವರು ಒಮ್ಮೆ ಗಜಪತಿ ಗರ್ವಭಂಗ ಸಿನಿಮಾ ನೋಡಿಕೊಂಡು ಬಂದು ನನ್ನನ್ನು ಬಿಗಿದಪ್ಪಿಕೊಂಡ್ರು, ಆ ಬಳಿಕ ಏನಣ್ಣ ಎಂದೆ ಅವರು ಗಜಪತಿ ಗರ್ವಭಂಗ ಸಿನಿಮಾದಲ್ಲಿ ನರಸಿಂಹರಾಜು ನೆನಪಾದ್ರು ಅಷ್ಟು ಚೆನ್ನಾಗಿ ಪಾತ್ರ ಮಾಡಿದ್ದೀಯಾ ಅಂತಾ ಹರಸಿದ್ದು ನನ್ನನ್ನು ಇಲ್ಲೀವರೆಗೂ ತಂದು ನಿಲ್ಲಿಸಿ ಅದನ್ನು ಮರೆಯೋಕೆ ಆಗಲ್ಲ ಅಂತಾ ಹೇಳುವಾಗ ಅವರ ಧ್ವನಿಯಲ್ಲಿ ಯಲ್ಲಿ ನಡುಕ ಕಾಣಿಸ್ತು..
ಬರಗೂರು ಬಿಚ್ಚಿಟ್ಟ ಅಭಿಮಾನಿ ದೇವರ ಸತ್ಯ 
 
ಇಷ್ಟರಲ್ಲಿ ನಿರ್ದೇಶಕ ನಾಗಾಭರಣ, ಹಾಗೂ ಬರಗೂರು ರಾಮಚಂದ್ರಪ್ಪ ಅವರು ಟಾಕೀಸ್‌ಗೆ ಎಂಟ್ರಿ ಕೊಟ್ರು..  ಅಭಿಮಾನಿ ದೇವರುಗಳೇ ಅನ್ನೋದು ಅಣ್ಣವ್ರ ಟ್ರೇಡ್ ಡೈಲಾಗ್.. ಆದ್ರೆ ಅದು ಹುಟ್ಟಿದ್ದು ಎಲ್ಲಿ ಅನ್ನೋದನ್ನು ಬಿಚ್ಚಿಟ್ರು.. ಎನ್‌ಟಿಆರ್ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕುಮಾರ್ ಹಾಗೂ ರಜನಿಕಾಂತ್ ಅವರನ್ನು ತಿರುಪತಿ ಟ್ರಸ್ಟ್ ಗೆ  ಮೆಂಬರ್ ಮಾಡಿದ್ರು .. ಅಲ್ಲಿ ಒಂದು ಸಭೆಗೆ ಹೋಗಿದ್ದಾಗ ತಿಮ್ಮಪ್ಪನ ದರ್ಶನ ಪಡೆಯುವ ಆಸೆ ವ್ಯಕ್ತಪಡಿಸಿದ್ರಂತೆ.. ಆದ್ರೆ ಟ್ರಸ್ಟಿಯಾಗಿ ದರ್ಶನ ಪಡೆಯದೆ ಒಬ್ಬ ಸಾಮಾನ್ಯ ಭಕ್ತನಂತೆ ಕ್ಯೂನಲ್ಲಿ ನಿಂತಾಗ ಎಲ್ಲಾ ಭಕ್ತರು ಏನ್ ಸಾರ್ ನೀವಿಲ್ಲಿ ನಿಂತಿದ್ದೀರಿ..? ನಿಮ್ಮನ್ನು ನೋಡಿದ್ರೆ ದೇವರನ್ನೇ ನೋಡಿದ ಹಾಗೆ ಆಯ್ತು ಅಂದ್ರಂತೆ.. ಅದನ್ನು ಕೇಳಿದ ರಾಜ್ ಕುಮಾರ್ ನನ್ನಲ್ಲಿ ದೇವರನ್ನ ಕಂಡ ಇವರ ಒಳಗೂ ದೇವರಿದ್ದಾನೆ ಅಂತಾ ಅನ್ಕೊಂಡು ಮುಂದೆ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಬಳಿಕ ಮೊದಲ ಬಾರಿಗೆ ವೇದಿಕೆ ಮೇಲೆ ಅಭಿಮಾನಿ ದೇವರುಗಳೇ ಅಂತಾ ಹೇಳಿದ್ರಂತೆ.. ಇದನ್ನು ಸ್ವತಃ ಅಣ್ಣಾವ್ರೇ ಬರಗೂರು ಅವರಿಗೆ ಹೇಳಿದ ಮಾತಂತೆ..
ಅಣ್ಣಾವ್ರ ಕನಸಿನ ಪಾತ್ರ
 
ನೃಪತುಂಗಾ, ಕರ್ಣ ನ  ಪಾತ್ರಗಳನ್ನು  ಮಾಡಬೇಕು ಅಂತಿದ್ರು  ರಾಜಣ್ಣ. ಪಾತ್ರ ನನ್ನನ್ನ ಚಿತ್ ಮಾಡ್ಬೇಕು, ನಟ ಪಾತ್ರವನ್ನು ಚಿತ್ ಮಾಡಬಾರದು ಅನ್ನುತ್ತಿದ್ದರು ರಾಜಣ್ಣ _ನಾಗಾಭರಣ  
 
ಭರಣ ಅವರ ಮಾತನ್ನೇ ಮುಂದುವರಿಸಿದ ಬರಗೂರು ಅವರು, ಮೂರನೇ ತರಗತಿಯನ್ನೂ ಓದದ ರಾಜ್ ಕುಮಾರ್ ವಿನಯದಿಂದ ವಿದ್ವತ್  ತಂದುಕೊಟ್ರು. ೩ನೇ ಕ್ಲಾಸ್ ಓದದವರು ರಾಜ್ ಕುಮಾರ್ ಆಗಲ್ಲ. ಬಸ್ ಕಂಡಕ್ಟರ್ ಆದವರು ರಜನಿಕಾಂತ್ ಆಗಲ್ಲ ಅದೇ ರಾಜ್‌ಕುಮಾರ್.. ಕಾವ್ಯ ಮಿಮಾಂಸೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡ್ಬೇಕು ಅಂತಿದ್ರೆ, ಡಾ ರಾಜ್ ಕುಮಾರ್ ಹೇಳಿದ್ರು ಪಾತ್ರ ನನ್ನನ್ನು ಚಿತ್ ಮಾಡ್ಬೇಕು ಅಂತಾ.. ಇದೊಂದು ಕಾವ್ಯ ಮಿಮಾಂಸೆಯೊಳಗೆ ಹೊಸ ಮಿಮಾಂಸೆ ಅದಕ್ಕಾಗಿ ರಾಜ್‌ಕುಮಾರ್ ವಿದ್ವಾಂಸ !
ಈ ನಡುವೆ ಭಕ್ತ ಪ್ರಹ್ಲಾದ ಚಿತ್ರದ ಅಪ್ಪ ಮಗನ ದೃಶ್ಯವನ್ನು ತೆರೆಯ ಮೇಲೆ ಮೂಡಿಸಿದ ಕುರಿ ಪ್ರತಾಪ ಹಾಗೂ ಕುಳ್ಳ ಪವನ್ ಜನರನ್ನು ರಂಜಿಸಿದ್ರು..
 
ಈ ಪಾತ್ರ ಮಾಡುವಾಗ ಜೊತೆಯಲ್ಲಿದ್ದ ಹೊನ್ನವಳ್ಳಿ ಕೃಷ್ಣ, ಭಕ್ತ ಪ್ರಹ್ಲಾದ ಚಿತ್ರದ ಕೊನೆ ಭಾಗದ ಚಿತ್ರೀಕರಣ ವೇಳೆ ಅಣ್ಣಾವ್ರು ಎಲ್ಲಿರುವನು ನಿನ್ನ ಹರಿ ಅಂದ್ರೆ, ಅಪ್ಪಾಜಿ ಒಂದ ಬರ್‍ತಿದೆ. ನಿಮ್ಮ ಕಣ್ಣು ನೋಡಿದ್ರೆ  ಭಯ ಆಗ್ತಿದೆ ನಾಳೆ ಮಾಡೋಣ ಅಂದ್ರಂತೆ ಪುನೀತ್.
 
ಡಾ. ರಾಜ್ ಕುಮಾರ್ ನಮ್ಮನ್ನು ಅಗಲಿದ ದಿನವಾದ ಏಪ್ರಿಲ್ ೧೨, ೨೦೦೬ ಎಂಬ ಶೀರ್ಷಿಕೆಯಲ್ಲಿ ಒಂದು ಕವನ ವಾಚಿಸಿದ್ದು ಅದ್ಬುತವಾಗಿತ್ತು. ಅಂದು ರಾಜ್ ಕುಮಾರ್ ಯಮಲೋಕಕ್ಕೆ ಹೋಗಿದ್ದು, ಯಮನಿಗೆ ವಿನಯ ಕಲಿಸಲು ಹೋದರು, ಸ್ವರ್ಗಕ್ಕೆ ಕನ್ನಡ ಕಲಿಸಲು ಹೋದರು, ದೇವರುಗಳನ್ನು ಮನುಷ್ಯರನ್ನಾಗಿಸಲು ಹೋದರು.. ನಮ್ಮ ರಾಜಕುಮಾರ ಸಾವಿಲ್ಲದ ಸಾರ್ವಭೌಮ, ಸಾವಿನ ಜೊತೆಯೂ ಸ್ನೇಹ ಬೆಳೆಸುವ ಪ್ರಜಾರಾಮ.. ಬಂಗಾರದ ಮನುಷ್ಯ ಆಗುವ ಮುಂಚೆ ರಾಜ್ ಕುಮಾರ್ ಬೆವರಿನ ಮನುಷ್ಯ ಆಗಿದ್ದರು ಅದಕ್ಕಾಗಿಯೇ ಈ ಎತ್ತರಕ್ಕೆ ಬೆಳೆದಿದ್ದು ಅಂದ್ರು ರಾಮಚಂದ್ರಪ್ಪ.
 
ಕೊನೆಯಲ್ಲಿ ದಯಾನಂದ್ ರಾಜ್ ಕುಮಾರ್ ಅವರ ಶೈಲಿಯಲ್ಲಿ  ಮಾತನಾಡಿ ರಂಜಿಸಿದ್ರು.. ಅದೇಗಿತ್ತು ಅಂದ್ರೆ..  ಕಣ್ಣುಮಿಟುಕಿಸದೆ , ಕಿವಿಯಗಲಿಸಿ , ಮನಸ್ಸು ತೆರೆದು ನೋಡುವಂತಿತ್ತು.
 
೧. ಎಲ್ರು ನಿಮ್ತರ ಆಗ್ಬೇಕು ಅಂತಾ ಆಸೆ ಪಡ್ತಾರೆ.. ನಾನು ನಿಮ್ ಥರ ಆಗ್ಬೇಕು ಅಂದ್ರೆ ಏನ್ ಮಾಡ್ಬೇಕು..?
 
ಕಲಿಬೇಕು.. ನಾನು ಕಲಿತಾ ಇದ್ದೀನಿ, ನೀವು ಕಲಿತಾ ಇದ್ದೀರಿ. ನಾನು ನಿಮ್ ಥರ ಆಗ್ಬೇಕು ಅಂತಿದ್ದೀನಿ, ನೀವು ನನ್ ಥರ ಆಗ್ಬೇಕು ಅಂತಿದ್ದೀರಿ, ನಾವೆಲ್ಲಾ ಮೇಲಿರುವ ಅವನ ಥರ ಆಗ್ಬೇಕು ಅಲ್ವಾ..
 
೩..ಅಣ್ಣಾವ್ರೆ ನಿಮಗೆ ತುಂಬಾ ಪ್ರಿಯವಾದ ಊಟ ಯಾವುದು..?
ಮುದ್ದೆ ಮುದ್ದೆ, ಅದಕ್ಕಿಂತಲೂ ರುಚಿಯಾದ ಊಟ ಂದ್ರೆ ತಾಯಿ ಕೊಡುವ ಕೈತುತ್ತು. ಅದಕ್ಕಿಂತ ರುಚಿಯಾದ ಊಟ ಯಾವುದಿದೆ.. ಅಲ್ವಾ.. 
 
೪.. ನೀವು ಓದಿದ್ದು ೩ನೇ ಕ್ಲಾಸ್, ಇಂಗ್ಲೀಷ್ ಭಾಷೆ ಹೇಗೆ ಡೈಲಾಗ್ ಹೇಳ್ತೀರಿ..
ಅಲ್ಲಾ, ಇಂಗ್ಲೀಷ್‌ನಲ್ಲಿ ಇರೋದು ಜುಜುಬಿ ೨೬ ಅಕ್ಷರ, ನಾನು ೪೯ ಅಕ್ಷರ ಕಲಿತಿದ್ದೀನಿ ನಮ್ ಕನ್ನಡದ ಮುಂದೆ ಇದ್ಯಾವುದು ಲೆಕ್ಕಾ ಅಲ್ವಾ.. 
 
೫.. ನೀವು ಪರಭಾಷಾ ಚಿತ್ರಗಳಿಗೆ ಯಾಕ್ ಹೋಗ್ಲಿಲ್ಲ..
ಇಲ್ಲೇ ಹೊಟ್ಟೆ ತುಂಬಾ ಊಟ ಹಾಕ್ತಿದ್ರೆ ನಾನು ಬೇರೆ ಕಡೆ ಯಾಕ್ ಹೋಗ್ಲಿ ಅಲ್ವಾ..
 
೬.. ದೇವರು ನಿಮ್ಮ ಮುಂದೆ ಪ್ರತ್ಯಕ್ಷ ಆದ್ರೆ ಏನ್ ಕೇಳ್ತೀರಾ..? 
ನಾನು ಕೇಳೊದು ಇಷ್ಟೆ ಸುಬ್ಬಯ್ಯ ನಾಯ್ಡು ಇಂದ ಹಿಡಿದು ಶಂಕರ್ ನಾಗ್ ತನಕ ವಾಪಸ್ ಕೊಟ್ಬಿಡಪ್ಪ, ನಾವು ಇಲ್ಲೇ ಚೆನ್ನಾಗಿ ಇರ್‍ತೀವಿ ಅಂತಾ.. 
ಒಟ್ಟಿನಲ್ಲಿ ಈ ಬಾರಿಯ ಮಜಾ ಟಾಕೀಸ್ ಮನೋರಂಜನೆಯ ಜೊತೆಗೆ ರಾಜಕುಮಾರ ಎಂಬ ಮಹಾನ್ ವ್ಯಕ್ತಿಯ ವ್ಯಕ್ತಿತ್ವವನ್ನೇ ನಮ್ಮ ಕಣ್ಣ ಮುಂದೆ ನಿಲ್ಲಿಸಿ, ಮನಸ್ಸು ಅರಳಿಸುವ ಅದ್ಭುತ ಕೆಲಸ ಮಾಡಿತು .
-ಮಂಜು ಮಂಡ್ಯ
 
-Ad-

Leave Your Comments