ಬಾಹುಬಲಿಯನ್ನೇಕೆ ಒಳಬಿಡಬೇಕು ? ರಾಜಮೌಳಿಯ ಕೋರಿಕೆ ಏನು ?

ಬಾಹುಬಲಿ 2 ಚಿತ್ರ ಕಟ್ಟಪ್ಪ ಕ್ಷಮೆ ಕೋರುವ ತನಕ  ಕರ್ನಾಟಕದಲ್ಲಿ ಬಿಡುಗಡೆಯಾಗುವುದನ್ನು ತಡೆಯಲು ಕನ್ನಡ ಪರ ಹೋರಾಟಗಾರರು ನಿರ್ಧರಿಸಿ, ಸಾಮಾಜಿಕ ಜಾಲತಾಣದಲ್ಲೂ ವಿಪರೀತ ವಿರೋಧ ವ್ಯಕ್ತವಾಗುತ್ತಿದೆ. ಬಿಡುಗಡೆಯ ದಿನವೇ  ಬೆಂಗಳೂರು ಬಂದ್ ಆಚರಿಸಲು ಕನ್ನಡಪರ ಹೋರಾಟಗಾರರು ಕರೆ ಕೊಟ್ಟಿದ್ದಾರೆ. ಬಾಹುಬಲಿ ತೆರೆಗೆ ಅಪ್ಪಳಿಸುವ ದಿನ ಹತ್ತಿರವಾಗುತ್ತಿದ್ದಂತೆ ಆತಂಕಕ್ಕೆ ಒಳಗಾದಂತೆ ಕಾಣುತ್ತಿರುವ ನಿರ್ದೇಶಕ ರಾಜಮೌಳಿ ಕನ್ನಡ ಚಿತ್ರರಸಿಕರಿಗೆ ಮನವಿ ಸಲ್ಲಿಸಿದ್ದಾರೆ ಅದರ ಪ್ರತಿ ಇಲ್ಲಿದೆ.

ಕನ್ನಡ ಚಿತ್ರಪ್ರೇಮಿಗಳಿಗೆ ನಮಸ್ಕಾರ. ಅರ್ಕಾ ಮೀಡಿಯಾ ನಿರ್ಮಾಣದಲ್ಲಿ ನಾನು ನಿರ್ದೇಶನ  ಮಾಡಿರುವ ಬಾಹುಬಲಿ ದಿ  ಬಿಗಿನಿಂಗ್ ಚಿತ್ರಕ್ಕೆ ನೀವು ನೀಡಿರುವ ಪ್ರೋತ್ಸಾಹಕ್ಕೆ  ಋಣಿಯಾಗಿರುತ್ತೇವೆ .ನೀವೆಲ್ಲರೂ ಬಾಹುಬಲಿ ಮೊದಲನೆಯ  ಭಾಗವನ್ನು ನೋಡಿದ್ದೀರಿ.ಪ್ರೀತಿಸಿದ್ದೀರಿ.

ಈಗ ಬಾಹುಬಲಿ ದಿ ಕಂಕ್ಲುಜನ್ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಸತ್ಯರಾಜ್ ನಟಿಸಿರುವ ವಿಚಾರ ತಮ್ಮೆಲ್ಲರಿಗೂ ಗೊತ್ತು. ಸತ್ಯರಾಜ್ ಅವರ ಕೆಲವು ಮಾತುಗಳಿಂದ ನಿಮ್ಮಲ್ಲಿ ಸಾಕಷ್ಟು ಜನರಿಗೆ ನೋವಾಗಿದೆ ಎಂದು ನಮಗೆ ಗೊತ್ತಾಗಿದೆ. ಇದರ ಕುರಿತಾಗಿ ಒಂದು ವಿವರಣೆಯನ್ನು ನೀಡುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತಿದ್ದೇವೆ.

ಬಾಹುಬಲಿ ಚಿತ್ರಕ್ಕೂ ಸತ್ಯರಾಜ್ ಅವರ ಮಾತುಗಳಿಗೂ ಯಾವ ಸಂಬಂಧವೂ ಇಲ್ಲ. ಈ ಚಿತ್ರವನ್ನು ನಿರ್ಮಾಣ ಮಾಡಿದವರು ಅವರಲ್ಲ. ಈ ಚಿತ್ರಕ್ಕಾಗಿ ಕಥೆ,ಚಿತ್ರಕಥೆ, ಸಂಭಾಷಣೆ,ನಿರ್ದೇಶನ ಮುಂತಾದ ಯಾವ ವಿಭಾಗದಲ್ಲೂ ಅವರು ಕೆಲಸ ಮಾಡಿರಲಿಲ್ಲ. ಅವರು ಕೇವಲ ಒಂದು ಪಾತ್ರದಲ್ಲಿ ನಟಿಸಿದ್ದರಷ್ಟೇ. ಅದಕ್ಕೆ ಸಂಭಾವನೆಯನ್ನು ಪಡೆದಿದ್ದಾರೆ.

ಸತ್ಯರಾಜ್ ಅವರ ಅಭಿಪ್ರಾಯ ಏನೇ ಇದ್ದರೂ ಅವರಿಗೆ ಮಾತ್ರವೇ ಸೀಮಿತ. ಓರ್ವ ನಟನ ವೈಯಕ್ತಿಕ ಅಭಿಪ್ರಾಯದಿಂದಾಗಿ ಆತ ನಟಿಸಿರುವ ಒಂದು ಚಿತ್ರಕ್ಕೆ ಯಾವ ತೊಂದರೆಯು ಉಂಟಾಗಬಾರದು ಎಂಬುದು ನಮ್ಮ ಉದ್ದೇಶ್ಯ. ಹಾಗಾಗಿ ಈ ವಿಚಾರದ ಕುರಿತು ಸತ್ಯರಾಜ್ ಅವರಿಗೆ ಫೋನ್ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದೇವೆ. ಅದಕ್ಕೂ ಮೀರಿದ ಶಕ್ತಿ ನಮಗಿಲ್ಲ.

ಒಂಭತ್ತು ವರುಷಗಳ ಹಿಂದೆ ಸತ್ಯರಾಜ್ ಅವರು ಆ ಕಾಮೆಂಟ್ಸ್ ಮಾಡಿದ್ದಾರೆ. ಆ ನಂತರ ಅವರು ನಟಿಸಿರುವ, ನಿರ್ಮಾಣ ಮಾಡಿರುವ ಸಾಕಷ್ಟು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆ ಆಗಿವೆ. ಬಾಹುಬಲಿ ಪಾರ್ಟ್ 1 ಸಹ ಬಿಡುಗಡೆ ಆಗಿದೆ. ಅವುಗಳನ್ನು ಪ್ರೋತ್ಸಾಹಿಸಿದ್ದ ಹಾಗೇನೇ ಬಾಹುಬಲಿ ದಿ ಕಂಕ್ಲುಜನ್ ಚಿತ್ರವನ್ನು ಸಹ ಪ್ರೀತಿಯಿಂದ ನೋಡಬೇಕಾಗಿ ಬಯಸುತ್ತಿದ್ದೇವೆ. ಈ ಸಿನಿಮಾವನ್ನು ನಿಲ್ಲಿಸಿಬಿಟ್ರೆ ಸತ್ಯರಾಜ್ ಅವರಿಗೆ ಆಗುವ ಕಷ್ಟ ಅಥವಾ ನಷ್ಟ ಏನೂ ಇಲ್ಲ. ಐದು ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ಕಲಾವಿದರಿಗೂ,ತಂತ್ರಜ್ಞರಿಗೂ, ಕರ್ನಾಟಕದ ಹಂಚಿಕೆದಾರರಿಗೂ ಮತ್ತು ಚಿತ್ರರಸಿಕರಿಗೂ ತೊಂದರೆ.

ನಮ್ಮ ಮೊದಲನೆಯ ಸಿನಿಮಾ ಸ್ಟೂಡೆಂಟ್ ನಂಬರ್ ವನ್ ನಿಂದ ಹಿಡಿದು ಬಾಹುಬಲಿ ದಿ ಬಿಗಿನಿಂಗ್ ತನಕ ನನ್ನ ಎಲ್ಲ ಚಿತ್ರಗಳನ್ನು ನೀವು ಪ್ರೋತಾಹಿಸಿದ್ದೀರಿ. ಅದಕ್ಕೇ ನಾನು ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಈಗ ಸತ್ಯರಾಜ್ ಅವರ ಮೇಲಿನ ಕೋಪವನ್ನು ಬಾಹುಬಲಿ ಮೇಲೆ ತೋರಿಸಬಾರದೆಂದು ವಿನಂತಿಸಿಕೊಳ್ಳುತ್ತಿದ್ದೇವೆ. ಚಿತ್ರರಸಿಕರಾದ ನಮ್ಮ ಪ್ರೀತಿಯ  ಕನ್ನಡ ವೀಕ್ಷಕರು ಬಾಹುಬಲಿ ದಿ ಕಂಕ್ಲುಜನ್ ಚಿತ್ರವನ್ನು ಸಹ ಪ್ರೋತ್ಸಾಹಿಸಬೇಕೆಂದು ಬಯಸುತ್ತಿದ್ದ್ದೇವೆ.

ನಿಮ್ಮ ಪ್ರೀತಿ ನಮ್ಮ ಮೇಲೆ ಇರಲೆಂದು ಕೋರುತ್ತಾ

ನಿಮ್ಮ

ರಾಜಮೌಳಿ ಮತ್ತು ಆರ್ಕ ಮೀಡಿಯಾ ವರ್ಕ್ಸ್

-Ad-

Leave Your Comments