ರಮ್ಯಾ @34 ! ನನಗೂ ವ್ಯವಸಾಯ ಹೇಳಿಕೊಡ್ತೀರಾ ?

ಸ್ಯಾಂಡಲ್ ವುಡ್ ಕ್ವೀನ್ ,ಮೋಹಕ ತಾರೆ ಅಂತೆಲ್ಲ ಕರೆಸಿಕೊಳ್ಳುವ ರಮ್ಯಾಗೆ 34ರ ಸಂಭ್ರಮ. ತಾರೆಗಳು ಅಂದಾಕ್ಷಣ ಅವ್ರ ಹವ್ಯಾಸ, ಅಭಿರುಚಿ, ಆಸಕ್ತಿ ಅದ್ರಲ್ಲೂ ಬರ್ತ್ ಡೇ ಹೇಗೆ ಸೆಲೆಬ್ರೇಟ್ ಮಾಡಿಕೊಳ್ತಾರೆ ಇಂಥ ಹಲವು ಕುತೂಹಲಗಳು ಅಭಿಮಾನಿಗಳನ್ನು ಕಾಡುವುದು ಸಹಜ. ಅವರೀಗ ಮನಮೋಹಕ ನಟಿಯಾಗಷ್ಟೇ ಉಳಿದಿಲ್ಲ ರಾಜಕಾರಣಿ ರಮ್ಯಾ ಮೇಡಂ ಆಗಿದ್ದಾರೆ. ಅಲ್ಲಿಂದ ಇಲ್ಲಿಗೆ ಬಂದವರು ಏನಾಗಿದ್ದಾರೆ ?ಇವತ್ತೇನು ಮಾಡಿದ್ದಾರೆ? ಓದಿನೋಡಿರಿಲ್ಲಿ ” ರಮ್ಯಾ ರೌಂಡ್ಸ್ ”

ramya3

ಮಂಡ್ಯದ ಗಣಪತಿ ದೇವಸ್ಥಾನದಲ್ಲಿ ಬೆಳ್ ಬೆಳಿಗ್ಗೆ  ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ  ಹುಟ್ಟುಹಬ್ಬ ಆಚರಿಸಿಕೊಂಡ್ರು . ಸದ್ಯ ಈಗಲಾದ್ರೂ ನಮ್ಮ ನೆನಪಾಯ್ತಲ್ಲ ಅಂತ ಅಭಿಮಾನಿಯೊಬ್ಬರು ಗೊಣಗಾಡಿಕೊಂಡೇ ಚೆನ್ನಾಗಿರಿ ಅಂತ ಹಾರೈಸಿದ್ರು. ಆಮೇಲೆ ರಮ್ಯಾ ಅಲ್ಲಿಂದ ಹರ್ಷ ಕೆಫೆಗೆ ಹೋಗಿ ಕಾಂಗ್ರೆಸ್ ಮಹಿಳಾ ಮಣಿಗಳ  ಜೊತೆ ಮಸಾಲೆ ದೋಸೆ ಚಪ್ಪರಿಸಿ ಸಾತನೂರ್ ಕಡೆ ಪಯಣ ಬೆಳೆಸಿದ್ರು.

siddu-9siddu-8

ಸಾತನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡಗಳಿಗೆ ನೀರು ಬಿಟ್ಟು, ತಮ್ಮ ತಂದೆ ಆರ್ ಟಿ ನಾರಾಯಣ್ ಹೆಸರಿನಲ್ಲಿ ಶಾಲೆಯ ಶೌಚಾಲಯಕ್ಕೆ ನೀರಿನ ಮಿತವ್ಯಯ ಬಳಕೆಯ ಸಾಧನ ಕೊಟ್ಟು ತಾವೇ ಚಾಲನೆ ಮಾಡಿದ್ರು. ಆಮೇಲೆ ಒಂದಿಷ್ಟು ಹೊತ್ತು ಭಾಷಣ. ಜಿಲ್ಲೆಯಲ್ಲಿ ಬರಗಾಲ ಇದೆ. ನಿಜ .ಹಾಗಂತ ಊರುಬಿಟ್ಟು ಹೋಗ್ಬೇಡಿ . ಬೆಂಗಳೂರು ಮೊದಲಿನಂತೆ ಸುಂದರವಾಗೇನು ಇಲ್ಲ. ಕೃಷಿ ಬಿಟ್ಟು ಹೋಗ್ಬೇಡಿ. ನೀವೇ ನಮ್ಮ ಅನ್ನದಾತರು. ನನಗು ವ್ಯವಸಾಯಕ್ಕೆ ಬರ್ಬೇಕು ಅಂತ ಆಸೆ ಇದೆ. ಬಂದ್ರೆ ಹೇಳ್ಕೊಡ್ತೀರಾ ? ಅಂದ್ರು . ಪಾಪ ಮಕ್ಕ್ಳು ಏನು ತಾನೇ ಹೇಳಿಯಾವು ? ಓ ಬನ್ನಿ .. ಅನ್ನುವುದನ್ನು ಬಿಟ್ಟು .

siddu-5

ಸರಿ ಮುಂದಿನೂರಿನ ದಾರಿ ಹಿಡಿಯುವ ಯೋಚನೆಯಲ್ಲಿದ್ದ ರಮ್ಯಾಗೆ ಹೇಮಂತ್ ಎಂಬ ಯುವಕ ಬರ್ತ ಡೇ ಮಾಡ್ಕಳಕ್ಕೆ ಬಂದವರೇ ಸುಮ್ನಿರಾನ ಅಂತ ಕನ್ಸೆಷನ್ ಕೊಡದೆ “ಕಾವೇರಿ ಹೋರಾಟದಲ್ಲಿ ಕಾಣಲೇ ಇಲ್ಲ. ಈಗ ಬಂದ್ಬುಟ್ಟಿದ್ದೀರಾ . ಈಗ ನೆನಪಾದ್ವಾ ? ಅಂದ . ರಮ್ಯಾ ಮೇಡಮ್ಮು ಅಯ್ಯೋ ನಿಂಜೊತೆ ಯಾವಾಗ್ಲೂ ಇರ್ತೀನಿ . ರೈತರು ಆತ್ಮಹತ್ಯೆ ಮಾಡಿಕೊಂಡಾಗೆಲ್ಲ ಬಂದಿದ್ನಲ್ಲ ಅಂತ ಹೇಳಿ ಗಾಡಿ ಮುಂದಕ್ಕೆ ಬಿಟ್ರು .

siddu-10-1

ಚನ್ನಪ್ಪನ ದೊಡ್ಡಿಯ ಖಾದಿ ಮತ್ತು ಗ್ರಾಮೋದ್ಯೋಗ ಕೈಮಗ್ಗ ಕೇಂದ್ರಕ್ಕೆ ಭೇಟಿ ಕೊಟ್ಟು ಮಂಡ್ಯಕ್ಕೆ ಮರಳಿ ಮುಗೀತ್ ನನ್ನ ಕೆಲಸ ಅಂತ ಅವ್ರೇ ಭಾಷಣದಲ್ಲಿ ಹೇಳಿದ ಸುಂದರವಲ್ಲದ ಬೆಂಗಳೂರಿಗೆ ಬಂಡಿ ಬಿಟ್ರು.

ramya-cring-2

ರಮ್ಯಾರನ್ನ ಮನೆ ಮಗಳು ಎಂಬಂತೆ ಮಂಡ್ಯದ ಜನ ಅಪ್ಪಿಕೊಂಡು ಮತ ಕೊಟ್ಟು ಮನೆ ತುಂಬಿಸಿಕೊಂಡದ್ದೇನೋ ನಿಜ. ನಾವು ಕೊಟ್ಟ  ಪ್ರೀತಿಯನ್ನ ನಮ್ಮ ರಮ್ಯಕ್ಕ ಉಳಿಸಿಕೊಳ್ಳಲಿಲ್ಲ ಬುಡು. ಬೇಕಾದಾಗ ಬತ್ತಾರೆ ಬ್ಯಾಡದೆ ಇದ್ದಾಗ ಒಯ್ತಾರೆ ಅಷ್ಟೇಯಾ ಅಂತ ಇವತ್ತು ಜನ ಅಲ್ಲಲ್ಲಿ ಮಾತಾಡಿಕೊಳ್ತಿದ್ರು.

ramya-1

ರಮ್ಯಾ ಚಿತ್ರರಂಗದಲ್ಲಿ ಚೆಲುವೆ , ಒಳ್ಳೆ ನಟಿ, ಊರಿಗೊಬ್ಬಳೆ ಪದ್ಮಾವತಿಯಂತೆ ಸ್ಯಾಂಡಲ್ ವುಡ್ ಕ್ವೀನ್ ಅನ್ನಿಸಿಕೊಂಡ್ರು  ವಿವಾದಗಳ ರಾಣಿಯಾಗಿದ್ದು ಸುಳ್ಳಲ್ಲ. ಇನ್ನಷ್ಟು ಕಾಲ ಬಣ್ಣದ ಜಗತ್ತಿನಲ್ಲಿ ವಿಜೃಂಭಿಸುವ ಪ್ರತಿಭೆ ಇದ್ದರೂ ಎದ್ದು ರಾಜಕಾರಣದ ಅಖಾಡಕ್ಕೆ ಹೊರಳೆ ಬಿಟ್ರು. ಅಲ್ಲೂ ಅತ್ತಿದ್ದು ಕರೆದಿದ್ದು ,ಸೋತಿದ್ದಕ್ಕೆ ಅವರೇ ಕಾರಣ ಅಂತ ಚಿಕ್ಕಮಕ್ಕಳ ಹಾಗೆ ಬೆರಳು ತೋರಿಸಿದ್ದು, ಆಮೇಲೆ ನಾಪತ್ತೆ ಆಗಿದ್ದು ,ಮತ್ತೆ ಧಿಡೀರ್ ಅಂತ ಮಂಡ್ಯದ ಮಣ್ಣಲ್ಲಿ ಪ್ರತ್ಯಕ್ಷ ಆಗಿದ್ದು ಎಲ್ಲ ಆಗಿ ಹೋಯ್ತು.

ramya-crying

ಸಿನಿಮಾದಲ್ಲಿ ಆದ್ರೆ ಕ್ಯಾಮರಾ ಮುಂದೆ ಪ್ರತಿಭೆ ಪ್ರದರ್ಶಿಸಿ , ತೆರೆಯ ಮೇಲೆ ಚಪ್ಪಾಳೆ ಗಿಟ್ಟಿಸಿ ಗೆದ್ದು ಬಿಡಬಹುದು .ಆದರೆ ರಾಜಕಾರಣ ಹಾಗಲ್ಲ ಅದು ಬೇರೆಯದೇ ಆದ ಬದ್ಧತೆ, ಬುದ್ಧಿಮತ್ತೆ, ಸಹನೆ,ಸಂಯಮ ಬೇಡುವಂತದ್ದು. ಅವಮಾನಗಳನ್ನ ನುಂಗಿ ನಡೆಯದಿದ್ದರೆ ಊರಿಂದ ಊರಿಗೆ ಹಾರಿದ ಜಯಲಲಿತಾ ಎಂಬ ನಟಿ ರಾಜ್ಯದ ಮುಖ್ಯಮಂತ್ರಿ ಆಗುವುದು ಸಾಧ್ಯವಿತ್ತೇ ?34ರ ಹರೆಯದಲ್ಲಿರುವ ರಮ್ಯಾ ಇದನ್ನೆಲ್ಲ ಅರಿತು ಪ್ರಭುದ್ಧತೆ ಮೆರೆಯಲಿ. ಇದು ನಮ್ಮ ಹಾರೈಕೆಯು ಹೌದು ಕಿವಿಮಾತೂ ಹೌದು .

-Ad-

Leave Your Comments