ಆಹಾ ನನ್ನ ರಾಜಕುಮಾರ !! ಅವಳನ್ನು ಇಂದಿಗೂ ಕಾಡುತ್ತಿರುವ ರಸಿಕರ ರಾಜ

ರಾಜ್ ಕುಮಾರ್ ಯಾರನ್ನ ಮೋಹಗೊಳಿಸಿಲ್ಲ ಹೇಳಿ ? ಸಿಕ್ಕ್ರೆ ಇಂಥಾ ಪ್ರೇಮಿ,ಕಟ್ಟಿಕೊಂಡರೆ ರಾಜಕುಮಾರನಂಥ ಗಂಡ , ಹಡೆದರೆ ಅವನಂಥ ಮಗ ಹೀಗೆ ಎಲ್ಲ ಕಡೆಯೂ ಆವರಿಸಿಕೊಂಡು ಕಾಡಿದ , ಕಾಡುತ್ತಿರುವ ಮತ್ತೆ ಮತ್ತೆ ಬೇಕೆನಿಸುವ ಮುತ್ತಿನಂಥ ರಾಜ . ಇನ್ನಿಲ್ಲದಂತೆ ತನ್ನ ಒಳಮನಸ್ಸಿಗೆ ಲಗ್ಗೆ ಇಟ್ಟಿದ್ದು ಯಾವಾಗ? ಇಂದಿಗೂ ಅವರನ್ನ ಹೇಗೆ ಹೃದಯಾಂತರಾಳದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ   ಎಂಬುದನ್ನು ಆಕಾಶವಾಣಿ fm.Rainbow ರೇಡಿಯೋ ಜಾಕಿ ,ಮಾನಸಿಕ ಸಲಹೆಗಾರ್ತಿ ಆಶಾ ಆರ್ ವಿಶ್ವನಾಥ್ ಬೊಂಬಾಟ್ ಆಗಿ ಬರೆದಿದ್ದಾರೆ ಓದ್ಕೊಳ್ಳಿ ..

2006 ಏಪ್ರಿಲ್ 12 ರ ಮಟಮಟ ಮಧ್ಯಾಹ್ನ ಸುಮಾರು 02:50.
3 ಗಂಟೆಗೆ ಸರಿಯಾಗಿ “ಹಾಡು ಆಟ ಆಡು” ಗೇಮ್ ಶೋ ನೇರಪ್ರಸಾರ ನಡೆಸಿಕೊಡಲು ನಾನು ಆಕಾಶವಾಣಿ fm.Rainbow ಸ್ಟುಡಿಯೋದಲ್ಲಿ ಕೂತಿದ್ದಂಥಾ ಹೊತ್ತು.

“ಹಾಡು ಆಟ ಆಡು” ಅನ್ನೋದು ಆಕಾಶವಾಣಿ fm.Rainbow ದಲ್ಲಿ ಮೂಡಿಬರೋಂಥ ಒಂದು ಅತ್ಯಂತ ಲವಲವಿಕೆಯ, ಜೀವಂತಿಕೆಯ ಮತ್ತು ನಡೆಸಿಕೊಡಲು ಅಪಾರವಾದಂತ ಹುಮ್ಮಸ್ಸು energy ಹಾಗೂ ತೀಕ್ಷ್ಣ ಸಮಯ ಪ್ರಜ್ಞೆ ಬಯಸುವಂತ ಒಂದು ಜನಪ್ರಿಯ ಆಟದ ಕಾರ್ಯಕ್ರಮ. ಕೇಳುಗರಿಗೆ ಪ್ರಶ್ನೆಗಳನ್ನು ಕೊಡುತ್ತಾ ಲೈವ್-ಫೋನ್-ಇನ್‍ನಲ್ಲಿ ಉತ್ತರಪಡೆದು, ಅವರ ಸಂದೇಶಗಳನ್ನು ಓದಿ ಸರಿಯಾಗಿ ಉತ್ತರ ಕೊಟ್ಟ ನೂರಾರು ಕೇಳುಗರ ಹೆಸರುಗಳನ್ನು ’ON-AIR’ ಹೇಳಿ ಅವರ ಮೆಚ್ಚುಗೆಯ ಗೀತೆಗಳನ್ನು ಪ್ರಸಾರ ಮಾಡುವಂತ ಕಾರ್ಯಕ್ರಮ.

ಇಂಥಾ ಕ್ರೂಷಲ್ ಟೈಮ್‍ನಲ್ಲಿ ನನ್ನ ಮೊಬೈಲಿಗೊಂದು ಸಂದೇಶ.

“ಆಶಾ, ನಿನ್ನ ರಾಜಕುಮಾರ ಇನ್ನಿಲ್ಲ!” ಓಹ್ ದೇವ್ರೇ……..

ಇದೇನಾಯ್ತು! ಕಾರ್ಯಕ್ರಮ ನಡೆಸಿಕೊಡ್ಲಾ, ಬಂದ ಆಘಾತಕಾರೀ ಸುದ್ದಿಯ ಸತ್ಯಾಸತ್ಯತೆಗಳ ಬೆನ್ನು ಹತ್ತಲಾ, ಸಂದೇಶ ಓದಿ ನೋವಿನಿಂದ ಅಳ್ತಿದ್ದ ಮನಸ್ಸಿಗೆ ಸಮಾಧಾನ ಹೇಳ್ಲಾ…… ಆ ದಿನ, ಆ ಹೊತ್ತಿನಲ್ಲಿ ಅದೇನು ಮಾಡಿದೆನೋ ಆ ಭಗವಂತನೇ ಬಲ್ಲ!

ಸುದ್ದಿ ನಿಜ ಆಗಿದ್ದೂ ಆಯ್ತು, ಕರುನಾಡ ಕೋಟ್ಯಂತರ ಕಲಾರಸಿಕ ಹೃದಯಗಳನ್ನು ಕದ್ದು ಗೆದ್ದು ಆಳುತ್ತಿದ್ದ ಅನಭಿಶಕ್ತ ರಾಜಕುಮಾರನ ಯುಗಾಂತ್ಯವೂ ಆಗಿತ್ತು, ಆ ದಿಗ್ಗಜ ಪಂಚಭೂತಗಳಲ್ಲಿ ಲೀನವಾಗುವಂತಾ ಮಾರ್ಮಿಕ ಸಂದರ್ಭದಲ್ಲಿ ಸಹನೆ ಕಳೆದುಕೊಂಡು ಹುಚ್ಚೆದ್ದು ತಳಮಳಗೊಂಡ ಕನ್ನಡಿಗರನ್ನೂ ನೋಡಿದ್ದೂ ಆಯಿತು. ಅವೆಲ್ಲ ಈಗ ಇತಿಹಾಸ ನಿಜ. ಆದರೆ, ಈ ನನ್ನೊಳಗೊಬ್ಬ ರಾಜಕುಮಾರ ಇದ್ದಾನಲ್ಲ, ಅವನ ಯುಗಾಂತ್ಯ ಬಹುಶಃ ನನ್ನ ಅಂತ್ಯದೊಂದಿಗೇ ಆಗೋದು ಅನ್ನಿಸುತ್ತೆ! ಅಷ್ಟರಮಟ್ಟಿಗೆ ಇವ ನನ್ನ ಮೈ-ಮನ-ಆತ್ಮಗಳ ಒಡನಾಡಿ ಆಗಿಬಿಟ್ಟಿದ್ದಾನೆ ಅಂದ್ರೆ ಸುಳ್ಳೇ ಅಲ್ಲ.

ರಾಜ ಮುದ್ದು ರಾಜ ..

ಈ ನನ್ನೊಳಗಣ ರಾಜಕುಮಾರ ಅನೇಕರಿಗೆ ಅನೇಕಾನೇಕನಾಗಿ ಕಾಣಬಹುದು, ಆದ್ರೆ ನನಗೆ ಮಾತ್ರ ಅವ ಯಾವಕಾಲಕ್ಕೂ ನನ್ನ ತಾರುಣ್ಯವನ್ನು ಜಾಗೃತವಾಗಿಡಬಲ್ಲ ರಾಜಕುಮಾರ. ಅಷ್ಟೆ. ತೆರೆಯ ಮೇಲೆ ಅವ “MARY MARY MARY I LOVE YOU… ಅಂತ ಆ ಯಾರೋ ಹಿರೋಯಿನ್ನಿಗೆ ಹಾಡ್ತಿದ್ರೆ, ನನ್ನ ಕಿವಿಗೆ ಅದು “ASHA ASHA ASHA I LOVE YOU…. ಅಂತ್ಲೇ ಕೇಳೋದು. ’ಲೇ ಲೇ ಅಪ್ಪನ ಮಗಳೇ… ಅಂದ್ರೆ, ನಾನು ಮುಖ ಉಬ್ಬಿಸಿ ನನ್ನ ಅಪ್ಪನ ಮಗಳೇ ಆಗೋದು. ’ ಚಂದಿರ ತಂದಾ ಹುಣ್ಣಿಮೆ ರಾತ್ರಿ ಅಂತ ಆ ಡುಮ್ಮಿ ಸರಿತಾ ಜೊತೆ ಲಲ್ಲೆ ಆಡ್ತಿದ್ರೆ, ಆ ಡುಮ್ಮಿ ಜಾಗದಲ್ಲಿ ಈ ಆಶಾ ಅನ್ನೋ ಡುಮ್ಮೀನೇ ನನಗೆ ಸ್ಕ್ರೀನ್ ಭರ್ತಿ ಕಾಣೋದು. ಪ್ರತೀ ಬಾರಿ ಕನ್ನಡ ಚಲನಚಿತ್ರ ಗೀತೆಗಳಲ್ಲಿ, ಕ್ಲಾಸಿಕ್ ಹಾಡು ಕೇಳ್ಬೇಕು ಅಂದ್ರೆ, ಫ಼ೇವರೆಟ್ ಗೀತೆ ಮೆಲುಕು ಹಾಕ್ಬೇಕಂದ್ರೆ, ಇದೇ ನನ್ನೊಳಗಿನ ರಾಜಕುಮಾರನೇ ಕಣ್ಮುಂದೆ ಸುಳಿಯೋದು. ಹಾಲು ಜೇನು ಒಂದಾದ ಹಾಗೆ ನನ್ನಾ ನಿನ್ನಾ ಜೀವನ…. ಅಂತ ಮಾಧವಿ ಹಾಡಿಸಿಕೊಂಡ್ರೆ, ಛೆ, ನಂಗೂ ಕ್ಯಾನ್ಸರ್ ಬರಬೇಕು ಈ ರಾಜಕುಮಾರ ನಂಗೂ ಹಿಂಗೆ ಹಾಡಿ ರಮಿಸಬೇಕು……. ನೀನೆಲ್ಲೋ ನಾನಲ್ಲೆ ಅಂತ ಹಾಡ್ಕೊಂಡು ನನ್ನ ಹಿಂದೆ ಬಂದು ಮುದ್ದು ಮಾಡ್ಬೇಕು…. ನಿನ್ನಾ ಮರೆಯಲಾರೆ ಅಂತ ಬೈಕ್ ಹಿಂದೆ ಕೂತು ನನ್ನ ರಾಜಕುಮಾರನ್ನ ನಾನು ಗಟ್ಟಿಯಾಗಿ ತಬ್ಬಿ LONG DRIVE ಹೋಗ್ಬೇ॑ಕು……… ಯಪ್ಪಾ ಇಂಥ ಎಷ್ಟು ನಾಲಿಗೆ ಚಪ್ಪರಿಸುವ ಅದೆಷ್ಟು ಕನಸುಗಳನ್ನು ನನ್ನ ಚಿರ-ಯವ್ವನ ಕಂಡಿದ್ಯೋ! ರಾಜ ಮುದ್ದು ರಾಜ …. ಅಂತ ಉಲಿಯೋ ಮಂಜುಳ….. ಉಹುಂ ಅದು ಬೇರೆ ಯಾರೂ ಅಲ್ಲ, ದುಂಡು ಮೊಗದ, ಮಾದಕ ಕಂಗಳ ಮೈ ಕೈ ತುಂಬಿಕೊಂಡ CURVY ಚೆಲುವೆ….. ನಾನೇ!್

ನಾನು ನನ್ನ “ರಾಜ”

ಇಂಥ imagination ಪ್ರಪಂಚಕ್ಕೆ ಯಾವ ದೊಣೆನಾಯಕನ ಅಪ್ಪಣೆ ಬೇಕು ಅಲ್ವಾ? ಅಲ್ಲಿ ಎಲ್ಲ ನಾನು, ನಾನೇ. ಮನಸ್ಸು ಹೋಗಬಯಸುವಲೆಲ್ಲಾ ಕೈ-ಕೈಹಿಡಿದು ನಡೆಸೋ ಆ ನನ್ನೊಳಗಿನ ರಾಜಕುಮಾರ, ಇರಬೇಕೆಂದು ಬಯಸುವ ಜಾಗದಲೆಲ್ಲ ಚೇಡಿಸೋ ತುಂಟ ಕಣ್ಣೋಟದೊಂದಿಗೆ, ಪ್ರೀತಿ ಉಕ್ಕಿ ಹರಿಸೋ ಮಾತುಗಳ ರಸದೌತಣದೊಂದಿಗೆ, ನೀನೇ ಎಲ್ಲ ನಿನ್ನ ಬಿಟ್ರೆ ಜಗತ್ತೇ ಇಲ್ಲ ಅನ್ನೊ ಅದ್ಭುತ FEEL ಕೊಡೋ ತುಂಟ ಚೆಲುವ ನನ್ನ ರಾಜಕುಮಾರ!

ಇಷ್ಟೆಲ್ಲಾ ಕನಸುಗಳಿಗೆ ನಾನು ಹೊಸ್ತಿಲ ಪೂಜೆ ನೆರವೇರಿಸಿದ್ದು ನನ್ನಪ್ಪನ ವಯಸ್ಸಿನ ರಾಜ್‍ಕುಮಾರ್ ಅನ್ನೋ ಕೋಟಿ ಕನ್ನಡ ಚಿತ್ರ ಪ್ರೇಮಿಗಳ ಆರಾಧ್ಯ ದೈವದ ಚಿತ್ರಗಳನ್ನು ನೋಡಲು ಶುರುವಿಟ್ಟ ವಸಂತಕಾಲದಲ್ಲಿ! ನನಗೆ ಚೆನ್ನಾಗಿ ನೆನಪಿದೆ. ಅದು ’ವಸಂತ ಗೀತ’ ಚಿತ್ರ ಮೈಸೂರಿನ ಲಕ್ಷ್ಮಿ ಟಾಕೀಸಿನಲ್ಲಿ ರೀರಿಲೀಸ್ ಆಗಿ ಓಡ್ತಿದ್ದ ಕಾಲ. ಮಾರನೇ ದಿನ ನನ್ನ 7ನೇ class ನ physics final ಪರೀಕ್ಷೆ. 2nd show ಗೆ ಅಪ್ಪ ಕರ್ಕೊಂಡ್ ಹೋಗಿದ್ದು. ಚಿತ್ರ ನೋಡಿದ್ದು. ಅಷ್ಟೆ. ತೊಗೋಳಪ್ಪ, ಏಳ್ನೇ ಕ್ಲಾಸಲ್ಲೇ ಹಳ್ಳಕ್ ಬಿದ್ದೆ! ಅದೇನು ಮೋಡೀನೋ ಆ ಮನುಷ್ಯಂದು, ಮೈಮನ ಆವರಿಸಿಕೊಂಡು ಲಗಾತಾರ್ ಹತ್ರ ಹತ್ರ 1 ವಾರದವರೆಗೂ ನಾನು ’ವಸಂತ-ಗೀತ’ ಚಿತ್ರದ ನಾಯಕಿ ಗಾಯತ್ರೀನೇ ಆಗ್ಬಿಟ್ಟಿದ್ದೆ! ರಸ್ತೇಲಿ ಕಾಣೋ ಹುಡುಗ್ರೆಲ್ಲಾ ಥೇಟ್ ಆಗಷ್ಟೇ ನನ್ನೊಳಗೆ  ಪ್ರವೇಶ ಮಾಡಿದ್ದ ರಾಜಕುಮಾರ!

ತೆರೆಯ ಮೇಲೆ ಹರೆಯದ ಹುಡುಗೀರನ್ನ ಹುಚ್ಚೆದ್ದುಕುಣಿಸ್ತಿದ್ದ ಈ ಚಲುವ ನಿಜ ಜೀವನದಲ್ಲಿ ಪಕ್ಕಾ ಸಾತ್ವಿಕ, ಸಾಧು, ಸಂತನಂತೆ ಇರೋಕೆ ಹೇಗೆ ಸಾಧ್ಯ ಆಯ್ತೋಪ! 2 ಬಾರಿ ಮುಖತಃ ಭೇಟಿ ಆಗುವ ಭಾಗ್ಯ ನನ್ನ ಪಾಲಿಗೆ ಬಂದೊದಗಿದ್ದ ಅದೃಷ್ಟ. ಆಕಾಶವಾಣಿಯಲ್ಲಿ ನನ್ನ ಆಗಿನ fm.Rainbow Incharge ಆಗಿದ್ದ ಶ್ರೀ. ಶಂಕರನಾರಾಯಣ ಅವರು ರಾಜ್‍ಕುಮಾರ್ ಕಾಲವಾದ ನಂತರದ ಮೊದಲ ಭಾನುವಾರ “ಆಶಾ, ಅವರ ಬಗ್ಗೆ ಒಂದು ವಿಶೇಷ ಕಾರ್ಯಕ್ರಮ ಮಾಡಿ. ಇದು ನಿಮ್ಮ RJ.Career ನ ಬಹುದೊಡ್ಡ ಮೈಲಿಗಲ್ಲಾಗುತ್ತೆ. ಹೇಗೆ ರೂಪಿಸ್ತೇರೋ ನೋಡಿ….” ಅಂತ ಚಾಲೆಂಜ್ ಮಾಡಿದಾಗ ಕೈಲಿದ್ದದ್ದು ಎರಡೇ ದಿನ. ಇಷ್ಟು ಪುಟ್ಟ ಅವಧಿಯಲ್ಲಿ ದುಃಖದ ಮಡುವಿನಲ್ಲಿದ್ದೂ ಸಹಕರಿಸಿದ ದ್ವಾರಕೀಶ್, ಜಯಂತಿ, ನಿರ್ದೇಶಕ ಭಾರ್ಗವ, ರವಿ, ದೊರೆಸ್ವಾಮಿಗಳು, ತುಮಕೂರಿನಲ್ಲಿದ್ದ ಅವರ ಅತ್ಯಂತ ಆಪ್ತ ಸ್ನೇಹಿತ, ರಾಘವೇಂದ್ರ ರಾಜ್‍ಕುಮಾರ್ ಹೀಗೇ ಇನ್ನೂ ಅನೇಕರು ರಾಜಣ್ಣನ ಬಗ್ಗೆಮಾತಾಡಿದ್ದು ಆತನ ಸಾಧುತ್ವಕ್ಕೆ ಹಿಡಿದಿಟ್ಟ ಕನ್ನಡಿಯಾಗಿತ್ತು!

ನನ್ನ ಪ್ರಕಾರ ರಾಜ್ ಹೃದಯಗಳ ಕೋಟ್ಯಾಧೀಶರಾಗಲು ಕಾರಣ ಅವರ ಸಾತ್ವಿಕ ಮೌಲ್ಯ ಮತ್ತು ಗಟ್ಟಿಯಾಗಿ ತಳವೂರಿ ಕಣ್ಣಿಗೆ “ಕುದುರೆ-ಪಟ್ಟಿ” ಕಟ್ಟಿ ಕೈ ಹಿಡಿದು ಮುನ್ನಡೆಸಿದ ಅವರ ಬಾಳ ಸಂಗಾತಿ ಮಾತ್ರ. ಹೀಗಾಗಿಯೇ ಒಬ್ಬ ವ್ಯಕ್ತಿ ಇಷ್ಟು ಭದ್ರವಾಗಿ ನೆಲೆ ನಿಂತು, ತುಂಬು ಸಂಸಾರ ಸಾಗಿಸಿ ಕನ್ನಡಿಗರ, ಕಲಾಪ್ರೇಮಿಗಳ ಹೃನ್ಮನಗಳನ್ನು ನಿಷ್ಕಲ್ಮಶವಾಗಿ ಇಂದಿಗೂ ಆಳೋಕೆ ಸಾಧ್ಯವಾಗಿರೋದು. ಅಲ್ವಾ?

ಏನೇ ಇರ್ಲಿ, ನನ್ನೊಳಗಿನ ರಾಜಕುಮಾರ ಎಷ್ಟೇ ಕೋಟಿ ಹೃದಯಗಳ ಭೂಪತಿಯಾದ್ರೂ ನನ್ನ ವಿಶ್ವದಲ್ಲಿ ನನಗೆ ಮತ್ತು ಕೇವಲ ನನಗೆ ಮಾತ್ರ ಸಲ್ಲುವ ಅಧಿಪತಿ!

_ಆಶಾ ವಿಶ್ವನಾಥ್, ಮಾನಸಿಕ ಸಲಹೆಗಾರ್ತಿ

-Ad-

Leave Your Comments