ರಾಜ್ ಕುಮಾರ್ ರಾಜಕಾರಣಕ್ಕೆ ಎಂದಿಗೂ ಬಂದಿರಲಿಲ್ಲ. ಅದೆಷ್ಟೊ ಘಟಾನುಘಟಿ ನಾಯಕರು ರಾಜ್ ಅವರನ್ನು ರಾಜಕಾರಣಕ್ಕೆ ಕರೆದು ತರಬೇಕು ಎಂದು ಹರಸಾಹಸ ಮಾಡಿದರೂ, ಅಣ್ಣಾವ್ರು ಮಾತ್ರ ನಯವಾಗಿಯೇ ತಿರಸ್ಕರಿಸಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ.ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರನ್ನು ಶಿವಮೊಗ್ಗದಿಂದ ಅಭ್ಯರ್ಥಿಯನ್ನಾಗಿ ಮಾಡುವಲ್ಲಿ ಜೆಡಿಎಸ್ ಯಶಸ್ವಿಯಾಗಿತ್ತು. ಕಡಿಮೆ ಅಂತರದಿಂದ ಗೀತಾ ಶಿವರಾಜ್ ಕುಮಾರ್ ಸೋಲು ಅನುಭವಿಸಿದ್ರು.. ಆದ್ರೆ ಮತ್ತೆ ಗೀತಾ ಶಿವರಾಜ್ ಕುಮಾರ್ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಲು ಸಜ್ಜಾಗಿದೆ. ಇದರ ನಡುವೆ ಕಾಂಗ್ರೆಸ್ ಕೂಡ ರಾಜ್ ಕುಮಾರ್ ಫ್ಯಾಮಿಲಿಯನ್ನು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸಲು ಸಕಲ ಪ್ರಯತ್ನ ಆರಂಭಿಸಿದೆ.
ರಾಹುಲ್ ಭೇಟಿ ಹಿಂದಿನ ಕಾರಣ ರಾಜಕಾರಣ..!
ನಿನ್ನೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಸದಾಶಿವನಗರದ ರಾಜ್ ನಿವಾಸಕ್ಕೆ ಭೇಟಿ ನೀಡಿದ್ರು. ಪಾರ್ವತಮ್ಮ ರಾಜ್ ಕುಮಾರ್ ಸಾವಿನಿಂದ ನೊಂದಿರುವ ಕುಟುಂಬ ಸದಸ್ಯರಿಗೆ ರಾಹುಲ್ ಗಾಂಧಿ ಸಾಂತ್ವನ ಹೇಳಿದ್ರು. ಆದ್ರೆ ರಾಜ್ ಕುಟುಂಬಸ್ಥರ ಭೇಟಿ ಹಿಂದೆ ರಾಹುಲ್ ರಾಜಕಾರಣ ಅಡಗಿದೆ. ಮುಂದಿನ ಚುನಾವಣೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ಗೆ ಟಿಕೆಟ್ ನೀಡುವುದು, ಆ ಮೂಲಕ ರಾಜ್ ಅಭಿಮಾನಿಗಳ ಮತಗಳನ್ನು ಸೆಳೆಯೋದು ಕಾಂಗ್ರೆಸ್ ತಂತ್ರವಾಗಿದೆ. ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿರುವ ಡಿ.ಕೆ ಶಿವಕುಮಾರ್ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಅನ್ನೋದು ಕಾಂಗ್ರೆಸ್ ಮೂಲಗಳ ಮಾಹಿತಿ.
ರಾಜಕೀಯ ಮಾತುಕತೆ ಇಲ್ಲ ಎಂದಿರುವ ಮಕ್ಕಳು..!
ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿರುವ ಡಾ ರಾಜ್ ಕುಮಾರ್ ಅವರ ಮಕ್ಕಳಾದ ಶಿವಣ್ಣ ಹಾಗೂ ಅಪ್ಪು ಮಾಧ್ಯಮಗಳ ಜೊತೆ ಮಾತನಾಡಿದ್ರು. ಅಮ್ಮ ನಮ್ಮನ್ನು ಬಿಟ್ಟು ಹೋಗಿ ಕೇವಲ ೧೫ ದಿನಗಳಾಗಿವೆ. ರಾಹುಲ್ ಗಾಂಧಿ ಅವರು ಭೇಟಿ ನೀಡಿ ಸಾಂತ್ವನ ಅಷ್ಟೇ ಹೇಳಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಅಂತ ಹೇಳಿದ್ರು. ಪುನೀತ್ ಮಾತನಾಡಿ ರಾಹುಲ್ ಗಾಂಧಿ ಭೇಟಿ ನೀಡಿ ಮಾತನಾಡಿದ್ದು ಹೆಮ್ಮೆಯ ವಿಚಾರ ಮಾಧ್ಯಮಗಳ ಸಹಕಾರಕ್ಕೆ ಧನ್ಯವಾದ ಅಂದ್ರು. ರಾಹುಲ್ ಗಾಂಧಿ ಮಾತನಾಡಿ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ಚೇತರಿಕೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಅಂದ್ರು.
ಪುನೀತ್ಗೆ ಗಾಳ ಹಾಕುತ್ತಿದೆಯಾ ಕೈ ಪಾಳಯ..!?
ಪುನೀತ್ ರಾಜ್ ಕುಮಾರ್ ಕರುನಾಡಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆ ಅಭಿಮಾನವನ್ನ ಪಕ್ಷದ ಪರ ಮತಗಳಾಗಿ ಪರಿವರ್ತಿಸುವುದು ಕಾಂಗ್ರೆಸ್ ಲೆಕ್ಕಾಚಾರ. ಸರ್ಕಾರದ ನಾನಾ ಯೋಜನೆಗಳಿಗೆ ಪುನೀತ್ ರನ್ನ ಬ್ರಾಂಡ್ ಅಂಬಾಸಿಡರ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ನಂದಿನಿ ಹಾಲು ಮಾರಾಟ, ಡಿ ಕೆ ಶಿವಕುಮಾರ್ ನಿರ್ವಹಿಸುತ್ತಿರುವ ಇಂಧನ ಇಲಾಖೆಯ ಎಲ್ಇಡಿ ಬಲ್ಪ್ , ಅರೋಗ್ಯ ಇಲಾಖೆಯ ಪಲ್ಸ್ ಪೋಲಿಯೋ ,ಇತ್ತೀಚಿನ ಹೊಸ ಯೋಜನೆ ಕೌಶಲ್ಯ ಕರ್ನಾಟಕ ಇತ್ಯಾದಿ.. ಕೆಲವು ದಿನಗಳ ಹಿಂದಷ್ಟೇ ತೆರೆಕಂಡ ಪುನೀತ್ ಅಭಿನಯದ ರಾಜಕುಮಾರ ಸಿನಿಮಾವನ್ನು ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದ್ರು. ಆ ಬಳಿಕ ಇಡೀ ಸಿನಿತಂಡವೇ ಸಿಎಂ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿತ್ತು. ನಂತರ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ವತಮ್ಮ ರಾಜ್ಕುಮಾರ್ ಅವರ ಆರೋಗ್ಯ ವಿಚಾರಿಸಲು ಸಿಎಂ ಸಿದ್ದರಾಮಯ್ಯನವರೇ ಸ್ವತಃ ಭೇಟಿ ನೀಡಿದ್ರು. ಕೊನೆಯಲ್ಲಿ ಪಾರ್ಥಿವ ಶರೀರಕ್ಕೆ ಸರ್ಕಾರ ಕಾನೂನು ಮೀರಿ ಗೌರವ ಸಲ್ಲಿಸಿದ್ದಲ್ಲದೆ, ಸರ್ಕಾರಿ ಸ್ವಾಮ್ಯದ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಿಸಿ ಕುಟುಂಬಸ್ಥರ ಮನಸೆಳೆದಿತ್ತು. ಇದೀಗ ರಾಹುಲ್ ಗಾಂಧಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ರಾಜ್ಕುಮಾರ್ ನಯವಾಗಿ ತಿರಸ್ಕರಿಸಿಕೊಂಡು ಬಂದಿದ್ದ ರಾಜಕಾರಣಕ್ಕೆ ಅವರ ಮಕ್ಕಳನ್ನು ತರಲು ಪ್ರಯತ್ನಗಳಂತೂ ಸಾಗುತ್ತಿವೆ.
ಸರ್ವಸಮರ್ಥ, ನಾಗಮಂಗಲ