ಕಷ್ಟ ಕಾಲದಲ್ಲಿ ಕೈ ಹಿಡಿದವರು ಉಪೇಂದ್ರ . ಮುಂದೆ ಯಾರೋ ? -ಸತ್ಯಜಿತ್

೬೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಖಳನಾಯಕನ ಪಾತ್ರಗಳಿಂದ ಗುರುತಿಸಿಕೊಂಡಿರುವ ಸತ್ಯಜಿತ್ ಈಗ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡು ಕಂಗೆಟ್ಟಿದ್ದಾರೆ. ಸದ್ಯದ ಪರಿಸ್ಥಿತಿ ಏನು ? ಸತ್ಯಜಿತ್ ciniadda.com ಜೊತೆ ಹಂಚಿಕೊಂಡಿದ್ದಾರೆ.

ಇವು ನನ್ನ ನೋವಿನ ದಿನಗಳು. ತುಂಬಿದ ಸಂಸಾರದ ಹೊಣೆ ಹೆಗಲ ಮೇಲಿದೆ. ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದಂತಾಗಿದೆ ನನ್ನ ಪರಿಸ್ಥಿತಿ. ೪-೫  ತಿಂಗಳಿಂದ ಸಂಪಾದನೆ ಇಲ್ಲ. ಸಾಲದ ಶೂಲ ಎದೆಗೆ ಬಿದ್ದಿದೆ. ಅವತ್ತು “ಹಾಯ್ Bros ” ಸಿನಿಮಾ ಶೂಟಿಂಗ್ ಇತ್ತು ಪ್ರಿನ್ಸಿಪಾಲ್ ಪಾತ್ರ ಮುಗಿಸಿ ಮನೆಗೆ ಬಂದೆ. ಸಣ್ಣದಾಗಿ ಶುರುವಾದ ಕಾಲು ನೋವು ನಾಲ್ಕು ದಿನ ಕಳೆಯೋ ಹೊತ್ತಿಗೆ ಯಮಯಾತನೆಯಾಗಿತ್ತು. ಮಹಾವೀರ ಜೈನ್  ಆಸ್ಪತ್ರೆಗೆ ಹೋದ್ವಿ . ರೇಡಿಯೋಲಜಿ ಮತ್ತೊಂದು ಮಗದೊಂದು ಮಾಡಿ ೮೦ ಪರ್ಸೆಂಟ್ ಗ್ಯಾಂಗ್ರಿನ್ ಆಗಿದೆ ಎಡಗಾಲು ತೆಗಿಲೇ ಬೇಕು ಅಂದ್ರು. ಆಪರೇಷನ್ ಗೆ ೬.೪೫ ಲಕ್ಷ ಆಯ್ತು . ಇಷ್ಟೇ ಅಲ್ಲದೆ ಈಗ ಹೊಸ ಕಾಲು ಹಾಕಿಸಿಕೊಳ್ಳಕ್ಕೆ ೩ ಲಕ್ಷ ಬೇಕು. ಅದು ಜರ್ಮನಿದಂತೆ ಹಾಕಿಸಿಕೊಂಡ್ರೆ ಹೆಚ್ಚುಕಡಿಮೆ ನಾರ್ಮಲ್ ಆಗಿ ನಡೆದಾಡಬಹುದು. ಮತ್ತೆ acting ಮಾಡಬಹುದು. ನಮ್ಮದು ಕೂತು ಮಾಡೋ ಕೆಲಸ ಅಲ್ಲವಲ್ಲ ಓಡಾಡ್ಕೊಂಡು ಒದೆತ ತಿನ್ಕೊಂಡು ಮಾಡೋದಲ್ವ ?

ನನ್ನ ಮೂರು ಮಕ್ಕಳಲ್ಲಿ ಯಾರು ಸೆಟ್ಲ್ ಆಗಿಲ್ಲ. ಮಗ ಆಕಾಶ್ ತಬ್ಬಲಿ ಚಿತ್ರದಲ್ಲಿ ನಾಯಕನಾಗಿ ಮಾಡಿದ . ತುಂಬಾ ಚೆನ್ನಾಗಿದ್ದಾನೆ. ಡಾನ್ಸ್ ಚೆನ್ನಾಗಿಮಾಡ್ತಾನೆ. ಆದ್ರೆ ಅವಕಾಶ ಸಿಕ್ಕದೆ ಇನ್ನೂ ಒದ್ದಾಟ. ಮಗಳು ಪೈಲೆಟ್ ಟ್ರೇನಿಂಗ್ ಮಾಡಿ  ಕೆಲಸಕ್ಕಾಗಿ ಅಲೆದಾಡುತ್ತಿದ್ದಾಳೆ. ಇನ್ನೊಬ್ಬ ಮಗ ಸ್ಪೋರ್ಟ್ಸ್ ಟ್ರೈನರ್ ಶಾಲೆಗಳಿಗೆ ಹೋಗಿ ಕೆಲಸ ಮಾಡ್ತಾನೆ . ಅವನಿಗೆ ಸಿಗೋದು ಪುಡಿಗಾಸೆ.ಹೆಂಡತಿ ಮನೆ ನೋಡಿಕೊಳ್ತಾಳೆ. ಇವ್ರೆಲ್ಲರನ್ನ ಸಾಕುವ ಜವಾಬ್ದಾರಿ ಸದ್ಯಕ್ಕೆ ನನ್ನ ಮೇಲೇ ಇದೆ.ಹುಬ್ಬಳ್ಳಿಯಲ್ಲಿ ಕೆ.ಎಸ್.ಆರ್.ಟಿ .ಸಿಯಲ್ಲಿ ಡ್ರೈವರ್  ಆಗಿದ್ದಾಗಲೇ ೧೫-೨೦ ಸಿನಿಮಾ ಮಾಡಿದ್ದೆ .ನನ್ನ ಮೊದಲ ಚಿತ್ರ ನಾನಾಪಾಟೇಕರ್ ಅಭಿನಯದ ಸೂಪರ್ ಹಿಟ್ ಅಂಕುಶ್ . ಅದ್ರಲ್ಲಿ ನಾನು ಮೇನ್ ವಿಲನ್. ಮೂರು  ಸಾವಿರ ಸಂಭಾವನೆ.  ಈಗ ಒಂದು ದಿನಕ್ಕೆ ೨೫ ಸಾವಿರ ತಗೋಳ್ತೀನಿ. ಆದ್ರೆ ಕಾಳಿಲ್ಲದೆ ೨೫ ರೂಪಾಯಿಯೂ ಸಿಗ್ತಾ ಇಲ್ಲ.

upendra_murari3

ಹೆಗಡೆ ನಗರದಲ್ಲಿರುವ ನನ್ನ ಮನೆ ಬಾಡಿಗೆ ಕಟ್ಟೋದಕ್ಕೆ ಆಗದೆ ಉಪೇಂದ್ರ ಅವ್ರಿಗೆ ಫೋನ್ ಮಾಡಿದೆ. ಅವ್ರು ಹೆದರ್ಬೇಡಾ ಅಂದವರೇ ಒಂದು ಲಕ್ಷ ಕಳುಹಿಸಿಕೊಟ್ಟರು. ಅವ್ರ ಸಹಾಯ ಮರೆಯೋಕ್ಕಾಗಲ್ಲ. “ದೊಡ್ಡ ಮನೆ ಹುಡುಗ ” ದಲ್ಲೂ ಆಕ್ಟಿಂಗ್ ಮಾಡಿದ್ದೀನಲ್ಲ ಪುನೀತ್ ಅವ್ರು ಸ್ವಲ್ಪ ಹಣ ಕೊಟ್ರು. ಆಪ್ತಮಿತ್ರ, ವೀರಕನ್ನಡಿಗ , ನಮ್ಮೂರ ರಾಜ,ಮಾಣಿಕ್ಯ ,ರನ್ನ, ದಾಸ ,ಶಿವಮೆಚ್ಚಿದ ಕಣ್ಣಪ್ಪ ಅಂತಿಮ ತೀರ್ಪು ಇನ್ನೂ ಬೇಕಾದಷ್ಟು ಎಲ್ಲಾ ನಾಯಕರ ಜೊತೆಗೂ ನಟಿಸಿದ್ದೀನಿ. ಈಗ ಕಾಲಿಲ್ಲದೆ ಏನ್ ಮಾಡ್ಲಿ ?

ಕಲಾವಿದರ ಸಂಘಕ್ಕೂ ಕೇಳಿಕೊಂಡಿದ್ದೇನೆ ಅವ್ರು ಇನ್ಸೂರೆನ್ಸ್ ಮಾಡಿಸೋದಿಕ್ಕೆ ಪ್ರಯತ್ನ ಮಾಡ್ತಿದ್ದಾರೆ ನೋಡ್ಬೇಕು. ಸರ್ಕಾರ ಸಹಾಯ ಮಾಡಿದ್ರೆ ಜೀವನ ಸ್ವಲ್ಪ ನೇರ್ಪಾಗುತ್ತೆ . ಯಾರಾದ್ರೂ ಸಹಾಯ ಮಾಡೋ ಮನಸಿದ್ರೆ ನನ್ನ ನಂಬರ್ ಕೊಡಿ ದಯವಿಟ್ಟು.

ಇದು ಸತ್ಯಜಿತ್ ಅಳಲು

ಮೊಬೈಲ್ ಸಂಖ್ಯೆ – 9448061424

ಕಲಾವಿದರ ಸಂಘಕ್ಕೆ ಕರೆ ಮಾಡಿದಾಗ ದೊಡ್ಡಣ್ಣ – ನಾವು ಇನ್ಸೂರೆನ್ಸ್ ಮಾಡಿಸೋದಿಕ್ಕೆ ಪ್ರಯತ್ನ ಪಡ್ತಿದೀವಿ. ಸತ್ಯಜಿತ್ ಸಂಘದ ಸದಸ್ಯತ್ವಾನೇ ತಗೊಂಡಿಲ್ಲ. ಒಂದು ವರ್ಷಕ್ಕೆ 5 ಸಾವಿರ ಅಷ್ಟೆ . ನಾವೇನು ಮಾಡೋಣ ಹೇಳಿ? ಆದ್ರೂ ಕಲಾವಿದ ಕಷ್ಟದಲ್ಲಿದ್ದಾನೆ ಕೈಬಿಡಬಾರದು . ಮೀಟಿಂಗ್ನಲ್ಲಿ ಎಲ್ಲರ ಅಭಿಪ್ರಾಯ ತಗೊಂಡು ಏನಾದ್ರೂ ಸಹಾಯ ಮಾಡ್ತೀವಿ.

ವಿಷಯ ನಿಮಗೆ ತಲುಪಿಸಿದ್ದೇವೆ ಮನಸ್ಸಿದ್ದವರು ಮೇಲಿನ ಸಂಖ್ಯೆಗೆ ಕರೆ ಮಾಡಿ ಸಹಾಯ ಮಾಡಬಹುದಾ ನೋಡಿ

-ಭಾನುಮತಿ ಬಿ ಸಿ

-Ad-

Leave Your Comments