ಇಲ್ಲಿ ನನ್ನ ಕನಸುಗಳಿವೆ ನೀವು ಕೈಹಿಡಿಯುತ್ತೀರಲ್ಲ ?

ಮಂಡ್ಯದ ಹುಡುಗರು ಇಂದು ತೆರೆ ಕಂಡಿದೆ. ನಾಯಕ ನಟ ರಾಮಸಾಗರ್ ತಮ್ಮ ಸಿನಿಮಾ ಪಯಣವನ್ನು  ciniadda.com ಜೊತೆ ಹಂಚಿಕೊಂಡಿದ್ದಾರೆ.

mandyada-hudugaru-3

ನನ್ನೂರು ಸಾಗರದ ಬಳಿ ಇರೋ ನಾಡಕಲಸಿ. ರೈತ ಕುಟುಂಬ ನಮ್ಮದು . ಅಪ್ಪ ಇಲ್ಲ . ಅಮ್ಮ ಊರಲ್ಲೇ ಇದ್ದಾಳೆ . ಬದುಕು ಅರಸಿ ಬೆಂಗಳೂರಿಗೆ ಬಂದು ಹತ್ತಾರು ಕಂಪೆನಿಗಳಲ್ಲಿ ಕೆಲಸ ಮಾಡಿದೆ.ಕೈ ತುಂಬಾ ಸಂಬಳ ಬರ್ತಿತ್ತು. ಅದ್ಯಾಕೋ ಮನಸ್ಸಿಗೆ ಮಾತ್ತ್ರ ಸಮಾಧಾನವಿರಲಿಲ್ಲ. ಮತ್ತೇನೋ ಮಾಡ್ಬೇಕು ಸಾಧಿಸಬೇಕು ಅನ್ನೋ ಒಳ ಬೇಗುದಿ . ಇಂಥಾ ಸಮಯದಲ್ಲಿ  ಬಸವೇಶ್ವರ ನಗರದಲ್ಲಿ ಗೆಳೆಯನೊಬ್ಬ ಸಿಕ್ಕ . ನೀನು ನಾಟಕಗಳಲ್ಲಿ ಅಭಿನಯಿಸ್ತಾ ಇದ್ದವನು ಆಕ್ಟಿಂಗ್ ಯಾಕೆ ಟ್ರೈ ಮಾಡಬಾರದು . ನಮಗೆ ಖುಷಿ ಕೊಡೊ ಕೆಲಸ ಮಾಡ್ಬೇಕು. ನಿನ್ನ ಗುರಿ ಏನು ಅಂತ ನಿರ್ಧಾರ ಮಾಡ್ಕೊಂಡು ಕೆಲಸ ಮಾಡು ಅಂದ. ಆಗ ನನಗೆ acting ಮಾಡ್ಬೇಕು, ಹೀರೋ ಆಗ್ಬೇಕು  ಅನ್ನುವ ನನ್ನ ಒಳಗಿನ ಆಸೆ ಗರಿಗೆದರಿತು.

ಒಂದಿನ ಪೇಪರ್ನಲ್ಲಿ ಕಲಾವಿದರು ಬೇಕಾಗಿದ್ದಾರೆ ಅಂತ ಜಾಹಿರಾತು ಬಂದಿದ್ದು ನೋಡಿ ರಾಜಾಜಿನಗರಕ್ಕೆ ಹೋದೆ. ಅಲ್ಲಿ ಅವರ ಬಣ್ಣ ಬಣ್ಣದ ಮಾತು ಕೇಳಿ ಓಹ್ ಇನ್ನೇನು ಹೀರೋ ಆಗೇ ಬಿಟ್ಟೆ ಅನ್ನುವ ಭ್ರಮೆಯಲ್ಲಿ  ಇದ್ದ ಕೆಲಸಕ್ಕೂ ಗುಡ್ ಬೈ ಹೇಳಿಬಿಟ್ಟೆ. ಅಲ್ಲೊಬ್ಬ ಬಳ್ಳಾರಿ ಮೂಲದ ಅಸಾಮಿ ಇದ್ದ. ಅವನು ನಂಗೆ ಈ ಹೋಟೆಲ್ಗೆ ಬಾ ಪ್ರೊಡ್ಯೂಸರ್ ಮೀಟ್ ಮಾಡ್ಸ್ತೀನಿ . ಆ ಲಾಡ್ಜ್ ಗೆ ಬಾ ಡೈರೆಕ್ಟರ್ ಭೇಟಿ ಮಾಡ್ಸ್ತೀನಿ ಅಂತ ಸುಮಾರು ಎರಡು ವರ್ಷ ಅಲೆಸಿದ . ಅವನ ಎಲ್ಲ ಖರ್ಚು ವೆಚ್ಚ ನಾನೇ ನೋಡಿಕೊಳ್ತಿದ್ದೆ. ಕೊನೆಗೊಂದು ದಿನ ಸತ್ಯ ಗೊತ್ತಾಯ್ತು. ಅವನಿಗೂ ಸಿನಿಮಾಗು ಯಾವ ಸಂಬಂಧಾನೂ ಇಲ್ಲ. ಅವನೊಬ್ಬ ಕ್ಷೌರಿಕ .

ಮಣ್ಣು ತಿಂದಾಗಿತ್ತು . ಹಾಗಂತ ಬದುಕು ಮುರುಕೊಳ್ಳೋದ್ಯಾಕೆ ಅವಮಾನ ಆದ್ರೂ ಪರವಾಗಿಲ್ಲ ಊರಿಗೆ ಹೋಗ್ಬಿಡೋಣ ಅನ್ನಿಸಿ ಹೊರಟುಬಿಟ್ಟೆ. ಮಗ ಡಾಕ್ಟ್ರೋ ,ಎಂಜಿನಿಯರೋ ಆಗ್ತಾನೆ ಅಂದ್ರೆ ಮನೆಯಲ್ಲಿ ಪ್ರೋತ್ಸಾಹ ಮಾಡ್ತಾರೆ actor ಆಗ್ತೀನಿ ಅಂದ್ರೆ ಯಾರ್ ತಾನೇ ಬಿಡ್ತಾರೆ? ನಮ್ಮನೇಲಿ ನಾನು ಕೆಲಸ ಬಿಟ್ಟು ಸಿನಿಮಾ ಹುಚ್ಚು ಹಿಡಿಸಿಕೊಂಡಿದ್ದು ಯಾರಿಗೂ ಇಷ್ಟವಿರಲಿಲ್ಲ. ಮನೆಯವರಿಗೆ ಭಾರವಾಗಿ ಉಳಿಯುವುದು ನನಗು ಇಷ್ಟವಿರಲಿಲ್ಲ. ಅಲ್ಲೇ ರಿಲಯನ್ಸ್ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಸಿಕ್ತು .25,000 ಸಂಬಳ. ಒಂದಷ್ಟು ತಿಂಗಳು ಕಳೆದ ಮೇಲೆ ಬೆಂಗಳೂರಿನ ಸ್ನೇಹಿತನ ಕರೆ ಬಂತು . ಹಿಂದೆ ಅವನು ನಾನು ಸಿನಿಮಾಕ್ಕಾಗಿ ಒಂದಷ್ಟು ಒದ್ದಾಡಿದ್ದೆವು. ಪ್ರೊಡ್ಯೂಸರ್ ಸಿಕ್ಕಿದ್ದಾರೆ ನಾವಿಬ್ಬರು ಸೇರಿ ಕೆಲಸ ಮಾಡುವ. ಸ್ಕ್ರಿಪ್ಟ್ ವರ್ಕ್ ಮಾಡ್ಕೊಡು .ನೀನೇ ಹೀರೋ ಅಂದ. ಬೆಂಗಳೂರಿಗೆ ಬಂದು ಕೆಲಸ ಶುರುಮಾಡಿದ ಮೇಲೆ ಗೊತ್ತಾಗಿದ್ದು ಇದು ವಿಪರೀತ ಇಗೋಇಷ್ಟ್ ಗಳ ಸಂಘ ಅಂತ. ನನಗು ಆಗ ಇಗೋ ಇತ್ತು ಅನ್ಸತ್ತೆ. ಒಟ್ಟ್ನಲ್ಲಿ “ಮನಸಿನ ಪುಟದಲಿ” ಒಳ್ಳೆ ಚಿತ್ರವಂತೂ ಆಗಲಿಲ್ಲ.

ಮತ್ತೆ ಊರಿನ ದಾರಿ ಹಿಡಿದೆ. ರಿಲಯನ್ಸ್ ಕಂಪನಿಯವರು ಹೀರೋಗಳಿಗೆ ಇಲ್ಲಿ ಕೆಲಸವಿಲ್ಲ ಹೊರಡಪ್ಪ ಅಂದ್ರು. ಕೈಯಲ್ಲಿ ಉಳಿದಿದ್ದ ಹಣದಲ್ಲಿ ಒಂದು ಆಟೋ ತೆಗೆದುಕೊಂಡು ಓಡ್ಸೋಕೆ ಶುರು ಮಾಡ್ದೆ. ಬೆಂಗಳೂರಲ್ಲಿದ್ದಾಗ ಕಲಿತಿದ್ದ ಡ್ರೈವಿಂಗ್ ಬದುಕಿಗೆ ಆಧಾರವಾಯ್ತು. ಹೊಟ್ಟೆ ಪಾಡಿಗಾಗಿ ಯಾರ ಬಳಿಯಲ್ಲೂ ಕೈಚಾಚುವುದು ಬೇಕಿರಲಿಲ್ಲ ನನಗೆ . ಏನಾದ್ರೂ ಸರಿ ದುಡಿದು ತಿನ್ನಬೇಕು ಅನ್ನುವುದು ನನ್ನ ನಂಬಿಕೆ.

ನನ್ನ ಆಸೆ ,ಕನಸು, ಶ್ರಮ ಅರಿತಿದ್ದ ಮಂಡ್ಯದ ಗೆಳೆಯ ಶ್ರೀನಿವಾಸ್  ಕರೆ ಮಾಡಿ ನಾನೇ ಪ್ರೊಡ್ಯೂಸ್ ಮಾಡಿ ಡೈರೆಕ್ಟ್ ಮಾಡ್ತೀನಿ ನಿನ್ನ ಹೀರೊ ಮಾಡಬೇಕು ಅಂತ ನನಗು ಆಸೆ ಇದೆ ಬಾ ಬೆಂಗಳೂರಿಗೆ ಅಂದ್ರು . ಸಿನಿಮಾ ಸೆಳೆತ ಅಷ್ಟು ಸುಲಭಕ್ಕೆ ಹೋಗುವಂಥದ್ದಲ್ಲ. ಈಗಲಾದ್ರೂ ನನ್ನ ಕನಸು ಈಡೇರಬಹುದು ಅನ್ನೋ ಆಸೆಯಿಂದ ಮತ್ತೆ ಬೆಂಗಳೂರಿನ ದಾರಿ ಹಿಡಿದೆ. ಸುಮಾರು ೨ ವರ್ಷ ಕಥೆ -ಸಂಭಾಷಣೆ ಗಾಗಿ ಕೆಲಸ ಮಾಡಿದ್ವಿ . ಈ ಬಾರಿ ಒಳ್ಳೆ ಚಿತ್ರ ಮಾಡ್ಲೇಬೇಕು ಹಾರರ್ ಸಿನಿಮಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡ್ಬೇಕು ಅಂತ ಸಾಕಷ್ಟು ತಯಾರಿ ಮಾಡಿಕೊಂಡು “ಮಂಡ್ಯದ ಹುಡುಗರು ” ತಂದಿದ್ದೇವೆ.  ನಟಿಸಿದ್ದಕ್ಕಿಂತ ಹೆಚ್ಚಾಗಿ ಸಂಭಾಷಣೆಗೆ ಕೆಲಸ ಮಾಡಿದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ. ನಿದ್ದೆ, ಊಟ ಯಾವುದನ್ನು ಲೆಕ್ಕಿಸದೆ ಶ್ರಮ ಬಸಿದು ನಿಮ್ಮ ಮುಂದೆ ಇಟ್ಟಿದ್ದೇವೆ. ವಿಭಿನ್ನ ಚಿತ್ರ “ಮಂಡ್ಯದ ಹುಡುಗರು ” .ಇಲ್ಲಿ ಪ್ರೀತಿ, ಸ್ನೇಹ , ಹಾರರ್  ಎಲ್ಲ ಇದೆ. ಸಿನಿಮಾ ಪ್ರಿವ್ಯೂ ನೋಡಿದ ಗೆಳೆಯರು 1.51 ನಿಮಿಷ ಹೇಗೆ ಸರಿದು ಹೋಗುತ್ತೋ ಗೊತ್ತಾಗೋದೇ ಇಲ್ಲ ಅಷ್ಟು ಚೆನ್ನಾಗಿ  ಬಂದಿದೆ ಅಂದಿದ್ದಾರೆ . ಮೊದಲ ಷೋ ನೋಡಿದವರೆಲ್ಲ ಸಿನಿಮಾ ಬಗ್ಗೆ ಒಳ್ಳೆ ಮಾತಾಡ್ತಾ ಇದ್ದಾರೆ .ನೀವು ದಯವಿಟ್ಟು ನೋಡಿ . ತಪ್ಪುಗಳಿದ್ದರೆ ಹೇಳಿ . ಮುಂದೆ ತಿದ್ದಿಕೊಳ್ಳುವೆ . ಆದ್ರೆ ನೋಡದೆ ಮಾತ್ರ  ಇರ್ಬೇಡಿ . ನನ್ನ ಕನಸುಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ ಕೈ ಹಿಡಿಯುವಿರಲ್ಲ .

ನಿಮ್ಮವ

ರಾಮ್ ಸಾಗರ್

 

-Ad-

Leave Your Comments