ರಜನೀಕಾಂತ್ ಇದ್ದಕ್ಕಿದ್ದ್ದ ಹಾಗೆ ಅಣ್ಣಾವ್ರನ್ನು ನೆನಪಿಸಿಕೊಂಡಿದ್ದು ಯಾಕೆ ?

ರಜನಿಕಾಂತ್ ಸಡನ್ನಾಗಿ ರಾಜ್‌ರನ್ನು ನೆನಪು ಮಾಡಿಕೊಂಡಿದ್ದಾರೆ. ಇನ್ನೇನು ರಾಜಕೀಯಕ್ಕೆ ರಜನಿ ಇಳಿದೇ ಬಿಟ್ಟರು ಎನ್ನುವ ಹೊತ್ತಿನಲ್ಲಿ ಅಣ್ಣಾವ್ರ ಗುಣಗಾನ ಯಾಕೆ ಮಾಡಿದ್ದಾರೆ . ಅಭಿಮಾನಿಗಳನ್ನು ಭೇಟಿ ಮಾಡಿದ ಸಮಯದಲ್ಲಿ ಅದ್ಯಾಕೆ ರಾಜ್, ರಜನಿ ಮನದಲ್ಲಿ ಮೂಡಿದರು ? ಬೆಂಗಳೂರಿನಲ್ಲಿದ್ದಾಗ ರಾಜ್‌ರನ್ನು ನೋಡಲು ರಜನಿ ಏನೇನು ಮಾಡುತ್ತಿದ್ದರು ? ಯಾಕೆ ಅವರ ಪಾದ ಮುಟ್ಟಿ ಬಿಕ್ಕುತ್ತಿದ್ದರು ಎಲ್ಲವನ್ನು ರಜನಿ ಹೇಳಿದ್ದಾರೆ .
 ತಲೈವಾ ರಜನಿ…ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಾ, ಸಿನಿಮಾ ಹೀರೊ ಆಗಬೇಕೆನ್ನುವ ಕನಸು ಕಾಣುತ್ತಾ, ನಾಟಕಗಳಲ್ಲಿ ಬಣ್ಣ ಹಚ್ಚುತ್ತಾ ಹಚ್ಚುತ್ತಾ…ಇಂದು ರಜನಿಕಾಂತ್ ವಿಶ್ವದೆಲ್ಲೆಡೆ ಹೆಸರು ಮಾಡಿದ್ದಾರೆ. ಆದರೆ ಅದೇ ರಜನಿ ಒಂದು ಕಾಲದಲ್ಲಿ ಅಣ್ಣಾವ್ರ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದರು. ಟಿಕೆಟ್‌ಗಾಗಿ ಥೇಟರ್ ಮುಂದೆ ಕ್ಯೂ ನಿಲ್ಲುತ್ತಿದ್ದರು. ಮೊದಲ ದಿನ ಮೊದಲ ಶೋ ನೋಡಿ ಬಂದು ಗೆಳೆಯರಿಗೆ ಕತೆ ಹೇಳುತ್ತಿದ್ದರು. ಅಣ್ಣಾವ್ರಂತೆ ಅಭಿನಯ ಮಾಡಿ ತೋರಿಸುತ್ತಿದ್ದರು. ಅದು ರಜನಿಗೆ ರಾಜ್ ಮೇಲಿದ್ದ ಮಹಾ ಅಭಿಮಾನ.
ಅಲ್ಲಿಂದ ಇನ್ನಷ್ಟು ಹೆಚ್ಚಾಯಿತು ರಜನಿ ಸಿನಿಮಾ ಪ್ರೀತಿ. ಹೇಗಾದರೂ ಮಾಡಿ ಹೀರೊ ಆಗಬೇಕೆಂದು ಚೆನ್ನೈನ ಫಿಲ್ಮ್ ಇನ್ಸ್‌ಟ್ಯೂಟ್ ಸೇರಿದರು. ಕೆ.ಬಾಲಚಂದರ್ ಕಣ್ಣಿಗೆ ಬಿದ್ದಿದ್ದೇ ಶಿವಾಜಿರಾವ್ ಗಾಯಕ್‌ವಾಡ್ ಒಂದೇ ರಾತ್ರಿಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಆಗಿ ಕಾಲರ್ ಟೈಟ್ ಮಾಡಿಕೊಂಡರು. ಮುಂದಾಗಿದ್ದು ಇತಿಹಾಸ. ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸುತ್ತಾ…ಬೆಳೆದರು ಬೆಳೆದರು ಬೆಳೆದರು. ಆ ದಿವ್ಯ ವ್ಯಕ್ತಿತ್ವದ ತೇಜಸ್ಸಿಗೆ ಸೂರ್ಯನೂ ಕ್ಷಣ ಕಣ್ಣು ಮುಚ್ಚಿಕೊಳ್ಳುವಂತಾಯಿತು. ಆಕಾಶ ತಲೆ ಬಾಗಿ ಶರಣಾಯಿತು. ಹೀಗೆ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ತಿಕ್ಕಿ ಒರೆಸಿದರೂ ಅಳಿಸಲಾಗದಂಥ ಹೆಸರು ಮಾಡಿದರು.
ರಾಜ್ ಪಾದ ಮುಟ್ಟಿ ಕಣ್ಣಿರಿಡುತ್ತಿದ್ದರಲ್ಲ ತಲೈವಾ !
ರಜನಿ ಸೂಪರ್‌ಸ್ಟಾರ್ ಆದಮೇಲೆ ರಾಜ್ ಮನೆಗೆ ಹತ್ತಿರವಾದರು. ಅವರ ಮನೆಯ ಸದಸ್ಯರಲ್ಲಿ ಒಬ್ಬರಾದರು. ಡಾ.ರಾಜ್‌ರನ್ನು ವೀರಪ್ಪನ್ ಕಿಡ್ನಾಪ್ ಮಾಡಿದಾಗ ಮೊದಲು ಎದ್ದು ನಿಂತಿದ್ದೇ ರಜನಿ. ವೀರಪ್ಪನ್‌ನಿಂದ ರಾಜ್‌ರನ್ನು ಬಿಡುಗಡೆ ಮಾಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿದರು. ಅದು ರಾಜ್ ಮತ್ತು ರಜನಿ ಬಾಂಧವ್ಯಕ್ಕೆ ಚಿನ್ನದ ಮುನ್ನುಡಿ ಬರೆಯಿತು. ಅಪ್ಪು ಸಿನಿಮಾ ನೂರು ದಿನ ಓಡಿದಾಗ ಖುದ್ದು ರಜನಿ ಆ ಸಮಾರಂಭದ ಮುಖ್ಯ ಅತಿಥಿಯಾಗಲು ಬಂದರು. ಪುನೀತ್ ಆಭಿನಯವನ್ನು ಬಾಯಿ ತುಂಬಾ ಹೊಗಳಿದರು.
ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ ಎಂದು ಷರಾ ಬರೆದರು.
ಈಗ ಅದೇ ರಜನಿಕಾಂತ್ ಮತ್ತೊಮ್ಮೆ ರಾಜ್‌ರನ್ನು ನೆನಪು ಮಾಡಿಕೊಂಡಿದ್ದಾರೆ. ಅದೊಂದು ಕಾಲದಲ್ಲಿ ರಾಜ್‌ರನ್ನು ನೋಡಲು, ಅವರ ಮುಖದ ದರ್ಶನ ಮಾಡಲು, ಅವರ ಪಾದ ಮುಟ್ಟಿ ನಮಸ್ಕಾರ ಮಾಡಲು ಹೇಗೆ ಕಾತುರದಿಂದ ಕಾಯುತ್ತಿದ್ದೆ ಎಂದು ವಿವರಿಸಿದ್ದಾರೆ. ರಾಜ್ ಅಂದರೆ ಏನು ? ಅವರ ವ್ಯಕ್ತಿತ್ವ ಎಂಥದ್ದು ? ಅವರ ಅಭಿನಯ ಸಾಮರ್ಥ್ಯ ಹೇಗಿತ್ತು ಎಂದು ಬಣ್ಣಿಸಿದ್ದಾರೆ. ಇದೆಲ್ಲಾ ನಡೆದಿದ್ದು ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದ ಸಭೆಯಲ್ಲಿ. ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದ ಸಮಯದಲ್ಲಿ ಅಣ್ಣಾವ್ರನ್ನು ನೆನಪಿಸಿಕೊಂಡಿದ್ದಾರೆ.
ನಾನು ಬೆಂಗಳೂರಿನಲ್ಲಿದ್ದಾಗ ರಾಜ್‌ಕುಮಾರ್‌ರನ್ನು ನೋಡಲು ಗಂಟೆಗಟ್ಟಲೆ ಕಾಯುತ್ತಿದ್ದೆ. ಕಾದು ಕಾದು ಕೊನೆಗೆ ಅವರ ದರ್ಶನವಾದಾಗ ಮಾತು ಹೊರಡದಷ್ಟು ಮೂಕನಾಗುತ್ತಿದ್ದೆ. ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದಾಗ ಭಾವುಕನಾಗುತ್ತಿದ್ದೆ. ಅವರ ಪಾದ ಸ್ಪರ್ಶದಲ್ಲಿ ಅಷ್ಟೊಂದು ದೈವಿ ಶಕ್ತಿ ಇರುತ್ತಿತ್ತು. ಅದೆಂಥ ಸರಳ ಜೀವಿ ಅವರು ? ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸಿ ಮೈ ದಡವುತ್ತಿದ್ದ ರೀತಿಗೆ ಹೊಸ ಹುರುಪು ತುಂಬುತ್ತಿತ್ತು. ಇನ್ನು ಅಭಿನಯದ ವಿಷಯಕ್ಕೆ ಬಂದರೆ ಅವರಿಗೆ ಅವರೇ ಸಾಟಿ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಎಂಜಿ ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್…ಇವರಿಬ್ಬರನ್ನೂ ಸೇರಿಸಿದರೆ ಅಲ್ಲೊಬ್ಬ ರಾಜ್‌ಕುಮಾರ್ ಹುಟ್ಟುತ್ತಾರೆ. ಈ ಇಬ್ಬರು ಪ್ರತಿಭಾವಂತರ ಅಭಿನಯ ಕೌಶಲ್ಯ ರಾಜ್ ಒಬ್ಬರ ಬಳಿಯೇ ಸೇರಿಕೊಂಡಿತ್ತು. ನಾನು ಅವರ ಪಕ್ಕಾ ಅಭಿಮಾನಿಯಾಗಿದ್ದೆ. ಇಷ್ಟಪಟ್ಟು ಅವರ ಸಿನಿಮಾ ನೋಡುತ್ತಿದ್ದೆ. ಅವರನ್ನು ಭೇಟಿ ಮಾಡಿದ ಕ್ಷಣಗಳನ್ನು ನಾನು ಮರೆಯಲು ಸಾಧ್ಯ ಇಲ್ಲ. ಅವರ ವ್ಯಕ್ತಿತ್ವ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ. ಸರಳತೆಗೆ ಇನ್ನೊಂದು ಹೆಸರೇ ರಾಜ್‌ಕುಮಾರ್. 
ಇಂದು ರಜನಿಕಾಂತ್ ಏನಾಗಿದ್ದಾರೆಂದು ಎಲ್ಲರಿಗೂ ಗೊತ್ತು. ಅವರ ಒಂದೇ ಒಂದು ಸಿನಿಮಾ ನೂರಾರು ಕೋಟಿ ಬಿಜಿನೆಸ್ ಮಾಡುತ್ತದೆ. ಅವರ ಒಂದೇ ಒಂದು ಇಶಾರೆಗೆ ಇಡೀ ತಮಿಳು ನಾಡು ಕೈ ಕಟ್ಟಿ ಎದ್ದು ನಿಲ್ಲುತ್ತದೆ. ಸದ್ಯದಲ್ಲೇ ತಲೈವಾ ರಾಜಕಾರಣಕ್ಕೂ ಕಾಲಿಡಲಿದ್ದಾರೆ. ಮುಂದೆ ಅಲ್ಲಿಯ ಮುಖ್ಯ ಮಂತ್ರಿಯಾದರೂ ಅಚ್ಚರಿ ಇಲ್ಲ. ಇಷ್ಟಿದ್ದರೂ ರಜನಿ ಆ ಹಳೆಯ ದಿನಗಳನ್ನು ಮರೆತಿಲ್ಲ. ಹುಟ್ಟಿದ ಮಣ್ಣಿನ ನೆನಪುಗಳನ್ನು ಸಾಯಲು ಬಿಟ್ಟಿಲ್ಲ. ಅದರಲ್ಲೂ ರಾಜ್ ಅಂದರೆ ಸಾಕು ರಜನಿ ಕಣ್ಣಲ್ಲಿ ಬೆಳಗುವ ಜ್ಯೋತಿಯನ್ನೊಮ್ಮೆ ನೀವು ನೋಡಬೇಕು. ಅಲ್ಲಿ ರಾಜ್ ಸದಾ ನಗುತ್ತಿರುತ್ತಾರೆ. ಇದಲ್ಲವೆ ಅಣ್ಣಾವ್ರ ಶಕ್ತಿ ಮತ್ತು ರಜನಿಯ ರಾಜ್ ಭಕ್ತಿ ಅಂದರೆ ?
-Ad-

Leave Your Comments