ರಕ್ಷಿತ್ ಶೆಟ್ಟಿ ಮಲಯಾಳಂ ಸೂಪರ್ ಸ್ಟಾರ್ ನಿವಿನ್ ಪೌಲಿ ಭೇಟಿ ಮಾಡಿದ್ದೇಕೆ?

ಇಬ್ಬರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅಚ್ಚರಿಯೇನಲ್ಲ. ಅದರಲ್ಲೂ ಬೇರೆ ಬೇರೆ ಭಾಷೆಯ ಸ್ಟಾರ್ ಗಳೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಿದೆ. ಈ ಹಿಂದೆ ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ಜೊತೆಯಾಗಿ ನಟಿಸಿದ್ದರು. ಕನ್ನಡದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರ ವಹಿಸಿದರೆ, ನಾಯಕನ ಗೆಳೆಯನ ಪಾತ್ರವನ್ನು ನಿರ್ವಹಿಸಿದ್ದರು. ಅದೇ ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಾಯಕನಾದರೆ, ಅವರ ಗೆಳೆಯ ವಿಷ್ಣುವರ್ಧನ್. ಇದೇ ಥರ ರವಿಚಂದ್ರನ್ ಮತ್ತು ಚಿರಂಜೀವಿ, ಅಂಬರೀಶ್ ಮತ್ತು ಚಿರಂಜೀವಿ ಜೊತೆಯಾಗಿ ನಟಿಸಿದ್ದು ಎಲ್ಲರಿಗೂ ಗೊತ್ತಿದೆ. ಇವೆಲ್ಲವೂ ಸಾಧ್ಯ ಆಗಿದ್ದು ಸ್ನೇಹದಿಂದ. ಇವರೆಲ್ಲರೂ ಆಪ್ತ ಸ್ನೇಹಿತರಾಗಿದ್ದವರು.

ಈಗ ಅಂಥದ್ದೇ ಮತ್ತೊಂದು ಸ್ನೇಹ ಹುಟ್ಟಿಕೊಂಡಿದೆ. ಅದು ಮಲಯಾಳಂ ಸೂಪರ್ ಸ್ಟಾರ್ ನಿವಿನ್ ಪೌಲಿ ಮತ್ತು ರಕ್ಷಿತ್ ಶೆಟ್ಟಿ.

ರಕ್ಷಿತ್ ಶೆಟ್ಟಿಯ ಉಳಿದವರು ಕಂಡಂತೆ ಸಿನಿಮಾವನ್ನು ಬಹುವಾಗಿ ಮೆಚ್ಚಿ ಅದರ ತಮಿಳು ಅವತರಣಿಕೆಯಲ್ಲಿ ನಟಿಸಿದ್ದು ಇದೇ ನಿವಿನ್ ಪೌಲಿ. ಅನಂತರ ಇವರ ಬಾಂಧವ್ಯ ಗಟ್ಟಿಯಾಗಿತ್ತು. ಟ್ವೀಟರ್ ನಲ್ಲಿ ಮಾತುಕತೆ, ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಪರಸ್ಪರ ಶುಭಹಾರೈಕೆ ಇವೆಲ್ಲವೂ ನಡೆದಿತ್ತು.

ಇತ್ತೀಚೆಗೆ ಅವರಿಬ್ಬರ ಭೇಟಿಯೂ ನಡೆದಿದೆ. ನಿವಿನ್ ಪೌಲಿ ತಮ್ಮ ಕಯಾಕುಲಂ ಕೋಚುಣ್ಣಿ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದಿದ್ದರು. ಅಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. ಸದ್ಯ ಸುಮ್ಮನೆ ಉಭಯಕುಶಲೋಪರಿಗಾಗಿ ಭೇಟಿ ಮಾಡಿರಬಹುದು. ಆದರೆ ಮುಂದೊಂದು ದಿನ ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸಲೂಬಹುದು. ಯಾಕೆಂದರೆ ಈ ಇಬ್ಬರೂ ಯುವಜನರನ್ನು ಥಿಯೇಟರಿಗೆ ಕರೆತರುವಷ್ಟು ಶಕ್ತಿ ಉಳ್ಳವರು. ಒಂದು ವೇಳೆ ಇವರಿಬ್ಬರು ಒಂದೇ ಚಿತ್ರದಲ್ಲಿ ನಟಿಸುವುದೇ ಆದರೆ ಅದು ಮತ್ತೊಂದು ಇತಿಹಾಸ ಸೃಷ್ಟಿಸುವುದು ನಿಶ್ಚಿತ.

-Ad-

Leave Your Comments