ಶುಭಾಪುಂಜ ಮದುವೆಯಂತೆ … ಊರಲ್ಲೆಲ್ಲಾ ಸುದ್ದಿಯಂತೆ

ಆಗತಾನೆ ಮಾಂಗಲ್ಯ ಧಾರಣೆ ಆಗಿ ಹೊರಬಂದ ಮದುಮಕ್ಕಳಂತಿದ್ದ ಶುಭಾಪುಂಜ ,ನಾಗೇಂದ್ರ ಪ್ರಸಾದ್ ಫೋಟೋ ಹರಿದಾಡುತ್ತಿದ್ದ ಹಾಗೆ ಹಾ… ಶುಭಾಪುಂಜ ಮದುವೆ ಆದ್ರಾ ?ಅದೂ ನಾಗೇಂದ್ರ ಪ್ರಸಾದ್ ಜೊತೆ !? ಅಲ್ಲಾ ಅವ್ರಿಗೆ ಮದುವೆ ಆಗಿತ್ತಲ್ಲ . ಎರಡನೇ ಮದುವೆ ಯಾಕ್ ಮಾಡ್ಕೊಂಡ್ರು ನಾಗೇಂದ್ರ ಪ್ರಸಾದ್ ? ಅವರಿಬ್ಬರು ಒಟ್ಟಿಗೆ ಓಡಾಡಿದ್ದು ,ಲವ್ ಗಿವ್ ಏನೂ ಸುದ್ದಿ ಇರ್ಲಿಲ್ವಲ್ಲ . ಇದ್ದಕ್ಕಿದ್ದ ಹಾಗೆ ಇದೇನಪ್ಪ ಕಥೆ ? ಇದು ಸಿನಿಮಾ ಮಂದಿಯ ಹಲವರ ಪ್ರಶ್ನೆ ಆದ್ರೆ ಕೆಲವರು ಅದರಲ್ಲೂ ಸುಧೀಂದ್ರ ವೆಂಕಟೇಶ್ ಇದು ನಿಜದ ಮದುವೆ ಆಗಿರಲಿಕ್ಕಿಲ್ಲ ಯಾವುದಾದ್ರೂ ಸಿನಿಮಾದ ದೃಶ್ಯ ಇರಬಹುದಾ ಚೆಕ್ ಮಾಡಿ ನೋಡಿ ಅಂತಿದ್ರು .

ಇತ್ತ ನಾಗೇಂದ್ರ ಪ್ರಸಾದರ ಹಾಡುಗಳನ್ನ ಸವಿದ , ಶುಭ ಅಭಿನಯ ,ಅಂದ ಚೆಂದಕ್ಕೆ ಬೆರಗಾದ ಅಭಿಮಾನಿಗಳು ಅಯ್ಯಯ್ಯೋ ಅದ್ಯಾಕೆ ಹಂಗ್ ಮಾಡ್ಕೊಂಡರಂತೆ ? ನಮ್ ನಾಗೇಂದ್ರಪ್ರಸಾದ್ ಹೀಗ್ ಮಾಡಬಾರದಿತ್ತಪ್ಪ ಛೆ .. ಛೆ.. ಅನ್ನುವುತ್ತಿರುವಾಗಲೇ ತಡೀರಪ್ಪ ಹೇಳಿದ್ದು ಸುಳ್ಳಾಗಬಹುದು , ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಅಂತ ciniadda.com ನಾಗೇಂದ್ರ ಪ್ರಸಾದ್ ಸಂಪರ್ಕಕ್ಕೆ ಹೋದಾಗ ಅವರಾಗಲೇ ಸುಸ್ತಾಗಿ ಹೋಗಿದ್ರು.

ಆಗಿದ್ದಿಷ್ಟು..

ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯನ ಗುಡಿಯಲ್ಲಿ ಇವತ್ತು ಮದುವೆ ಆಯ್ತು ಆದ್ರೆ ಅದು ನನ್ನ ಇನ್ನೂ ಹೆಸರಿಡದ ಹೊಸ ಚಿತ್ರದ ದೃಶ್ಯ. ಶೂಟಿಂಗ್ ನಡೆಯೋವಾಗ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಅಷ್ಟೆ . ಈಗ ೪೦ ಪರ್ಸೆಂಟ್ ಚಿತ್ರೀಕರಣ ಮುಗಿದಿದೆ. ಪಕ್ಕಾ ಕೌಟುಂಬಿಕ ಸಿನಿಮಾ . ಇಲ್ಲಿ ನಗು ,ದುಃಖ ,ಸುಖ ಎಲ್ಲಾ ಇದೆ. ನನ್ನದೇ ಡೈರೆಕ್ಷನ್ನು.ಚಿತ್ರ ಕಥೆಯೂ ನನ್ನದೇ . ನಾನೇ ನಾಯಕ. ಮತ್ತೊಂದು ಯುವ ಜೋಡಿಯೂ ಇದೆ. ಅಮೃತ ಹಾಗು ದೀಪಕ್ . ಬದುಕೇ ಈ ಚಿತ್ರದ ಜೀವಾಳ ನನ್ನ ಇನ್ಸ್ಪಿರೇಷನ್ ಅಂದ್ರು.
ಜೊತೆಗೆ ಶುಭಾ ಅವ್ರ ಜೊತೆ ಮದುವೆ ಅದ್ರಂತೆ ನಿಜವೆ ? ಅಂತ ಕೇಳಿದವರಿಗೆಲ್ಲಾ ಉತ್ತರ ಹೇಳಿ.. ಹೇಳೀ.. ಸುಸ್ತಪ್ಪಾ ಸುಸ್ತು ಅಂದ್ರು.

ಇದೀಗ ಲೊಕೇಶನ್ ನೈಸ್ ರೋಡ್ಗೆ ಶಿಫ್ಟ್ ಆಗಿದೆ.ಶೂಟಿಂಗ್ ಭರದಿಂದ ಸಾಗುತ್ತಿದೆ . ಇದೆಲ್ಲ ಗಾಳಿ ಆಂಜನೇಯನ ಮಹಿಮೆ ಇದ್ದರೂ ಇರಬಹುದೇನೋಪಾ . ಒಟ್ಟಿನಲ್ಲಿ ಶುಭಾ ವಿವಾಹ ಗಾಳಿಯಲ್ಲಿಆಡಿದ ಗಾಸಿಪ್ ಅಷ್ಟೆ .

ಏನೇ ಇರಲಿ ಸಿನಿಮಾ ಚೆನ್ನಾಗಿ ಮೂಡಿ ಬರಲಿ . ಶುಭವಾಗಲಿ .

-Ad-

Leave Your Comments