ಆಹ್ವಾನ ಪತ್ರಿಕೆಯಲ್ಲೇಕೆ ಪುಸ್ತಕ ? ಸಂಪಿಗೆ ? ಯಶ್ ಮನಸಿನ ಮಾತು ಇಲ್ಲಿವೆ

ಯಶ್ ಮದುವೆ ಕರೆಯೋಲೆಯಲ್ಲಿ ಅಕ್ಷರದ ಅಕ್ಕರೆ ,ಸಂಪಿಗೆಯ ಘಮ !! ಇದು ಯಶೋಮಾರ್ಗ !!

“ವಸುದೈವ ಕುಟುಂಬಕಂ “

                                      ನಮಸ್ತೆ,

ಇಲ್ಲಿ ಎಲ್ಲರೂ ಸಂಬಂಧಿಕರೇ

ಇಲ್ಲಿ ಎಲ್ಲವೂ ಅನುಬಂಧವೇ

ಸಹನೆ ಮರವನು ತಬ್ಬಿದ ಜೀವಲತೆಯಲಿ

ನಲುಮೆ ಹೂ ಅರಳಿದೆ …!

 ಇಂಥಾ  ಆಪ್ತ ಸಾಲುಗಳು ತುಂಬಿದ  ಮದುವೆಯ ಕರೆಯೋಲೆಯನ್ನು ಕಂಡ ಕ್ಷಣ ಇದು ಯಾರೋ ಕವಿ, ಸಾಹಿತಿಯ ಮದುವೆಯೇ ಇರಬೇಕು ಅನ್ನಿಸುವುದುಂಟು. ಆದರೆ ಇದು ಹೊರನೋಟಕ್ಕೆ ಖಡಕ್ ಆಗಿ ಕಾಣುವ  ಸ್ಟ್ರೈಟ್ ಫಾರ್ವರ್ಡ್ ಸಂತುದು. ಅದೇ ಚಿಗುರು ಮೀಸೆ ,ಹೊಳೆವ ಕಂಗಳ ಮೊಗ್ಗಿನ ಮನಸ್ಸಿನ ಚೆಲುವ ಯಶ್ ರದ್ದು.

ಅವರೇ ಹೇಳುವಂತೆ ನಾಯಕ ನಟನಾಗಿ ತೆರೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಳ್ಳೋದಷ್ಟೇ ಮುಖ್ಯವಲ್ಲ . ಕೈಲಾದಷ್ಟು ಸಮಾಜ ಸೇವೆ ಮಾಡಬೇಕು.  ಆ ದಾರಿಯಲ್ಲೇ ಹುಟ್ಟಿಕೊಂಡದ್ದು “ಯಶೋಮಾರ್ಗ ” . ವಿವಾದದಗಳ ಆಚೆಗೂ ರೈತರ ಸಮಸ್ಯೆ ಬಗೆ ಹರಿಯುವುದಾದ್ರೆ ಚರ್ಚೆಗೆ ನನ್ನ ಸಮಯ ಕೊಡಲು ಸಿದ್ದ ಎಂದ ನೇರವಾದಿ ಯಶ್. ಇತ್ತೀಚೆಗಿನ ನೋಟ್ ಬ್ಯಾನ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದು ಪ್ರಶಂಸನೀಯ . ಪ್ರಬುದ್ಧ ನುಡಿಗಳು ಯಾರೋ ಹೇಳಿಕೊಟ್ಟ ಮಾತ್ರಕ್ಕೆ ಬರುವಂಥದ್ದಲ್ಲ . ಒಂದಷ್ಟು ಓದು ,ಕೇಳಿಸಿಕೊಳ್ಳುವ ಗುಣ , ಗ್ರಹಿಕೆ ,ವಿವೇಚನೆ ಇದ್ದಾಗ ಮಾತ್ರ ಸಾಧ್ಯವಾಗುವಂಥದ್ದು . ಯಶ್  ಮಾತುಗಳಲ್ಲಿ ಅಂಥಾ ಪ್ರಬುದ್ಧತೆ ಅವರ ವಿರೋಧಿಗಳಿಗೂ ಕಂಡಿರುವುದು ನಿಜ. ಯಶ್ ತೆರೆಯ ಮೇಲೆ , ವೇದಿಕೆಯ ಮೇಲೆ ಬರುವ ಮುನ್ನ ಸಾಕಷ್ಟು ತಯಾರಿ ನಡೆಸಿಯೇ ಬಂದಿರುತ್ತಾರೆ ಎನ್ನುವುದು ಸದ್ಯಕ್ಕಂತೂ ಸಾಬೀತಾಗಿರುವ ಸಂಗತಿ . ಇದು ಅವರ ಮದುವೆಯ ವಿಚಾರದಲ್ಲೂ ಮಿಂಚಿದೆ. ಮದುವೆಗೆ ಕರೆಯುವುದೂ ಒಂದು ಕಲೆ. ಅಲ್ಲೂ ಕಳಕಳಿ ಮೆರೆದಿದ್ದಾರೆ .

img-20161124-wa0141img-20161124-wa0142-1

ಇಲ್ಲಿ ಅಬ್ಬರಕ್ಕಿಂತ ಹೆಚ್ಚಾಗಿ ಪ್ರೀತಿಯ ಜೊತೆಗೆ  ಅಕ್ಷರ ಹಂಚುವ ಅಕ್ಕರೆ ತುಂಬಿದೆ. ಸಂಬಂಧ ಬೆಸೆಯುವ ಶುಭನುಡಿಗಳು ಹೊಳೆಯುತ್ತಿವೆ.ಪಕ್ಕದಲ್ಲೇ ಚಿಗುರಿದ ಸಸಿ ಇದೆ . ಇದೇನಿದು ಆಹ್ವಾನ ಪತ್ರಿಕೆಯ ಜೊತೆ ಪುಸ್ತಕವೇಕೆ ? ಕೇಳಿದಾಗ ಯಶ್ ನುಡಿದದ್ದು

ಸಾಮಾನ್ಯವಾಗಿ ನಾವೆಲ್ಲಾ ನಮ್ಮ ಬದುಕಿನಲ್ಲಿ ನಡೆದ,ನೋಡಿದ ಅಥವಾ ಕೇಳಿದ ಘಟನೆಗಳಿಂದ ಪಾಠ ಕಲಿಯುತ್ತೇವೆ. ಇದಕ್ಕೂ ಮೀರಿ ಓದಿ ಕಲಿಯುವುದು ಬಹಳಷ್ಟಿದೆ. ಎಷ್ಟೋ ಪುಸ್ತಕಗಳನ್ನು ಓದಿ , ಎಷ್ಟೋ ಬದುಕುಗಳನ್ನು ಗಮನಿಸಿ ,ಗ್ರಹಿಸಿ ಲೇಖಕರು ಪುಸ್ತಕ ಬರೆದಿರುತ್ತಾರೆ .ನಾವು ಕಾಣದ ಲೋಕವನ್ನು ಕೂತಲ್ಲೇ ಕಾಣುವ ಅವಕಾಶ ಕಲ್ಪಿಸುತ್ತಾರೆ . ರವಿ ಕಾಣದ್ದು ಕವಿ ಕಂಡ ಅನ್ನುವುದು ಅದಕ್ಕೆ ತಾನೇ ? ಅಂಥಾ ಓದಿನ ಸುಖ ಎಲ್ಲರಿಗು ಸಿಗಲಿ ಅಂತಾನೆ ನನ್ನ ಮದುವೆಯ ಆಹ್ವಾನ ಪತ್ರಿಕೆಯ ಜೊತೆಯಲ್ಲಿ  ಪುಸ್ತಕ ಹಂಚುತ್ತಿದ್ದೇನೆ.

ಎಷ್ಟೋ ಪುಸ್ತಕ ಓದಿದ್ದೀರಿ ಜೋಗಿಯವರ “ಲೈಫ್ ಈಸ್ ಬ್ಯೂಟಿಫುಲ್ ” ನೇ ಯಾಕೆ ಕೊಡ್ತಿದ್ದೀರಿ ?

life-is-beauti

“ಲೈಫ್ ಈಸ್ ಬ್ಯೂಟಿಫುಲ್ ” ತುಂಬಾ ಸರಳವಾದ ಸುಂದರ ಪುಸ್ತಕ. ಪ್ರಾಕ್ಟಿಕಲ್ ಆಗಿದೆ. ಹೊಸದಾಗಿ ಓದು ಆರಂಭಿಸುವವರು ಆರಾಮವಾಗಿ ಓದಬಹುದು. ನಾನು ಬಹಳ ಇಷ್ಟಪಟ್ಟು ಓದಿದ್ದೇನೆ . ಒಳ್ಳೆ ವಿಷಯಗಳಿವೆ.  ಒಳ್ಳೆಯದನ್ನು ಹಂಚಿಕೊಳ್ಳುವ ಕೆಲಸವಷ್ಟೇ ಇದು. ನಾವು ತಿಂದ ಸಿಹಿಯನ್ನ ನಮ್ಮ ಆಪ್ತರಿಗೂ ಉಣಿಸುತ್ತೇವಲ್ಲ ಹಾಗೆ. .

ಪುಸ್ತಕದ ಪಕ್ಕದಲ್ಲಿ  ಸಸಿಯು ನಗುತ್ತಿದೆ ಅದನ್ನೇಕೆ ಕೊಡುತ್ತಿದ್ದೀರಿ ?

yash

ಈ ಪ್ರಕೃತಿಯಿಂದ ಏನೆಲ್ಲಾ ಪಡೆದಿದ್ದೇವೆ ! ಮತ್ತೆ ಮರಳಿಸುವ ಪುಟ್ಟ ಪ್ರಯತ್ನವಿದು. ನಾವು ಕೊಟ್ಟ ಗಿಡ ಮರವಾಗಿ ಬೆಳೆದು ಬೆಳೆಸಿದವರಿಗೆ ತಂಪು ಕೊಟ್ಟು ಹೂವಿನ ಕಂಪು ಹರಡುತ್ತದೆ. ನಾನು ಆಹ್ವಾನಿಸಿದ ಅನೇಕರ ಮನೆಯಲ್ಲಿ ನನ್ನ ಕೈಯಲ್ಲೇ ಗಿಡ ನೆಡಿಸಿದ್ದಾರೆ. ಕೆಲವರು ನನ್ನ ಮುಂದೆಯೇ ಅವರ ಮನೆಯಂಗಳದಲ್ಲಿ ಗಿಡ ನೆಟ್ಟಿದ್ದಾರೆ.  ವಸಂತನ ಆಗಮನವನ್ನು ಕೋಗಿಲೆ ಕೂಗಿ ಹೇಳುವುದು ಸಂಪಿಗೆ ಮರದ ಮೇಲೆ ಅಂತಾರೆ . ನಮ್ಮ ಬದುಕಿನಲ್ಲೂ ವಸಂತನ ಆಗಮನ ಅದಕ್ಕಾಗಿ ಸಂಪಿಗೆ ಗಿಡ. ನಮ್ಮ ಸ್ನೇಹ ,ಸಂಬಂಧಗಳು ಗಟ್ಟಿಯಾಗಿ ಸಂಪಿಗೆ ಮರವಾಗಿ ಅರಳಲಿ ಘಮಿಸಲಿ .

ಮದುವೆ ಎಲ್ಲಿ ? ಯಾವಾಗ ?

 ಡಿಸೆಂಬರ್ 10 -11 ಮದುವೆ . ಆರತಕ್ಷತೆ 10ರಂದು ಸಂಜೆ  7ಕ್ಕೆ  ಅರಮನೆ ಮೈದಾನ ತ್ರಿಪುರವಾಸಿನಿ .

ಮದುವೆಯ ಕರೆಯೋಲೆಯ ಜೊತೆಗೆ ಪುಸ್ತಕ,ಪರಿಸರ ಪ್ರೇಮ ಮೆರೆದಿರುವ ಯಶ್ ವಿವಾಹ ಮಹೋತ್ಸವದಲ್ಲಿ ಮತ್ತೇನು ಕಾಣಿಸುತ್ತಾರೋ ನೋಡೋಣ .

ಯಶ್ -ರಾಧಿಕಾ ಗೆ ciniadda.com ಬಳಗದಿಂದ ಶುಭಾಶಯಗಳು. ಇಬ್ಬರು ಮಾರ್ಗವು ಯಶೋಮಾರ್ಗವಾಗಿ ದಾಂಪತ್ಯ ಬೆಳಗಲಿ .

-ಭಾನುಮತಿ ಬಿ ಸಿ

 

-Ad-

Leave Your Comments