ಬಾಹುಬಲಿ ಚಿತ್ರದ ಸಾಹಸ ದೃಶ್ಯ ನಕಲು ಮಾಡಲುಹೋಗಿ ಪ್ರಾಣ ಕಳಕೊಂಡ ಮುಂಬೈ ಉದ್ಯಮಿ

ಎಸ್‌ಎಸ್‌ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ವಿಶ್ವದಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದು ಎಲ್ಲರಿಗೂ ತಿಳಿದಿರೊ ವಿಷಯ. ಆದರೆ ಇಲ್ಲೊಬ್ಬ ವ್ಯಕ್ತಿ ‘ಬಾಹುಬಲಿ’ ಚಿತ್ರದಲ್ಲಿನ ಸಾಹಸ ದೃಶ್ಯ ನಕಲು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.

“ಬಾಹುಬಲಿ: ದಿ ಬಿಗಿನಿಂಗ್‌” ಚಿತ್ರದಲ್ಲಿ ನಟ ಪ್ರಭಾಸ್‌ ಧುಮ್ಮಿಕ್ಕುವ ಜಲಪಾತದಿಂದ ಜಿಗಿಯುವ ದೃಶ್ಯ ನಿಮಗೆ ನೆನಪಿರಬಹುದು. ತೆರೆಯ ಮೇಲೆ ಆ ದೃಶ್ಯವನ್ನು ನೋಡಿದರೆ ಸಾಕು ನಮ್ಮ ಮೈ ಒಂದು ಕ್ಷಣ ಪುಳಕಗೊಳ್ಳುತ್ತದೆ. ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ತಂತ್ರಜ್ಞಾನದ ಸಹಾಯದಿಂದ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿರುತ್ತದೆ. ಅಕಸ್ಮಾತ್‌ ಇಂಥ ಸಾಹಸಗಳನ್ನು ನಿಜ ಜೀವನದಲ್ಲಿ ಪ್ರಯೋಗಿಸಲು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.
ಇಂದ್ರಪಾಲ್‌ ಪಾಟೀಲ್‌ ಎಂಬ ಮುಂಬಯಿ ಮೂಲದ ಉದ್ಯಮಿ, ‘ಬಾಹುಬಲಿ’ಯಲ್ಲಿ ಶಿವುಡು ಪಾತ್ರಧಾರಿ ಪ್ರಭಾಸ್‌ ಮಾಡಿದ ಸ್ಟಂಟ್‌ನ್ನು ಪ್ರಯೋಗಿಸಲು ಹೋಗಿ ಪ್ರಾಣ ಕಳೆದುಕೊಂಡ ನತದೃಷ್ಟ. ಶಹಪುರದ ಮಹುಲಿ ಕೋಟೆಯ ಜಲಪಾತ ವೀಕ್ಷಿಸಲು ಬಂದಿದ್ದ ಇಂದ್ರಪಾಲ್‌, ಹುಚ್ಚು ಸಾಹಸಕ್ಕೆ ಕೈ ಹಾಕಿ, ಮೇಲಿಂದ ಜಿಗಿದಿದ್ದಾರೆ. ದುರಾದೃಷ್ಟವಶಾತ್‌ ನೀರಲ್ಲಿ ಬೀಳದೆ, ಮಧ್ಯೆಯೇ ಪ್ರಾಣ ಕಳೆದುಕೊಂಡಿದ್ದಾರೆ. ‘ಬಾಹುಬಲಿ’ ಚಿತ್ರದ ಸಾಹಸ ದೃಶ್ಯದಿಂದ ಈತ ಪ್ರಭಾವಿತನಾಗಿ ಈ ಹುಚ್ಚು ಪ್ರಯತ್ನ ಮಾಡಿದ್ದಾನೆ ಎಂದು ಶಹಪುರ ಪೊಲೀಸರು ತಿಳಿಸಿದ್ದಾರೆ.

ಇನ್ನು ಇಂದ್ರಪಾಲ್‌ ಸಹೋದರ ಇದು ‘ಬಾಹುಬಲಿ’ ಸ್ಟಂಟ್‌ನಿಂದಾದ ಸಾವಲ್ಲ ಎಂದು ಹೇಳಿದ್ದಾರೆ. ತಮ್ಮ ಸಹೋದರನನ್ನು ಯಾರೋ ಮೇಲಿನಿಂದ ತಳ್ಳಿದ್ದಾರೆ ಇಲ್ಲವೇ ಇದೊಂದು ಯೋಜಿತ ದಾಳಿಯಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸ್ಥಳದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆಯಂತೆ. ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಾಗಿ ಘಟಿಸುತ್ತವೆ ಎಂದು ಪೊಲೀಸರು ‘ಮುಂಬೈ ಮಿರರ್‌’ಗೆ ತಿಳಿಸಿದ್ದಾರೆ. ಹೀಗಾಗಿ ಈ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

-Ad-

Leave Your Comments