ತೆಲುಗು ಬಸ್ ಹತ್ತಲಿರುವ ಡಿಂಪಲ್ ಕ್ವೀನ್ ರಚಿತಾ ರಾಮ್

ನಟಿಸಿದ ಮೊದಲ ಸಿನಿಮಾದಲ್ಲೇ ಸೂಪರ್ ಸ್ಟಾರ್ ಗೆ ನಟಿಯಾಗುವ ಮತ್ತು ಆ ಸಿನಿಮಾ ಸೂಪರ್ ಹಿಟ್ ಆಗುವ ಅಪರೂಪದ ಸಂಗತಿ ಎಲ್ಲರ ಬದುಕಲ್ಲೂ ಘಟಿಸುವುದಿಲ್ಲ. ಆದರೆ ರಚಿತಾರಾಮ್ ಬದುಕಲ್ಲಿ ಅದು ಘಟಿಸಿದೆ. ದರ್ಶನ್ ಜೊತೆ ಅವರು ಬುಲ್ ಬುಲ್ ಸಿನಿಮಾದಲ್ಲಿ ನಟಿಸಿದ ಮೇಲೆ ಮತ್ತೆ ಹಿಂತಿರುಗಿ ನೋಡಿಲ್ಲ. ಕನ್ನಡದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ನಟಿಸಿ ಆಗಿದೆ. ಸಾಮಾನ್ಯವಾಗಿ ಒಂದು ಹಂತ ಏರಿದ ಮೇಲೆ ಇನ್ನೊಂದು ಹಂತಕ್ಕೆ ಹೋಗುವ ಆಸೆ ಇರುತ್ತದೆ. ಎಲ್ಲಾ ಹೀರೋಗಳ ಜೊತೆ ನಟಿಸಿಯಾದ ಮೇಲೆ ಈಗ ರಚಿತಾಗೂ ಆ ಆಸೆ ಹುಟ್ಟಿದೆ. ಹಾಗಾಗಿ ರಚಿತಾ ಟಾಲಿವುಡ್ ಕಡೆಗೆ ಮುಖ ಮಾಡಿದ್ದಾರೆ.

ತೆಲುಗು ದೊಡ್ಡ ಮಾರ್ಕೆಟ್ಟು. ಅಲ್ಲಿ ದೊಡ್ಡ ಬಜೆಟ್ಟಿನ ಸಿನಿಮಾಗಳು ತಯಾರಾಗುತ್ತವೆ. ಹಾಗಾಗಿ ಅಲ್ಲಿ ನಟಿಸಿದ ಅದೆಷ್ಟೋ ಹೀರೋಯಿನ್ ಗಳು ದೊಡ್ಡ ಲೆವೆಲ್ ಗೆ ಹೋಗಿದ್ದಾರೆ. ತಾನೂ ಹಾಗಾಗಬೇಕು ಅನ್ನುವ ಆಸೆ ರಚಿತಾಗಿದೆ ಅನ್ನಿಸುತ್ತದೆ. ಅದಕ್ಕೆ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತೆಲುಗಿಗೆ ಹೋಗಬೇಕು ಅಂತಲೇ ಈ ಫೋಟೋಶೂಟ್ ಮಾಡಿದ್ದಾರಂತೆ. ಅಂದಹಾಗೆ ಅವರಿಗೆ ಈ ಆಸೆ ಹುಟ್ಟಲು ಒಂದು ಇಂಟರೆಸ್ಟಿಂಗ್ ಕಾರಣವಿದೆ.

ಇತ್ತೀಚೆಗೆ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಡಾನ್ಸ್ ಮಾಡಿದ್ದರು. ಹೇಳಿ ಕೇಳಿ ಐಫಾ ಎಲ್ಲಾ ಭಾಷೆಯ ಕಲಾವಿದರೂ ಬರುತ್ತಾರೆ. ಅಲ್ಲಿ ಇವರ ಡಾನ್ಸ್ ನೋಡಿದ ಅಲ್ಲು ಅರವಿಂದ್ ಸಕತ್ತಾಗಿ ಡಾನ್ಸ್ ಮಾಡ್ತೀರಿ ಅಂತ ಹೇಳಿದ್ದಾರೆ. ಅದನ್ನು ಕೇಳಿ ರಚಿತಾಗೆ ಸ್ವರ್ಗಕ್ಕೆ ಮೂರೇ ಗೇಣು. ಅಲ್ಲಿ ಸೀನ್ ಕಟ್ ಮಾಡಿದರೆ ಇಲ್ಲಿ ರಚಿತಾ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಮುಂದೆ ಆ ಫೋಟೋಗಳು ಟಾಲಿವುಡ್ ಗೆ ಹೋಗಲಿವೆ. ಎಲ್ಲವೂ ಅಂದುಕೊಂಡಂತೆ ಆದರೆ ರಚಿತಾ ರಾಮ್ ದೊಡ್ಡ ಲೆವೆಲ್ ಗೆ ಹೋಗಲಿದ್ದಾರೆ. ಅವರ ಆಸೆ ಈಡೇರಲಿ.

-Ad-

Leave Your Comments