ಎದೆಗಾರಿಕೆ ಇದ್ದವರಿಗೆ ಮಾತ್ರ ”ಮಮ್ಮಿ”

"ಮಮ್ಮಿ ಸೇವ್ ಮಿ "  ಮಗುವಿಗಾಗಿ ಹಂಬಲಿಸುವ ಆತ್ಮದೊಂದಿಗೆ ಜೀವಂತ ತಾಯಿ -ಮಗು ಮತ್ತವರ ಪುಟ್ಟ ಕುಟುಂಬ ಹೆಣಗುವ ಕಥೆ. ಅನುಭವಿ ನಟಿ ಪ್ರಿಯಾಂಕಾ ಉಪೇಂದ್ರ ಮೊದಲ ಹಾರರ್ ಚಿತ್ರದ ಮೊದಲ ನೋಟ ಇಂತಿದೆ.

ದೆವ್ವ, ಭೂತಗಳ ಸಿನಿಮಾ ಮಾಡಿ ಗೆಲ್ಲುವುದು ಅಷ್ಟೇನೂ ಸುಲಭದ ಮಾತಲ್ಲ.  ನೆಚ್ಚಿನ ನಾಯಕ , ನಾಯಕಿಗೆ ಮುಂದೇನಾಗುವುದೋ ? ಯಾರಿಗೇನು ಕೇಡೋ ? ಎಂಬ ಆತಂಕದಿಂದ ಕ್ಷಣಕ್ಷಣಕ್ಕೂ ಕೈಕೈ ಹಿಸುಕುತ್ತಾ, ಉಗುರು ಕಚ್ಚುತ್ತಾ, ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂತೆ ಪ್ರೇಕ್ಷಕ ಪ್ರಭುವನ್ನ ಹಿಡಿದಿಡುವುದಕ್ಕೆ  ಸಕ್ಕತ್ ತಾಕತ್ತೇ ಬೇಕು. ಇಂಥದೊಂದು ಸಾಹಸಕ್ಕ್ಕೆ ಮೊದಲ ನಿರ್ದೇಶನದಲ್ಲೇ ಅಡಿ ಇಟ್ಟಿದ್ದಾರೆ ಲೋಹಿತ್ .

ನಿರ್ದೇಶನ

lohit 

ಮೊದಲ ಸಲ ಸಾಮಾನ್ಯವಾಗಿ ಆಗುವ “ಲಿಂಕ್ ಮಿಸ್ಸಿಂಗ್ ” ಸಮಸ್ಯೆ ಅಲ್ಲಲ್ಲಿ ಕಾಣುತ್ತದೆ. ಸಣ್ಣ ಸಣ್ಣ ದೋಷಗಳನ್ನು ಮರೆಸುವಂತ ಸಂಗೀತ, ಸೌಂಡ್ ಎಫೆಕ್ಟ್ , ಸಿನಿಮಾಟೋಗ್ರಫಿ ಸಿನಿಮಾದೊಳಗೆ ಸೆಳೆದುಕೊಳ್ಳುತ್ತದೆ. ಪಾತ್ರದಾರಿಗಳು ಹೆದರಿ ನಡುಗುವ ದೃಶ್ಯಗಳು ಬಂದಾಗ ಇತ್ತೀಚಿನ ನೋಡುಗರು ‘ಅಯ್ಯೋ ಹೆದರ್ಕೋಬೇಡ ಡೈರೆಕ್ಟರ್ ಅಲ್ಲೇ ಅವ್ರೆ’ ಅಂತ ಕೂಗ್ತಿದ್ರು ತಾವು ಕೂತ ಕುರ್ಚಿ ಬಿಗಿಯಾಗಿ ಹಿಡ್ಕೊಂಡು ನೋಡುವ ಸಿನಿಮಾವಿದು. ನೋಡುವವರ ಜಂಘಾಬಲ ನಡುಗಿಸುವಂತ ಸೌಂಡ್ನ ಬಳಕೆ ಬೊಂಬಾಟ್! ಕಡೆಕಡೆಯ ದೃಶ್ಯಗಳಂತು ಭಯದಿಂದ ಅವಡುಗಚ್ಚುವಂತೆ ಮಾಡುತ್ತವೆ. ಕಥೆ ಹೇಳುವಲ್ಲಿ ಮತ್ತಷ್ಟು ಪರಿಣಿತಿ ಸಾಧಿಸಿದ್ರೆ ಕನ್ನಡಕೊಬ್ಬ ಒಳ್ಳೆ ನಿರ್ದೇಶಕನಾಗಲಿದ್ದಾರೆ ಲೋಹಿತ್ . ಅಂತರ ಪಿಶಾಚಿಯಾಗಿ ಅಲೆಯುವ ಕುಮಾರಿಯ ಬಗೆಗೂ ಅನುಕಂಪ ಮೂಡಿಸಿದ ಮೇಲೆ ಅಲ್ಲಿಗೇ ನಿಲ್ಲಿಸಿದ್ದರೆ ಸಮಾಧಾನವಿರುತ್ತಿತ್ತೇನೋ . ಮತ್ತೆ ಮೈಗೇರಿಸಿದ್ದು ನೋಡಿದರೆ ಪಾರ್ಟ್ -೨ ತರುವ ಯೋಚನೆ ಕಾಣಿಸುತ್ತದೆ. ಅಥವಾ ಎಂಜಾಯ್ ದಿ ಫಿಯರ್ ಅಂತಾನೂ ಇರಬಹುದು.  ಮೊದಲ ಪ್ರಯತ್ನ ನಿಜಕ್ಕೂ ಚೆನ್ನವಿದೆ.

ಕಲಾವಿದರ ಕರಾಮತ್ತು !!

pri1

ಪ್ರಿಯಾಂಕಾ ಉಪೇಂದ್ರ

ಚೆಲುವಷ್ಟೇ  ಅಷ್ಟೇ ಅಲ್ಲ ಬುದ್ಧಿಮತ್ತೆ ಇರುವ ಪ್ರತಿಭಾವಂತ ನಟಿ. ಚಿತ್ರ ನಿರ್ಮಿಸುವ ಬಹುತೇಕ ಎಲ್ಲ ಹಂತಗಳನ್ನು ಬಲ್ಲ ಅನುಭವಿ. ಹೊಸದನ್ನು ಕಲಿಯುವ , ತೆರೆದುಕೊಳ್ಳುವ ಮನಸುಳ್ಳ ನಟಿ. ಇಲ್ಲಿ ಬಂದು ಕನ್ನಡ ಕಲಿತು ಎಲ್ಲರಲ್ಲಿ ಒಂದಾಗಿ ಬೆರೆತಿದ್ದೆ ಅದಕ್ಕೆ ಸಾಕ್ಷಿ. ‘ಮಮ್ಮಿ ಸೇವ್ ಮಿ’ ಚಿತ್ರದಲ್ಲೂ ಅವರ ಇಂಥಾ ಗುಣವೇ ಕಾಣುತ್ತದೆ. ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದುಕೊಂಡು ಹೊಟ್ಟೆಯಲ್ಲೊಂದು ಜೀವ ಹೊತ್ತು, ಕಣ್ಣೆದುರಿನಲ್ಲೇ ಇರುವ ಮತ್ತೊಂದು ಕೂಸನ್ನು ಕಾಪಾಡಿಕೊಳ್ಳಲು ಪರದಾಡುವ ಪಾತ್ರದಲ್ಲಿ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ. ಕೆಟ್ಟ ಕನಸು ಬಿದ್ದಾಗ ಪ್ರಿಯಾಂಕಾ ಅಭಿನಯ ನೋಡುತ್ತಿದ್ದರೆ ನಮಗೇ ಅಂಥಾ ಕೆಟ್ಟಾತಿ ಕೆಟ್ಟ ಕನಸು ಬಿದ್ದಹಾಗೆ ಅನ್ನಿಸಿ ಭಯ ಆವರಿಸಿಕೊಳ್ಳುತ್ತದೆ. ಮಗು ತಪ್ಪು ಮಾಡಿದೆ ಅನ್ನಿಸಿದಾಗ ಹೊಡೆಯಲಿಕ್ಕೂ ಸಂಕಟ ಪಡುವ, ಸಂತೈಸುವ ದೃಶ್ಯಗಳಲ್ಲಿ ಸ್ವಂತ ತಾಯಿಯಂತೆ ಕಂಡುಬಿಟ್ಟಿದ್ದಾರೆ. ತನ್ನ ಮಗುವಿಗಾಗಿ ಕುಮಾರಿ ಆತ್ಮದ ಬಳಿ ಕೇಳುವಾಗಿನ ಸನ್ನಿವೇಶದಲ್ಲಿ ಪ್ರಿಯಾಂಕಾ ಮನಕಲಕುತ್ತಾರೆ . ಒಟ್ಟಿನಲ್ಲಿ ಮಮ್ಮಿ ಸೇವ್ ಮಿ ಯಲ್ಲಿ ಪ್ರಿಯಾಂಕಾ ಅಭಿನಯ ಮನೋಜ್ಞವಾಗಿದೆ. 

yuvina

ಮುದ್ದು ಮರಿ ಯುವಿನ ಅಭಿನಯ ಮುದ್ದುಮಾಡುವಷ್ಟು ಇಷ್ಟವಾಗುತ್ತದೆ.

ವತ್ಸಲಾ ಮೋಹನ್

vatsala-mohan

ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಹಲವು ವರ್ಷಗಳಿಂದ ಅಭಿನಯಿಸಿದ ಕಲಾವಿದೆ . ಅವ್ರಿಗೂ ಇದು ಮೊದಲ ಹಾರರ್ ಸಿನಿಮಾ. ಪ್ರಿಯಾಂಕಾ ತಾಯಿಯ ಪಾತ್ರದಲ್ಲಿ ನಟಿಸಿರುವ ವತ್ಸಲಾ ನಮ್ಮನೆಯ ಅಮ್ಮನಷ್ಟೇ ಇಷ್ಟವಾಗುತ್ತಾರೆ. ದೆವ್ವದ ವಿಷಯ ಗೊತ್ತಾಗಿ ಮೊಮ್ಮಗಳನ್ನು ಹುಡುಕಲು ಮನೆಗೆ ಬಂದು ಕಾಟಕ್ಕೆ ಒಳಗಾಗುವ ದೃಶ್ಯದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ ವತ್ಸಲಾ ಮೋಹನ್ .

ಲವಲವಿಕೆಯಿಂದ ಓಡಾಡುವ, ಪಟಪಟನೆ ಮಾತನಾಡುವ , ಭಯದಿಂದ ನಡುಗುವ , ಅಕ್ಕನನ್ನು ಸಂತೈಸುವ ತಂಗಿಯ ಪಾತ್ರದಲ್ಲಿ ಐಶ್ವರ್ಯ ಶಿಂಧಗಿ ಇಷ್ಟವಾಗುತ್ತಾರೆ.

ಜಾನ್ ಪಾತ್ರದಾರಿ ಸಂದೀಪ್ 14 ಚಿತ್ರಗಳಲ್ಲಿ, ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅನುಭವಿ. ಮೊದಲ ದೃಶ್ಯದಲ್ಲೇ ಇದು ಪಳಗಿದ ಪ್ರತಿಭೆ ಅನ್ನಿಸುತ್ತಾರೆ.

ಫಾದರ್ ಪಾತ್ರದಲ್ಲಿ ಮಧುಸೂದನ್  ನಟನೆ ಎಲ್ಲರಿಗು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಕ್ಯಾಮೆರಾ ಖದರ್ !!

venu-h-c

ವೇಣು ನಾದ ಕೇಳಿದಾಗ ಮನಸ್ಸಿಗೆ ಮುದವಾಗುವಂತೆ ವೇಣು ಅವರ ಸಿನಿಮಾಟೋಗ್ರಫಿ ಪ್ರಾರಂಭದಲ್ಲೇ ಆವರಿಸಿಕೊಳ್ಳುತ್ತದೆ.ಸಮುದ್ರದ ಅಲೆಗಳ ಮೇಲೆ ಟೈಟಲ್ ಕಾರ್ಡ್ ತೋರಿಸುವ ಫಸ್ಟ್ ಶಾಟ್ ಗೆ ಫಿದಾ !! ಕಾಲ ಸರಿಯುವುದನ್ನ ತೋರಿಸಲಿಕ್ಕೆ ಆಕಾಶ ,ಮೋಡಗಳ ಚಲನೆ ತೋರಿಸಿರುವುದು ಅದ್ಭುತ!! ಕುಮಾರಿ ಭೂತವನ್ನು ತೋರಿಸಿರುವ ರೀತಿ, ಕ್ಲೈಮಾಕ್ಸ್ ದೃಶ್ಯಗಳು ಇಂಟರ್ವೆಲ್ನಲ್ಲಿ ಸೂಸು ಮಾಡಿ ಬಂದಿದ್ದರೂ ಭಯದಿಂದ ಮತ್ತೆ ಓಡಿಸುತ್ತವೆ. ಹೆದರಿಕೆಯನ್ನೂ ಎಂಜಾಯಬಲ್ ಆಗಿಸಿದ್ದಾರೆ. ಇಡೀ ಸಿನಿಮಾ ಕಳೆಗಟ್ಟುವಲ್ಲಿ ವೇಣು ಕ್ಯಾಮೆರಾ ಚಾತುರ್ಯಕ್ಕೆ ಫುಲ್ ಮಾರ್ಕ್ಸ್ !!

ಅಜನೀಶ್ ಸಂಗೀತಕ್ಕೆ ಒಂದು ಸಲಾಂ !

ಪ್ರೀತಿ-ಪ್ರೇಮ,ವಿರಹ-ಕೋಪ-ದ್ವೇಷ -ಭಯ ಯಾವುದನ್ನೇ ಆಗಲಿ ತೀವ್ರವಾಗಿ ಅನುಭವಿಸಿದಾಗಲೇ ಅದರ ಸುಖ ಸಿಗೋದು ಅಲ್ವಾ ? ಅಲ್ಪ ಸ್ವಲ್ಪ ಲಾಜಿಕ್ ಪಕ್ಕಕ್ಕಿಟ್ಟು ಭಯದ ತೀವ್ರತೆ ಅನುಭವಿಸುವ ಎದೆಗಾರಿಕೆ ಇದ್ದವರು ನೋಡಬಹುದಾದ ಚಿತ್ರ “ಮಮ್ಮಿ ಸೇವ್ ಮಿ”. 

ಹ್ಯಾಪಿ ಗಡಗಡ !!ಢವ ಢವ !! 

 

-Ad-

Leave Your Comments