ನಿಖಿಲ್ ಕುಮಾರ್ ಗೌಡರ ಹೊಸ ಅವತಾರ ಅಭಿಮನ್ಯು

ಮಹಾಭಾರತದಲ್ಲಿ ತಮ್ಮ ತ್ಯಾಗದಿಂದಾಗಿಯೇ ತುಂಬಾ ಕಾಡುವ ಪಾತ್ರಳಿವೆ. ಆ ಪಾತ್ರಗಳು ಯಾವತ್ತೂ ಮನಸ್ಸಲ್ಲೇ ಉಳಿದುಹೋಗುತ್ತವೆಯೇ ಹೊರತು ಬಿಟ್ಟು ಹೋಗುವುದಿಲ್ಲ. ಅಂಥಾ ಒಂದು ಮಹಾಭಾರತದ ಪಾತ್ರ ಅಭಿಮನ್ಯು. ತನ್ನವರಿಗೋಸ್ಕರ ಪ್ರಾಣತ್ಯಾಗ ಮಾಡಿದ ಅದ್ಭುತ ಪಾತ್ರ ಈ ಅಭಿಮನ್ಯುವಿನದು. ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾ ಬರುತ್ತದೆ ಎಂದಾಗ ಆ ಪಾತ್ರವನ್ನು ಮಾಡುವವರು ಯಾರಿದ್ದಾರೆ ಅಂತ ಕೆಲವರಿಗಾದರೂ ಅನ್ನಿಸಿರಬಹುದು. ಈಗ ಆ ಪಾತ್ರಕ್ಕೆ ನಿಖಿಲ್ ಕುಮಾರ್ ಆಯ್ಕೆಯಾಗಿದ್ದಾರೆ.

ನಿಖಿಲ್ ತಮ್ಮ ಮೊದಲ ಸಿನಿಮಾ ಜಾಗ್ವಾರ್ ಬಿಡುಗಡೆ ನಂತರ ಸ್ವಲ್ಪ ಮೌನವಾಗಿದ್ದಾರೆ. ಈ ಮೊದಲು ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೊದಲ 3 ಸಿನಿಮಾವನ್ನು ಹೋಂ ಬ್ಯಾನರ್ ನಲ್ಲೇ ಮಾಡುವ ಆಸೆ ಇದೆ ಎಂದಿದ್ದರು. ಅದಕ್ಕೆ ತಕ್ಕಂತೆ ಕತೆ ಹುಡುಕಾಟವೂ ನಡೆಯುತ್ತಿತ್ತು. ಆದರೆ ಈಗ ದೊಡ್ಡ ಪ್ರೊಜೆಕ್ಟ್ ಆದ ಕುರುಕ್ಷೇತ್ರ ಬಳಿಗೆ ಬಂದಿರುವುದರಿಂದ ನಿಖಿಲ್ ತಕ್ಷಣ ಆ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿಖಿಲ್ ಕುರುಕ್ಷೇತ್ರ ತಂಡ ಸೇರುವ ಮೂಲಕ ಆ ಸಿನಿಮಾದ ತಾರಾ ಬಳಗ ಮತ್ತಷ್ಟು ದೊಡ್ಡದಾಗಿದೆ.

ಈಗಾಗಲೇ ಕೃಷ್ಣನಾಗಿ ರವಿಚಂದ್ರನ್, ದುರ್ಯೋಧನನಾಗಿ ದರ್ಶನ್, ದ್ರೌಪದಿಯಾಗಿ ಸ್ನೇಹಾ, ಸಾಯಿಕುಮಾರ್, ಶಶಿಕುಮಾರ್ ಮುಂತಾದವರು ನಟಿಸುವುದು ಖಾತ್ರಿಯಾಗಿದೆ. ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಜಯಶ್ರೀದೇವಿ ಇದ್ದಾರೆ. ಹಾಗಾಗಿ ನಿರ್ದೇಶಕ ನಾಗಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

-Ad-

Leave Your Comments