ಕನ್ನಡದ ಖಳನಾಯಕರನ್ನೆಂದೂ ಕೈ ಬಿಡದ ರಾಜ್ ಕುಮಾರ್ !!

ರಾಜ್ ಕುಮಾರ್ ಎಂಬ ಸರಸ್ವತಿ ಪುತ್ರನ ಬದುಕು ಬಗೆದಷ್ಟೂ ದಕ್ಕುವ ನಿಧಿ . ಕೆಲ ಅಪರೂಪದ ತುಣುಕುಗಳು  ಇಲ್ಲಿವೆ.

ಅಣ್ಣಾವ್ರ ಇಂಗ್ಲೀಷು

ರಾಜ್ ಕುಮಾರ್ ಫಾಲ್ಕೆ ಪ್ರಶಸ್ತಿಗೆ ದಿನವೇ “ಜೀ ಟಿವಿ”ಯವರು ರಾಜ್ ಮನೆಗೆ ಬಂದಿದ್ದರು. ಸಂದರ್ಶನ ಶುರುವಾಗುವ ಮುನ್ನ “ಜೀ “ಪ್ರತಿನಿಧಿಯಿಂದ ಕೂತೂಹಲದ ಪ್ರಶ್ನೆ. ನಿಮಗೆ ಇಂಗ್ಲಿಷ್ ಬರುತ್ತದೆಯೇ ? ರಾಜ್ ಮರು ಪ್ರಶ್ನೆ ಹಾಕಿದರು. ನಿಮಗೆ ಕನ್ನಡ ಬರುತ್ತದೆಯೇ ? ಅಲ್ಪಸ್ವಲ್ಪ ಎಂಬ ಉತ್ತರ ಬಂತು. ನನಗು ಲಿಟ್ಲ್ ಲಿಟ್ಲ್ ಇಂಗ್ಲಿಷ್ ಬರುತ್ತೆ. ಐ ಆಮ್ ಎ ಲಿಟ್ಲ್ ಬಾಯ್ ಇನ್ ಇಂಗ್ಲಿಷ್ ಎಂದರು ರಾಜ್.ಆನಂತರ ಸಂದರ್ಶನದುದ್ದಕ್ಕೂ ರಾಜ್ ಕನ್ನಡದಲ್ಲೇ ಮಾತನಾಡಿದರು.ವಾಸ್ತವವಾಗಿ ರಾಜ್ ಗೆ ಇಂಗ್ಲಿಷ್ ಗೊತ್ತಿತ್ತು.ಶ್ರಮಪಟ್ಟು ಕಲಿತಿದ್ದರು. ಆದರೆ ಎಂದೂ ಅದನ್ನು ತೋರಿಸಿಕೊಂಡವರಲ್ಲ.ಪರಭಾಷಾ ನಟಿಯರ ಮುಂದೆ ಇಂಗ್ಲಿಷ್ ಗೊತ್ತಿಲ್ಲದ ಅಮಾಯಕನಂತೆ ನಟಿಸುತ್ತಾ,ಅದರ ತಮಾಷೆಯನ್ನು ಸವಿಯುವುದೆಂದರೆ ರಾಜ್ ಗೆ ಭಲೇ ಪ್ರೀತಿಯಂತೆ .

ರಾಜ್ ಕೋಪ ಬರುತ್ತಿದ್ದದ್ದು ಯಾವಾಗ ?

ರಾಜ್ ಶಾಂತ ಮೂರ್ತಿ ನಿಜ .ಆದರೂ ಒಮ್ಮೊಮ್ಮೆ  ಕೋಪ ಸರ್… ಅಂತ ಬಂದು ಬಿಡೋದು. ಕನ್ನಡಿ ಮುಂದೆ ನಿಂತಾಗ ಅವರ ಬಾಚಣಿಗೆ ಕೈಗೆ ಸಿಗದಿದ್ದರೆ ಅಥವಾ ಬೇರೆಲ್ಲೋ ಅದನ್ನು ಇಟ್ಟಿದ್ದಾರೆ ಉರಿದು ಬೀಳುತ್ತಿದ್ದರು.

ರಸ್ತೆಗಿಳಿದು ಬಸ್ ತಳ್ಳಿದ ರಾಜಣ್ಣ

“ಹುಲಿ ಹಾಲಿನ ಮೇವು ” ಚಿತ್ರೀಕರಣದ ಸಂದರ್ಭ .ರಾಮನಗರದಲ್ಲಿ ಶೂಟಿಂಗ್ ನಡೀತಿತ್ತು. ಅದು ರಾತ್ರಿಯ ವೇಳೆ. ರಾಜ್ ಕಾರಿನಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಖಾಸಗಿ ಬಸ್ ಕೆಟ್ಟು ನಿಂತಿತ್ತು. ಜನರೆಲ್ಲ ನೂಕುತ್ತಿದ್ದರು. ಕಾರ್ ನಿಲ್ಲಿಸಿದ ರಾಜ್ ಕೆಳಗಿಳಿದು ತಲೆಗೆ ಟವೆಲ್ ಕಟ್ಟಿಕೊಂಡು ತಾವೂ ಬಸ್ ತಳ್ಳಿದರು.

ಖಳನಾಯಕರನ್ನೆಂದೂ ಕೈ ಬಿಡದ ಕನ್ನಡ ಕುವರ 

ಶಂಕರ-ಗುರು ಸಿನಿಮಾ ತಯಾರಿಕೆಯ ಸಂದರ್ಭ .ರಾಜ್ ಕುಮಾರ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದ ಸಿನಿಮಾ ಅದು. ಅದ್ದೂರಿ ಚಿತ್ರ. ಬಿಗ್ ಬಜೆಟ್ ಸಿನಿಮಾ ಆದ್ದರಿಂದ ಹಿಂದಿ ಚಿತ್ರರಂಗದ ಪ್ರಾಣ್ ,ಅಮ್ಜದ್ ಖಾನ್ ಮುಂತಾದವರನ್ನು ವಿಲನ್ ಪಾತ್ರಗಳಿಗೆ ಹಾಕಿಕೊಂಡರೆ ಚಿತ್ರದ ಕಮರ್ಷಿಯಲ್ ವ್ಯಾಲ್ಯೂ ಹೆಚ್ಚಾಗುತ್ತದೆ.ಘಾಟಾನುಘಟಿಗಳು ನಟಿಸಿದ್ದಾರೆ ಅನ್ನೋ ಕಾರಣಕ್ಕೆ ಪ್ರೇಕ್ಷಕರಿಗೂ ಕುತೂಹಲ ಹೆಚ್ಚಾಗಿ ಸಿನಿಮಾ ಓಡುತ್ತೆ ಅನ್ನೋದು ನಿರ್ದೇಶಕ ವಿ ಸೋಮಶೇಖರ್ ಮತ್ತು ನಿರ್ಮಾಪಕರ ಅಭಿಪ್ರಾಯವಾಗಿತ್ತು.

ಆದರೆ ಇಂಥಾ ಯೋಚನೆಗೆ ತಕ್ಷಣ ಬ್ರೇಕ್ ಹಾಕಿದ ರಾಜ್ ಕುಮಾರ್ “ಸೋಮಶೇಖರ್ ಅವರೇ ,ನಾವು ತೆಗೀತಾ ಇರೋದು ಕನ್ನಡ ಸಿನಿಮಾ ಪ್ರೇಕ್ಷಕರು ಕನ್ನಡ ಜನತೆ. ಹೀಗಿರುವಾಗ ಪರಭಾಷೆಯ ಕಲಾವಿದರಿಂದ ಆಗುವಂಥಾದ್ದು ಏನಿದೆ ? ನಮ್ಮ ಶನಿಮಹಾದೇವಪ್ಪ ,ತೂಗುದೀಪ ಶ್ರೀನಿವಾಸ್ ,ವಜ್ರಮುನಿ ಮುಂತಾದವರನ್ನೇ ಹಾಕಿಕೊಳ್ಳೋಣ ಅಂದ್ರು.

-ಭಾಸ್ಕರ್

ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡ ಕಲಾವಿದ

 

 

 

-Ad-

Leave Your Comments