ಗುಣಮುಖರಾಗಿ ಬರಲಿ ಪಾರ್ವತಮ್ಮ ರಾಜ್ ಕುಮಾರ್ . ನಿಮ್ಮ ಹಾರೈಕೆಯೂ ಜೊತೆಗಿರಲಿ

ಬಹುಕಾಲದವರೆಗೂ ಕನ್ನಡ ಚಿತ್ರರಂಗದ ವಜ್ರೇಶ್ವರಿಯಾಗಿ ಮೆರೆದವರು  ಅಣ್ಣಾವ್ರ ಧರ್ಮ ಪತ್ನಿ ಪಾರ್ವತಮ್ಮ ರಾಜಕುಮಾರ್ .  ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದಾರೆ.

ರಕ್ತದೊತ್ತಡ ,ಸಕ್ಕರೆ ಖಾಯಿಲೆ ಅವರನ್ನು ಬೆಂಬಿಡದೆ ಕಾಡಿ ಹಲವು ಬಾರಿ ಆಸ್ಪತ್ರೆಗೆ ಸೇರಿ ಸುಧಾರಿಸಿಕೊಂಡು ಬಂದದ್ದೂ ಇದೆ. ಮೂಲಗಳ ಪ್ರಕಾರ ಪಾರ್ವತಮ್ಮ ಬ್ರೆಸ್ಟ್ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಅದು ಅವರನ್ನ ದಿನದಿನದಿಂದ ದಿನಕ್ಕೆ ಕ್ಷೀಣಿಸುವಂತೆ ಮಾಡುತ್ತಿದೆ . ಅವರ ಮಾತು ನಿಂತು ಬಹಳ ದಿನಗಳೇ ಕಳೆದಿವೆ. ಮೊನ್ನೆ ಅಣ್ಣಾವ್ರ ಹುಟ್ಟಿದ ಹಬ್ಬದಂದು ಕೊಡಮಾಡಿದ  ಪ್ರಶಸ್ತಿ ಸಮಾರಂಭಕ್ಕೂ ಬಂದಿರಲಿಲ್ಲ. ಸಮಾಧಿ ಇರುವ ರಾಜಕುಮಾರ್ ಸ್ಮಾರಕಕ್ಕೆ ಎಂದಿನಂತೆ ಬಂದು ಪೂಜೆ ಸಲ್ಲಿಸುವುದೂ ಸಾಧ್ಯವಾಗಿರಲಿಲ್ಲ. ಎದ್ದು ಹೆಜ್ಜೆ ಇಡಲೂ ಆಗದಂಥ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಪಾರ್ವತಮ್ಮ. ಅವರೀಗ ಕಡೆಯ ದಿನಗಳನ್ನು ಎಣಿಸುತ್ತಿದ್ದಾರೆ ಎಂಬುದು ವಿಷಾದದ ಸಂಗತಿ.

ದೈಹಿಕವಾಗಿ ಎಷ್ಟೇ ನೋವುಂಡರು ಮಾನಸಿಕವಾಗಿ ಗಟ್ಟಿಗಿತ್ತಿ ಪಾರ್ವತಮ್ಮ. ಅಣ್ಣಾವ್ರು ಹೋದ ಮೇಲೆ ನನಗಿನ್ನೇನು ಎನ್ನುವಂತೆ ಮೇಲು ನೋಟಕ್ಕೆ ಕಂಡಿದ್ದರೂ ಮಕ್ಕಳ ಅದರಲ್ಲೂ ಪುನೀತ್  ಸಿನಿಮಾಗಳ ಬಗ್ಗೆ ಒಂದು ಕಣ್ಣು ನೆಟ್ಟೇ ಇದ್ದರು. ಹೆಚ್ಚು ಕಾಲ ಶಾಲೆಯ ಮುಖ ನೋಡದಿದ್ದರೂ ಬದುಕೆಂಬ ಪಾಠಶಾಲೆಯಲ್ಲಿ ಪಳಗಿ ಪರಿಣತಿ ಪಡೆದು ವಜ್ರೇಶ್ವರಿಯಾಗಿ ದಶಕಗಳ ಕಾಲ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗವನ್ನು ಆಳಿದ ಪಾರ್ವತಮ್ಮ ಅಳಿಯದೆ ಇನ್ನಷ್ಟು ಕಾಲ ಉಳಿಯಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

 

 

-Ad-

Leave Your Comments