ಮಾಸ್ತಿಗುಡಿ ಮಾಲೀಕನಿಗೆ ಕಂಕಣ ಭಾಗ್ಯ..!!

ಕನ್ನಡದಲ್ಲಿ ಸಾಕಷ್ಟು  ವಿಚಾರಗಳಲ್ಲಿ ಸದ್ದು ಮಾಡಿದ ದುನಿಯಾ ವಿಜಿ ಅಭಿನಯದ  ಮಾಸ್ತಿ ಗುಡಿ ಮಾಲೀಕ ಅಂದ್ರೆ ಮಾಸ್ತಿಗುಡಿ ಸಿನಿಮಾ ನಿರ್ಮಾಪಕನಿಗೆ ಮದುವೆ ನಡೆದಿದೆ.. ಸಿನಿಮಾ ನಿರ್ಮಾಪಕನ ಮದುವೆ ಅಂದ್ರೆ ಭಾರೀ ವೈಭವೋಪೇತವಾಗಿ ನಡೆದಿರಬಹುದು ಎಂದು ಊಹೆ ಮಾಡಿಕೊಂಡ್ರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ಕದ್ದು ಮುಚ್ಚಿ ಮದ್ವೆಯಾಗಿದ್ದಾರೆ. ಅದೂ ಕೂಡ ಹುಡುಗಿಯನ್ನು ಎತ್ತಾಕ್ಕೊಂಡು ಹೋಗಿ ರಾತ್ರೋ ರಾತ್ರಿ ಮದುವೆಯಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದುವೆಯಾದರು ಅಂತ ಹೇಳಲಾಗ್ತಿದೆ ಆದ್ರು ಫೋಟೋ ನೋಡಿದ್ರೆ ಚಾಮುಂಡಿ ಬೆಟ್ಟ ಎನಿಸುತ್ತಿಲ್ಲ.
ಎಂಎಲ್ಎ ಮಗಳ ಜೊತೆ ಎಸ್ಕೇಪ್..!
ದಾವಣಗೆರೆ ಜಿಲ್ಲೆ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಮಗಳು ಲಕ್ಷ್ಮೀ ನಾಯ್ಕ್ ಜೊತೆ ಮದುವೆಯಾಗಿದ್ದಾರೆ. ಅದೂ ಕೂಡ ಪ್ರೇಮ ವಿವಾಹ. ಹಲವು ದಿನಗಳಿಂದ ಲಕ್ಷ್ಮೀ ನಾಯ್ಕ್ ಹಾಗೂ ನಿರ್ಮಾಪಕ ಸುಂದರ್ ಗೌಡ ಪ್ರೀತಿ ಮಾಡ್ತಿದ್ರಂತೆ. ಈ ವಿಚಾರ ಶಾಸಕ ಶಿವಮೂರ್ತಿ ನಾಯ್ಕ್ ಗೆ ಗೊತ್ತಾಗ್ತಿದ್ದ ಹಾಗೆ ಬೆಂಗಳೂರು ಮೂಲದ ಉದ್ಯಮಿ ಪುತ್ರನ ಜೊತೆ ನಿಶ್ಚಿತಾರ್ಥ ಮಾಡಲು ಸಜ್ಜಾಗಿದ್ರಂತೆ ಈ ಮಾಹಿತಿ ತಿಳಿದ ಲಕ್ಷ್ಮೀ ನಾಯ್ಕ್, ಸುಂದರ್ ಗೌಡರನ್ನು ಸಂಪರ್ಕಿಸಿದ್ದಾರೆ. ಬಳಿಕ ಇಬ್ಬರು ಒಂದು ಯೋಜನೆ ರೂಪಿಸಿ ಓಡಿ ಹೋಗಿ ಮದ್ವೆಯಾಗುವ ಪ್ಲಾನ್ ಮಾಡಿದ್ದಾರೆ. ಬಳಿಕ ಪ್ಲಾನ್ ನಂತೆ ಮನೆಯಿಂದ ಓಡಿ ಹೋದ ಬಳಿಕ ಯಲಹಂಕ ಠಾಣೆಯಲ್ಲಿ ಶಿವಮೂರ್ತಿ ನಾಯ್ಕ್  ನಾಪತ್ತೆ ದೂರು ಸಲ್ಲಿಸಿದ್ದರು. ಆದ್ರೆ ಮಾಧ್ಯಮಗಳಿಂದ ವಿಷಯ ಮುಚ್ಚಿಟ್ಟರೂ ಇವತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಯ್ತು. ಮದುವೆ ಫೋಟೋ ಗಳು ಮಗಳೇ ಮಾತನಾಡಿದ್ದ ಸೆಲ್ಫಿ ವೀಡಿಯೋ ಕೂಡ ಬಹಿರಂಗವಾಯ್ತು.
ಮದುವೆ ಹಿಂದೆ ಇರೋದು ಕರಿ ಚಿರತೆ..!
ನಿರ್ಮಾಪಕ ಸುಂದರ್ ಗೌಡ ಹಾಗೂ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಪ್ರೇಮ ವಿವಾಹದ ಹಿಂದೆ ಇರೋದು ಕನ್ನಡದ ಕರಿ ಚಿರತೆ ದುನಿಯಾ ವಿಜಯ್. ಮಾಸ್ತಿಗುಡಿ ಸಿನಿಮಾದ ದುರಂತದ ಬಳಿಕ ತುಂಬಾ ಹತ್ತಿರವಾಗಿದ್ದ ನಿರ್ಮಾಪಕ ಹಾಗೂ ನಟ ದುನಿಯಾ ವಿಜಿ, ನಡುವೆ ಪ್ರೇಮ ವಿಚಾರ ಹಂಚಿಕೆಯಾಗಿದೆ. ಮೊದಲು ಲಕ್ಷ್ಮೀ ಮನೆಯಲ್ಲಿ ಬೇರೊಂದು ಗಂಡಿನ ಜೊತೆ ನಿಶ್ಚಿತಾರ್ಥ ಮಾಡುವ ಯೋಜನೆ ಸುಂದರ್ ಗೌಡಗೆ ಗೊತ್ತಾಗ್ತಿದ್ದ ಹಾಗೆ ದುನಿಯಾ ವಿಜಯ್ ಗೆ ಮಾಹಿತಿ ಕೊಟ್ಟಿದ್ದಾರೆ. ಆ ಬಳಿಕ ನಡೆದ ಎಲ್ಲಾ ಸ್ಕ್ರೀನ್ ಪ್ಲೇ ಕೂಡ ನಟ ವಿಜಯ್ ಡೈರಕ್ಷನ್ ಅಂದ್ರೆ ತಪ್ಪಲ್ಲ. ಯಾಕಂದ್ರೆ ನಟ ದುನಿಯಾ ವಿಜಯ್ ಯಾವ ರೀತಿ ಯೋಜನೆ ಮಾಡಿದ್ರೋ ಅದೇ ರೀತಿ ಎಲ್ಲವೂ ನಡೆದಿದೆ. ಮಾಧ್ಯಮ ಗಳಿಗೆ ವಿಚಾರ ಗೊತ್ತಾಗದ ಹಾಗೆ ಮದ್ವೆಯಾದ ಜೋಡಿ, ಕೊನೆಗೆ ವಿಷಯ ಬಹಿರಂಗ ಮಾಡಲು ಮಾಧ್ಯಮಗಳನ್ನೇ ಬಳಸಿಕೊಂಡಿದ್ದಾರೆ. ಸೆಲ್ಫಿ ವೀಡಿಯೋ ಮಾಡಿರುವ ಲಕ್ಷ್ಮೀ ನಾಯ್ಕ್, ನಾನು ಮೇಜರ್ ಆಗಿದ್ದು, ಸ್ವಂತ ನಿರ್ಧಾರದಿಂದಲೇ ಮನೆ ಬಿಟ್ಟು ಬಂದು ಸುಂದರ್ ಗೌಡನನ್ನು ಮದ್ವೆಯಾಗಿದ್ದೇನೆ ಎಂದಿದ್ದಾರೆ. ಒಟ್ಟಾರೆ ಗುಪ್ತ್ ಗುಪ್ತ್ ಆಗಿ ಮಾಸ್ತಿಗುಡಿ ಮಾಲೀಕ ಮದ್ವೆ ಆಗಿದ್ದಾರೆ..
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments