“ಬ್ರಹ್ಮಗಂಟು” ದೇವರು ಹೊಸೆದ ಮದುವೆ ನಂಟು

ಸದಾ ಹೊಸತನದ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ಬ್ರಹ್ಮಗಂಟು ಎಂಬ ಹೆಸರಿನ ಮತ್ತೊಂದು ವಿಭಿನ್ನ ಶೈಲಿಯ ಕಥೆಯನ್ನು ವೀಕ್ಷಕರ ಮುಂದೆ ತರುತ್ತಿದೆ. ಗಂಡು ಸಿಗದ ಗುಂಡು ಹುಡುಗಿಗೆ ಕೊನೆಗೆ ಅದೆಂಥ ಗಂಡ ಸಿಗುತ್ತಾನೆ ಎಂಬುದನ್ನು ಹೇಳುವ ವಿಭಿನ್ನ ಕಥಾಹಂದರವನ್ನು ಹೊಂದಿರುವ ಬ್ರಹ್ಮಗಂಟು ಧಾರಾವಾಹಿಯನ್ನು ತನ್ನ ವೀಕ್ಷಕರ ಮುಂದೆ ತರಲು ಜೀ ಕನ್ನಡ ವಾಹಿನಿ ಸಜ್ಜಾಗಿದೆ. ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿರುವ ಶ್ರುತಿ ನಾಯ್ಡು ಈ ಬ್ರಹ್ಮಗಂಟು ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಸದಾ ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಹುಡುಗ-ಹುಡುಗಿ ಇಬ್ಬರೂ ಮದುವೆಯಾದಾಗ ಅವರಿಬ್ಬರ ನಡುವೆ ನಡೆಯುವ ಸುಂದರ ಕಥೆ ಇದಾಗಿದೆ. ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ಗುಂಡಮ್ಮ. ಹೆಸರಿಗೆ ತಕ್ಕಂತೆ ಧಡೂತಿ ದೇಹದ ಹುಡುಗಿ. ಆಕೆ ಯಾವುದೇ ಕೆಲಸವನ್ನಾದರೂ ಒಳ್ಳೇ ಮನಸ್ಸಿನಿಂದ ಮಾಡಿದರೂ ಕೂಡ ಎಲ್ಲರಿಂದಲೂ ನಿಂದನೆಗೊಳಗಾಗುತ್ತಾಳೆ. ಅಂಥ ಗುಂಡಮ್ಮನ ದೊಡ್ಡ ಕನಸು ಎಂದರೆ ಮದುವೆ. ಎಲ್ಲ ಹುಡುಗಿಯರಂತೆ ತನ್ನ ಮನದ ತುಂಬಾ ತನ್ನನ್ನು ಮದುವೆಯಾಗುವ ಹುಡುಗನ ಕುರಿತು ಮುದ್ದಾದ ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ. ರೂಪಕ್ಕಿಂತ ನನ್ನ ಮನಸ್ಸನ್ನು ಮೆಚ್ಚಿ ಮದುವೆಯಾಗುವ ಹುಡುಗ ಬಂದೇ ಬರುತ್ತಾನೆ ಎಂದು ಕಾದು ಕುಳಿತಿರುತ್ತಾಳೆ.

ನನ್ನ ಹೆಂಡತಿಯಾಗುವವಳು ಚೆನ್ನಾಗಿರಬೇಕು. ಹೂವಿನ ಬಳ್ಳಿಯಂತೆ ಬಳಕುವ ಸುಂದರಿಯಾಗಬೇಕು ಎಂದು ಕನಸು ಕಾಣುತ್ತಿರುವ ಹುಡುಗನೊಬ್ಬ ಗುಂಡಮ್ಮನ ಗುಣಕ್ಕೆ ಮರುಳಾಗುತ್ತಾನೆ. ನಂತರ ಆಕೆಯ ಕುತ್ತಿಗೆಗೆ ಮೂರು ಗಂಟು ಹಾಕಿ ಮದುವೆಯಾಗುತ್ತಾನೋ, ಇಲ್ವೋ ಎಂಬ ಕುತೂಹಲಕರವಾದ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಧಾರಾವಾಹಿ ಜಗತ್ತಿನ ಸಿದ್ಧಸೂತ್ರಗಳನ್ನು ಬದಿಗಿಟ್ಟು, ಕನ್ನಡ ಕಿರುತೆಯಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ವಿಭಿನ್ನ ಶೈಲಿಯ ಕಥಾ ಹಂದರವುಳ್ಳ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಧಾರಾವಾಹಿಯ ಇನ್ನೊಂದು ವಿಶೇಷ ಎಂದರೆ ಟಿ.ಎಸ್. ನಾಗಾಭರಣ ಅವರು ಹಲವು ವರ್ಷಗಳ ಬಳಿಕ ಪುನಃ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ನುರಿತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದೆ. ದಪ್ಪಗಿರುವ ಹುಡುಗಿ ಎಂಬ ಪರಿಕಲ್ಪನೆಯನ್ನು ತೆರೆಯ ಮೇಲೆ ತರುವಾಗ ಕಲಾವಿದರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ವರ್ಷದ ಹಿಂದೆಯೇ ಈ ಕಥೆ ಸಿದ್ಧಗೊಂಡಿದ್ದರೂ ದಪ್ಪಗಿದ್ದೇನೆಂಬ ಅಳುಕನ್ನು ಬದಿಗಿಟ್ಟು ಅಭಿನಯಿಸಲು ಬಹುತೇಕರು ಒಪ್ಪಲಿಲ್ಲ, ಆ ಅಳುಕನ್ನು ಬದಿಗಿಟ್ಟು ಮುಂದೆ ಬಂದಿರುವ ಗಾಯಕಿ ಗೀತಾಭಟ್ ಗುಂಡಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೇ ಮೊದಲಬಾರಿಗೆ ಬಣ್ಣ ಹಚ್ಚಿ ಕ್ಯಾಮೆರ ಮುಂದೆ ಬಂದಿದ್ದರೂ ಪಾತ್ರಕ್ಕೆ ತಕ್ಕಂತೆ ತುಂಬಾ ಸಹಜವಾಗಿ ನಟಿಸಿದ್ದಾರೆ. ಇನ್ನು ಕಲಾವಿದ ಭರತ್ ಬೋಪಣ್ಣ ಈ ಕಥೆಯ ನಾಯಕ. ವನಿತಾವಾಸು, ಗಾಯತ್ರಿ ಪ್ರಭಾಕರ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.

ನಿರ್ದೇಶಕ ರಮೇಶ್ ಇಂದಿರಾ ಬ್ರಹ್ಮಗಂಟು ಸಾರಥ್ಯ ವಹಿಸಿಕೊಂಡಿದ್ದಾರೆ. ಹೊಸ ಕತೆಯನ್ನು ಹೊತ್ತು ತರುತ್ತಿರುವ `ಬ್ರಹ್ಮಗಂಟು’ ಧಾರಾವಾಹಿ ಇದೇ ಮೇ 8ರ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

-Ad-

Leave Your Comments