ಸಂತೋಷ್ ಆನಂದರಾಮ್ ರಾಜಮೌಳಿಯವರನ್ನು ಭೇಟಿಯಾಗಿದ್ದೇಕೆ?

ಕನ್ನಡದಲ್ಲಿ ಎರಡು ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಸಂತೋಷ್ ಆನಂದರಾಮ್. ಅವರು ನಿರ್ದೇಶಿಸಿದ ಎರಡೂ ಸಿನಿಮಾಗಳು ಸಕತ್ತಾಗಿ ಗೆದ್ದಿರುವುದರಿಂದ ಅವರ ಮೂರನೇ ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಹುಟ್ಟಿಕೊಂಡಿವೆ. ಶಿವರಾಜ್‌ಕುಮಾರ್ ಅವರ ಜೊತೆಗೆ ಸಿನಿಮಾ ಮಾಡಿ ಅಂತ ಶಿವಣ್ಣ ಅಭಿಮಾನಿಗಳೆಲ್ಲಾ ಒತ್ತಾಯಿಸುತ್ತಲೇ ಇದ್ದಾರೆ. ಅವರ ಒತ್ತಾಯಕ್ಕೆ ಮಣಿದ ಸಂತೋಷ್ ಆನಂದರಾಮ್ ಶಿವಣ್ಣನಿಗೆ ರಣರಂಗ ಸಿನಿಮಾ ಮಾಡುತ್ತೇನೆ ಎಂದು ಕೆಲವರಲ್ಲಿ ಹೇಳಿಕೊಂಡಿದ್ದಾಗಿದೆ. ಇಂಥಾ ಹೊತ್ತಲ್ಲೇ ಸಂತೋಷ್ ಹೈದರಾಬಾದಲ್ಲಿ ಬಾಹುಬಲಿ ಸಿನಿಮಾ ನಿರ್ದೇಶಕ ಎಸ್‌ ಎಸ್ ರಾಜಮೌಳಿಯವರನ್ನು ಭೇಟಿ ಮಾಡಿ ಬಂದಿದ್ದಾರೆ.
ರಾಜಮೌಳಿ ಜಗತ್ತನ್ನೇ ತಮ್ಮೆಡೆಗೆ ಸೆಳೆದುಕೊಂಡ ನಿರ್ದೇಶಕ. ಅಂಥಾ ನಿರ್ದೇಶಕನನ್ನು ಸಂತೋಷ್ ಭೇಟಿಯಾಗಿದ್ದಾರೆ ಅಂದಾಗ ಅಭಿಮಾನಿಗಳಿಗೆ ಕುತೂಹಲ ಮೂಡುವುದು ಸಹಜ. ರಾಜಮೌಳಿ ಸಂತೋಷ್‌ಗೆ ಏನು ಹೇಳಿರಬಹುದು? ಸಂತೋಷ್ ಹೇಳಿಕೊಂಡಿರುವ ಹಾಗೆ ರಾಜಮೌಳಿಯವರು ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಅದರ ಜೊತೆಗೆ ಸಂತೋಷ್‌ಗೆ ಒಂದಷ್ಟು ಸಲಹೆಗಳನ್ನೂ ಕೊಟ್ಟಿದ್ದಾರೆ. ಅವೆಲ್ಲನ್ನೂ ಸಂತೋಷದಿಂದ ಹೇಳಿಕೊಂಡಿದ್ದಾರೆ ಸಂತೋಷ್ ಆನಂದರಾಮ್.
ಅವರ ಜೊತೆಗೆ ಹೊಂಬಾಳೆ ಫಿಲ್ಮ್ಸ್‌ನ  ಕಾರ್ತಿಕ್ ಗೌಡ ಕೂಡ ರಾಜಮೌಳಿಯವರನ್ನು ಭೇಟಿ ಮಾಡಿದ್ದಾರೆ. ಅಂದಹಾಗೆ ಕಾರ್ತಿಕ್ ರಾಜಕುಮಾರ ಸಿನಿಮಾದ ನಿರ್ಮಾಪಕರು. ಇವರಿಬ್ಬರೂ ರಾಜಮೌಳಿಯವರನ್ನು ಭೇಟಿ ಮಾಡಿರುವುದು ಸಹಜವಾಗಿಯೇ ಕನ್ನಡ ಚಿತ್ರರಂಗದ ಕುತೂಹಲವನ್ನು ಕೆರಳಿಸಿದೆ.
-Ad-

Leave Your Comments