ನಾ ನೋಡಿದ ಚಿತ್ರ *ಒಂದು ಮೊಟ್ಟೆಯ ಕಥೆ* ನೀವೇಕೆ ನೋಡಬೇಕು ಅಂತೀರಾ?

ಇತ್ತೀಚಿನ ಸಿನಿಮಾ ಟ್ರೆಂಡ್ ಅಂದ್ರೆ ಒಂದು ಸಿನಿಮಾ ಅಂದ್ರೆ ಕಥೆ ಪವರ್ ಪುಲ್ ಆಗಿರಬೇಕು. ಹೀರೋ ನೋಟೆಡ್ ಆಗಿರಬೇಕು. ಹೀರೋಯಿನ್ ಒಂದು ಹವಾ ಕ್ರಿಯೇಟ್ ಮಾಡಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿರಬೇಕು. ಇಲ್ಲ ಸ್ಟಾರ್ ಡೈರೆಕ್ಟರ್ ಮ್ಯೂಸಿಕ್ ಡೈರೆಕ್ಟರ್ ಇರಲೇಬೇಕು.ಆದ್ರೆ ಸಿನಿಮಾಗೆ ಇವೆಲ್ಲಾ ಬೇಕಾಗಿಲ್ಲ ಅಂತಾ ಪ್ರೂ ಮಾಡಿ ಹೊಸ ಟ್ರೆಂಡ್ ಹುಟ್ಟು ಹಾಕಿದೆ ಒಂದು ಮೊಟ್ಟೆಯ ಕಥೆ ಸಿನಿಮಾ.
ಸಿನಿಮಾದಲ್ಲಿ ಇರುವುದು ಕಾಲ್ಪನಿಕ  ಕಥೆಯಿಲ್ಲ.ನಮ್ಮ ಜೀವನದ ಕಥೆಯಿದೆ. ನಮ್ಮ ಸಮಾಜ  ಹೊರಗಿನ ಸೌಂದರ್ಯಕ್ಕೆ ನೀಡುವ ಮಹತ್ವದಿಂದಾಗುವ ಕೀಳರಿಮೆಯ ಭಾವವಿದೆ. ಎಲ್ಲೂ ಒಂದು ಕಡೆ ನಮ್ಮ ಜೀವನದಲ್ಲಿ ನಡೆದ ಘಟನೆಗಳ ದರ್ಶನವಿದೆ. ಅದೇ ಚಿತ್ರವನ್ನು ಗೆಲುವಿನತ್ತ ಹೆಜ್ಜೆ ಹಾಕಿಸಿದೆ. ಇನ್ನು ಚಿತ್ರದಲ್ಲಿ ಅಭಿನಯಿಸದವರು ಯಾರ ಹೆಸರು ಸಿನಿಮಾ ನೋಡುವ ಮೊದಲು ಗೊತ್ತಿರುವುದಿಲ್ಲ. ಸಿನಿಮಾ ನಂತರವೂ ಗೊತ್ತಾಗುವುದಿಲ್ಲ. ಅದರ ಅವಶ್ಯಕತೆಯೂ ಬರುವುದಿಲ್ಲ. ನೀವೂ ಸಹಾ ಸಿನಿಮಾ ನೋಡಿ ಬಂದಿದ್ದರೆ ನಿಮಗೂ ಈಗ ಹೌದಲ್ವಾ ಹೀರೋ ಯಾರು ಆ ಮೂವರು ನಾಯಕಿಯರು ಯಾರು? ಅನ್ನೋ ಪ್ರಶ್ನೆ ಬರೋದು ಖಂಡಿತಾ. ಇಲ್ಲಿ ಅಭಿನಯಿಸಿದವರಿಗಿಂತ ಅವರ ಪಾತ್ರ ನಿಮ್ಮನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಇನ್ನು ಸಿನಿಮಾಗೆ ಭಾಷೆಯ ಹಂಗಿಲ್ಲ ಅನ್ನೋ ಮಾತಿದೆ. ಕರ್ನಾಟಕದ ಯಾವ ಮೂಲೆಯ ಭಾಷೆಯಾದರೂ ಅದು ಬಲು ಸೊಗಸು ಅನ್ನೋದನ್ನು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಅನಿಸದೆ ಇರಲಾರದು.
ನಮ್ಮ ಕರಾವಳಿಯ ಭಾಷೆಯನ್ನು ಅಷ್ಟು ಸ್ವಚ್ಛವಾಗಿ ಸುಂದರವಾಗಿ ಸರಳವಾಗಿ ಸಿನಿಮಾದಲ್ಲಿ ಹರಿಯಬಿಡಲಾಗಿದೆ. ಹಾಡುಗಳು ಅರ್ಥಪೂರ್ಣ ಹಾಗೂ ಇಂಪಾಗಿ ಮೂಡಿವೆ. ಮತ್ತೆ ಇಲ್ಲೂ ಅದೇ ಕಥೆ ಅದೇ ರಾಗ ಹಾಡಿದವರು ಯಾರು ಸಂಗೀತ ಸಂಯೋಜನೆ ಮಾಡಿದವರು ಯಾರು ಅನ್ನೋದಕ್ಕಿಂತ ವ್ಹಾ……. ಹಾಡು ಎಷ್ಟು ಸುಮಧುರವಾಗಿದೆ ಅನ್ನೋದು ಮಾತ್ರ ನಿಮ್ಮ ತಲೆಗೆ ಹತ್ತುತ್ತದೆ. ಸಿನಿಮಾ ಪೂರ್ತಿ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನೋಡಿ ಒಂದು ಸಿನಿಮಾ ಬದುಕಿಗೆ ಹತ್ತಿರವಾಗಿದ್ರೆ ಅದರಲ್ಲಿ ಬರುವ ಅಳುವ ದೃಶ್ಯಗಳು ನಮ್ಮನ್ನು ಕಲಕುತ್ತವೆ. ನಗೆ ಉಕ್ಕಿಸುವ  ಸೀನ್ ಗಳು  ಸಾಕಷ್ಟಿವೆ.
ಒಂದು ಮೊಟ್ಟೆಯ ಕಥೆ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ಅಣ್ಣಾವ್ರ ಹಾಡು ಸರ್ವಕಾಲಕ್ಕೂ ಪ್ರಸ್ತುತ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತಿರೋ ವಿಚಾರ.ಆದ್ರೆ ಈ ಸಿನಿಮಾ ಒಂದು ಹೆಜ್ಜೆ ಮುಂದೆ ಹೋಗಿ ಅಣ್ಣಾವ್ರ ಹಾಡು ಜೀವನದ ಪ್ರತಿ ಸಂದರ್ಭ ಪ್ರತಿ ಹಂತದಲ್ಲೂ ಪ್ರಸ್ತುತ ಅನ್ನೋದನ್ನು ಸೊಗಸಾಗಿ ತೋರಿಸಿಕೊಟ್ಟಿದೆ. ಇದು ಕಲಾತ್ಮಕ ಚಿತ್ರವೂ ಅಲ್ಲ ಕಮರ್ಷಿಯಲ್ ಚಿತ್ರವೂ ಅಲ್ಲ. ಇದು ಒಂದು ಸಿನಿಮಾ ಅಷ್ಟೇ.
ನೀವು ನೋಡಲೇಬೇಕು ಯಾಕಂದ್ರೆ …
ಅಬ್ಬರಿಸಿ ಬೊಬ್ಬಿರಿದು ಬಂದಷ್ಟೇ  ವೇಗದಲ್ಲಿ ಮರೆಯಾಗಿರುವ ಮರೆಯಾಗುವ ಎಷ್ಟೋ ಸಿನಿಮಾಗಳ ಮಧ್ಯೆ ಒಂದು ಮೊಟ್ಟೆಯ ಕಥೆ ನಿಜಕ್ಕೂ ಪ್ರತಿಯೊಬ್ಬರು ನೋಡಲೇ ಬೇಕಾದ ಅದರಲ್ಲೂ ಕುಟುಂಬ ಸಮೇತರಾಗಿ ನೋಡಲೇಬೇಕಾದ ಮತ್ತು ತಮ್ಮ ಬಗ್ಗೆ ಕೀಳರಿಮೆಯಿರುವ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ. ಚಿತ್ರವನ್ನು ನೋಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ ಉಳಿಸಿ ಅನ್ನೋ ಉದ್ದುದ್ದದ ಸೆಂಟಿ ಡೈಲಾಗ್ ಗಳ ಬದಲಾಗಿ ಸಿನಿಮಾ ನೋಡಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ ನಿಮ್ಮನ್ನು ನೀವು ಸಮಾಜದಲ್ಲಿ ತೊಡಗಿಸಿಕೊಳ್ಳಿ ನಿಮ್ಮಲ್ಲಿನ ನಿಮ್ಮತನವನ್ನು ನೀವೇ ಬದುಕಿಸಿಕೊಳ್ಳಿ ಅನ್ನೋ ಮಾತನ್ನು ಹೆಮ್ಮೆಯಿಂದ ಹೇಳುತ್ತೇನೆ.
-ರಾಮ್
ಮೈಸೂರು,ಟೀವಿ 9 ವರದಿಗಾರ
(ಫೇಸ್ ಬುಕ್ ಬರಹ)
-Ad-

Leave Your Comments