ಕನ್ನಡ ಮೀಡಿಯಂನಲ್ಲಿ ಓದಿದ ರಾಜು ರಿಸಲ್ಟ್ ಏನಾಯ್ತು ?

ಕಥೆ – ಬದುಕಿನ ಸ್ಥಿತ್ಯಂತರಗಳಿಗೆ ಸಾಕ್ಷಿಪ್ರಜ್ಞೆಯಾದ ಹಳ್ಳಿಯ ಪೋರನೊಬ್ಬನ ಭವಿಷ್ಯದ ಅನ್ವೇಷಣೆಯಲ್ಲಿ ಆದ್ಯತೆಗಳು ಸಂದರ್ಭಕ್ಕೆ ಅನುಸಾರವಾಗಿ ಬದಲಾಗುತ್ತಾ ಹೋಗುತ್ತವೆ. ಮುಗ್ದ ಜೀವನಕ್ಕೆ  ತಿರುವ ಕೊಡುವ ಮೊದಲ ಪ್ರೀತಿಯನ್ನ ಕೈಗೆಟುಕಿಸಿಕೊಳ್ಳಬೇಕೆನ್ನುವುದರಲ್ಲೇ ಅದು ಕಳೆದುಹೋಗುತ್ತದೆ . ಆಗ ಆತನ ಆದ್ಯತೆ ಕುಟುಂಬದ ಪ್ರೀತಿಯತ್ತ ಹೊರಳುತ್ತದೆ. ತಾಯಿಯ ಅನಾರೋಗ್ಯ ರಕ್ತ ಸಂಬಂಧಿಗಳ ಸ್ವಾರ್ಥವನ್ನು ತೆರೆದಿಟ್ಟಾಗ ಆತನಿಗೆ ನೆರವಾಗುವ ಗೆಳೆಯರು ಕೂಡ ಬದುಕಿನ ಅನಿವಾರ್ಯತೆಗೆ ಒಬ್ಬೊಬ್ಬರಾಗಿ ಕರಗಿಹೋಗುತ್ತಾರೆ. ಬಾಳುವೆ ಅರಸಿ ಕಾಣದ ನಗರಕ್ಕೆ ಕಾಲಿಟ್ಟ ಕನ್ನಡದ  ಕಂದನನ್ನು ಮತ್ತೊಂದು ಪ್ರೀತಿ ಕೈಹಿಡಿಯುತ್ತದೆ .ಪ್ರೀತಿ ಸಾಗಲು ಭಾವನೆಗಳಷ್ಟೇ ಸಾಲದು ಕೈ ತುಂಬಾ ಹಣವೂ ಮುಖ್ಯವೆನ್ನುವುದು ಆದ ಅವಮಾನದಿಂದ ಅರಿವಾಗುತ್ತದೆ. ತಾನು ಐಶ್ವರ್ಯವಂತನಾಗಬೇಕೆಂದು ಬಯಸಿದಾಗ ಯಶಸ್ವಿ ಉದ್ಯಮಿಯೊಬ್ಬನ ಸಲಹೆಯೂ ಜೊತೆಯಾಗುತ್ತದೆ. ಅದರ ಬೆನ್ಹತ್ತಿ ಹೋದ ನಾಯಕ ಮತ್ತಷ್ಟು ಅನೀರೀಕ್ಷಿತ ,ಆಘಾತಕಾರಿ ತಿರುವುಗಳಿಗೆ ವಸ್ತುವಾಗುವುದೇ ರಾಜು ಕನ್ನಡ ಮೀಡಿಯಂ ಚಿತ್ರದ ತಿರುಳು.

ನಿರ್ದೇಶನ

ಮಧ್ಯಂತರದವರೆಗೆ  ಪ್ರೇಕ್ಷಕರನ್ನ ಅಲುಗದಂತೆ ಹಿಡಿದಿಟ್ಟುಕೊಳ್ಳುವ ನಿರ್ದೇಶಕ ನರೇಶ್ ಕುಮಾರ್ , ನಂತರ ಅನೀರೀಕ್ಷಿತ ತಿರುವುಗಳನ್ನು ಹೆಣೆಯುವ ಭರದಲ್ಲಿ ಕಳೆದುಹೋದಂತೆ ಭಾಸವಾಗುತ್ತಾರೆ . ವಿಶ್ವಮಾನ್ಯ ಆಂಗ್ಲ ಚಿತ್ರ ಕ್ಯಾಸ್ಟ್ಅವೇ ಯ ಬಹುಮುಖ್ಯ ತುಣುಕನ್ನು ತುರುಕಲು ಹೋಗಿ ನೈಜತೆಯನ್ನು ಕದಡಿದ್ದಾರೆ. ಆದರೆ ಒಂದಂತೂ ಸತ್ಯ ಹೊಸ ಪರಂಪರೆಯ ಪ್ರೇಕ್ಷಕರನ್ನು ಹುಟ್ಟುಹಾಕುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಪ್ರಥಮಾರ್ಧದ ಕಥೆಗೆ  ದ್ವಿತೀಯಾರ್ಧವೇ ಶತ್ರು !! ಹಾಗೆಂದ ಮಾತ್ರಕ್ಕೆ ನಿರ್ದೇಶಕ ಇಲ್ಲಿ ಸೋತಿದ್ದಾರೆ ಎಂದರ್ಥವಲ್ಲ. ಚಿತ್ರವನ್ನು ಹಿಗ್ಗಿಸುವ ಭರದಲ್ಲಿ ಕಥೆಯೊಳಗೆ ಉಪಕಥೆಗಳನ್ನು ಹೆಣೆಯುವಾಗ ಪ್ರೇಕ್ಷಕರ ಸಹನೆಗೊಂದು  ಸವಾಲು ಹಾಕಿದ್ದಾರೆ. ಇದೆಲ್ಲದರ ಹೊರತಾಗಿಯೂ ಚಿತ್ರದಲ್ಲಿ ನಿರ್ದೇಶಕನ ಕಲಾ ಕುಸುರಿ ಗಮನ ಸೆಳೆಯುತ್ತದೆ. ಪಂಚ್ ಗಳಿಂದ ತುಂಬಿರುವ ಬಿಗಿ ಸಂಭಾಷಣೆ ಮನಸ್ಸುಗಳನ್ನು ಸೆಳೆಯುತ್ತದೆಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ನೀಡುವ ಭರವಸೆಯನ್ನ ನರೇಶ್ ಕುಮಾರ್ ಮೂಡಿಸಿದ್ದಾರೆ.

ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ನಗರ ಬದುಕಿನಲ್ಲಿರುವ ಇಂಗ್ಲೀಷ್ ಪಾರಮ್ಯದೊಂದಿಗೆ ಸೆಣೆಸುವಾಗ ಸಾಮಾನ್ಯವಾಗಿ ಕೀಳರಿಮೆ ಕಾಡುತ್ತದೆ. ಆದ್ರೆ ಕನ್ನಡ ಮೀಡಿಯಂ  ರಾಜುವನ್ನು ಇಂಥಹ ಕೀಳರಿಮೆಯಿಂದ ಹೊರತಂದ ಹೆಗ್ಗಳಿಕೆ ನಿರ್ದೇಶಕರದ್ದು.

ಅಭಿನಯ 

ಹಳ್ಳಿಯ ಹೈದ, ಮುಗ್ದ ಪ್ರೇಮಿ, ಛಲಗಾರ, ಕವಿ, ಕನ್ನಡಪ್ರೇಮಿ ಹೀಗೆ  ನಾನಾ ರೂಪಗಳಲ್ಲಿ ನಾಯಕ ಗುರುನಂದನ್ ನಟನೆ ಮನಸ್ಸಿಗಿಳಿಯುತ್ತದೆ. ಚೆಲ್ಲು ಹುಡುಗಿ , ಪ್ರೇಮಾನುರಾಗಿ,ವಿರಹಿಯ ಪಾತ್ರವನ್ನು ಅವಂತಿಕಾ ಶೆಟ್ಟಿ ನವಿರಾಗಿ ನಿರ್ವಹಿಸಿದ್ದಾರೆ.

ಯಶಸ್ವಿ ಉದ್ಯಮಿಯ  ಪಾತ್ರದಲ್ಲಿ ಬಂದು ವೀಪರೀತ ಬೋಧನೆ ಮಾಡದೆಯೂ ಗೆಲುವಿನ ಮಂತ್ರ ತಿಳಿಸುವಲ್ಲಿ ಸುದೀಪ್ ಅಭಿನಯ ಮನೋಜ್ಞವಾಗಿದೆ.

ಸಾಧುಕೋಕಿಲ,ಕುರಿಪ್ರತಾಪ್ , ಚಿಕ್ಕಣ್ಣ ಹೀಗೆ ಎಲ್ಲರ ಅಭಿನಯವು ಮೆಚ್ಚುವಂತಿದೆ.

ಸಂಗೀತ 

ಹಾಡುಗಳು ,ಹಿನ್ನೆಲೆ ಸಂಗೀತ ಇಂಪಾಗಿ ಚಿತ್ರಕ್ಕೆ ಮತ್ತಷ್ಟು ಮೆರಗು ತುಂಬಿವೆ.

ಛಾಯಾಗ್ರಹಣ

ಮಲೆನಾಡಿನ ಚಿತ್ರಗಳು, ಜಲಪಾತಗಳು, ಸಮುದ್ರ ,ದ್ವೀಪ, ಪಾತ್ರಧಾರಿಗಳನ್ನು ಸೆರೆಹಿಡಿಯುವಲ್ಲಿ ಶೇಖರ್ ಚಂದ್ರ ಪ್ರತಿಭೆ ಪ್ರಜ್ವಲಿಸಿದೆ.

ಎಲ್ಲ ವಯೋಮಾನದವರು ಕುಳಿತು ನೋಡಬಹುದಾದ ಚಿತ್ರ ರಾಜು ಕನ್ನಡ ಮೀಡಿಯಂ

 

 

 

 

 

-Ad-

Leave Your Comments