ಕನ್ನಡ ಚಿತ್ರರಂಗದ ವಜ್ರೇಶ್ವರಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ

ಕನ್ನಡ ಚಿತ್ರರಂಗದಲ್ಲಿ ವಜ್ರೇಶ್ವರಿಯಾಗಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪಾರ್ವತಮ್ಮ ರಾಜ್ ಕುಮಾರ್ ಇಂದು ವಿಧಿವಶರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವರನಟ ಡಾ.ರಾಜ್ ಕುಮಾರ್ ಅವರ ಯಶಸ್ಸಿನ ಹಾದಿಯಲ್ಲಿ ಅವರ ಬೆನ್ನೆಲುಬಾಗಿ ನಿಂತ ಗಟ್ಟಿಗಿತ್ತಿ ಪಾರ್ವತಮ್ಮ. ಕನ್ನಡ ಚಿತ್ರರಂಗದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಪಾರ್ವತಮ್ಮ ಅವರ ಜೀವನದ ಹಾದಿ ಇಲ್ಲಿದೆ ..

ಮನೆ ಬೆಳಗಿದ ಮಹಾಲಕ್ಷ್ಮಿ

 1939ರ ಡಿಸೆಂಬರ್ 6ರಂದು ಮೈಸೂರಿನ ಸಾಲಿಗ್ರಾಮದಲ್ಲಿ ಜನಿಸಿದ ಪಾರ್ವತಮ್ಮನವರು 13ನೇ ವಯಸ್ಸಿನಲ್ಲೇ ರಾಜ್ ಕುಮಾರ್ ಅವರನ್ನು ಮದುವೆಯಾದರು. 1975ರಲ್ಲಿ ವಜ್ರೇಶ್ವರಿ ಕಂಬೈನ್ಸ್ ಅಥವಾ ಪೂರ್ಣಿಮಾ  ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಸ್ಥಾಪಿಸಿದ ಪಾರ್ವತಮ್ಮನವರು ತಾವೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು. ಈ ಸಂಸ್ಥೆಯಲ್ಲಿ ಮೂಡಿಬಂದ ಮೊದಲ ಚಿತ್ರ ತ್ರಿಮೂರ್ತಿ. ಅಲ್ಲಿಂದ ಇಲ್ಲಿಯವರೆಗೂ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಅನೇಕ ಚಿತ್ರಗಳು ಈ ಬ್ಯಾನರ್ ಅಡಿಯಲ್ಲೇ ನಿರ್ಮಾಣವಾಗಿದ್ದವು . ಒಟ್ಟು 80 ಚಿತ್ರಗಳು ಈ ಸಂಸ್ಥೆಯಿಂದ ಮೂಡಿಬಂದಿವೆ.

ಕೇವಲ ಯಶಸ್ವಿ ಚಿತ್ರಗಳನ್ನಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಅನೇಕ ಖ್ಯಾತ ನಟಿಯರನ್ನು ಕೊಟ್ಟ ಹೆಗ್ಗಳಿಕೆ ಪಾರ್ವತಮ್ಮನವರದ್ದು . ಆ ಪೈಕಿ ಪ್ರಮುಖ ತಾರೆಯರು ಸುಧಾರಾಣಿ, ಮಾಲಾಶ್ರೀ, ಪ್ರೇಮಾ, ಅನುಪ್ರಭಾಕರ್, ರಕ್ಷಿತಾ, ರಮ್ಯ.
ಪಾರ್ವತಮ್ಮನವರು ಕೇವಲ ನಿರ್ಮಾಪಕಿಯಾಗಿರದೆ ಚಿತ್ರ ಹಂಚಿಕೆದಾರರೂ ಆಗಿದ್ದರು. ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್,  ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.
ಇವಿಷ್ಟೂ ಪಾರ್ವತಮ್ಮನವರ ಜೀವನ ಹಾದಿಯ ಪ್ರಮುಖ ಘಟ್ಟಗಳ ಮಾಹಿತಿ. ಆದರೆ ಡಾ.ರಾಜ್ ಕುಮಾರ್ ಅವರ ಜೀವನದಲ್ಲಿ ಹಾಗೂ ಅವರ ಯಶಸ್ಸಿನ ಹಾದಿಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ವಹಿಸಿದ ಪಾತ್ರ ಮಹತ್ತರವಾದುದು. ಒಬ್ಬ ಯಶಸ್ವಿ ಪುರುಷನ ಹಿಂದೆ ಒಂದು ಹೆಣ್ಣು ಇರುತ್ತಾಳೆ ಎಂಬ ಮಾತನ್ನು ಮತ್ತೊಮ್ಮೆ ನಿಜ ಮಾಡಿದವರು ಪಾರ್ವತಮ್ಮ ರಾಜ್ ಕುಮಾರ್.

ವರನಟನ ಪಾಲಿನ ವರಲಕ್ಷ್ಮಿ 

ಅದು 1970ರ ದಶಕ. ಡಾ.ರಾಜ್ ಕುಮಾರ್ ಅವರ ವೃತ್ತಿ ಬದುಕಿನ ಪರ್ವಕಾಲ. ಅದು ಎಷ್ಟರ ಮಟ್ಟಿಗೆ ಅಂದರೆ ಕನ್ನಡ ಚಿತ್ರರಂಗದ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದ್ದರು  ರಾಜ್ ಕುಮಾರ್. ಅವರ ಚಿತ್ರಗಳೆಲ್ಲಾ ಸೂಪರ್ ಹಿಟ್ ಆಗುತ್ತಿತ್ತು. ಹೀಗಾಗಿ ನಿರ್ಮಾಪಕರು ರಾಜ್ ಕುಮಾರ್ ಹಿಂದೆ ಬಿದ್ದಿದ್ದರು. ಗಂಧದ ಗುಡಿ, ದೂರದ ಬೆಟ್ಟ, ಮೂರುವರೆ ವಜ್ರಗಳು, ಬಂಗಾರದ ಪಂಜರ, ಎರಡು ಕನಸು, ಸಂಪತ್ತಿಗೆ ಸವಾಲ್, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ, ಮಯೂರ, ದಾರಿ ತಪ್ಪಿದ ಮಗ, ಬಂಗಾರದ ಮನುಷ್ಯ ಒಂದರ ಹಿಂದೆ ಒಂದರಂತೆ ಭರ್ಜರಿ ಯಶಸ್ವಿ ಕಂಡಿದ್ದವು. ರಾಜ್ ಅವರ ಚಿತ್ರಗಳನ್ನು ನೋಡಲು ಟೆಂಟ್ ಗಳಿಂದ ಚಿತ್ರಮಂದಿರಗಳವರೆಗೂ ಎಲ್ಲೆಡೆ ಜನ ಮುಗಿಬೀಳುತ್ತಿದ್ದರು. ಇಷ್ಟೆಲ್ಲಾ ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು ರಾಜ್ ಕುಮಾರ್ ಅವರಿಗೆ ಸಿಗುತ್ತಿದ್ದ ಸಂಭಾವನೆ ಮಾತ್ರ ಪುಡಿಗಾಸಿನಷ್ಟು. ರಾಜ್ ಕುಮಾರ್ ಹೆಸರಿನಲ್ಲಿ ಚಿತ್ರ ನಿರ್ಮಾಪಕರು ಹಾಗೂ ಹಂಚಿಕೆದಾರರು ಹೆಚ್ಚೆಚ್ಚು ಹಣ ಗಳಿಸುತ್ತಿದ್ದರೂ ರಾಜ್ ಕುಮಾರ್ ಅವರಿಗೆ ಸಿಗುತ್ತಿದ್ದ ಸಂಭಾವನೆ ಮಾತ್ರ ಅತ್ಯಲ್ಪ.
ಈ ಸಂದರ್ಭದಲ್ಲಿ ರಾಜ್ ಕುಮಾರ್ ಅವರ ಸಂಭಾವನೆ ಹಾಗೂ ಇತರೆ ವಿಚಾರಗಳ ಜವಾಬ್ದಾರಿಯನ್ನು ಹೊತ್ತುಕೊಂಡ ಪಾರ್ವತಮ್ಮ ರಾಜ್ ಕುಮಾರ್ ಈ ಸ್ಥಿತಿಯನ್ನು ಸಂಪೂರ್ಣವಾಗಿ ಬದಲಿಸಿದರು. ಇದಕ್ಕಾಗಿ ಪಾರ್ವತಮ್ಮನವರು ವಜ್ರೇಶ್ವರಿ ಕಂಬೈನ್ಸ್ ಅಥವಾ ಪೂರ್ಣಿಮಾ ಎಂಟರ್ ಪ್ರೈಸಸ್ ಆರಂಭಿಸಿ, ತಮ್ಮ ಸಂಸ್ಥೆಯಲ್ಲೇ ರಾಜ್ ಕುಮಾರ್ ಸಿನಿಮಾವನ್ನುನಿರ್ಮಿಸಲು ನಿರ್ಧರಿಸಿದರು.

ಆಡಿಕೊಂಡವರನ್ನೇ ಆಳಿದ ಛಲಗಾತಿ

ಪಾರ್ವತಮ್ಮನವರ ಸಾಮರ್ಥ್ಯ ಅರಿಯದವರು ಈ ಪ್ರಯತ್ನವನ್ನು ಆಡಿಕೊಂಡಿದ್ದರು. ಈ ಸಂಸ್ಥೆ ಗಾಂಧಿನಗರದಲ್ಲಿ ನೆಲೆಯೂರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ರಾಜ್ ಕುಮಾರ್ ಅವರಿಗಿದ್ದ ಬೇಡಿಕೆಯನ್ನು ಅರಿತಿದ್ದ ಪಾರ್ವತಮ್ಮ, ತಮ್ಮ ಪ್ರಯತ್ನವನ್ನು ಮುಂದುವರಿಸಿ ನಿರ್ಮಾಣದ ಜತೆಗೆ ಚಿತ್ರ ಹಂಚಿಕೆಯ ಜವಾಬ್ದಾರಿಗೂ ಕೈ ಹಾಕಿದರು. ಈ ಸಾಹಸದ ಪ್ರಯತ್ನದ ಮೊದಲ ಫಲವಾಗಿಯೇ ಮೂಡಿಬಂತು ತ್ರಿಮೂರ್ತಿ ಚಿತ್ರ. ತ್ರಿಮೂರ್ತಿ ಚಿತ್ರದಿಂದ ಶಬ್ಧವೇದಿ ಚಿತ್ರದವರೆಗೂ ರಾಜ್ ಕುಮಾರ್ ಅವರ 35 ಚಿತ್ರಗಳು ಈ ಸಂಸ್ಥೆಯಡಿಯಲ್ಲೇ ನಿರ್ಮಾಣವಾದವು. ಬಹುತೇಕ ಈ ಎಲ್ಲ ಚಿತ್ರಗಳು ಹಿಟ್ ಆಗಿವೆ.

 ಮಕ್ಕಳಿಗೂ ಭವಿಷ್ಯ ಕೊಟ್ಟಾಕೆ

ಡಾ.ರಾಜ್ ಕುಮಾರ್ ಅವರ ಚಿತ್ರಗಳು: ತ್ರಿಮೂರ್ತಿ, ಗಿರಿಕನ್ಯೆ, ಒಲವೆ ಗೆಲುವು, ಶಂಕರ್ ಗುರು, ತಾಯಿಗೆ ತಕ್ಕ ಮಗ, ರವಿಚಂದ್ರ, ವಸಂತ ಗೀತಾ, ಹಾವಿನ ಹೆಡೆ, ನೀ ನನ್ನ ಗೆಲ್ಲಲಾರೆ, ಭಾಗ್ಯವಂತ, ಹೊಸ ಬೆಳಕು, ಹಾಲು ಜೇನು, ಚಲಿಸುವ ಮೋಡಗಳು, ಕವಿರತ್ನ ಕಾಳಿದಾಸ, ಕಾಮನ ಬಿಲ್ಲು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಸಮಯದ ಗೊಂಬೆ, ಶ್ರಾವಣ ಬಂತು, ಯಾರಿವನು, ಅಪೂರ್ವ ಸಂಗಮ, ಜ್ವಾಲಾಮುಖಿ, ಧ್ರುವತಾರೆ, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಗುರಿ, ಒಂದು ಮುತ್ತಿನ ಕಥೆ, ಶೃತಿ ಸೇರಿದಾಗ, ಶಿವ ಮೆಚ್ಚಿದ ಕಣ್ಣಪ್ಪ, ದೇವತಾ ಮನುಷ್ಯ, ಪರಶುರಾಮ್, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು, ಶಬ್ಧವೇದಿ.
ಶಿವರಾಜ್ ಕುಮಾರ್ ಅವರ ಚಿತ್ರಗಳು: ಆನಂದ್, ರಥ ಸಪ್ತಮಿ, ಮನ ಮೆಚ್ಚಿದ ಹುಡುಗಿ, ಸಂಯುಕ್ತ, ಆಸೆಗೊಬ್ಬ ಮೀಸೆಗೊಬ್ಬ, ಅರಳಿದ ಹೂಗಳು, ರಣರಂಗ, ಇನ್ಸ್ ಪೆಕ್ಟರ್ ವಿಕ್ರಂ, ಆದೇ ರಾಗ ಅದೇ ಹಾಡು, ಮೃತ್ಯುಂಜಯ, ಮಿಡಿದ ಶೃತಿ, ಓಂ, ಮೋಡದ ಮರೆಯಲಿ, ಜನುಮದ ಜೋಡಿ, ಹೃದಯ ಹೃದಯ, ಚಿಗುರಿದ ಕನಸು.
ರಾಘವೇಂದ್ರ ರಾಜ್ ಕುಮಾರ್ ಅವರ ಚಿತ್ರಗಳು: ಚಿರಂಜೀವಿ ಸುಧಾಕರ, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗಗೆಲುವಿನ ಸರದಾರ, ಸೂತ್ರಧಾರ, ಅನುಕೂಲಕ್ಕೊಬ್ಬ ಗಂಡ, ಅರಳಿದ ಹೂಗಳು, ಕಲ್ಯಾಣ ಮಂಟಪ, ಭರ್ಜರಿ ಗಂಡು, ಅನುರಾಗದ ಅಲೆಗಳು, ನಾವಿಬ್ಬರು ನಮಗಿಬ್ಬರು. ಸ್ವಸ್ತಿಕ್, ಟುವ್ವಿ ಟುವ್ವಿ ಟುವ್ವಿ.
ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳು: ಬೆಟ್ಟದ ಹೂ, ಅಪ್ಪು, ಅಭಿ, ಆಕಾಶ್, ಅರಸು, ವಂಶಿ, ಜಾಕಿ, ಹುಡುಗರು, ಅಣ್ಣ ಬಾಂಡ್, ಯಾರೇ ಕೂಗಾಡಲಿ, ರಾಜಕುಮಾರ.

ಪಾರ್ವತಮ್ಮನವರ ಸಾಧನೆ ಎಂಥವರಿಗೂ ಮಾದರಿ. 

ಇಡೀ ಕುಟುಂಬದ ಹೊಣೆ ಹೊತ್ತು ಮುನ್ನಡೆಸಿದ ತಾಯಿ, ಕನ್ನಡ ಚಿತ್ರರಂಗದ ವಜ್ರೇಶ್ವರಿಯಾಗಿ ಮರೆಯಲಾಗದ ಚಿತ್ರಗಳನ್ನು ಕೊಟ್ಟು ಮರೆಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಿದೆ ciniadda.com.

-Ad-

Leave Your Comments