ರಜನಿ ರಾಜಕೀಯ ಕನ್ನಡಿಗರಿಗೆ ಕಂಟಕ ?

ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ರಾಜಕೀಯ ಪ್ರವೇಶ ಸನಿಹ ಆಗ್ತಿದೆ. ಈಗಾಗಲೇ ಒಂದು ಸುತ್ತಿನ ಅಭಿಮಾನಿಗಳ ಸಭೆ ನಡೆಸಿರುವ ತಲೈವಾ ಎರಡನೇ ಸುತ್ತಿನ ಮಾತುಕತೆಗೆ ವೇದಿಕೆ ಸಜ್ಜು ಮಾಡುತ್ತಿದ್ದಾರೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸಭೆ, ಚರ್ಚೆಗಳು ನಡೆದು ಒಂದು ಅಂತಿಮ ನಿರ್ಧಾರಕ್ಕೆ ಬರಲಿರುವ ರಜನಿ ಸೆಪ್ಟೆಂಬರ್ ನಲ್ಲಿ ಹೊಸ  ಪಕ್ಷದ ಸ್ಪಷ್ಟ ಚಿತ್ರಣ ನೀಡಲಿದ್ದಾರೆ. ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ತಮಿಳುನಾಡಿಗೆ ಮಾತ್ರ ಸೀಮಿತವಾಗಿರಲ್ಲ  ಎಂಬ ಮಾತುಗಳು ಕೇಳಿ ಬಂದಿವೆ.ಯಾವ  ರಾಷ್ಟ್ರೀಯ ಪಕ್ಷಕ್ಕೂ ಗೆಲುವಿನ ರುಚಿ ಕಾಣಿಸದೆ  ತಮ್ಮದೇ ಪ್ರಾದೇಶಿಕ ಪಕ್ಷ ದ ಮೂಲಕ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುವ ಪಕ್ಷದಿಂದ ತನ್ನ ಕೆಲಸ ಮಾಡಿಸಿಕೊಳ್ಳುವ ಪರಿಪಾಠ ತಮಿಳುನಾಡಿನಲ್ಲಿದೆ. ತಮಿಳಿನ ಜನ ಇದುವರೆಗೆ ಬಹುತೇಕ ಬೆಂಬಲಿಸಿರುವುದು ಪ್ರಾದೇಶಿಕ ಪಕ್ಷವನ್ನೇ .ಇದನ್ನರಿತಿರುವ ಬಿಜೆಪಿ ರಜನಿಯಿಂದ ಪಕ್ಷ ಸ್ಥಾಪಿಸಿ ತಾನು ಸೂತ್ರದಾರನಾಗುವ ಯೋಜನೆ ಇರುವುದನ್ನು ಅಲ್ಲಗಳೆಯುವಂತಿಲ್ಲ.

ರಜನಿಕಾಂತ್ ಸಿಎಂ ಆದರೆ ಕನ್ನಡಿಗರಿಗೂ ಹೆಮ್ಮೆ..

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಜನ ಪ್ರಪಂಚದ ಯಾವುದೇ ಮೂಲೆಯಲ್ಲಿ ಇದ್ದುಕೊಂಡು ಏನಾದರೂ ಸಾಧನೆ ಮಾಡಿದರೆ ನಾವೇ ಆ ಸಾಧನೆ ಮಾಡಿದ ಸಂಭ್ರಮ ನಮ್ಮದು. ನಮ್ಮ‌ಕರ್ನಾಟಕದ ನಂಟಿದೆ ಅಂದರೆ ನಮ್ಮವರು ಅನ್ನೋ ಭಾವನೆಯಲ್ಲಿ ಪತ್ರಿಕೆಗಳು ಬರೆಯುತ್ತವೆ, ಸುದ್ದಿ ಮಾಧ್ಯಮಗಳು ಸುದ್ದಿ ಮಾಡುತ್ತವೆ, ಜನರೂ ಹಾಗೆ ಮಾತನಾಡಿಕೊಳ್ತಾರೆ. ಪಕ್ಕದ ರಾಜ್ಯದಲ್ಲಿ ರಜನಿಕಾಂತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡ್ತಿದ್ದಾರೆ ಅಂದ್ರೆ ಕರ್ನಾಟಕದಲ್ಲಿ ಅದೆಷ್ಟೋ ಮಂದಿ ಸಂತೋಷ ಪಡ್ತಾರೆ. ಅದೇ ರೀತಿ ಇನ್ನೊಂದಿಷ್ಟು ಮಂದಿ ಸಂಕಟವನ್ನೂ ಪಡ್ತಾರೆ. ಇಷ್ಟ ಪಡ್ತಿದ್ದ ತಲೈವಾರನ್ನು ವಿರೋಧಿಸಲು ಶುರು ಮಾಡ್ತಾರೆ. ಸೂಪರ್ ಸ್ಟಾರ್ ಪಟ್ಟವನ್ನು ಪಕ್ಕಕ್ಕಿಟ್ಟು ಮಾತನಾಡಲು‌ ಶುರು ಮಾಡ್ತಾರೆ.

ರಜನಿ ಸಿಎಂ ಆದ್ರೆ ಕನ್ನಡಿಗರಿಗೆ ಏಕೆ ಕಷ್ಟ..?

ರಜನಿ ಸಿಎಂ ಆದ್ರೆ ಕನ್ನಡಿಗರು ಹೆಮ್ಮೆ ಪಡುವ ವಿಚಾರದಲ್ಲಿ ಕೋಪ ಯಾಕೆ. ? ಅನ್ನೋ ಪ್ರಶ್ನೆಯನ್ನು ಕೇಳ್ತಿದ್ದ ಹಾಗೆ ಹೌದಲ್ವಾ‌ ಅಂತ ಎಲ್ಲರೂ ಚಿಂತಿಸಲು ಶುರು ಮಾಡಿದ್ರಿ.‌ ರಜನಿಕಾಂತ್ ಕರ್ನಾಟಕದಲ್ಲಿ ಹುಟ್ಟಿ ಇಲ್ಲೇ ಬಿಎಂಟಿಸಿಯಲ್ಲಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಓರ್ವ ಸಾಮಾನ್ಯ ಮನುಷ್ಯ. ಅವರಿಗಿದ್ದ ಸಿನಿಮಾ ಮೋಹ ಮದ್ರಾಸ್ ತನಕ ಕರೆದೊಯ್ದು ಅಲ್ಲಿ ಉನ್ನತ ಪಟ್ಟವನ್ನು ಕೊಡ್ತು. ಆದ್ರೀಗ ಚಿತ್ರೋದ್ಯಮ ಬಿಟ್ಟು ರಾಜಕೀಯಕ್ಕೆ ಬರುತ್ತಿರೋದು ಕನ್ನಡಿಗರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾರಣ ಅಂದ್ರೆ ತಮಿಳುನಾಡಿನ ರಾಜಕೀಯ ಇತಿಹಾಸ.

ರಜನಿ ರಾಜಕೀಯ ಕನ್ನಡಿಗರಿಗೇಕೆ ಕಷ್ಟ..?

ರಜನಿ ರಾಜಕಾರಣಕ್ಕೆ ಧುಮುಕಿ, ಹೊಸ ಪಕ್ಷ ಸ್ಥಾಪನೆ ಮಾಡಿದ್ರೆ, ರಜನಿ ಸಿಎಂ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ತಮಿಳುನಾಡಿನ ಜನ ಸಿನಿಮಾ ಸ್ಟಾರ್ ಗಳು ಅಂದ್ರೆ ದೈವೀ ಸಂಭೂತರು, ನಮ್ಮನ್ನು ಉದ್ದಾರ ಮಾಡಲೆಂದೇ ಭೂಮಿಗೆ ಬಂದಿರುವ ಸ್ವರ್ಗಾಧಿಪತಿಗಳು ಅನ್ನೋ ಭಾವನೆಯಲ್ಲಿ ಇರ್ತಾರೆ. ಅದಕ್ಕೆ ಎಂಜಿಆರ್ ,ಜಯಲಲಿತಾ ಅಂಥವರ ಆಯ್ಕೆಗಳೇ ಸಾಕ್ಷಿ .  ಅಲ್ಲಿ ಮುಂದಿನ ಬಾರಿ ರಜನಿಕಾಂತ್ ಸಿಎಂ ಆದರೆ ಕರ್ನಾಟಕದ ಮೇಲೆ ಕೆಂಗಣ್ಣು ಬೀರೋದು ಸಹಜ. ಈಗಾಲೇ ಕರ್ನಾಟಕದ ಮಗಳು ಎನಿಸಿಕೊಂಡಿದ್ದ ಜೆ ಜಯಳಿತಾ ಕೂಡ ಕನ್ನಡಿಗರನ್ನು ಕಂಡರೆ ಕೆಕ್ಕರಿಸಿಕೊಂಡು ನೋಡುತ್ತಿದ್ದರು. ತಮಿಳಿಗರನ್ನು ಓಲೈಕೆ ಮಾಡಲು ಕನ್ನಡಿಗರನ್ನ ಅತಿಯಾಗಿ ಹಿಂಸೆಗೆ ನೂಕುತ್ತಿದ್ದರು. ಅವಶ್ಯಕತೆ ಇಲ್ಲದಿದ್ದರೂ ಕಾವೇರಿ ವಿಚಾರದಲ್ಲಿ ಕೋರ್ಟ್‌ನಲ್ಲಿ ಒಂದು ಅರ್ಜಿ ಹಾಕೋದು. ನಾನು ತಮಿಳಿಗರ ಪರ ಅಂತ ತೋರಿಕೆಗೆ ಏನೆಲ್ಲಾ ಬೇಕು ಅದನ್ನು ಮಾಡುತ್ತಿದ್ದರು. ಇದೀಗ ರಜನಿ ಸಿಎಂ ಆದರೂ ಅದನ್ನೆಲ್ಲಾ ಮಾಡಲೇ ಬೇಕು. ಇಲ್ಲದಿದ್ದರೆ ಕರ್ನಾಟಕ ಮೂಲದ ರಜನಿಕಾಂತ್ ಕನ್ನಡಿಗರ ಪರ ಅನ್ನೋ ಮಾತುಗಳು ಕೇಳಿ ಬರುತ್ತವೆ. ಇದಕ್ಕಾಗಿ ಕನ್ನಡಿಗರಿಗೆ ನಿರಂತರವಾಗಿ ಕಿರಿಕಿರಿ ಮಾಡುತ್ತಲೇ ಇರಬೇಕಾಗುತ್ತದೆ ರಜನಿಕಾಂತ್.

ವಿರೋಧ ಕಟ್ಟಿಕೊಳ್ಳಲು ಸಜ್ಜಾಗಿದ್ದಾರಾ ತಲೈವಾ

ರಜನಿಕಾಂತ್ ಸ್ವಭಾವತಃ ಸೂಕ್ಷ್ಮ ವ್ಯಕ್ತಿತ್ವದವರು. ಯಾರ ಮನಸ್ಸಿಗೂ ನೋವು ಮಾಡಬಾರದು, ಅವರಿಗೆ ಹಿಂಸೆ ಆದರೆ ದೇವರು ಮೆಚ್ಚುವುದಿಲ್ಲ ಎನ್ನುವ ರೀತಿ ಬದುಕುತ್ತಿದ್ದಾರೆ. ಅದರಲ್ಲೂ ಹಿಮಾಲಯದ ಬಾಬಾ ಆಶೀರ್ವಾದ ಆದ ಬಳಿಕ ರಾಜಕೀಯ ಪಕ್ಷ ಘೋಷಣೆ ಎನ್ನಲಾಗುತ್ತಿದೆ. ಈ ರೀತಿ ಇರುವ ರಜನಿಕಾಂತ್ ಅಧಿಕಾರದ ಮೋಹಕ್ಕಾಗಿ ತಮ್ಮ ವ್ಯಕ್ತಿತ್ವವನ್ನೇ ಬದಲಾವಣೆ ಮಾಡಿಕೊಳ್ತಾರಾ..? ಕರ್ನಾಟಕಕ್ಕೆ ಬರುವಾಗ ಜೊತೆಯಲ್ಲೇ ಒಂದು ಕುರ್ಚಿಯನ್ನೂ ಜೊತೆಗೆ ತಂದಿದ್ದ ಜಯಲಲಿತಾ ಅವರ ಹಾಗೆ ರಜನಿಕಾಂತ್ ಕೂಡ ನಡೆದುಕೊಳ್ತಾರಾ..? ಕನ್ನಡಿಗರ ವಿರೋಧ ಕಟ್ಟಿಕೊಳ್ಳಲು ರಜನಿ ರೆಡಿಯಾಗಿದ್ದಾರಾ ಅನ್ನೋ ಭಾವನೆ ಕನ್ನಡಿಗರಲ್ಲಿ ಮೂಡಿದೆ. ಒಂದು ವೇಳೆ ರಜನಿಕಾಂತ್ ಸಿಎಂ ಆಗಿ ಕಿರಿಕಿರಿ ಅನುಭವಿಸುವ ಬದಲು ಬೇರೆ ಯಾರಾದರೂ ಸಿಎಂ ಆಗಲಿ. ರಜನಿಕಾಂತ್ ಮೇಲಿರುವ ನಮ್ನ ಅಭಿಮಾನ ಹಾಳಾಗದಿರಲಿ ಅನ್ನೋ ಅಭಿಪ್ರಾಯವೂ ಕೆಲವರಲ್ಲಿದೆ. ಮುಂದಿನ ದಿನಗಳಲ್ಲಿ ಈ ಪ್ರಶ್ನೆಗಳಿಗೆಲ್ಲಾ ಉತ್ತರ ದೊರಕಬೇಕಿದೆ..

ಜ್ಯೋತಿ ಎಂ ಗೌಡ

-Ad-

Leave Your Comments