ಕರುನಾಡ ಕನಸುಗಾರನ ಮಗನೇ ಈಗ ಕೆಲಸವಿಲ್ಲದವ .. ಅಂತೇ.
ಹೌದು ಸ್ಯಾಂಡಲ್ ವುಡ್’ನ ಪ್ರೇಮಲೋಕದ ಸೃಷ್ಟಿಕರ್ತ, ಕರುನಾಡ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಚಿತ್ರರಂಗದ ಎಂಟ್ರಿಗೆ ಸಜ್ಜಾಗಿ ವರ್ಷಗಳು ಉರುಳುತ್ತಿದೆ. ಪ್ರೀತಿಯ ಅಪ್ಪಾಜಿ ನಿರ್ದೇಶನದಲ್ಲಿ ‘ರಣಧೀರ’ನಾಗಿ ಪ್ರೇಮಲೋಕದಲ್ಲಿ ಮೆರೆದಾಡಬೇಕಿದ್ದ ಮನೋರಂಜನ್’ರ ಮೊದಲ ಸಿನೆಮಾ ಕಾರಣಾಂತರಗಳಿಂದ ಸೈಡಾಯಿತು. ಇದರ ಹಿಂದೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಮನು ಸ್ಯಾಂಡಲ್ ವುಡ್ ‘ಸಾಹೇಬ’ನಾಗಿ ಎಂಟ್ರಿ ಕೊಡಲು ರೆಡಿಯಾಗ್ತಿದ್ದಾರೆ. ಈ ಚಿತ್ರದ ನಡುವಲ್ಲೇ ಕ್ರೇಜಿಸ್ಟಾರ್ ಪುತ್ರನಿಗೆ ಕೆಲಸವಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಕನಸುಗಾರನ ಪುತ್ರನಿಗೆ ಕೆಲಸವಿಲ್ವಾ ಎಂದು ಯೋಚಿಸುತ್ತಿದ್ದೀರಾ….?
ಎಸ್… ಯುವ ನಟ ಮನೋರಂಜನ್ ಶೀಘ್ರದಲ್ಲೇ ನಿರುದ್ಯೋಗಿ ಆಗಲಿದ್ದಾರೆ. ಅದು ತಮ್ಮ ಹೊಸ ಸಿನೆಮಾಕ್ಕಾಗಿ ಅಷ್ಟೇ. 2014ರಲ್ಲಿ ಬಾಕ್ಸ್ ಆಫೀಸ್ ಹಾಗು ಅವಾರರ್ಡ್ಸ್ ಎರಡರಲ್ಲೂ ಕೊಳ್ಳೆ ಹೊಡೆದು ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ‘ವೇಲೆ ಇಲ್ಲಾದ ಪಟ್ಟದಾರಿ'(ವಿಐಪಿ) ಚಿತ್ರವು ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿ ಹಿಂದೆಯೇ ಹರಿದಾಡಿತ್ತು. ಕಾಲಿವುಡ್’ನಲ್ಲಿ ಧನುಷ್ ನಿರ್ವಹಿಸಿದ ನಿರುದ್ಯೋಗಿ ಇಂಜಿನಿಯರ್ ಪಾತ್ರವು ನಮ್ಮಲ್ಲಿ ಜೂ.ಕ್ರೇಜಿಸ್ಟಾರ್ ಮನೋರಂಜನ್ ಮಾಡಲಿದ್ದಾರೆ ಎಂಬ ಸುದ್ದಿಯೊಂದಿದೆ.
ಈ ತಮಿಳು ಚಿತ್ರದ ರಿಮೇಕ್ ರೈಟ್ಸ್ ಖ್ಯಾತ ಬಹುಭಾಷಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಳಿಯಿದ್ದು, ಚಿತ್ರದ ನಾಯಕನ ಪಾತ್ರಕ್ಕೆ ಮನೋರಂಜನ್’ರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಚಿತ್ರವನ್ನು ಅಧ್ಯಕ್ಷ, ರನ್ನ ಚಿತ್ರ ಖ್ಯಾತಿಯ ನಂದಕಿಶೋರ್ ನಿರ್ದೇಶಿಸಲಿದ್ದಾರೆ. ಹಾಗೆಯೇ ವಿಐಪಿ ಚಿತ್ರದಲ್ಲಿ ನಾಯಕಿಯಾಗಿ ಖ್ಯಾತ ಸೌತ್ ನಟಿ ಅಮಲಾ ಪೌಲ್ ಕಾಣಿಸಲಿದ್ದಾರೆ ಎನ್ನುವ ಸುದ್ದಿಯು ಬಂದಿದೆ. ಮೂಲ ಚಿತ್ರದಲ್ಲೂ ಧನುಷ್’ಗೆ ನಾಯಕಿಯಾಗಿ ಅಮಲಾ ಕೂಡ ಬಣ್ಣ ಹಚ್ಚಿದ್ದರು.
ಸದ್ಯ ಕಿಚ್ಚ ಸುದೀಪ್’ರ ಹೆಬ್ಬುಲಿ ಚಿತ್ರದೊಂದಿಗೆ ಕನ್ನಡಕ್ಕೆ ಪದಾರ್ಪಣೆಗೈಯ್ಯಲಿರುವ ನಟಿ ಅಮಲಾರನ್ನು ರಾಕ್ ಲೈನ್ ಕೆಲಸವಿಲ್ಲದ ಮನೋರಂಜನ್ ಹೀರೊಯಿನ್ ಮಾಡಲಿದ್ದಾರಾ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
★ಕಪ್ಪು ಮೂಗುತ್ತಿ