ನಟ ಸುಂದರಾಂಗನಾಗಿರಬೇಕೆಂಬುದು ‘ಅರ್ಧಸತ್ಯ’

ಕೆಲವರ ಧ್ವನಿಯ ಹಾಗೇ ಅವರನ್ನೆಂದೂ ನೋಡಿರದಿದ್ದರೂ ಅವರ ಧ್ವನಿಯೇ ಅವರ ಇರುವಿಕೆಯನ್ನು ನಮ್ಮ ಗಮನಕ್ಕೆ ತರುತ್ತಿರುತ್ತದೆ. ಆದರೀತ ಹಾಡುಗಾರನಲ್ಲ. ನಟ. ಭಾರತೀಯ ಚಿತ್ರರಂಗದ ಅಪರೂಪದ ಕಂಠಸಿರಿಯ ನಟರಲ್ಲಿ ಈತ ಕೂಡ ಒಬ್ಬ. ದೂರದರ್ಶನದ ಧಾರವಾಹಿ ನೋಡಿದವರು ‘ಭಾರತ್‍ ಏಕ್‍ ಖೋಜ್’ನ ನಿರೂಪಕನ ಧ್ವನಿ ಪಾನ್‍ ಜಗಿಯುತ್ತಾ ಗಹಗಹಿಸಿ ನಗುತ್ತಿದ್ದ ‘ಕಕ್ಕಾಜಿ ಕಹೇಂ’ ಪಾತ್ರವನ್ನು ಮರೆಯುವರೇ? ದೇವಾನಂದ್‍ ಕುರಿತ ಸಾಕ್ಷ್ಯಚಿತ್ರಕ್ಕೆ ನಿರೂಪಕನಾಗಿ ಅವರ ಧ್ವನಿ ವ್ಯಕ್ತಿಚಿತ್ರ ಕಟ್ಟಿಕೊಟ್ಟಿರುವ ರೀತಿ ಅನನ್ಯ. ಹೌದು ಅದೇ ಓಂಪುರಿಯ ವಿಶಿಷ್ಟತೆ.

Actor Om Puri. Express archive photo

ಓಂಪುರಿ ಹುಟ್ಟಿದ್ದು ಪಂಜಾಬಿನ ಅಂಬಾಲ ಅನ್ನುವ ಸಣ್ಣ ಹಳ್ಳಿಯಲ್ಲಿ. ಅವರನ್ನು ಸ್ಕೂಲಿಗೆ ಸೇರಿಸಬೇಕಾದಾಗ ಯಾವುದೇ ಜನ್ಮಪ್ರಮಾಣ ಪತ್ರ ಇರಲಿಲ್ಲವಂತೆ ಸರಿ ಅವರ ಮಾವ ಮಾರ್ಚ್‍ 9, 1950 ಅಂತ ಒಂದು ದಿನಾಂಕ ಕೊಟ್ಟು ಸೇರಿಸಿದ್ದರಂತೆ. ಓಂಪುರಿಗೆ ಅಪ್ಪ ಅಮ್ಮ ಇಟ್ಟ ಹೆಸರು ಓಂ ಪ್ರಕಾಶ್‍ ಪುರಿ. ಆದರೆ ಶಾಲೆಯಲ್ಲಿ ಅದೇ ಹೆಸರಿನ ಬೇರೆ ಹುಡುಗರಿದ್ದದ್ದರಿಂದ ಗೊಂದಲವಾಗುತ್ತೆ ಅಂತ ತಮ್ಮ ಹೆಸರನ್ನು ಬದಲಿಸಿಕೊಂಡರಂತೆ. ಅವರು ಹುಟ್ಟಿದ ದಿನಾಂಕ ನೆನಪಿಲ್ಲದಿದ್ದರೂ ‘ದಸರಾ ಹಬ್ಬವಾದ ಎರಡು ದಿನಕ್ಕೆ ನೀನು ಹುಟ್ಟಿದೆ’ ಅಂತ ಅವರಮ್ಮ ಹೇಳಿದ್ದ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದ ಓಂಪುರಿ ಬಾಂಬೆಗೆ ಬಂದಮೇಲೆ 1950ರಲ್ಲಿ ದಸರಾ ಹಬ್ಬ ಯಾವಾಗ ಆದದ್ದು ಅನ್ನೋದನ್ನ ಕ್ಯಾಲೆಂಡರ್‍ ಹುಡುಕಿ ನೋಡಿ ತಮ್ಮ ಜನ್ಮದಿನಾಂಕವನ್ನ 18 ಅಕ್ಟೋಬರ್‍ 1950 ಅಂತ ಬದಲಿಸಿಕೊಂಡರಂತೆ. ಅವರ ಬದುಕಿನ ರೀತಿಗೆ ರೂಪಕದಂತಿದೆ ಈ ಘಟನೆ.

 

ಸಂದರ್ಶನವೊಂದರಲ್ಲಿ ಅವರೇ ಹೇಳುವಂತೆ ‘ನೀವು ಏನಾಗಬೇಕು ಅಂತ passionate ಆಗಿ ಬಯಸ್ತಿರೋ ಅದೇ ಆಗ್ತೀರಿ’ ಓಂಪುರಿಯ ಇಡೀ ನಟನಾ ಬದುಕು ಈ ಬಗೆಯ ಪರಿಶ್ರಮ, ಬದ್ಧತೆ ಮತ್ತು passionನಿಂದ ಕಟ್ಟಿದ್ದು.

om-puri-7591

ಅದು ಇಡೀ ಭಾರತ ಹೊಸತನಕ್ಕೆ ಹೊರಳುವ ಹೊಸ್ತಿಲ್ಲಲ್ಲಿ ನಿಂತು ಬದಲಾವಣೆಯ ಗಾಳಿಯಲ್ಲಿ ಮಿಂದೇಳುತ್ತಿದ್ದ ಕಾಲ. ಭಾರತೀಯ ಚಿತ್ರರಂಗದಲ್ಲೂ ಹೊಸತನದ ಅಲೆಯೊಂದು ಮೊಳೆಯುತ್ತಿದ್ದ ಕಾಲ. ಸಮಾಜದ ಓರೆಕೋರೆಗಳು, ದಮನಿತ ದನಿಗಳು ಪ್ರಕಟಗೊಳ್ಳಲು ಹವಣಿಸುತ್ತಿತ್ತು. ಆಗ ಬಂದ ಯುವನಟಿ, ನಟರು ಸ್ಥಾಪಿತ ಬಾಲಿವುಡ್‍ ಚಿತ್ರಮಾಧ್ಯಮದ ಭಾಷೆ, ವ್ಯಾಕರಣ, ರೂಢಿಗತ ನಂಬಿಕೆಗಳನ್ನು ಬದಲಾಯಿಸಿದರು. ಆ ಪಡೆಯ ಮುಂಚೂಣಿಯಲ್ಲಿ ನಿಂತವರು ಸ್ಮಿತ ಪಾಟೀಲ್, ಶಬಾನಾ ಆಜ್ಮಿ, ನಾಸಿರುದ್ದೀನ್‍ ಶಾ, ಓಂ ಪುರಿ..ಯಂತಹ ನಟ – ನಟಿಯರ ದಂಡು. ಸತ್ಯಜಿತ್‍ ರೈ, ಗೋವಿಂದ ನಿಹಲಾನಿ, ಎಂ.ಎಸ್‍.ಸತ್ಯು, ಶ್ಯಾಂಬೆನಗಲ್‍ನಂತಹ ಹೊಸ ಅಲೆಯ ನಿರ್ದೇಶಕರ ಕನಸುಗಳನ್ನು ತೆರೆಯ ಮೇಲೆ ಅಮರಚಿತ್ರವಾಗಿಸಿದ್ದು ಇವರ ನಟನೆ.

 

ಓಂಪುರಿ ಎಫ್‍.ಟಿ.ಐ.ಐ ಮತ್ತು ಎನ್‍.ಎಫ್‍.ಡಿ.ಸಿಯಲ್ಲಿ ತರಬೇತಿ ಪಡೆದ ಮೊದಮೊದಲ ತಂಡದ ವಿದ್ಯಾರ್ಥಿಯಾಗಿದ್ದರು. ನಾಸಿರುದ್ದೀನ್‍ ಶಾ ಸಹಪಾಠಿ. ಅಲ್ಲಿಂದ ತರಬೇತಿ ಪಡೆದು ಹೊರಬಂದ ನಂತರ ಇವರೆಲ್ಲ ನಾಟಕ, ಚಲನಚಿತ್ರ ಎರಡರಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ompuri-filmಮುಖ ನೋಡಿಯಲ್ಲ ಧ್ವನಿ ಕೇಳಿಯೇ ಓಂಪುರಿಯನ್ನು ಗುರುತಿಸುವಷ್ಟು ಇವರ ಧ್ವನಿ ಭಾರತೀಯ ಸಿನಿರಸಿಕರ ಮನದಲ್ಲಿ ಅನುರಣಿಸುತ್ತಿದೆ. ವಿಶಿಷ್ಟ ಧ್ವನಿ ಹಾಗೂ ಪಾತ್ರೆಗೊಗ್ಗುವ ಆಕಾರ ಪಡೆಯಬಲ್ಲ ನೀರಿನಂತೆ ಪಾತ್ರಕ್ಕೆ ಹೊಂದಿಕೊಂಡು ಅದನ್ನು ಜೀವಂತವಾಗಿಸುತ್ತಿದ್ದ ಅವರ ನಟನಾ ಕೌಶಲ ನಿಜಕ್ಕೂ ಅಭಿನಂದನಾರ್ಹ. ‘ಅರ್ಧಸತ್ಯ’, ‘ಆರೋಹಣ್ ‘ ಚಿತ್ರಗಳಿಗೆ ಅತ್ಯುತ್ತಮ ನಟನಾ ಪ್ರಶಸ್ತಿಯನ್ನು ಪಡೆದಾತ. ಭಾರತದ ಪ್ರತಿಷ್ಟಿತ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀಯನ್ನು ಪಡೆದಾತ.

ಓಂಪುರಿಯ ವೈಶಿಷ್ಟ್ಯವೆಂದರೆ ಈತ ಪೂರ್ವ-ಪಶ್ಚಿಮ ದೇಶಗಳ ಚಿತ್ರಗಳಲ್ಲಿ ನಟಿಸಿದ ಕಲಾವಿದ. ಭಾರತೀಯ ಭಾಷೆಗಳಲ್ಲದೆ ಇಂಗ್ಲೀಷ್‍, ಫ್ರೆಂಚ್, ಪಾಕಿಸ್ತಾನಿ ಚಿತ್ರಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದರು. ಯಾವುದೇ ಹೊಸ ಭಾಷೆಗಾದರೂ ಸರಾಗವಾಗಿ ಒಗ್ಗಿಬಿಡಬಲ್ಲ ಗುಣ ಓಂಪುರಿಗಿತ್ತು. ಅದು ಅವರ ವಿಶಿಷ್ಟತೆಗಳಲ್ಲೊಂದಾಗಿತ್ತು.

ಅರ್ಧಸತ್ಯದ ಖಡಕ್‍ ಯುವ ಪೋಲಿಸ್‍ ಅಧಿಕಾರಿಯಾಗಿ, ಆರೋಹಣ್‍ನ ರೈತನಾಗಿ, ಆಕ್ರೋಶ್‍ನ ಆದಿವಾಸಿಯಾಗಿ ಗಂಭೀರ ಪಾತ್ರಗಳಲ್ಲಿ ಸೈ ಅನ್ನಿಸಿಕೊಂಡಿದ್ದ ಓಂಪುರಿಯೊಳಗಿದ್ದ ಹಾಸ್ಯಕಲಾವಿದನನ್ನು ಪರಿಚಯಿಸಿದ್ದು ಕಕ್ಕಾಜಿ ಕಹೇಂ, ಮಿ.ಯೋಗಿಯಂತಹ ಧಾರವಾಹಿಗಳು. ಅನಂತರದ್ದು ಇತಿಹಾಸ.

ompuri-47

ಹೊಸ ಅಲೆಯ ಚಿತ್ರಗಳಿರಲಿ, ಪಕ್ಕಾ ಮಾಸ್‍ ಚಿತ್ರಗಳಿರಲಿ ತಮ್ಮ ಪಾತ್ರಕ್ಕೆ ಬದ್ಧವಾಗಿ ನಟಿಸುತ್ತಿದ್ದಾತ. ಕನ್ನಡದಲ್ಲೂ ತಬ್ಬಲಿಯು ನೀನಾದೆ ಮಗನೇ, ಎಕೆ47, ಧೃವ ಚಿತ್ರಗಳಲ್ಲಿ ನಟಿಸಿದ್ದಾರೆ. ಎಕೆ47ನಲ್ಲಿ ತಾವೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿರುವುದು ವಿಶೇಷ.

ಘಾನ್ಸಿರಾಂ ಕೋತ್ವಾಲ್‍ ಓಂಪುರಿಯವರ ಮೊದಲ ಚಿತ್ರ. ಅರ್ಧಸತ್ಯ, ಆರೋಹಣ್‍, ಮಿರ್ಚ್‍ ಮಸಾಲ, ಆಕ್ರೋಶ್‍, ಧಾರ್ವಿ ಅವರ ಆರಂಭಿಕ ಪ್ರಮುಖ ಚಿತ್ರಗಳು. ಮಾಚಿಸ್‍, ಗುಪ್ತ್, ಧೂಪ್, ಹೇರಾ ಪೇರಿ ಮೊದಲಾದ ಕಮರ್ಷಿಯಲ್‍ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಸ್ಟ್‍ ಈಸ್‍ ಈಸ್ಟ್‍, ಮೈ ಸನ್‍ ದ ಫೆನೆಟಿಕ್‍, ಸಿಟಿ ಆಫ್‍ ಜಾಯ್‍ ಮೊದಲಾದ ವಿದೇಶಿ ಚಿತ್ರಗಳಲ್ಲೂ ನಟಿಸಿದ್ದಾರೆ.

om-puri5

ಆತನೊಳಗಿನ ಕಲಾವಿದನನ್ನು ಹೆಚ್ಚಾಗಿ ಒರೆಗೆ ಹಚ್ಚಿದ್ದು ಹೊಸ ಅಲೆಯ ಚಿತ್ರಗಳು ಅನ್ನುವುದರಲ್ಲಿ ಅನುಮಾನವಿಲ್ಲ. ಓಂಪುರಿಯ ನಟನಾ ಬದುಕಿನ ವೈಶಿಷ್ಟ್ಯವೆಂದರೆ ಧಾರವಾಹಿಗಳಲ್ಲೂ ಆತನ ನಟನೆಗೆ ಹೊಳಪನ್ನು ತಂದುಕೊಡುವಂತಹ ಪಾತ್ರಗಳು ದೊರೆತದ್ದು. ಬಹುಶಃ ಆಗಷ್ಟೇ ದೂರದರ್ಶನ ಭಾರತೀಯ ಜನಮಾನಸವನ್ನು ಪ್ರವೇಶಿಸುತ್ತಿದ್ದ ಸಂಧಿಕಾಲವೂ ಇದಕ್ಕೆ ಕಾರಣವಾಗಿತ್ತು.  ಜನಪ್ರಿಯ ಸಿನೆಮಾಗಳು ಈತನೊಳಗಿನ ಹಾಸ್ಯಕಲಾವಿದನನ್ನಾಗಲಿ, ನಟನನ್ನಾಗಲಿ ಬಳಸಿಕೊಳ್ಳದೇ ಹೋದದ್ದು ಸತ್ಯ. ಅದೇನೆ ಇರಲಿ ಚಿತ್ರಮಾಧ್ಯಮದ ವ್ಯಾಕರಣಕ್ಕೊಂದು ಹೊಸಭಾಷ್ಯ ಬರೆದ ಕಲಾವಿದರ ಸಾಲಿನಲ್ಲಿದ್ದ ಓಂಪುರಿ ಹೊರಟು ಬಿಟ್ಟಿದ್ದಾರೆ  ಬಾರದ ಲೋಕಕ್ಕೆ. ತನ್ನ ಪ್ರತಿಭೆಯಿಂದ ನೋಡುಗರ ಹೃದಯ ಮುಟ್ಟಿದವರ ಹೃದಯವೀಗ ನಿಂತು ಹೋಗಿದೆ. ನಿಜ ಸಾವು ಸಹಜ. ಆದರೆ ಭರಿಸುವುದು ಕಷ್ಟಕಷ್ಟ..  ನಮ್ಮ ಮನಸ್ಸುಗಳಲ್ಲಿ ಸದಾ ಉಳಿವ ಅಪರೂಪದ ಕಲಾವಿದ ಓಂಪುರಿಗೊಂದು ನಮಸ್ಕಾರ. ವಿದಾಯ. 

-ಹೇಮಾ ಹೆಬ್ಬಗೋಡಿ

-Ad-

Leave Your Comments