“ರಾಜ್ ಲೀಲಾ ವಿನೋದ ” ಕಥೆ -ವ್ಯಥೆ

ಇದು ಹೆತ್ತೊಡಲ ಕಿಚ್ಚಲ್ಲದೆ ಮತ್ತೇನು? ಮಗುವಿನ ತಂದೆ ಯಾರೆಂಬುದು ಹೆತ್ತ ತಾಯಿಗೆ ಮಾತ್ರ ಗೊತ್ತಿರುವ ಆತ್ಯಂತಿಕ ಸತ್ಯ. ಅದನ್ನಿಲ್ಲಿ ಲೀಲಾವತಿ ಹೇಳಿಕೊಂಡಿದ್ದಾರೆ. ಅವರದೇ ಧ್ವನಿಯ ದಾಖಲೆಗಳು, ರಾಜ್ಕುಮಾರ್ ಅವರು ಬರೆದ ಆತ್ಮೀಯ ಪತ್ರಗಳು ರವಿ ಬೆಳಗೆರೆಯವರು ಅಕ್ಷರ ರೂಪ ಕೊಟ್ಟ  ” ರಾಜ್ ಲೀಲಾ ವಿನೋದ” ಪುಸ್ತಕದಲ್ಲಿದೆ.

raaj-leelavinoda-cover

ನಟನೆಯಿಂದಲೇ ನಟಸಾರ್ವಭೌಮ, ಜನರೊಂದಿಗಿನ ನಯ-ವಿನಯ, ವಿಧೇಯತೆ , ವೃತ್ತಿ ನಿಷ್ಠೆ ಯಿಂದ ದೇವತಾ ಮನುಷ್ಯನೆನಿಸಿಕೊಂಡವರು  ಡಾ .ರಾಜ್ಕುಮಾರ್ . ರಾಜ್ಕುಮಾರ್ ತಮ್ಮ  ಜೀವಿತಾವಧಿಯಲ್ಲಿ ಹೇಳಲೇಬೇಕಿದ್ದ , ಹೇಳಲಾಗದ ಪರಮಸತ್ಯವನ್ನು ತಾನು ಅಳಿದು ಹೋಗುವ ಮುನ್ನ ಹೇಳಿ ಹೋಗುವ ಕಟ್ಟಕಡೆಯ ಪ್ರಯತ್ನ ಲೀಲಾವತಿಯವರದ್ದು.

leelavati

ಸತ್ಯ ಗೊತ್ತಿರುವ ಕೆಲವರ ಬಾಯಿಗೆ ಬೀಗ ಜಡಿಯಲಾಗಿದೆ. ಮತ್ತಲವರು ದೊಡ್ಡವರ ಉಸಾಬರಿ ತಮಗೇಕೆ ಅಂತ ಬಿಗಿದುಕೊಂಡಿದ್ದಾರೆ. ಅವರ ಆಪ್ತವಲಯದಲ್ಲಿದ್ದ ಅನೇಕರಿಗೆ ಗೊತ್ತಿರುವ ವಿಷಯವಾದರೂ ಗುಸು ಗುಸು -ಪಿಸು ಮಾತಿನಲ್ಲೇ ಬೂದಿಮುಚ್ಚಿದೆ ಕೆಂಡವಾಗಿದೆ ವಿನೋದ್ ರಾಜ್ ನ ಹುಟ್ಟಿನ ಗುಟ್ಟು.

ಆಕೆ ಹೆಣ್ಣು . ರಾಜ್ಕುಮಾರ್ ಅವರಿಗೆ ಇದ್ದ ,ಇರುವ ಅಭಿಮಾನಿ ಬಳಗವಿಲ್ಲ . ಅಲ್ಪಸ್ವಲ್ಪವಿದ್ದರೂ ಅವರ್ಯಾರು ಸಂಕಟ ಬಂದಾಗ ವೆಂಕಟ ರಮಣ.. ಎಂದು  ಆರ್ತನಾದ ಮಾಡಿದರೂ ಬಂದು ನಿಲ್ಲುವ ದೇವರುಗಳಲ್ಲ. ಕಾಳಗಕ್ಕಿಳಿಯುವ ಕಾರ್ಯಕರ್ತರಿಲ್ಲ. ಇವತ್ತಿಗೂ ಕನ್ನಡದ  ಯಾವ ಕಲಾವಿದೆಯ ಪಾಲಿಗೂ ಅಂತಹ  ದಂಡು ದಕ್ಕಿಲ್ಲ.ಭೀತಿಯಲ್ಲೇ ಕಾಲ ಸವೆಸಿದ ಕಲಾವಿದೆ ಲೀಲಾವತಿ .  ಎಂದೋ ತೆರೆದಿಡಬೇಕಾದ ಮಗನ ಹುಟ್ಟಿನ ರಹಸ್ಯವನ್ನು ಇಷ್ಟು ಕಾಲ  ಗಟ್ಟಿ ದನಿಯಲ್ಲಿ ಹೇಳಲಾಗದಿದ್ದಕ್ಕೆ ಇದೂ ಒಂದು ಕಾರಣ.

Actor Leelavati and son Vinodraj seen at Upparpet Police Station after an attack on their car in Bangalore on Saturday. --KPN
Actor Leelavati and son Vinodraj seen at Upparpet Police Station after an attack on their car in Bangalore on Saturday. –KPN

ವಿನೋದ್ ರಾಜ್ಗೆ ರಾಜ್ಕುಮಾರ್ ಅವರೇ ತಂದೆ. ಮಗನೆಂಬ ಹಕ್ಕು ಸ್ಥಾಪಿಸಿ ಆಸ್ತಿಯಲ್ಲಿ ಪಾಲು ಕೊಡಿ ಅಂತ ಇಲ್ಲಿ ಲೀಲಾವತಿ ಕೇಳಿಲ್ಲವಲ್ಲ. “ನನಗೂ ವಯಸ್ಸಾಯಿತು ಈಗ..ಈಗಲಾದರೂ ಒಂದೇ ಒಂದು ಸಾರಿ ವಿನು ನಿಮ್ಮ ಮಗನೆಂಬ ಸತ್ಯಸಂಗತಿಯನ್ನು ಜಗತ್ತಿಗೆ ಹೇಳಿಬಿಡಿ.ತನ್ನ ತಂದೆ ನೀವೇ ಎಂದು  ಗೊತ್ತಿದ್ದರೂ ನಿಮ್ಮ ಪ್ರೀತಿಯ ನೆರಳಲ್ಲಿ ವಿನು ಬಾಳಲಾಗಲಿಲ್ಲ. ಯಾರ ಮುಂದೆಯೂ ಇವರೇ.. ಈ ಮಹಾನುಭಾವರೇ ನನ್ನ ತಂದೆ ಎಂದು ಹೇಳಿಕೊಳ್ಳಲಾಗದೆ ದಿನದಿನವೂ ಕೊರಗುವ ನಮ್ಮ ಒಂದೇ ಒಂದು ಕರುಳ ಕುಡಿಯ ಯಾತನೆಗೆ ಕೊನೆಯಾಡಿಬಿಡಿ” ಹೀಗೆ ಅಂಗಲಾಚಿ ಬೇಡಿಕೊಳ್ಳೋಣವೆಂದರೆ ಅಪ್ಪಾ.. ಎನಿಸಿಕೊಳ್ಳದೆ ಬರಿಯ ಬಸಿರುಗಟ್ಟಿಸಿದ ದೊಡ್ಡವರೆಂಬ ದೊಡ್ಡ ಜೀವ ಉಳಿದಿಲ್ಲವಲ್ಲ. ಲೀಲಾವತಿಯಲ್ಲದೆ ಮತ್ಯಾರು ಹೇಳಿಯಾರು ಬಚ್ಚಿಟ್ಟ , ಮುಚ್ಚಿಟ್ಟ ಕುದಿವ ಸತ್ಯವನ್ನು ?

ಅವರೇಕೆ ಹೇಳಲಿಲ್ಲ?

ಅವರು ಅಗಲಿದ ಮೇಲಿರಿಲಿ ,ಬದುಕಿದ್ದಾಗಲೇ ಅವರನ್ನೊಂದು ಪ್ರೇಮಿನಲ್ಲಿಟ್ಟು (ಚೌಕಟ್ಟು) ನೀವು ಹೀಗೆಯೇ ಇರಬೇಕು. ನೀವು ಹೀಗಿದ್ದರೇ  ಸರಿ ಎನ್ನುವಂತೆ ನೋಡಿದ ಮಂದಿ ಇಂಥದೊಂದು ಸತ್ಯವನ್ನು ಬಿಚ್ಚಿಡಲು ಬಿಟ್ಟಾರೆಯೇ ? ಪಾತ್ರಗಳಲ್ಲೇ ಇಮೇಜ್ ಮೀರಲಾಗದೆ ಚಡಪಡಿಸಿದ ರಾಜ್ಕುಮಾರ್ ಸಮಾಜದ ಕಟ್ಟಳೆಗಳನ್ನೂ ಮೀರಿ ನಿಲ್ಲಲು ಸಾಧ್ಯವಿತ್ತೇ ? ಎಲ್ಲಕ್ಕೂ ಮಿಗಿಲಾಗಿ  ಗಂಡನ ಶ್ರೇಯಸ್ಸು ,  ಮಕ್ಕಳ ಹಿತಕ್ಕಾಗಿ ಸಂಸಾರದ ನೊಗದ ಜೊತೆಗೆ  ಚಿತ್ರಗಳ ಚುಕ್ಕಾಣಿ ಹಿಡಿದ ಪಾರ್ವತಮ್ಮ ಎಂಬ ಮಡದಿಯನ್ನು ಒಪ್ಪಿಸಿ, ಲೀಲಾವತಿಯವರನ್ನು ಉಳಿಸಿಕೊಳ್ಳುವುದು ಸಾಧ್ಯವಿತ್ತೇ ? ರಾಜ್ಕುಮಾರ್ ಪಾಲಿನ ಭಾಗ್ಯ ಲಕ್ಷ್ಮಿ ಪಾರ್ವತಮ್ಮ.  ತನ್ನ ಗಂಡ ತನಗೆ ಮಾತ್ರ ಮೀಸಲಾಗಿರಬೇಕು ಎಂಬ ಆಸೆಯಲ್ಲಿ ಮತ್ತೊಬ್ಬರ ಪ್ರವೇಶಕ್ಕೆ ತಡೆಯೊಡ್ಡಿದ್ದರೆ ತಪ್ಪೆನ್ನುವುದಾದರೂ ಹೇಗೆ ? ಆಕೆಗೆ ವೈಶಾಲ್ಯತೆಯ ಪಾಠ ಬೋಧಿಸಲು ನಾವ್ಯಾರು ? ಆದರೆ ತನ್ನದಲ್ಲದ ತಪ್ಪಿಗೆ ಇಷ್ಟುಕಾಲ ತಲೆತಗ್ಗಿಸಿ ಬದುಕಿದ ವಿನೋದ್ ರಾಜ್ ಗೆ ನ್ಯಾಯ ಸಿಗಲೇಬೇಕು. 

ಕತ್ತಲ್ಲಲ್ಲಿ ಕರಗುತ್ತಿದ್ದ ಸತ್ಯಕ್ಕೆ ಬೆಳಕು 

ravi-leelavati

ಒತ್ತಡಗಳು ಏನೇ ಇರಲಿ ಇದು ಕೇವಲ ಹೆಣ್ಣಿನ ಸಂಬಂಧದ ವಿಷಯವಲ್ಲ ಮಗನ ಭವಿಷ್ಯದ ವಿಷಯ. ಅವರಿರುವಾಗ ಇದೊಂದು ವಿಷಯ ಹೇಳಿಬಿಡಬೇಕಿತ್ತು ಅಂತ ರಾಜ್ಕುಮಾರ್ ಆಪ್ತವಲಯದ ಅನೇಕರಿಗೆ ಅನ್ನಿಸಿದ್ದರು ಯಾರಿಗೂ ಹೇಳುವ ಧೈರ್ಯ  ಬರಲೇ ಇಲ್ಲ. ಇದೀಗ ಅಂಥದ್ದೊಂದು ಧೈರ್ಯಕ್ಕೆ,ಸಾಹಸಕ್ಕೆ  ನಿಂತಿದ್ದು ಹಿರಿಯ ಪತ್ರಕರ್ತ ರವಿ ಬೆಳಗೆರೆ.

ravi-lelavati-vinod

ತಂದೆ ಇದ್ದೂ ,ಇಲ್ಲದಂತೆ ಕಣ್ಣೆದುರಿನಲ್ಲೇ ಸುಳಿದಾಡಿದರೂ, ಒಡನಾಡಿದರೂ ಹೊರ ಜಗತ್ತಿಗೆ ಹೇಳಿಕೊಳ್ಳಲಾಗದೆ ಒಳಗೊಳಗೇ ಬೆಂದ ಜೀವ ಬೆಳಗೆರೆ. ಇವತ್ತಿಗೂ ಅವರ ಸಾಧನೆಯ ಎತ್ತರದ ಬುಡಕ್ಕೂ ನಿಲುಕದ ಒಂದಿಷ್ಟು ಜನ ಅವ್ರ  ಹುಟ್ಟಿನ ಬಗ್ಗೆ ಕೀಳಾಗಿ ಮಾತಾಡುವುದನ್ನು ಪ್ರಶ್ನಿಸುವುದನ್ನು ಬಿಟ್ಟಿಲ್ಲ. ಅವಮಾನವನ್ನು ನುಂಗಿ ಅಕ್ಷರವನ್ನೇ ಅಪ್ಪಿ ಅಪಾರ ಮನ್ನಣೆ ಗಳಿಸಿದ್ದು ಶ್ರದ್ದೆ ಶ್ರಮದ ಬಲದಿಂದ. ಅಪ್ಪನಿಗಾಗಿ ಹಂಬಲಿಸಿದ ರವಿಬೆಳೆಗೆರೆ ಮಾತ್ರ ಇಂಥ ಒಂದು ಗಾಢ ನೋವಿಗೆ ಕಿವಿಯಾಗಬಲ್ಲರು. ಅಕ್ಷರವಾಗಿಸಿಬಲ್ಲರು.

ಅಪ್ಪ ಸತ್ತು ಅಮ್ಮನ ಆಸರೆಯಲ್ಲೇ ಬೆಳೆದಾಗ ತಂದೆಯಿಲ್ಲದ ನೋವು ಕಾಡುವುದು ಬೇರೆ .ಕಣ್ಣೆದುರಿಗೇ ಇದ್ದು ,ಉಳಿದ ಮಕ್ಕಳೊಂದಿಗೆ ಬೆರೆಯುವ, ಅಪ್ಪಿ ಮುದ್ದಾಡುವ ಅಪ್ಪನನ್ನು ಅಪ್ಪಾ .. ಎಂದು ಕರೆಯಲಾಗದ, ಅಪ್ಪಿಕೊಳ್ಳಲಾಗದ ಒಡಲ ಸಂಕಟವೇ ಬೇರೆ. ಅನುಭವಿಸಿಯಲ್ಲದೆ ಅರ್ಥವಾಗದ ರಣ ಗಾಯದ ಹಸಿ ಹಸಿ ನೋವಿದು.

babruvaahana

ಲಂಕೇಶರ ಮಡದಿ(ಹುಳಿಮಾವು ಮತ್ತು ನಾನು ) ಹೇಳಿರುವಂತೆ “ನೀಲು ಕವನಗಳಂತೂ ಹೆಣ್ಣಿನ ಮನಸ್ಸು ಏನೆಲ್ಲಾ ಯೋಚಿಸುತ್ತದೆ, ಅನುಭವಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದವು. ಮಹಿಳೆಯರ ಮನಸ್ಸನ್ನು ಇಷ್ಟು ಚೆನ್ನಾಗಿ ತಿಳಿದಿದ್ದ ಲಂಕೇಶರು ನನ್ನ ಮನಸ್ಸನ್ನು ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ನನಗನ್ನಿಸುತ್ತಿತ್ತು”.  ಬಬ್ರುವಾಹನ ಚಿತ್ರದಲ್ಲಿ ತಂದೆ ಇಲ್ಲದೆ ಬೆಳೆದು ,ಕೊನೆಗೆ ತಂದೆ ಯಾರೆಂದು ತಿಳಿದ ಮೇಲೂ ಅನುಭವಿಸಿದ ಅವಮಾನವನ್ನೆಲ್ಲಾ   ಬಬ್ರುವಾಹನನೇ ಮೈವೆತ್ತಂತೆ, ಹೃದಯಕ್ಕೆ ಮುಟ್ಟುವಂತೆ ಅಭಿನಯಿಸಿದ ರಾಜ್ಕುಮಾರ್ ಅವರಿಗೆ ತನಗಾಗಿ , ತನ್ನ ಪ್ರೀತಿಗಾಗಿ ಹಂಬಲಿಸುವ ಮಗನ ನೋವು ಅರ್ಥವಾಗದೆ ಹೋಯಿತಲ್ಲ ಎಂದು ವಿನೋದ್ ರಾಜ್ ಗೆ ಅನ್ನಿಸದೆ ಇದ್ದೀತೆ ?

File photo of actor Leelavati and son Vinodraj, seen at Vidhana Soudha on Jan 26 09, in Bangalore. --KPN

ಇದೆಲ್ಲ ಒಂದೆಡೆಗಾದರೆ ಈ “ರಾಜ್ ಲೀಲಾ ವಿನೋದ” ಪುಸ್ತಕ ಬಂದ  ಮಾತ್ರಕ್ಕೆ ಅವರ ಮೇಲಿನ ಅಭಿಮಾನಕ್ಕೇಕೆ ಧಕ್ಕೆಯಾಗಬೇಕು ? ತೆರೆಯ ಮೇಲೆ ಅವರ ಬದುಕಿನ ಬಹುದೊಡ್ಡ ಭಾಗವನ್ನು ನೋಡಿ ಆನಂದಿಸಿ, ಅನುಭವಿಸಿಯಾಗಿದೆ. ಬಂಗಾರದ ಮನುಷ್ಯನನ್ನು ಒಪ್ಪಿಕೊಂಡವರು ಹಿರಣ್ಯಕಶಿಪುವನ್ನು ಒಪ್ಪಿಕೊಂಡಿದ್ದೆವಲ್ಲ. ಹಾಗೆಯೇ ಅವರ ಬದುಕಿನ ಮತ್ತೊಂದು ಮಗ್ಗುಲನ್ನು ನೋಡುವುದು ಕಷ್ಟವೇ?

ಈ ಪುಸ್ತಕದಲ್ಲಿ ಬೇರೇನಿದೆಯೋ ಇಲ್ಲವೋ ವಿನೋದ್ ರಾಜ್ ,ರಾಜ್ಕುಮಾರ್ ಅವರ ಪುತ್ರ ಎಂಬುದನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನವಿರುವುದನ್ನು ಒಪ್ಪಲೇಬೇಕು. ಲೀಲಾವತಿ ತನ್ನ ಸುತ್ತಲಿನ ಸಂಗತಿಗಳನ್ನು ಬಿಚ್ಚಿಟ್ಟಿರುವ ಉದ್ದೇಶವೇ ಅದು. ರವಿ ಬೆಳಗೆರೆಯಲ್ಲದೆ ಮತ್ಯಾರೂ ಬರೆದು ಬಯಲಾಗಿಸಲಾಗದ  ಸತ್ಯವಿದು.

-ಭಾನುಮತಿ ಬಿ ಸಿ

 

-Ad-

Leave Your Comments