ರಾಜಕೀಯ ಪಕ್ಕಕ್ಕಿಟ್ಟು ಚಿತ್ರಕಥೆ ಮಾಡೋಣ – ನಾಗತಿಹಳ್ಳಿ ಚಂದ್ರಶೇಖರ್

ನಾಗತಿಹಳ್ಳಿ ಚಂದ್ರಶೇಖರ್ ರಾಜಕೀಯಕ್ಕೆ ಬರ್ತಾರಂತೆ ಹೌದಾ !! ಹೌದಾ ? ಇಂಥಾ ಪ್ರಶ್ನೆ , ಕುತೂಹಲ , ಆಶ್ಚರ್ಯಗಳು  ಹೊಸದೇನು ಅಲ್ಲ . ನಾಗತಿಹಳ್ಳಿ ಬಿಟ್ಟು ನಗರ ಸೇರಿ ಸಾಹಿತಿ, ನಿರ್ದೇಶಕ , ಚಿತ್ರರಂಗದಲ್ಲಿ ನಮ್ಮ ಮೇಷ್ಟ್ರು ಅಂತೆಲ್ಲಾ ನಾನಾ ರಂಗದಲ್ಲಿ ಮನೆಮಾತಾಗಿ ನಾನಾ ದೇಶಗಳ ಸುತ್ತಿಬಂದ ಮೇಲೂ ನಾಗತಿಹಳ್ಳಿಯ ನಂಟು ಬಿಡದವರು ಚಂದ್ರಶೇಖರ್ .

 

ನಾಗತಿಹಳ್ಳಿಯಲ್ಲೊಂದು ಲೈಬ್ರರಿ , ಮುರಿದುಬಿದ್ದ ಶಾಲೆಗೊಂದು ಸೂರು , ಹೆಣ್ಣುಮಕ್ಕಳ ಸ್ವಾವಲಂಬನೆಗಿಷ್ಟು ಸಲಹೆ-ಸೂಚನೆ ,  ಮಣ್ಣಿನ ಕಂಪು ಹರಡಲಿಕ್ಕೆ ವರುಷಕ್ಕೊಂದು ಸಂಸ್ಕೃತಿ ಹಬ್ಬ ಹೀಗೆ ಹಲವಾರು ವರುಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರೂ ಅನುಮಾನಿಸುವ ಕಣ್ಣುಗಳಿಗೇನೂ ಕಮ್ಮಿ ಇಲ್ಲ.

nagatihalli    nagathi-hali-1

ಏ ಸುಂಸುಮ್ನೆ ಯಾರ್ ಮಾಡರ್ಲಾ ಎಲೆಕ್ಷನ್ ನಿಂತ್ಕಳಕ್ಕೆ ಪ್ಲಾನ್ ಮಾಡ್ತಾ ಇರ್ಬೋದು ಕಾಣಾ ಅಂತ ಊರಿನ ಕಡೆಯವರು ಮಾತಾಡಿದ್ರೆ , ಇಷ್ಟೆಲ್ಲಾ ಹೆಸರು ಮಾಡಿರೋವ್ರು ಮತ್ತೆ ಊರುದ್ಧಾರ ಮಾಡೋದಿಕ್ಕೆ ಹೊರಟಿದ್ದಾರೆ ಅಂದ್ರೆ ಮೋಸ್ಟ್ಲಿ ಪಾಲಿಟಿಕ್ಸ್ ಗೆ ಹೋಗೋ ಲಾಂಗ್ ಟರ್ಮ್ ಸ್ಟ್ರಾಟಜಿ  ಇರಬಹುದು ಬಿಡಿ ಅನ್ನುವುದು ಅತ್ತಿತ್ತ ಇರುವವರ ಅಂಬೋಣ .

ಇಷ್ಟಲ್ಲದೆ ನಾಗಮಂಗಲಕ್ಕೆ ನಾಲ್ಕಾರು ಬಾರಿ ಹೋಗಿ ಬಂದರೆ ಸಾಕು ಎಲೆಕ್ಷನ್ ಗೆ ರೆಡಿ ಆಗ್ತಿರ್ಬೇಕು ನೋಡು ಈ ಸಲ ಗ್ಯಾರಂಟಿ ನಿಂತ್ಕೋತಾರೆ ಅನ್ನುವಂಥ ಭವಿಷ್ಯ ನುಡಿಯುವವರು , ನೋಡ್ದಾ ನಮ್ ಎಚ್ ಟಿ ಕೃಷ್ಣಪ್ಪನ ಜೊತೆ ನಾಗತಿಹಳ್ಳಿ ಚಂದ್ರಶೇಖರ್ರು ಕೃಷ್ಣನ ಪಾತ್ರ ಮಾಡ್ತಾ ಇರೋದೇ ಚುನಾವಣೆಗೆ ನಿಂತ್ಕಳಕ್ಕೆ ನನ್ನ ಮಾತ್ ಈ ಸಲ ನಿಜ ಆಗದಿದ್ರೆ ಕೇಳು ಎಷ್ಟಪ್ಪಾ ಬೆಟ್ಟು ? ಅಂತ ಕಟ್ಟೆ ಮೇಲೆ ಕೂತು ಬಾಜಿ ಕಟ್ಟುವವರು, ಇದರ ಮಧ್ಯೆ ಅಪ್ಪಿತಪ್ಪಿ ರಾಜಕೀಯ ನಾಯಕರನ್ನ ಭೇಟಿ ಮಾಡಿದ್ರೆ  ಸಿಕ್ಕಿದ್ದೇ ಸುದ್ದಿ ಅನ್ಕೊಂಡು ಇನ್ನೇನು ರಾಜಕೀಯಕ್ಕೆ ಹೋಗೇಬಿಟ್ರು ಅಂತ ಬಿತ್ತರಿಸುವ  ಮಾಧ್ಯಮಗಳು ಇಷ್ಟೆಲ್ಲಾ ಜನರ ಕುತೂಹಲದ ಹುತ್ತ ಬೆಳೆದಾಗೆಲ್ಲ ತಲೆ ಕೊಡವಿ ಕೆಡವುತ್ತಲೇ ಇದ್ದಾರೆ ಮೇಷ್ಟ್ರು.

ಮೊನ್ನೆ ಮೊನ್ನೆ ದೇವೇಗೌಡರ ಮನೆಗೆ ನಾಗತಿಹಳ್ಳಿ ಹೋಗಿದ್ದೇ ತಡ  ನಾಗಮಂಗಲದಿಂದ ಚೆಲುವರಾಯಸ್ವಾಮಿ ಎದುರಿಗೆ ಚುನಾವಣೆಗೆ ನಿಲ್ತಾರಂತೆ ಕೇಳ್ರಪ್ಪೋ ,ನೋಡ್ರಪ್ಪೋ ಸುದ್ದಿ ಸುಳಿದಾಡಿತ್ತು . ಏನ್ ಸಾರ್ ಮನಸ್ಸು ಚೇಂಜ್ ಮಾಡಿ ಮತ ಕೇಳೋಕೆ ಹೊರಡ್ತಿದ್ದೀರಾ ಅಂದಿತು ciniadda.com

ರಾಜಕೀಯ ನನ್ನ ಕ್ಷೇತ್ರವಲ್ಲ .ಅದಕ್ಕೆ ಬೇಕಾದ ಸಾಮರ್ಥ್ಯ ,ಆಸಕ್ತಿ ಎರಡೂ ನನಗಿಲ್ಲ .ಅನುಮಾನ ಬೇಡ .ಮತದಾನ ಒಂದೇ ನನ್ನ ನಂಬಿಕೆಯ, ಖಾಯಂ ರಾಜಕೀಯ ಚಟುವಟಿಕೆ!

ಸರಿ ಇಷ್ಟಕಾಮ್ಯ ಆಯ್ತಲ್ಲ ಮುಂದೇನು? ಈಗೇನ್ ಮಾಡ್ತಿದ್ದೀರಿ ಅಂದ್ರೆ ಸಿನಿಮಾ ಕಥೆ ಹೆಣೆಯುವ ಕೆಲಸ ಶುರುವಾಗಿದೆ. ಅದರ ಮಧ್ಯೆ ನಮ್ಮ ಟೆಂಟ್ ಸಿನಿಮಾದಲ್ಲಿ ಚಿತ್ರಕಥೆ ರಚನೆಯ ಕಾರ್ಯಾಗಾರ ಮಾಡ್ತಿದ್ದೇವೆ ನವೆಂಬರ್ 5-9 ರವರೆಗೆ. ಈ  ಸಿನಿಮಾದ ಸೆಳೆತ ಯಾರನ್ನೂ ಬಿಟ್ಟಿಲ್ಲ. ಹಲವಾರು ಯುವಕರು ಸಿನಿಮಾ ಕ್ಷೇತ್ರಕ್ಕೆ ಬರ್ತಾ ಇದ್ದಾರೆ . ಕೆಲವರಿಗೆ ತಮ್ಮದೇ ಕಥೆಯನ್ನ ಚಿತ್ರಕ್ಕೆ ತರುವ ಹಂಬಲ . ಮತ್ತಲವರಿಗೆ ಚಿತ್ರಕಥೆ ಬರೆಯುವ ತುಡಿತ . ಉತ್ಸಾಹವಿದ್ದರೂ ಪರಿಣಾಮಕಾರಿ ಚಿತ್ರಕಥೆ ರೂಪಿಸುವ ಕೌಶಲ್ಯ ಗೊತ್ತಿರುವುದಿಲ್ಲ . ಅಂಥವರಿಗಾಗಿ ಬೆಳಿಗ್ಗೆ 9ರಿಂದ ಸಂಜೆ  6 ರ ತನಕ ನಾನು,ಪವನ್ ಒಡೆಯರ್ ,ಕೆ ಎಂ .ಚೈತನ್ಯ ,ಕೆ .ವೈ ನಾರಾಯಣಸ್ವಾಮಿ ,ಅಬ್ದುಲ್ ರೆಹಮಾನ್ ಪಾಶಾ ಸೇರಿ ಕಲಿಕೆಗೆ ಅನುಕೂಲವಾಗುವ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ಜೊತೆಗೆ ಅಲ್ಲೇ ಚಿತ್ರಕಥೆ ಬರೆಯುವ ವಿಧಾನವನ್ನು ಉತ್ತಮ ಚಿತ್ರಗಳ ತೋರಿಸುತ್ತಾ ಕಲಿಸುತ್ತೇವೆ. ಇದು ನನ್ನ ಸದ್ಯದ ಕಾಯಕ.

ಇನ್ನು ನಮ್ಮ ಸಿನಿಮಾಗಳು ಹೆಚ್ಚು ಹಣ ಕೀಳುವುದಿಲ್ಲ . ನಿರ್ಮಾಪಕನಿಗೆ ಹೊರೆಯಾಗದ ರೀತಿ ಕಡಿಮೆ ಖರ್ಚಿನಲ್ಲಿ ಉತ್ತಮ ಕಥೆ ಹೇಳಿ ಪ್ರೇಕ್ಷಕರನ್ನು ಮುಟ್ಟುವ ಪ್ರಯತ್ನ ನಮ್ಮದು. ನಮ್ಮ ಟೆಂಟ್ ಸಿನಿಮಾದಲ್ಲಿ ಕಲಿತವರಿಗೆ ಮೊದಲ ಆದ್ಯತೆ . ಅಭಿನಯ,ಸಂಭಾಷಣೆ, ಚಿತ್ರಕಥೆ ,ನಿರ್ಮಾಣ ಹೀಗೆ ಅವರ ಆಸಕ್ತಿ , ಸಾಮರ್ಥ್ಯ ನೋಡಿ ಅವಕಾಶ ಕಲ್ಪಿಸುತ್ತೇವೆ. ನಮ್ಮವರಿಗೆ ನಾವೇ ವೇದಿಕೆ  ಕೊಡದಿದ್ದರೆ ಹೇಗೆ ? ಟೆಂಟ್ ಸಿನಿಮಾದಲ್ಲಿ ತರಬೇತಿ ಪಡೆದ ಪೃಥ್ವಿ ನಮ್ಮೂರ ವರಲಕ್ಷ್ಮಿ ಚಿತ್ರದಲ್ಲಿ ನಾಯಕನಾಗಿದ್ದಾನೆ. zee ಕನ್ನಡದ ಡ್ರಾಮಾ ಜೂನಿಯರ್ಸ್ ನಲ್ಲಿ ಎರಡನೇ ಸ್ಥಾನ ಪಡೆದ ಅಮೋಘ ನಮ್ಮ ಟೆಂಟ್ ಸಿನಿಮಾದ ಪ್ರತಿಭೆ . ಅವಳಿಗೆ ಇಷ್ಟಕಾಮ್ಯದಲ್ಲೂ ಅವಕಾಶ ಕೊಟ್ಟಿದ್ದೆವು . ಉಳಿದ ವಿಷಯಗಳು www.tentcinema.com ನಲ್ಲಿ ಸಿಗುತ್ತವೆ. ನೇರವಾಗಿ 5ರಂದು ಬೆಳಿಗ್ಗೆ ಮುಂಚಿತವಾಗಿ ಬಂದು ಫೀಸ್ ಕಟ್ಟಿ ಕಲಿಕೆ ಶುರುವಿಟ್ಟುಕೊಳ್ಳಬಹುದು. 080-65695500, 9900555255 ಇಲ್ಲಿಯೂ ಸಂಪರ್ಕಿಸಿಬಹುದು .

ಅಂದಹಾಗೆ ಹೊಸಹುಡುಗರ ರಾಮಾ ರಾಮಾ ರೇ .. ಒಳ್ಳೆ ಸಿನಿಮಾ ಎಲ್ಲರೂ ನೋಡ್ಬೇಕು . ಕಷ್ಟಪಟ್ಟು ಶ್ರದ್ಧೆಯಿಂದ ಮಾಡಿದ್ದಾರೆ . ಕನ್ನಡದಲ್ಲಿ ಹೊಸ ಹೊಸ ಪ್ರಯತ್ನಗಳು ಆಗ್ತಿರ್ಬೇಕು . ಒಳ್ಳೆಯ ಕಥೆಗಳು ಗೆಲ್ಲಬೇಕು ಅಂದವರು  ಮತ್ತೆ ನಾನು ರಾಜಕೀಯಕ್ಕಲ್ಲ ಸದಭಿರುಚಿಯ ಚಿತ್ರಕ್ಕೆ ,ಸಾಮಾಜಿಕ ಕೆಲಸಕ್ಕೆ ಅಂತ ಒತ್ತಿ ಹೇಳಿದರು ನಾಗತಿಹಳ್ಳಿ ಚಂದ್ರಶೇಖರ್ .

-ವಿಭಾ

-Ad-

Leave Your Comments