ಪ್ರಿಯಾಂಕಾ- ಉಪೇಂದ್ರ ದಾಂಪತ್ಯಕ್ಕೆ 13 ವರುಷ ! ಸದಾ ತುಂಬಿರಲಿ ಹರುಷ !!

ಉಪೇಂದ್ರ -ಪ್ರಿಯಾಂಕಾ ದಾಂಪತ್ಯಕ್ಕೆ  13 ಸಾರ್ಥಕ ವಸಂತಗಳ ಸಂಭ್ರಮ !! ciniadda.com ಬಳಗಕ್ಕೂ ಇದು ಹರ್ಷದ ವಿಷಯ. ಅರಿತು-ಬೆರೆತು ಒಂದಾಗಿ ಬಾಳುವ ಕುಟುಂಬದ ಜೊತೆಗೆ ವೃತ್ತಿಯಲ್ಲೂ ಸಾಧನೆ ಮಾಡಿದ ಅಪರೂಪದ ದಂಪತಿಗಳಿವರು. ಓದುಗರು- ಅಭಿಮಾನಿಗಳ ಪರವಾಗಿ ಶುಭಾಶಯ ನಮ್ಮ ಶುಭಾಶಯ.

upendra-and-priyanka-wedding

“ರಾ ” ಚಿತ್ರದ ಸಮಯದಲ್ಲಿ ಚಿಗುರಿದ ಪ್ರೀತಿಗೆ  2003ರಲ್ಲಿ ಮದುವೆಯ ಮುದ್ರೆಯೂ ಬಿತ್ತು. ಯಾರಲ್ಲೂ ಗುಟ್ಟು ಬಿಟ್ಟುಕೊಡದೆ ಮನೆಯವರನ್ನು ಒಪ್ಪಿಸಿ ,ಬಂಗಾಳದ ಬೆಡಗಿಯನ್ನು ವರಿಸಿ ಮನೆ ತುಂಬಿಸಿಕೊಂಡಿದ್ದರು ಉಪೇಂದ್ರ.  ಇಡೀ ಮನೆಯ ಪ್ರೀತಿಯ “ಪ್ರಿಯ” ಆಗಿ ಎಲ್ಲರೊಡನೆ ಒಂದಾಗಿ ಕೇಳಿ.. ಕೇಳಿ.. ಕನ್ನಡ ಕಲಿತು ಮನೆಯ ಮಗಳಾದರು ಪ್ರಿಯಾಂಕಾ ಉಪೇಂದ್ರ.

priyanka-1priyanka-upendra_145009541110

ಮಿಸ್ ಕೋಲ್ಕತ್ತಾ ಆಗಿ ಮೆರೆದದ್ದಷ್ಟೇ ಅಲ್ಲ ಬಂಗಾಳದ ಲೆಜೆ೦ಡರಿ  ನಿರ್ದೇಶಕ ಬಸು ಅವರ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡ ಪ್ರತಿಭೆ ಪ್ರಿಯಾಂಕಾ. ಬಂಗಾಳಿ, ಹಿಂದಿ, ತೆಲುಗು, ತಮಿಳು,ಕನ್ನಡ ಭಾಷೆಗಳಲ್ಲಿ ನಲವತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ ಚೆಲುವಿನ ಪುತ್ಥಳಿ. ತೆರೆಯಲ್ಲಿ ಮಿಂಚುವ ತಾರೆ.

priyanka_upendra_145009541130

ಇಷ್ಟು ಸಾಕಲ್ಲವೇ ಉಪೇಂದ್ರ ಮನಸೋತು ಮಡದಿಯಾಗಿ ಒಪ್ಪಿಕೊಳ್ಳಲಿಕ್ಕೆ ಅಂದರೆ ಖಂಡಿತ ಇಲ್ಲ. ಚೆಲುವು, ಹೆಸರಿರುವ ಸಾಕಷ್ಟು ನಟಿಯರು ಇದ್ದಾರೆ. ಆದ್ರೆ ಮದುವೆಯಾಗಿ ಮನೆ-ಮಂದಿಯನ್ನು ಸರಿತೂಗಿಸಿಕೊಂಡು ಹೋಗಲಿಕ್ಕೆ ಬೇರೆಯ ಗುಣವೇ ಬೇಕು. ಅದು ಪ್ರಿಯಾಂಕಾ ತುಂಬ ತುಂಬಿಕೊಂಡಿರುವುದೇ ಇವರಿಬ್ಬರ ದಾಂಪತ್ಯದ ಯಶಸ್ಸಿನ ಗುಟ್ಟು.

priyanka

ಪ್ರಿಯಾಂಕಾ ಅಪ್ಪಟ ಸಂಪದಾಯಸ್ಥ ಮನೆತನದ ಹೆಣ್ಣು ಮಗಳು. ಮನೆಗೆ ಹಿರಿಯ ಮಗಳಾಗಿ ತಮ್ಮ- ತಂಗಿಯನ್ನು ಸಹನೆಯಿಂದ ಸುಧಾರಿಸಿದ ಅನುಭವ ಇರುವಾಕೆ. ಬೆಳೆದದ್ದು ವಿದೇಶದಲ್ಲಾದರೂ ಭಾರತೀಯ ಸಂಪ್ರದಾಯ ಬಿಡದೆ ಅಡುಗೆ, ಪೂಜೆ ಪುನಸ್ಕಾರ, ಕುಟುಂಬ ನಿರ್ವಹಿಸುವ ಬಗೆ ಎಲ್ಲವನ್ನು ತಾಯಿಯಿಂದ, ತನ್ನ ಸ್ವಂತ ಆಸಕ್ತಿಯಿಂದ ಕಲಿತವರು. ತಾಯಿಯ ಕನಸಿನಂತೆ ಸಿನಿಮಾ ನಟಿಯಾದರು ಮನೆ ನಿಭಾಯಿಸಿಕೊಳ್ಳುವ ಕಲೆಯಲ್ಲೂ ಪ್ರವೀಣೆ ಪ್ರಿಯಾಂಕಾ.

ಮಾರು ಗೆದ್ದಾಕೆ ಮನೆ ಗೆದ್ದದ್ದು 

priyanka-upendra-children-son-ayush-upringa-inlaws

ಬಂಗಾಳ ಬಿಟ್ಟು ಬೆಂಗಳೂರಿಗೆ ಬಂದು  ರಿಯಲ್ ಸ್ಟಾರ್ ಉಪೇಂದ್ರರ ರಿಯಲ್ ಹೀರೋಯಿನ್ ಆದಮೇಲೆ ಮನೆ ಮಗಳಂತೆ ಅತ್ತೆ ಮಾವರ ಮುದ್ದಿನ ಸೊಸೆ ಎನ್ನಿಸಿಕೊಳ್ಳುವುದಕ್ಕೆ ಪ್ರಿಯಾಂಕಾ ಪರಿಶ್ರಮ ಮೆಚ್ಚುವಂಥಾದ್ದೆ. ಬೆಳ್ಳಿತೆರೆಯಲ್ಲಿ ಇಷ್ಟೆಲ್ಲಾ ಮೆರೆದಾಕೆ , ಕೀರ್ತಿ, ಯವ್ವನ ತುಂಬಿರುವಾಕೆ ಮನೆಯಲ್ಲಿ ಅಡುಗೆ ಅದರಲ್ಲೂ ಅತ್ತೆ-ಮಾವನಿಗೆ ಇಷ್ಟದ ತಿಂಡಿ ಮಾಡಿಕೊಡುವುದೆಂದರೆ ?! ಸೆಲೆಬ್ರೆಟಿಗಳೆಲ್ಲಿ ಅಡುಗೆ ತಿಂಡಿ ಅಂತೆಲ್ಲ ಮಾಡ್ತಾರೆ ? ಅವ್ರಿಗೆಲ್ಲ ಆಳು-ಕಾಳು ಇರ್ತಾರಲ್ವಾ ಅಂತಾನೆ ಎಲ್ಲರು ಅಂದುಕೊಳ್ಳುವುದು. ಆದರೆ ಪ್ರಿಯಾಂಕಾ ಹಾಗಲ್ಲ. ಮನೆಯವರಿಗಾಗಿ ಇಲ್ಲಿನ ಅಡುಗೆ ಕಲಿತವರು. ಉಪ್ಪಿಗಾಗಿ ಅವರಿಷ್ಟದ  ರಸಂ ಮಾಡಲು ಕಲಿತು ಶಬ್ಬಾಸ್ ಅನ್ನಿಸಿಕೊಂಡವರು. ಅತ್ತೆಗೆ ಮೆಚ್ಚಿನ ಚಿತ್ರಾನ್ನ ಹೀಗೆ ಸಂಸಾರದ ಇಷ್ಟ -ಅನಿಷ್ಟಗಳನ್ನು ಅರಿತು ಸಹನೆ, ಸಮಾಧಾನ, ಬುದ್ಧಿವಂತಿಕೆಯಿಂದ ಬುದ್ಧಿವಂತನ ಮನಸ್ಸು ಗೆದ್ದು ಮನೆ ಬೆಳಗಿದಾಕೆ ಪ್ರಿಯಾಂಕಾ ! 

priyanka-son-dau

ಆಯುಷ್ -ಐಶ್ವರ್ಯ ಎಂಬ ಎರಡು ಮುದ್ದಾದ ಮಕ್ಕಳ ಮೆಚ್ಚಿನ ಅಮ್ಮ. ನನ್ನಮ್ಮ ನಮಗಿಷ್ಟ ತಪ್ಪು ಮಾಡಿದಾಗ ಮಾತ್ರ ಒಂಚೂರು ಪೆಟ್ಟು ಕೊಡ್ತಾಳಷ್ಟೇ ಅಂತಾನೆ ಮುದ್ದುಮಗ ಆಯುಷ್.  ಅಮ್ಮ ತುಂಬಾ  ಚೆನ್ನಾಗಿ ಊಟ ಕೊಡ್ತಾಳೆ, ತಪ್ಪು ಮಾಡಿದ್ರು ಹೊಡೆಯಲ್ಲ, ಸ್ವಲ್ಪ ರೇಗ್ತಾಳಷ್ಟೇ ಅನ್ನುವುದು ಪುಟ್ಟಮಗಳು  ಐಶ್ವರ್ಯ  ಮಾತು. ಎರಡು ಮಕ್ಕಳನ್ನು ಎರಡು ಕಣ್ಣುಗಳಂತೆ ಸಾಕುತ್ತಾ, ನಿತ್ಯವೂ ಸಿನಿಮಾವನ್ನೇ ಉಸಿರಾಡುವ ಬಹುಮುಖಿ ಉಪೇಂದ್ರ ಮೌನದ ಜೊತೆಯೂ ಮಾತಾಡುತ್ತ ಸಂಸಾರದ ಸುಖಕ್ಕೆ ಧಕ್ಕೆ ಬಾರದ ಹಾಗೆ ಸಂಭಾಳಿಸಿಕೊಳ್ಳುತ್ತಿದ್ದಾರೆ ಪ್ರಿಯಾಂಕಾ.

priyanka-moviemummy-kannada-movie-online

ಮಾರು ಗೆದ್ದು ಮನೆಗೆ ಬಂದಾಕೆ ಈಗ ಮತ್ತೆ ಮಾರು ಗೆಲ್ಲಲು ಹೊರಟಿದ್ದಾರೆ. ಈ ವರುಷದಲ್ಲಿ ಬಂದ ಪ್ರಿಯಾಂಕಾ ,ಮಮ್ಮಿ ಎರಡೂ  ಚಿತ್ರಗಳು ಪ್ರೇಕ್ಷಕರನ್ನು ರಂಜಿಸಿವೆ. ಮಾಲಾಶ್ರೀ, ಶ್ರುತಿ ನಂತರ ಕನ್ನಡದಲ್ಲಿ ನಾಯಕಿ ಆಧಾರಿತ ಚಿತ್ರಗಳು ಗೆದ್ದಿದ್ದು ಅಷ್ಟರಲ್ಲೇ ಇದೆ. ಮದುವೆಯಾದ ನಾಯಕಿಯರನ್ನು ಕಡೆಗಣಿಸುವ, ಅದರಲ್ಲೂ ಮಕ್ಕಳಾದವರನ್ನು ತಿರುಗಿಯೂ ನೋಡದ ಕನ್ನಡ ಚಿತ್ರರಂಗದ ಕುಬ್ಜ ಮನಃಸ್ಥಿತಿಗಳ ನಡುವೆ ಪ್ರಿಯಾಂಕಾ ಗೆಲ್ಲುತ್ತಿದ್ದಾರೆ . ವಿಭಿನ್ನ ಚಿತ್ರಗಳ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ತನ್ನ ಅಭಿನಯದಿಂದ ಛಾಪು ಮೂಡಿಸಲು ಹೊರಟಿದ್ದಾರೆ. ಸಾಧನೆಯ ಜೊತೆಗೆ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವ ಪ್ರಿಯಾಂಕಾ -ಉಪೇಂದ್ರ ದಾಂಪತ್ಯ ಸದಾ  ಸುಖವಾಗಿರಲಿ. ತಮ್ಮ ಮನೆಯಂಗಳದಲ್ಲೇ ಮದುವೆಯ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿರುವ ದಂಪತಿಗಳಿಗೆ ಶುಭವಾಗಲಿ. 

 

 

-Ad-

Leave Your Comments