ಪಾರ್ವತಮ್ಮ ಅಂತ್ಯಕ್ರಿಯೆ ಎಲ್ಲಿ ಗೊತ್ತಾ..?

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ವಿಧಿವಶರಾಗಿದ್ದಾರೆ. ಇಂದು ಮುಂಜಾನೆ 4.30 ರ ಸಮಯದಲ್ಲಿ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಸದಾಶಿವ ನಗರ ನಿವಾಸದ ಬಳಿ ಇರುವ ಪೂರ್ಣಪ್ರಜ್ಞ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಅಭಿಮಾನಿಗಳು ಅಂತಿಮ‌ ನಮನ ಸಲ್ಲಿಸುತ್ತಿದ್ದಾರೆ.

ಅಪ್ಪಾಜಿ ಆಶಯದಂತೆ ನೇತ್ರದಾನ

ಡಾ .ರಾಜ್ ಕುಮಾರ್ ನಿಧನಕ್ಕೂ ಮುನ್ನ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕು ನೀಡಬೇಕು ಅನ್ನೋ ಕರೆ ನೀಡಿದ್ರು, ಅದೇ ರೀತಿ ವಿಧಿವಶರಾದ ಬಳಿಕ ಅವರ ನೇತ್ರಗಳನ್ನು ದಾನ ಮಾಡಲಾಗಿತ್ತು. ಆ ಬಳಿಕ ಇಡೀ ಕುಟುಂಬವೇ ನೇತ್ರದಾನ ಮಾಡಿದ್ರು. ನಾರಾಯಣ ನೇತ್ರಾಲಯದಲ್ಲಿ ಡಾ ರಾಜ್ ಕುಮಾರ್ ನೇತ್ರ ಬ್ಯಾಂಕ್ ಕೂಡ ಸ್ಥಾಪನೆ ಮಾಡಲಾಗಿತ್ತು. ಕನ್ನಡಿಗರಿಗೆ ಡಾ ರಾಜ್ ಕುಮಾರ್ ಕೊಟ್ಟ ಕರೆಯಂತೆ ಪಾರ್ವತಮ್ಮ ಅವರ ನೇತ್ರಗಳನ್ನು ದಾನ ಮಾಡಲಾಗಿದೆ.

ಪೂರ್ಣಪ್ರಜ್ಞ ಶಾಲಾ ಆವರಣದಲ್ಲಿ ಹಿರಿಯ ನಟ ಅಂಬರೀಶ್, ಹಿರಿಯ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಮುನಿರತ್ನ ಅವರು ಸ್ಥಳದಲ್ಲೇ ಇದ್ದು ಎಲ್ಲಾ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಸಂಜೆ 4 ಗಂಟೆ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಆ ಬಳಿಕ ಅಂತಿಮ ಯಾತ್ರೆ ಮೂಲಕ ಪಾರ್ಥಿವ ಶರೀರ ಕೊಂಡೊಯ್ದು ವಿಧಿವಿಧಾನ ನಡೆಸಲಾಗುತ್ತದೆ. ಸಂಜೆ 6 ಗಂಟೆಗೆ ಕಂಠೀರವ ಸ್ಟೂಡಿಯೋದಲ್ಲಿ ಡಾ ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಲಾಗುತ್ತದೆ ಅಂತಾ ತಿಳಿಸಿದ್ದಾರೆ.

-Ad-

Leave Your Comments