ಈಗ ಬೇಡ ಅಂದ್ರೆ ತಪ್ಪಾ ? “ಇದೊಳ್ಳೆ ರಾಮಾಯಣ” ಕಣ್ರಿ

ಕನ್ನಡ ಚಿತ್ರರಂಗ ಅನೇಕ ಬಾರಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವಲ್ಲಿ ಸೋತಿದೆ. ವಿವಿಧ ನಿದರ್ಶನಗಳು ಇದನ್ನು ಪ್ರತಿಬಿಂಬಿಸುತ್ತವೆ. ಅನುಷ್ಕಾ ಶೆಟ್ಟಿ, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ರಜನೀಕಾಂತ್, ಜಯಲಲಿತ… ಹೀಗೆ ಹುಡುಕುತ್ತಾ ಹೋದರೆ ಕೇವಲ ನಟ ನಟಿಯರಷ್ಟೇ ಅಲ್ಲದೆ ಕಥೆಗಾರರು, ನಿರ್ದೇಶಕರು ಮುಂತಾದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅವರೆಲ್ಲ ಕನ್ನಡದಲ್ಲಿ ಛಾಪು ಮೂಡಿಸಲಾಗದೆ ಪರಭಾಷೆಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಅಂತವರ ಪೈಕಿ ಸರ್ವತೋಮುಖ ಪ್ರಜ್ಞೆಯ ನಟ ಪ್ರಕಾಶ್ ರೈ ಕೂಡಾ ಒಬ್ಬರು.

ಇತ್ತೀಚೆಗೆ ಪ್ರಕಾಶ್ ರೈಯವರನ್ನು ಅಡಕತ್ತರಿಯಲ್ಲಿ ಸಿಲುಕಿಸಲಾಯಿತು. ಕರ್ನಾಟಕ ಅವರ ಜನ್ಮಭೂಮಿಯಾಗಿದ್ದಿರಬಹುದು. ಆದರೆ ತಮಿಳುನಾಡು ಅವರ ಕರ್ಮಭೂಮಿ. ಅನ್ನ, ಪ್ರೀತಿ ಎರಡನ್ನೂ ಪ್ರಕಾಶ್ ರೈ ಅಲ್ಲಿನ ಜನರಿಂದ ಪಡೆದಿದ್ದಾರೆ. ಈ ಕುರಿತು ಫೇಸ್‍ಬುಕ್‍ನಲ್ಲಿ ಸಕ್ರಿಯರಾಗಿರುವ ವಿದ್ಯಾ ರಾವ್ ಒಂದು ಅಭಿಪ್ರಾಯ ಹಂಚಿಕೊಂಡಿದ್ದರು. “ಕೃತಜ್ಞತೆಯ ಭಾರ ಹೊತ್ತು ಎಲ್ಲದರಿಂದ ದೂರ ಉಳಿಯುವ ಆಯ್ಕೆಯ ಹಕ್ಕನ್ನು ಪ್ರಶ್ನಿಸುವುದು ಎಷ್ಟು ಸರಿ? ಆತನ ಹೊಸ ಚಿತ್ರದ ಸಂದರ್ಶನದ ಮಧ್ಯದಲ್ಲಿ ಈ ಪ್ರಶ್ನೆ ತೂರಿಸಿದ್ದೇ ಅಲ್ಲದೆ ಅದನ್ನು ಇಡೀ ದಿನ ವಿವಾದವಾಗಿ ಬಳಸಿಕೊಳ್ಳಲಾಗುತ್ತಿಲ್ಲವೇ? ಆದಾಗ್ಯೂ ಆತ ಹೇಳಿದ್ದು ಕಾವೇರಿ ವಿವಾದ ಆಳವಾದ ವಿಷಯ, ಅದನ್ನು ಆತ ಇಲ್ಲಿ ಚರ್ಚಿಸಲು ಬಯಸುವುದಿಲ್ಲವೆಂದಷ್ಟೆ. ಆತನ ಹೇಳಿಕೆಯಿಂದ ಸಮಸ್ಯೆ ಇತ್ಯರ್ಥವಾಗಿಬಿಡುತ್ತದೆಯೇ? ಏನಿದೆಲ್ಲ? ಆತನನ್ನು ಹಣಿಯುವ ಅವಕಾಶವೇ?” ಎಂಬ ಅವರ ಪ್ರಶ್ನೆಗಳು ನನಗೂ ಕಾಡಿದವು.
ಒಂದುವೇಳೆ ಯಾವುದೋ ಸಾರ್ವಜನಿಕ ಕಾರ್ಯಕ್ರಮದಲ್ಲಿ ಈ ರೀತಿ ಪ್ರಕಾಶ್ ರೈ ಮಾತನಾಡಿದ್ದರೆ ಅದಕ್ಕೆ ವಿವಾದದ ರೂಪ ಕೊಟ್ಟು ಚರ್ಚಿಸುವುದು ಅಷ್ಟೊಂದು ಅಸಂಬದ್ಧ ಎನ್ನಿಸುತ್ತಿರಲಿಲ್ಲ. ಆದರೆ ತೀರ ಪಾಪ ಅತಿಥಿಯಾಗಿ ಬಂದ ವ್ಯಕ್ತಿಯ ಜತೆ ಸ್ನೇಹದಿಂದ ವರ್ತಿಸುವ ಬದಲು ಆತನನ್ನು ಹರಕೆಯ ಕುರಿ ಮಾಡಲು ಹೊರಟಿದ್ದು ಆ ವಾಹಿನಿಯ ಕೆಟ್ಟ ಬುದ್ಧಿಯಲ್ಲದೆ ಬೇರೇನಲ್ಲ. ಒಂದು ವೇಳೆ ಅವರು ಮಾತಾಡಿದ್ದು ತಪ್ಪೇ ಆಗಿದ್ದರೂ ಸಹ ಆ ವಾಹಿನಿ ಈ ರೀತಿ ನಡೆದುಕೊಳ್ಳಬಾರದಿತ್ತು. ತನ್ನ ಆತಿಥ್ಯ ಧರ್ಮವನ್ನು ಮರೆತದ್ದು ಮೊದಲನೆಯ ತಪ್ಪು. ಅವರ ಅಭಿಪ್ರಾಯ ಸ್ವಾತಂತ್ರ್ಯದ ಮೇಲೆ ಅಟ್ಯಾಕ್ ಮಾಡಿದ್ದು ಎರಡನೆಯ ತಪ್ಪು. ಈ ವಾಹಿನಿ ಎಷ್ಟು ವಿಶ್ವಾಸಾರ್ಹ ಅನ್ನುವುದು ಇದರಿಂದ ತಿಳಿಯುತ್ತದೆ.

ಇಲ್ಲಿ ಒಂದು ಸೂಕ್ಷ್ಮ ಸಂಗತಿ ನಮಗೆ ಅರ್ಥವಾಗಬೇಕು. ರಾಷ್ಟ್ರಖ್ಯಾತಿಯ ಕಲಾವಿದನೊಬ್ಬ ತನ್ನ ಚಿತ್ರದ ಪ್ರಚಾರಕ್ಕೋಸ್ಕರ ಬಂದಾಗ ಅವನ ವ್ಯಕ್ತಿತ್ವದ ಗಾಂಭೀರ್ಯವನ್ನು ಉಳಿಸುವುದರ ಜತೆಗೆ ಅವನ ಭಾವನೆಗಳನ್ನೂ ಗೌರವಿಸಬೇಕಾದ್ದು ಆತಿಥ್ಯ ವಹಿಸಿದವರ ಕರ್ತವ್ಯ. ಪ್ರಕಾಶ ರೈ ಕಲಾವಿದನಾಗಿ ಕನ್ನಡಕ್ಕೆ ಮಾತ್ರ ಸೀಮಿತನಲ್ಲವಲ್ಲ? ಹೀಗಿರುವಾಗ ವಿಷಯ ಎಷ್ಟೇ ಗಂಭೀವಾಗಿದ್ದಾಗಿರಲಿ, ಅವರು ಯಾತಕ್ಕೆ ಬಂದಿದ್ದಾರೆ ಎಂಬ ಕಾರಣ ಮರೆತು ಅನ್ಯ ವಿಷಯಗಳೆಡೆಗೆ ಚರ್ಚೆಯನ್ನು ಗಕ್ಕಂತ ತಿರುಗಿಸಿಬಿಡುವುದು ಸಮಂಜಸವಲ್ಲ. ಸ್ವತಃ ರೈ “ಇದು ತುಂಬಾ sensitive ವಿಚಾರ. ಈ ಸಂದರ್ಭ ಅದಕ್ಕೆ ಸೂಕ್ತವಲ್ಲ” ಅಂತ ಹೇಳಿದ ಮೇಲೂ ಆ ಪ್ರಶ್ನೆ ಪ್ರಸ್ತುತವಾಗಲಾರದು. ಆದರೆ ನಿರೂಪಕಿ ಹಟಕ್ಕೆ ಬಿದ್ದವಳಂತೆ ಅದನ್ನು ಡ್ರ್ಯಾಗ್ ಮಾಡಲು ಶುರು ಮಾಡಿದಳು. ಸನ್ನಿವೇಶಕ್ಕೆ ಯುಕ್ತವಾಗಿ ಏನೇ ಮಾತನಾಡಿದರೂ ದೊಡ್ಡ ವಿವಾದವಾಗಿಬಿಡುವ ಸಾಧ್ಯತೆಯಿರುವಾಗ ಮಾತನಾಡದೆ ಉಳಿಯುವುದು ಉತ್ತಮ ಅನ್ನಿಸಿ ರೈ ನಿರಾಕರಿಸಿದ್ದಿರಬಹುದು. ವ್ಯಕ್ತಿಗತ ನೆಲೆಯಲ್ಲಿ ಅದು ಸರಿ. ಅವರಿಂದ ಇದೇ ಉತ್ತರ ಬರಬೇಕು ಎಂದು ನಿರೀಕ್ಷಿಸುವುದೂ ತಪ್ಪು. ಈ ಬಗೆಯ ಪ್ರಶ್ನೆಗಳು ಎಂಥವರಿಗೂ ಪೇಚಿಗೆ ಸಿಲುಕಿಸುತ್ತವೆ. ರೈ ಕೊಡುವ ಉತ್ತರದ ಸಾಧಕ-ಬಾಧಕಗಳ ವಿಮರ್ಶೆಯೂ ಅನುಚಿತ ಎಂದು ಹೇಳಬೇಕಾಗುತ್ತದೆ. ಸಂದರ್ಭ-ಸಮಯ-ಸನ್ನಿವೇಶಕ್ಕೆ ಸರಿಯಾಗಿ ನಮ್ಮ ಅಭಿವ್ಯಕ್ತಿಯೂ ತಕ್ಕುದಾಗಿರಬೇಕು. ರೈ ಕನ್ನಡದವರೇ ಎಂದು ಒಪ್ಪಿದರೂ, ಅವರಾಗಿಯೇ ಅಂಥ ವಿಷಯದ ಬಗ್ಗೆ ಮಾತಾಡಿದಾಗ ನಾವು ಅದನ್ನು ಜಿಜ್ಞಾಸೆಗೋ ವಿಮರ್ಶೆಗೋ ಒಳಪಡಿಸುವುದುತ್ತಮ.

ವ್ಯಕ್ತಿಶಃ ಎಲ್ಲರೂ ಒಂದೇ ಗುಣ ಸ್ವಭಾವದವರಾಗಲು ಸಾಧ್ಯವಿಲ್ಲ. ಆದರೆ ಸಮಷ್ಟಿಯ ಚಿಂತನೆ ಮಹತ್ವದ್ದು. ಹೀಗಾಗಿ ರೈ ಪ್ರತಿಕ್ರಿಯೆ ವೈಯಕ್ತಿಕವಾದದ್ದು ಎಂಬ ಪರಿಜ್ಞಾನ ನಮಗಿರಬೇಕು. ಸಹನೆಗೆಡದೆ ರೈ ನಿರುತ್ತರಿಯಾಗಬಹುದಿತ್ತು ಎಂಬ ಅನಿಸಿಕೆ ಕೂಡಾ ನನ್ನದಾಗಿದೆ. ಹಾಗೆಯೇ ಗೌರವಾನ್ವಿತ ವ್ಯಕ್ತಿಯನ್ನು ಸಂದರ್ಶನ ಮಾಡುವ ಬಗೆಯನ್ನೂ ಅರಿತುಕೊಳ್ಳಬೇಕು. ಭಾವಪಾತ ಆಗಬಹುದಾದ ವಿಷಯಗಳನ್ನು ನಮ್ಮಲ್ಲಿಯೇ ಉತ್ಪತ್ತಿ ಮಾಡಿಕೊಳ್ಳಬಾರದು ಎಂಬ ಎಚ್ಚರ ಇರಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವುದು ನಮ್ಮ ಉದ್ದೇಶ ಆಗಬಾರದು.

ಇನ್ನೊಂದು ಅಸಮಾಧಾನವೆಂದರೆ, ಕೇವಲ ಅಷ್ಟಕ್ಕೇ ವಿವಾದವನ್ನು ತಣ್ಣಗಾಗಲು ಬಿಡದ ಜನಶ್ರೀ ಚಾನೆಲ್ “Imprudent and unprecedented behaviour of Senior Actor Prakash Rai when asked about his views on Cauvery issue! Shouldn’t we Kannadigas refrain from watching his movies for his indifference! #Cauveryissue #cauvery #RaiRagale” ಎಂಬ ಬರಹದೊಂದಿಗೆ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ಕಿಗೆ ಹರಿಯಬಿಟ್ಟಿತು. ಪ್ರತ್ಯೇಕವಾದ panel discussion ಏರ್ಪಡಿಸಿತು. ಅಲ್ಲಿ ಫಿಲಂ ಛೇಂಬರಿನವರು, ಕನ್ನಡ ಪರ ಹೋರಾಟಗಾರರೆಂಬ ಕೆಲವೊಂದಷ್ಟು ಮಂದಿ ಬಾಯಿಗೆ ಸಿಕ್ಕಂತೆ ಮಾತನಾಡಿ ಹೋದರು. ನನ್ನ ಮನರಂಜನೆಯ ಜತೆಗೆ ರಾಜಕೀಯವನ್ನು ಮಿಶ್ರಿಸುವ ಅಗತ್ಯವಿತ್ತಾ ಎಂಬುದು. ಬರೀ ಜನರ ಭಾವನೆಗಳನ್ನು ಕೆರಳಿಸುವ ಮುಖಾಂತರ ಟಿಆರ್ಪಿ ಗಳಿಸುವ ಗೀಳಿಗೆ ಬಿದ್ದರೆ ಅದು ಪತ್ರಿಕೋದ್ಯಮದ ಹೊಸ ಅಧಃಪತನ ಎಂದು ನಾನು ತಿಳಿಯುತ್ತೇನೆ.
ಮಳೆ ಚೆನ್ನಾಗಿ ಆದ ವರ್ಷ ಕೂಡಾ ರೈತರ ಆತ್ಮಹತ್ಯೆ ನಿಲ್ಲಲಿಲ್ಲ. ರಸಗೊಬ್ಬರ, ಬೆಲೆ-ಮಾಹಿತಿ, ಕ್ಲುಪ್ತ ಸಮಯದಲ್ಲಿ ಮಾರುಕಟ್ಟೆಗೆ ಸರಬರಾಜು, ಬೆಳೆ-ವಿಮೆ …. ಇವು ಯಾವೊಂದರ ಬಗ್ಗೆ ಮಾತನಾಡದೆ ಕೇವಲ ಭಾವನೆಗಳನ್ನು ಕೆರಳಿಸುವ ಟಿವಿ ವಕ್ತಾರರ ಧೋರಣೆ ತುಂಬಾ ಅಪ್ರಬುದ್ಧ.

ಮದುವೆಯಾದ ಹೆಣ್ಣು ತವರುಮನೆಗಿಂತ ಗಂಡನ ಮನೆಯ ಮನೆವಾರ್ತೆಗೆ ಹೆಚ್ಚು ಗಮನ ಕೊಡುವುದರಲ್ಲಿ ಏನು ಹೊಸತಿದೆ? ಸಮಸ್ಯೆ ಇರುವುದು ನಾಡಿನ ತೊಂದರೆಯನ್ನ ಸರ್ವೋಛ್ಚ ನ್ಯಾಯಾಲಯದಲ್ಲಿ ಮನಮುಟ್ಟುವಂತೆ ವಿವರಿಸಲಾಗದ್ದು.

ಇದನ್ನು ಹಲವರು ಪೂರ್ವಯೋಜಿತ ಡ್ರಾಮ ಎಂದೇ ವಿಶ್ಲೇಷಿಸಿದ್ದಾರೆ. ಆಕಾಶ ನೋಡಲು ನೂಕು ನುಗ್ಗಲು ಬೇಕಿಲ್ಲ. ಇದರಿಂದ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ತಕ್ಕ ಮಟ್ಟಿಗೆ ಪ್ರಯತ್ನಿಸಿ ಚಾನೆಲ್ ಸೋತಿತು.
ಪ್ರಕಾಶ್ ರೈ ಅತ್ಯಂತ ಪ್ರತಿಭಾವಂತ ನಟ. ಚಿತ್ರರಂಗದಲ್ಲಿ ಅನೇಕ ದಶಕಗಳಿಂದ ತನ್ನದೇ ವಿಶಿಷ್ಟವಾದ ಚರೀಸ್ಮಾ ಹೊಂದಿರುವ ಧೀಮಂತ ಕಲಾವಿದ. ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿರುವವರು. ಭಾರತದ ಬಹುಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡವರು. ಕನ್ನಡ ಸಾಹಿತ್ಯವನ್ನು ಸಾಕಷ್ಟು ಅಧ್ಯಯನ ಮಾಡುತ್ತಿರುವವರು. ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಕನ್ನಡಿಗ ಎಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುವಂತವರು. ಅವರನ್ನು ಧರ್ಮಸಂಕಟಕ್ಕೆ ಸಿಗೆ ಬಡಿದು ಕಾವೇರಿ ನದಿ ವಿವಾದದ ಕಾವೇರಿಸುವ ಪ್ರಯತ್ನವನ್ನು ಜನಶ್ರೀ ಮಾಡಿತು. ಏಕೆಂದರೆ ಪ್ರಕಾಶ್ ರೈರವರನ್ನು ಕರ್ನಾಟಕದ ಜನತೆಯಂತೆ ತಮಿಳುನಾಡಿನ ಜನತೆ ಸಹ ಅರಿತಿರುವರು. ಅವರ ನಟನೆಯನ್ನು ಮೆಚ್ಚಿರುವರು. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಒಂದು ಸಿನಿಮಾವನ್ನು ಅದರಲ್ಲಿರುವ ಪಾತ್ರಗಳ ಮೂಲಕ ಇಷ್ಟ ಪಡುತ್ತೇವೆಯೇ ಹೊರತು ಆ ವ್ಯಕ್ತಿಯಿಂದಾಗಿ ಖಂಡಿತ ಅಲ್ಲ. ಆ ಪಾತ್ರಗಳ ಮೂಲಕ ನಟ ನೆನಪಾಗುತ್ತಾನೆ ಮತ್ತು ನೆನಪಿನಲ್ಲಿ ಉಳಿಯುತ್ತಾನೆ. ಒಬ್ಬ ವ್ಯಕ್ತಿ ಒಂದು ಪ್ರದೇಶ, ಭಾಷೆ, ಜಾತಿಗೆ ಸೀಮಿತನಾದಷ್ಟೂ ಆತ ಮಾನಸಿಕವಾಗಿ ಕುಬ್ಜನಾಗುತ್ತಾ ಹೋಗುತ್ತಾನೆ. ಹಿಂದೆ ದೇಶ ಸುತ್ತಿ ನೋಡು; ಕೋಶ ಓದಿ ನೋಡು ಎಂದು ಹಿರಿಯರು ಹೇಳುತ್ತಿದ್ದರು. ಪ್ರಕಾಶ್ ರೈಗೆ ಸಾಕಷ್ಟು ಓದುವ ಹವ್ಯಾಸವಿದೆ. ಹಾಗೆ ಅವರು ಸಾಕಷ್ಟು ಊರುಗಳನ್ನು ನೋಡಿದವರು. ಒಬ್ಬ ಅಪೂರ್ವ ಪ್ರಜ್ಞಾವಂತ. ಕಾವೇರಿ ನದಿ ವಿವಾದವು ಮೇಲ್ಮಟ್ಟದಲ್ಲಿ ಅವಲೋಕಿಸುವ ಸಮಸ್ಯೆಯಲ್ಲ. ಮಂಜುಗಡ್ಡೆಯು ಮೇಲ್ನೋಟಕ್ಕೆ ಚಿಕ್ಕ ತೇಲುವ ಬರ್ಫದ ಬಿಲ್ಲೆಯಂತೆ ಕಂಡರೂ ನೀರಿನ ಆಳದಲ್ಲಿ ಬೃಹದಾಕಾರವಾಗಿರುತ್ತದೆ. ಅದನ್ನು ನಿರ್ಲಕ್ಷಿಸಿ ಡಿಕ್ಕಿ ಹೊಡೆದವನು ಪಾತಾಳ ಸೇರುವುದು ಸತ್ಯ. ಇದು ಪ್ರಕಾಶ್ ರೈರವರಿಗೆ ಅತ್ಯಂತ ಹೆಚ್ಚು ಗೊತ್ತು ಅಲ್ಲದೆ ಕನ್ನಡ ಮತ್ತು ತಮಿಳು ಮಾಧ್ಯಮಗಳಲ್ಲಿ ಬರುವ ಪರ ಮತ್ತು ವಿರೋಧ ಸಿದ್ಧಾಂತಗಳ ಪೂರ್ಣ ಅರಿವು ಅವರಿಗಿದೆ. ಆದ್ದರಿಂದ ಪ್ರಾರಂಭದಲ್ಲಿ ಅವರು ಸೂಚ್ಯವಾಗಿ ಸಂದರ್ಶಕಿಗೆ ಅದನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು. “ರಾಜಕೀಯವಾಗಿ ದೊಡ್ಡ ವಿಷಯ, ಆಳವಾದದ್ದು, ರೈತರಿಗಿರುವುದು ನೀರಿನ ಸಮಸ್ಯೆ ಮಾತ್ರ ಅಲ್ಲ. ಇದು ಗಂಭೀರವಾದ್ದು” ಅಂದರು. ಹಾಗೆಯೆ ಫೋನ್‍ ಮುಖಾಂತರ ಮಾತನಾಡುವಾಗಲೂ ಸಹಿತ ಅವರ ಮಾತುಗಳಲ್ಲಿ ಸ್ಪಷ್ಟತೆ, ನಿಖರತೆ ಇತ್ತು. ಕರ್ನಾಟಕದ ಬಗ್ಗೆ, ಇಲ್ಲಿನ ಜನತೆಯ ಬಗ್ಗೆ ವಾತ್ಸಲ್ಯವಿತ್ತು. ರೈತರ ಬಗ್ಗೆ ಕಾಳಜಿ ಸಹ ವ್ಯಕ್ತವಾಗುತ್ತಿತ್ತು.

“ನಾನೊಬ್ಬ ಪ್ರಜೆ, ನಾಡಿನ ಸಮಸ್ಯೆಗಳನ್ನು ಸರಿಪಡಿಸಲು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದೇವೆ. ಅವರ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವುದು ಮಂತ್ರಿಗಳ ,ಜನಪ್ರತಿನಿಧಿಗಳ ಕರ್ತವ್ಯ.” ಈ ಮಾತುಗಳನ್ನು ನಿರ್ಲಕ್ಷ್ಯಿಸಲಾಗುತ್ತದೆಯೇ? ಸಿನಿಮಾದಲ್ಲಿ ನಟಿಸುವವರು ಹೋರಾಟ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಒಬ್ಬ ಕಲಾವಿದ, ಸಾಹಿತಿ, ರಾಜಕಾರಣಿ ಅಥವಾ ಸಮಾಜದಲ್ಲಿ ಗಣ್ಯ ಎನಿಸಿಕೊಂಡವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ವಿವೇಚನೆ ಅತ್ಯಗತ್ಯ. ಇಲ್ಲದೆ ಹೋದರೆ ಅದರಿಂದ ಬೆಂಕಿ ನಂದದೆ ಇನ್ನಷ್ಟು ಸುಡುವ ಜ್ವಾಲೆಗಳನ್ನು ಹೊರಚೆಲ್ಲಬಹುದು. ಇದರಿಂದ ಇನ್ನಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಬಹುದು. ಆಸ್ತಿ ನಷ್ಟವಾಗಬಹುದು. ವೈಮನಸ್ಯ ಹೆಚ್ಚಬಹುದು. ಇದನ್ನು ಮಾಧ್ಯಮಗಳು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಎಲ್ಲಾ ಪಕ್ಷಗಳು ಏಕ ಮನಸ್ಸಿನಿಂದ ಸೇರಬೇಕು. ನಾಡಿನ ನೈಸರ್ಗಿಕ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು. ಅದಕ್ಕೆ ತಂತ್ರಜ್ಞರಿಂದ ರೂಪುರೇಷೆಗಳು ಸಿದ್ದವಾಗಬೇಕು. ಅಲ್ಲದೆ ಒಬ್ಬ ಪ್ರಕಾಶ್ ರೈಯನ್ನು ಇಕ್ಕಟ್ಟಿಗೆ ಸಿಲುಕಿಸಿ, ಅವಹೇಳನ ಮಾಡಿ ತಮ್ಮ ವಾದವನ್ನು ಪ್ರತಿಪಾದಿಸಿ ದೊಡ್ಡವರನ್ನು ಸೋಲಿಸಿದೆ ಎಂದು ಬೀಗುವುದು ಮಾಧ್ಯಮ ನಿಷ್ಠೆಯಲ್ಲ. ಈಗ ನನಗೆ ನೆನಪಾಗುವುದು ಜೀಸಸ್ ಅನ್ನು ಮಾತಿನಲ್ಲಿ ಸಿಲುಕಿಸಲು ರೋಮ್ ಚಕ್ರಾಧಿಪತಿಗೆ ಕಂದಾಯ ಕಟ್ಟುವುದು ಸರಿಯೋ ಎಂದು ಮಾತಿನಲ್ಲಿ ಸಿಕ್ಕಿಸಲು ಹೊರಟ ಫರಿಸಾಯರನ್ನು. ಅವರ ಕಪಟತನವನ್ನು ಮನಗಂಡು ಜೀಸಸ್ ಸರಿಯಾಗಿ ಉತ್ತರಿಸುತ್ತಾನೆ. ಸೀಸರ್‍ನಿಗೆ ಗೊಡಬೇಕಾದದ್ದನ್ನು ಸೀಸರನಿಗೂ, ದೇವರಿಗೆ ಸಲ್ಲಬೇಕಾದದ್ದನ್ನು ದೇವರಿಗೆ ಕೊಡಿ ಎಂದು.

ಕಾವೇರಿ ವಿವಾದದ ಸಲುವಾಗಿ ಅನೇಕ ತಮಿಳು ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಲ್ಲಿಸಲಾಯಿತು. ಅಷ್ಟೇ ಏಕೆ, ಕನ್ನಡದ ಪ್ರಸಿದ್ಧ ನಟ ಸುದೀಪ್‍ನ ಕೋಟಿಗೊಬ್ಬ-2 ಚಿತ್ರದ ಪೋಸ್ಟರ್ ಹರಿದು ಸುಟ್ಟ ಹಾಕಲಾಯ್ತು. ತಕ್ಷಣ ಕಾವೇರಿ ಬಗೆಗಿನ ತನ್ನ ಕನ್ನಡಪರ ನಿಲುವನ್ನು ಸುದೀಪ್ ಟ್ವೀಟ್ ಮಾಡುವ ಮೂಲಕ ಉದ್ರಿಕ್ತರನ್ನು ಸಮಾಧಾನಪಡಿಸಿದರು. ಕೆಲ ಸಿನೆಮಾಗಳ ಶೂಟಿಂಗ್ ನಿಲ್ಲಿಸಲಾಯಿತು. ಒಟ್ಟಿನಲ್ಲಿ ಚಿತ್ರರಂಗ ಈ ಸಂದರ್ಭದಲ್ಲಿ ಕನ್ನಡದ ಐಡೆಂಟಿಟಿ ಮೆರೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಯಾರಿಗೂ ಚಾನ್ಸ್ ತೆಗೆದುಕೊಳ್ಳುವ ಇಚ್ಛೆಯಿರಲಿಲ್ಲ.

ಇನ್ನೊಂದೆಡೆ ತಮಿಳುನಾಡು ಸಿಎಂ ಜಯಲಲಿತಾರನ್ನೇ ತೆಗೆದುಕೊಳ್ಳಿ. ಆಕೆಯ ತವರು ಮಂಡ್ಯ ಜಿಲ್ಲೆ. ಪ್ರಸ್ತುತ ತಮಿಳು ವಿರೋಧಿ ಚಳವಳಿಯಲ್ಲಿ ಗ್ರೌಂಡ್ ಜೀರೋ! ಎಂಜಿಆರ್ ಜತೆ ಜಯಲಲತೆ ನಟಿಸಿದ ಚಿತ್ರಗಳು ಅಲ್ಲಿ ಒಂದಕ್ಕಿಂತ ಒಂದು ಅಭೂತಪೂರ್ವಾಗಿ ಸ್ವೀಕರಿಸಲ್ಪಡುತ್ತಿದ್ದವು. ಆದರೆ ಕಾವೇರಿ ರಾಜಕೀಯದಲ್ಲಿ communication gap ಇರಲೇಬೇಕೆಂಬ ಹಟ ನಮ್ಮ ತಥಾಕಥಿತ ಕನ್ನಡಪರ ಹೋರಾಟಗಾರರಿಗೆ ಇದ್ದಂತಿದೆ. ಹಿಂದೆ ಹೊಗೇನಕಲ್ ವಿವಾದದ ಸಂದರ್ಭದಲ್ಲಿ ರಜನೀಕಾಂತ್ ಕೂಡಾ ಉಭಯ ಸಂಕಟಕ್ಕೆ ಸಿಲುಕಿದ್ದರು. ಅವರು ‘KICK THEM’ ಅಂದದ್ದು ಕನ್ನಡಿಗರನ್ನು ಕೆರಳಿಸಿತ್ತು. ಆಗ ಕರವೇ ರಜನಿಯ ಸಿನೆಮಾಗಳನ್ನು ಕರ್ನಾಟಕದಲ್ಲಿ ಬಹಿಷ್ಕರಿಸುವುದಾಗಿ ಎಚ್ಚರಿಕೆ ನಿಡಿತು. ಇದಕ್ಕೆ ರಜನಿ ಸ್ಪಷ್ಟೀಕರಣ ಕೊಟ್ಟಾಗ ಅದು ತಮಿಳರನ್ನು ಕೆರಳಿಸಿತ್ತು. ಹೀಗಾದರೆ ಕಲಾವಿದರು ಏನು ಮಾಡಬೇಕು? ಕಲೆಯನ್ನು ಹಾಗೂ ಕಲಾವಿದರನ್ನು ಸಂಕುಚಿತಾರ್ಥದಲ್ಲಿ ಕಾಣುವ ಮನೋಧರ್ಮ ನಿಜಕ್ಕೂ ಅಪಾಯಕಾರಿ.

-ಜಿಎಸ್ ಯುಧಿಷ್ಠಿರ

-Ad-

Leave Your Comments