ಪಾರ್ವತಮ್ಮ ಉರುಳಿಸಿದ ರಾಜಕುಮಾರ್ ಬದುಕಿನ ಮತ್ತೊಂದು ಮಗ್ಗುಲು

ಚಿತ್ತ ಕೆತ್ತಿದ ಚಿತ್ರ” ಹಿರಿಯ ಪತ್ರಕರ್ತೆ ಡಾ. ವಿಜಯ ಅವರ  ಅನುಭವದ ಅಕ್ಷರ ಮಾಲೆ. ಸಾಹಿತ್ಯ ದಿಗ್ಗಜರ ಎದುರು-ಬದಿರು ಕೂತು ಮನಸ್ಸಿನಾಳಕ್ಕಿಳಿದು ಅವರ ಒಳಮಾತುಗಳನ್ನು ಕೇಳಿಸಿಕೊಂಡ ಮೇಲೂ  ಹೇಳಿಯೂ ಹೇಳದಂತೆ, ವ್ಯಕ್ತಿ ಗೌರವಕ್ಕೆ ಧಕ್ಕೆಯಾಗದಂತೆ ದಾಖಲಿಸಿದ ಸೂಕ್ಷ್ಮಜ್ಞೆ ವಿಜಯಮ್ಮ. ಅಂದಿನ ಕಾಲಘಟ್ಟಕ್ಕೆ  ಹಿಡಿದ ಕನ್ನಡಿಯಂತಿರುವ ಲೇಖನಗಳು ಇಂದಿಗೂ ಮಾದರಿರೂಪದಲ್ಲಿವೆ. ಆಕೆ ಮಮತೆ ತುಂಬಿದ ತಾಯ್ತನದ ಖನಿ. ಹಾಗಿಲ್ಲದಿದ್ದರೆ ಪಾರ್ವತಮ್ಮ ರಾಜ್ಕುಮಾರ್ ಬದುಕಿನ ಕಟುಸತ್ಯವನ್ನ ಇಷ್ಟು ಸೂಕ್ಷ್ಮವಾಗಿ ತನ್ನ ಮನೆ ಮರ್ಯಾದೆಯನ್ನು ಕಾಯ್ದುಕೊಳ್ಳುವಷ್ಟೇ ಜತನದಿಂದ ಕಟ್ಟಿಕೊಡುವುದು ಸಾಧ್ಯವಿರಲಿಲ್ಲ. ಪಾರ್ವತಮ್ಮ ರಾಜ್ಕುಮಾರ್ ತೆರೆದಿಟ್ಟ ತನ್ನ ಒಳ ಬದುಕನ್ನು ವಿಜಯಮ್ಮ ಅಕ್ಷರಕ್ಕಿಳಿಸಿದ ರೀತಿಯನ್ನು ನೀವೇ ಓದಿಕೊಳ್ಳಿ ಅರಿವಾದೀತು.

parwathamma rajkumar vijayamma

ಚಿತ್ರ ಕೆತ್ತಿದ ಚಿತ್ರ- ನಾನು ಈ ಮನೆಯ ಸೊಸೆಯಾಗಿ ಬಂದದ್ದು ಆಕಸ್ಮಿಕವಲ್ಲ. ಎಂದೋ ಆಗಿದ್ದ ತೀರ್ಮಾನ. ಹದಿನೈದರ ಬಾಲೆ ಈ ಮನೆಯ ಹೊಸಿಲೊಳಗೆ ಬಂದಾಗ ಕೇವಲ ಮುಗ್ಧತೆ ಇತ್ತು. ಬೆರಗುಗಣ್ಣಿನಿಂದ ಎಲ್ಲವನ್ನೂ ನೋಡುತ್ತಾ ನಿಲ್ಲುವುದು ಮಾತ್ರ ಗೊತ್ತಿತ್ತು. ಎಂದಿನಂತೆ ಕುಂಟಾಬಿಲ್ಲೆಗೆ ಬರದೆ ದೂರ ಸರಿಯುತ್ತಿದ್ದ ಮುತ್ತುರಾಜರ ಬಗ್ಗೆ ಹುಸಿ ಮುನಿಸು ತುಂಬುತಿತ್ತು. ಆದರೂ ಗುಟ್ಟಾಗಿ ಕರೆದು “ಆಟ ಆಡೋಣ ಕಣ್ಣಾಮುಚ್ಚಾಲೆ…ಕುಂಟಾಬಿಲ್ಲೆ..ನಿನಗೆ ಯಾವುದು ಬೇಕಾದರೂ ಸರಿ …ಬೇಜಾರಾಗ್ತಿದೆ ” ಎಂದು ಗೋಗರೆದಾಗ ನಕ್ಕು, ತಲೆ ಸವರಿ “ತಂಗಿಯರು ಇದ್ದಾರಲ್ಲ, ಆಡಿಕೋ , ನನಗೆ ಹೊರಗೆ ಕೆಲಸವಿದೆ…”ಎಂದು ಬಿಟ್ಟಿದ್ದರು

ಆಟ ಆಡುತ್ತಾ ಖುಷಿಯಾಗಿರಬಹುದು ಅಂತ ಇವರ ಹಿಂದೆ ಬಂದರೆ ಹೀಗೆ ಮಾಡುವುದೇ? ಎಂಬ ಕೋಪ.

ರಾತ್ರಿ ಅವರು ತನ್ನ ತೋಳಲ್ಲಿ ತೆಗೆದುಕೊಂಡು “ನಿನಗೊಂದು ಗುಟ್ಟು ಹೇಳಲೇ ?” ಎಂದರು. ನನಗೆ ಕೋಪ ಹೋಗಿತ್ತು. ನಕ್ಕು ತಲೆ ಆಡಿಸಿದೆ. ಮತ್ತಷ್ಟು ಅವರ ಎದೆಯ ಹತ್ತಿರ… ಸಾಧ್ಯವಾದಷ್ಟು ಒಳಗೇ ತೂರಿಸಿ ಬಿಡುತ್ತೇನೆಂಬ ಹಾಗೆ ನನ್ನ ಮುಖ ತೂರಿಸಿ ಅವರು ಯಾವ ಕಾರಣಕ್ಕೂ ತಮ್ಮ ತೋಳಬಿಗಿಯನ್ನು ಸಡಿಲಿಸದಿರಲಿ ಎಂದು ಪ್ರಾರ್ಥಿಸುತ್ತ ಅವರಿಗೆ ಕಿವಿಯಾದೆ.

ಪ್ರೀತಿಯಿಂದ ಪಿಸುಗುಡುತ್ತ “ಪಾರ್ವತಿ ನಾವು ಬರೀ ಸತಿ-ಪತಿಯರಲ್ಲ ಗೆಳೆಯರು ಕೂಡಾ. ನಾನು ತಪ್ಪು ಮಾಡಿದರೂ, ನೀನು ತಪ್ಪು ಸಂಭವಿಸದಂತೆ ಜಾಗರೂಕಳಾಗಿರು. ನನ್ನ ತಂಗಿಯರು ತಮ್ಮಂದಿರು,ಅಮ್ಮ,ಅಪ್ಪ ಈ ದೊಡ್ಡ ಕುಟುಂಬ. ಹೀಗೇ ನಂದಗೋಕುಲದ ಹಾಗೆ ಇರುವಂತೆ ನೋಡಿಕೊಳ್ಳುವ ಹೊಣೆ ನಿನ್ನದು. ಕಷ್ಟ ಸುಖದಲ್ಲಿ ನಾನು ಜೊತೆಗಿದ್ದೇನೆ.

ಮೊದಲ ರಾತ್ರಿಯ ಮರೆಯಲಾಗದ ಮಾತು 

ಇವತ್ತಿಗೂ ನನ್ನ ಮನಸ್ಸಲ್ಲಿ ಆ ಮಾತು, ಆ ಪ್ರೀತಿ ಅಚ್ಚಳಿಯದೆ ನಿಂತಿದೆ. ನನ್ನ ಮೊದಲ ರಾತ್ರಿಯ ಮಾತಾಗಿ ಅವರು ಹೇಳಿದ್ದು “ಕುಟುಂಬ ಒಡೆಯಬಾರದು”. ನನಗದೇ ತಾರಕ ಮಂತ್ರವಾಗಿತ್ತು. ಇವೆಲ್ಲ ಹೇಳಿದಷ್ಟು ಸುಲಭವಾಗಿ ಸಾಧಿಸಲು ಆಗುವುದಿಲ್ಲ. ಇದಕ್ಕಾಗಿ ದೊಡ್ಡ ತ್ಯಾಗದ ಬೆಲೆ ಇದೆ. ಅಪ್ರಿಯರಿಗೂ ಪ್ರಿಯವಾದದ್ದನ್ನು ಮಾಡಲು ನಿರಂತರ ಶ್ರಮಿಸುತ್ತ ಯಾವುದೇ ಕೀಸರು, ಬಾಸರುಗಳನ್ನು ಹೊರಹಾಕದೆ, ಹೊಟ್ಟೆಯಲ್ಲಿ ತುಂಬಿಕೊಂಡು ಎಲ್ಲರ ಒಳಿತಿಗಾಗಿ ಅಗತ್ಯ ಕಂಡರೆ ನಿಷ್ಠುರವಾಗಿ ವರ್ತಿಸಬೇಕಾಗುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಆದರೆ ನಾನು ಅದಕ್ಕಾಗಿ ಬಹಳಷ್ಟು ಕಾಲ ಕಾಯಬೇಕಾಯ್ತು.

ಸಿಕ್ಕಷ್ಟೇ ಸುಖ 

ಚಿತ್ರ ಕೆತ್ತಿದ ಚಿತ್ರ- ಸುಮಾರು ಏಳು ವರ್ಷಗಳ ಕಾಲ ಆ ತೋಳ ಆಸರೆಯಲ್ಲಿ ಎಡಬಿಡದೆ ನೆರಳಾಗಿ ವಾಗರ್ಥಗಳ ಹಾಗೆ, ಅರ್ಧನಾರೀ ನಟೇಶ್ವರರ ಹಾಗೆ ಸಾಗಿದೆವು. ಅದೇ ಇವತ್ತಿಗೂ ನನ್ನ ಬಾಳ ಬುತ್ತಿ.ಅದು ಮುಗಿಯದ್ದು. ಅಕ್ಷಯ…ಅಕ್ಷಯ… ಆ ಪ್ರೀತಿಯ ಶಕ್ತಿಯೇ ನನ್ನನ್ನು ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ.

ಬಿಟ್ಟರೂ ಬಿಡದ ಬಂಧ ! ( ಗಮನವಿಟ್ಟು ಓದಿಕೊಳ್ಳಿ )

ಚಿತ್ರ ಕೆತ್ತಿದ ಚಿತ್ರ- ಕಲಾವಿದರು, ಕ್ಷೇತ್ರವೇ ಅಂಥದ್ದು. ಆಕರ್ಷಣೆಗಳ ಗೊಂದಲ. ಬೇಡವೆಂದರೂ ಬಿಡದ ನಂಟುಗಳು… ನನ್ನ ಚಿಕ್ಕಮಾವನವರು ನನಗೆ ಸದಾ ಹೇಳುತ್ತಿದ್ದರು, “ಬಿಟ್ಟು ಕೊಡಬೇಕು, ಸಡಿಲವಾದರೇನಂತೆ ಪ್ರೀತಿಯ ಕೊಂಡಿ ನಿನ್ನ ಬಳಿ ಇದ್ದರಾಯಿತು…ಅತಿಯಾದ ಹಿಡಿತ-ಬಿಗಿ ಮತ್ತು ಸ್ವಾರ್ಥದ ಏಕತಾನತೆ ಚಲನಶೀಲತೆಯನ್ನೇ ಕುಗ್ಗಿಸಿ ಬಿಡಬಹುದು -ಹೊಸ ಹವೆಗೆ ಮುಖ ಒಡ್ಡಿದರೆ ಮುನಿಯಬೇಡ ; ಮುದ್ದಿಸು” ಎಂತ. ಆತ ಮಹಾ ರಸಿಕರು. ಎಲ್ಲ ಮಾತೂ ಧ್ವನಿಪೂರ್ಣ. ಅಂದು ಹಿರಿಯರ ಮಾತಿಗೆ ತಲೆಬಾಗಿದೆ. ಇವತ್ತು ಆ ಮಾತಿನ ಹಿಂದಿನ ಅರ್ಥ ಮನದಟ್ಟಾಗುತ್ತಿದೆ.

ಆ ಗುಲಾಬಿಯ ಹಿಂದಿನ ಕಥೆ ?(ನಿಮ್ಮಲ್ಲಿ ಸೂಕ್ಷ್ಮತೆ ಇದ್ರೆ ಈ ಮಾತುಗಳ ಒಳಾರ್ಥ ಗ್ರಹಿಸಿಬಿಡಬಲ್ಲಿರಿ) 

ಚಿತ್ರ ಕೆತ್ತಿದ ಚಿತ್ರ-ನಾನು ಶಿವಣ್ಣನನ್ನು ಗರ್ಭ ಧರಿಸಿದ್ದ ಕ್ಷಣ. ವೈದ್ಯರ ಬಳಿ ಹೋಗಿ ಬಂದಾಗ ಹಿಗ್ಗು… ಇವರು ವರದಣ್ಣ ಸಿಹಿ ತಂದರು. ಇವರ ಬಾಯಿಗಿಟ್ಟು ಖುಷಿ ಪಟ್ಟು ಹಾಡಿದ್ದೇ ಹಾಡಿದ್ದು.

ಅಂದೇ ಎಕ್ಸಿಬಿಷನ್ಗೆ ಹೊರಟೆವು. ದಾರಿಯಲ್ಲಿ ನನ್ನ ‘ಗೆಳತಿಯ’ ಮನೆಗೆ ನಾನೇ ಒತ್ತಾಯವಾಗಿ ಕರೆದೊಯ್ದೆ.ವರದಣ್ಣ ಬೇಡ ಎಂದರೂ ಬಿಡಲಿಲ್ಲ. ಸಿಹಿ ಕೊಟ್ಟೆ ಆಕೆಗೆ. ಆಕೆ ಏಕೋ ಗಂಭೀರವಾಗಿದ್ದಳು…ಒಂದು ದೊಡ್ಡ ಗುಲಾಬಿ ತಂದುಕೊಟ್ಟಳು. ಗುಲಾಬಿ ಚೆನ್ನಾಗಿತ್ತು. ಆದರೆ ಅದನ್ನು ನೋಡಿದಾಗಲೆಲ್ಲ ಆಕೆಯ ಖಿನ್ನವಾದ ಮುಖ ಕಣ್ಣೆದುರು ಬರುತ್ತಿತ್ತು. ಆ ಗುಲಾಬಿಯ ಹಿಂದಿನ ಕಥೆಯೇನೋ ನಾನರಿಯೆ…ನನಗೇಕೋ ಗುಲಾಬಿಯೇ ಬೇಡವಾಯಿತು. ಅದೆಷ್ಟೋ ವರುಷಗಳವರೆಗೆ ಗುಲಾಬಿಗೆ ನನ್ನ ಮುಡಿಯಲ್ಲೇ ಏಕೆ, ನನ್ನ ಆರಾಧ್ಯದೇವಿ ಲಲಿತ-ದುರ್ಗೆಯರ ಮುಡಿಗೂ ಸಲ್ಲಲಿಲ್ಲ. ಅದೇಕೋ ಪಾರ್ವತಿಗಿಂತ ‘ಗಂಗೆ’ಯರಿಗೇ ಅದು ಸೂಕ್ತ ಎಂದುಕೊಂಡಿತು ಮನಸ್ಸು.

ಹಾಗಿಲ್ಲದಿದ್ದರೆ ಬದುಕು ಮೂರಾಬಟ್ಟೆಯಾಗುತ್ತಿತ್ತಾ?

ಚಿತ್ರ ಕೆತ್ತಿದ ಚಿತ್ರ – ಹೌದು, ನಾನು ಶಿವನ ತೊಡೆಯೇರಿದ ಪಾರ್ವತಿ. ಅವನ ಅರ್ಧದೇಹ. ಆದರೆ ಮುಡಿಯೇರಿದ ‘ಗಂಗೆ’ಯರತ್ತ ವಾರೆಗಣ್ಣು ಹಾಕಿ ಹದ್ದುಬಸ್ತಿನಲ್ಲಿರಿ ಅನ್ನದೆ ಹೇಗಿರಲಿ ? 

( ಅಬ್ಬಾ.. ಎಂಥಾ ಮಾತು! ಅರಿವಾದವರಷ್ಟೇ ಅರ್ಥೈಸಿಕೊಳ್ಳಬಹುದಾದ ಮಾತು )

ಆತ್ಮಹತ್ಯೆ ಮಾಡಿಕೊಳ್ಳಲೇ ?

ಚಿತ್ರ ಕೆತ್ತಿದ ಚಿತ್ರ – ಇವರು ವಿಪರೀತ ಕೆಲಸದಲ್ಲಿ ತೊಡಗಿದ್ದರು. ಮೊದಲಿನ ಸಾಮಿಪ್ಯ ಇಲ್ಲ…ಸದಾ ತಿರುಗಾಟ. ನಾನೂ ಅವರ ಜತೆ ಹೋಗಲಾಗುತ್ತಿರಲಿಲ್ಲ. ಮನೆಯ ಜವಾಬ್ದಾರಿ…ಏನೋ ಕಳೆದುಕೊಂಡ ಹಾಗಾಗುತಿತ್ತು. ಅವರಿಲ್ಲದ ಕ್ಷಣಗಳು ನನಗೆ ಬೆಂಕಿಯ ಮೇಲೆ ನಡೆದಂತೆ ಕಂಡವು…ಅವರು ಹೀಗೆ ಸದಾ ಕೆಲಸದಲ್ಲಿರುವುದೇ ನಾನು,ಮಕ್ಕಳಿಗಾಗಿ ತಾನೇ…ನಾನೇ ಇಲ್ಲವಾದರೆ…ಅವರಿಗೆ ಈ ಬಿಡುವಿಲ್ಲದ ದುಡಿಮೆಯ ಶ್ರಮವಾದರೂ ತಪ್ಪಲಿ…ನಾನೇ ಹೋಗಿಬಿಡಬೇಕು… ಹೇಗೆ ? ಆತ್ಮಹತ್ಯೆಯೇ …

ವೈಯಕ್ತಿಕ ಮಾತು ಎಷ್ಟು ಹೇಳಿದರೂ ಅದೇ ಲೋಕದ ಪ್ರೀತಿಯ ಮಗುವಾದ ಅವರನ್ನು ನಾನು ಆ ಕ್ಷಣ ನನ್ನೊಬ್ಬಳದೇ ಸ್ವತ್ತು  ಎಂದು ಭಾವಿಸಿ ಹಟ ಮಾಡಿದ್ದರಲ್ಲೇ ತಪ್ಪಿತ್ತೇನೋ,ಕಡೆಗೊಮ್ಮೆ ನಿರ್ಧರಿಸಿದೆ. ನಾನೇ ಅವರಿಂದ ದೂರ ಇರುವುದು. ಹಾಗಿರುವ ಅರ್ಹತೆ ಸಂಪಾದಿಸುವುದು…

raajkumar vijayamma

ಇಂಥಾ ಎಷ್ಟೋ ಅಂತರಂಗದ ಮಾತುಗಳು ಡಾ. ವಿಜಯಾರ  ಚಿತ್ತ ಕೆತ್ತಿದ ಚಿತ್ರ ಪುಸ್ತಕದಲ್ಲಿವೆ. ನೀವೇ ಕೊಂಡು ಓದಿ ನೋಡಿ ಅದರ  ಆಳ, ಅಗಲ, ವಿಸ್ತಾರ ತಿಳಿದೀತು.

ಫೋಟೋ ಕೃಪೆ-ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ

 

 

 

 

-Ad-

Leave Your Comments