‘ಶಿವಣ್ಣ ಯೂನಿವರ್ಸಿಟಿ ಇದ್ದಂಗೆ’ ಎಂದ ಟಗರು ಚಿತ್ರ ನಟಿ ಮಾನ್ವಿತಾ

ಡಿಜಿಟಲ್ ಕನ್ನಡ ಟೀಮ್:

‘ಶಿವಣ್ಣ ಒಂದು ಯೂನಿವರ್ಸಿಟಿ ಇದ್ದಂಗೆ. ಅವರಿಂದ ಕಲಿಯುವುದು ತುಂಬಾ ಇದೆ. ಟಗರು ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸುವಾಗ ಕಲಿಯುವ ಅವಕಾಶ ಸಿಕ್ಕಿತು. ಶಿವಣ್ಣ ಅವರಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಇದೆ. ಚಿತ್ರದ ಶೂಟಿಂಗ್ ವೇಳೆ ಅದರ ಅನುಭವವಾಯಿತು. ಶಿವಣ್ಣನ ಯೂನಿವರ್ಸಿಟಿಯಲ್ಲಿ ಅನೇಕ ನಟಿಯರು ಪಾಸಾಗಿದ್ದಾರೆ. ನಾನು ಈ ಚಿತ್ರದ ಮೂಲಕ ಪಾಸಾಗುವ ಭರವಸೆ ಇದೆ’ ಇದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜತೆಗೆ ಟಗರು ಚಿತ್ರದಲ್ಲಿ ಅಭಿನಯಿಸುವಾಗ ತಮಗಾದ ಅನುಭವವನ್ನು ನಟಿ ಮಾನ್ವಿತಾ ಹರೀಶ್ ಹೇಳಿಕೊಂಡ ಪರಿ.

ದುನಿಯಾ ಸೂರಿ ಹಾಗೂ ಶಿವಣ್ಣನ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಟಗರು ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಮಂಗಳವಾರ ಟೌನ್ ಹಾಲ್ ನಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಮಾನ್ವಿತಾ ಅವರು ಶಿವಣ್ಣನ ಬಗ್ಗೆ ಮಾತನಾಡಿದರು. ಶಿವು ಅಡ್ಡ ಹಾಗೂ ರಾಜ್ ಡೈನಸ್ಟಿ ಅಭಿಮಾನಿ ಸಂಘವೇ ಈ ಟೀಸರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಆರಂಭದಿಂದ ಅಂತ್ಯದವರೆಗೂ ಶಿವಣ್ಣ ಹಾಗೂ ರಾಜ್ ಕುಟುಂಬದ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಜೋರಾಗಿ ಜೈಕಾರ ಹಾಕುತ್ತಾ ಕಾರ್ಯಕ್ರಮಕ್ಕೆ ಶಕ್ತಿ ತುಂಬಿದರು. ಅಭಿಮಾನಿಗಳ ಈ ಚಪ್ಪಾಳೆ ಹಾಗೂ ಹರ್ಷೋದ್ಗಾರದ ನಡುವೆ ಟಗರು ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಟೀಸರ್ ಬಿಡುಗಡೆಯಾಗಿದ್ದು, ಕಡ್ಡಿಪುಡಿ ಚಿತ್ರದ ನಂತರ ಶಿವಣ್ಣ ಹಾಗೂ ಸೂರಿ ಕಾಂಬಿನೇಷನ್ ನಲ್ಲಿ ಮತ್ತೊಂದು ಯಶಸ್ವಿ ಚಿತ್ರ ತಯಾರಾಗುತ್ತಿರುವ ಭರವಸೆ ಹುಟ್ಟು ಹಾಕಿದೆ. ಇನ್ನು ಸಂಗೀತದ ಪ್ಲಸ್ ಪಾಯಿಂಟ್ ಎಂಬುದು ಟೀಸರ್ ನಿಂದ ಗೊತ್ತಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳ ನೃತ್ಯ ತಂಡದಿಂದ ಅಣ್ಣಾವ್ರ ಚಿತ್ರ, ಶಿವಣ್ಣ ಹಾಗೂ ಪುನೀತ್ ಅವರ ಚಿತ್ರದ ಹಾಡುಗಳಿಗೆ ನೃತ್ಯ ಮಾಡಿದರು. ಇನ್ನು ಕಾಮನಬಿಲ್ಲು ಚಿತ್ರದಲ್ಲಿ ಅಣ್ಣಾವ್ರು ಯೋಗ ಮಾಡುವುದನ್ನು ನೋಡಿ ಸ್ಫೂರ್ತಿಗೊಂಡ ಬಾಲಕ ಯೋಗ ಕಲಿತು ಅಂತಾರಾಷ್ಟೀಯಮಟ್ಟದಲ್ಲಿ ಪ್ರಶಸ್ತಿ ಗೆದ್ದಿರುವ ಯೋಗ ಯಶವಂತ್ ಎಂಬ ಹುಡುಗನ ಯೋಗ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಈ ಸಮಾರಂಭದಲ್ಲಿ ಕರ್ನಾಟಕದ ಕ್ರಿಕೆಟ್ ದಂತಕಥೆ ಜಿ.ವಿಶ್ವನಾಥ್ ಅವರು ಕ್ರಿಕೆಟ್ ಆರಂಭಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸಾ.ರಾ ಗೋವಿಂದ್, ಲಹರಿ ವೇಲು, ಹೀರಿಯ ಪೊಲೀಸ್ ಅಧಿಕಾರಿ ಭಾಸ್ಕರ್, ಟಾಲಿವುಡ್ ನಟ ಅಲ್ಲೂ ಸಿರೀನ್, ರಕ್ಷಿತ್ ಶೆಟ್ಟಿ, ಯೋಗರಾಜ್ ಭಟ್, ಧನಂಜಯ್, ವಸಿಷ್ಠ ಸಿಂಹ, ನಿರ್ಮಾಪಕರಾದ ಶ್ರೀಕಾಂತ್, ಕುಮಾರ್ ಅವರು ಸಹ ಭಾಗವಹಿಸಿದ್ದರು.

ಈ ಚಿತ್ರ ಟೀಸರ್ ಮುಗಿದ ಬಳಿಕ ಮಾತನಾಡಿದ ಬಾಸ್ಕರ್ ಅವರು, ‘ಈ ಚಿತ್ರದಲ್ಲಿ ಪೊಲೀಸ್ ಅವರನ್ನು ಚೆನ್ನಾಗಿ ತೋರಿಸಲಾಗಿದೆ. ಆದಷ್ಟು ಬೇಗ ಈ ಚಿತ್ರ ಬಿಡುಗಡೆಯಾಗಲಿ. ನಮ್ಮ ಪೊಲೀಸ್ ಇಲಾಖೆಯಲ್ಲಿರುವ ಎಲ್ಲಾ ಸಿಬ್ಬಂದಿಗಳು ಈ ಚಿತ್ರ ನೋಡಲಿ ಎಂದು ನಾನು ಹೇಳುತ್ತೇನೆ’ ಎಂದರು.

ನಂತರ ಮಾತನಾಡಿದ ಪುನೀತ ರಾಜ್ ಕುಮಾರ್, ‘ನಾನು ಶಿವಣ್ಣನ ಅಬಿಮಾನಿ. ಈ ಚಿತ್ರದ ಟೀಸರ್ ನೋಡಿದ ಮೇಲೆ ಯಾವಾಗ ಈ ಚಿತ್ರ ಬಿಡುಗಡೆಯಾಗುತ್ತದೋ ಎಂದು ಕಾಯುತ್ತಿದ್ದೇನೆ’ ಎಂದರು.

-Ad-

Leave Your Comments