ಮಾಧ್ಯಮಗಳೇ.. ಇದು ಸರಿ ಎನಿಸುತ್ತಿದೆಯೇ..?

ಈ ಮೇಲಿನ ಪ್ರಶ್ನೆಯನ್ನು ಕೇಳುವುದು ವ್ಯರ್ಥ ಎನ್ನುವುದು ಗೊತ್ತಿದ್ದರೂ ಕೇಳುತ್ತಿದ್ದೇನೆ. ಈಗಾಗಲೇ ಸುದ್ದಿವಾಹಿನಿಗಳು, ಒಟ್ಟಾರೆ ಮಾಧ್ಯಮಗಳೆಂದರೆ ಟಿಆರ್ಪಿಗಾಗಿ ಏನನ್ನಾದರೂ ಮಾಡುವವರು ಎನ್ನುವಂತಾಗಿದೆ. ಆದರೆ ಅದನ್ನು ಸುಳ್ಳೆಂದು ಪ್ರೂವ್ ಮಾಡುವ ಯಾವ ಕೆಲಸವನ್ನೂ ಮಾಧ್ಯಮಗಳು ಮಾಡದೇ ಇರುವುದು ಬೇಸರದ ಸಂಗತಿ ಎನ್ನಬಹುದು…

ಸಧ್ಯಕ್ಕೆ ನೋಡಿ. ಪುಟಾಣಿ ಸಫಾರಿ ಚಿತ್ರ ಸತತ ನಾಲ್ಕು ದಿನಗಳ ತುಂಬಿದ ಗೃಹ ಪ್ರದರ್ಶನ ಕಂಡಿದೆ. ಎರಡನೆಯ ವಾರಕ್ಕೆ ಮುಂದುವರೆದಿದೆ. ಇದು ಸಧ್ಯಕ್ಕೆ ದಾಖಲೆ. ಮಕ್ಕಳ ಚಿತ್ರ ಎನ್ನುವ ಹಣೆಪಟ್ಟಿ ಹೊತ್ತುಬಿಟ್ಟರೆ ಬಿಡುಗಡೆಯಾಗುವುದೇ ಮರೀಚಿಕೆಯಾಗಿಬಿಡುತ್ತದೆ. ಆದರೆ ಮಕ್ಕಳ ಚಿತ್ರವೊಂದು ಹೌಸ್ ಫುಲ್ ಪ್ರದರ್ಶನದ ಜೊತೆಗೆ ಎರಡನೆಯ ವಾರಕ್ಕೆ ದಾಪುಗಾಲಿಟ್ಟು ಮುಂದುವರೆದಿರುವುದು ಸಾಮಾನ್ಯ ವಿಷಯವಲ್ಲ. ಅದನ್ನು ಎಷ್ಟೇ ಬಡಿದುಕೊಂಡರೂ ಕೇರ್ ಮಾಡದ ವಾಹಿನಿಯವರು ಬೆತ್ತಲೆ ಫೋಟೋದ ಕತೆ ಹಿಡಿದು ಗಂಟೆಗಟ್ಟಲೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಆ ನಟಿಯನ್ನು ಕರೆಸಿ ಇದು ನಿಜವೇ..? ಸುಳ್ಳೇ ಎಂದೆಲ್ಲಾ ಕೇಳುತ್ತಿದ್ದಾರೆ. ಅದು ಸತ್ಯವಾದರೂ ಸುಳ್ಳಾದರೂ ಅದರ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮ ಮಾಡಿ ಮನೆಮಂದಿಗೆಲ್ಲಾ ತೋರಿಸುವುದು ಯಾವ ಪುರುಷಾರ್ಥಕ್ಕೆ ನೀವೇ ಹೇಳಿ..

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಇರುವುದಾಗಿ ಹೇಳಿಕೊಳ್ಳುವ ಈ ಸುದ್ದಿವಾಹಿನಿಗಳು ಒಂದಷ್ಟು ಆ ಕೆಲಸವನ್ನು ಮಾಡದೆ ಬರೀ ಅದನ್ನು ಕೆಡಿಸುವ ಕೆಲಸವನ್ನೇ ಮಾಡುತ್ತಿದ್ದರೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ.. ಇವರು ಇಂತಹದ್ದೇ ತೋರಿಸುತ್ತಾರೆ ಎನ್ನುತ್ತಾ ನಿರ್ಲಕ್ಷಿಸುತ್ತಾರೆ…

ಇನ್ನಾದರೂ ಎಚ್ಚೆತ್ತುಕೊಂಡರೆ ಒಳ್ಳೆಯದು, ಮಾಧ್ಯಮಗಳೇ. ಕೆಟ್ಟದ್ದನ್ನು ಖಂಡಿಸಿ, ಕೆಲವೊಂದನ್ನು ನಿರ್ಲಕ್ಷಿಸಿ..ಒಳ್ಳೆಯದನ್ನು ಪೋಷಿಸಿ, ಪ್ರೋತ್ಸಾಹಿಸಿ.. ಸಮಯ ಅಮೂಲ್ಯ ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆ.. ಅಂತಹ ಅಮೂಲ್ಯ ಸಮಯವನ್ನು ಗಂಟೆಗಟ್ಟಲೆ ಇಂತಹ ಬೆತ್ತಲೆ ವಿಚಾರಗಳಿಗೆ ವ್ಯಯಿಸುವ ಮುನ್ನ ಯೋಚಿಸಿ…

ರವೀಂದ್ರ ವೆಂಶಿ ಎಂಬ ಹೊಸಬರ ಚಿತ್ರಕ್ಕೆ ಅದರಲ್ಲೂ ಮಕ್ಕಳ ಸಿನಿಮಾಕ್ಕೆ ಪ್ರೋತ್ಸಾಹಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ. ಪುಟಾಣಿ ಸಫಾರಿ ಎಂಬ ಒಳ್ಳೆಯ ಚಿತ್ರ ತೆರೆಕಂಡಿದ್ದು, ನೀವೂ ನೋಡಿ ಚಿತ್ರ ತಂಡವನ್ನು ಬೆಂಬಲಿಸಿ.

– ರವೀಂದ್ರ ವೆಂಶಿ, ಫುಟಾಣಿ ಸಫಾರಿ ಚಿತ್ರದ ನಿರ್ದೇಶಕ

-Ad-

Leave Your Comments