ನಟಿ ಸಿಂಧು ಮೆನನ್ ಕುಟುಂಬಸ್ಥರೆಲ್ಲಾ ವಂಚಕರಾ..?

ಮುದ್ದು ಮುಖದ ನಟಿ ಸಿಂಧು ಮೆನನ್. ಅವರು ಸಿನಿನಾದಲ್ಲಿ ಗಳಿಸಿದ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಯಾಕಂದ್ರೆ ಸಿಂಧು ಮೆನನ್ ಕುಟುಂಬ ವಂಚನೆಯಲ್ಲಿ‌ಎಕ್ಸ್ ಫರ್ಟ್ ಎನಿಸುತ್ತಿದೆ. ಕಳೆದ ವಾರ ಬ್ಯಾಂಕ್ ಆಫ್ ಬರೋಡದಲ್ಲಿ ನಕಲಿ ದಾಖಲೆ ಕೊಟ್ಟು 36 ಲಕ್ಷ ಸಾಲ ಪಡೆದಿದ್ರು. ಸಾಲ ಮರು ಪಾವತಿ ಮಾಡದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ರು. ಪೊಲೀಸರು ತನಿಖೆ ನಡೆಸಿದಾಗ ಹಣ ಪಡೆಯಲು ನಕಲಿ ದಾಖಲೆ ಸೃಷ್ಠಿಸಿದ್ದಾರೆ ಅನ್ನೋದು ಸಾಬೀತಾಗಿತ್ತು. ನಟು ಸಿಂಧು ಮೆನನ್ ಸಹೋದರನ ಬಂಧನ ಮಾಡಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದು ಕೂಡ ಮತ್ತೊಂದು ವಂಚನೆ ಪ್ರಕರಣವೇ ಆಗಿದ್ದು ಮನೆ ಮಾಲೀಕ ನಟಿ ಸಿಂಧು ಮೆನನ್ ಕುಟುಂಬಸ್ಥರ ವಿರುದ್ಧ ಯಶವಂತಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೊಸದಾಗಿ ಕಚೇರಿ ಆರಂಭ ಮಾಡ್ಬೇಕು ಎಂದು ಹೇಳಿಕೊಂಡಿದ್ದ ನಟಿ ಸಿಂಧು ಮೆನನ್ ಸಹೋದರ, ಕಟ್ಟಡ ಲೀಸ್ ಗೆ ಪಡೆದು ವಂಚನೆ ಮಾಡಿರುವ ಅರೋಪದಡಿ ದೂರು ‌ದಾಖಲಾಗಿದೆ. ನಟಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್, ಸುಧಾ ರಾಜಶೇಖರ್ ವಿರುದ್ಧ FIR ಮಾಡಲಾಗಿದೆ. ಮನೆ ಮಾಲೀಕನಿಂದ ಕಟ್ಟಡದ ದಾಖಲೆಗಳನ್ನ ಪಡೆದು ನಕಲು ಮಾಡಿ ಬ್ಯಾಂಕ್ ನಲ್ಲಿ ಲೋನ್ ಮಾಡಿಸಿದ್ದಾನಂತೆ ನಟಿ ಸಿಂಧು ಮೆನನ್ ಸಹೋದರ ಮನೋಜ್. ಇದೀಗ ಕಟ್ಟಡ ಮಾಲೀಕ ಗಣೇಶ್ ರಾವ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ ಐ ಆರ್ ಆಗಿದೆ.

ಕಚೇರಿ ಪ್ರಾರಂಭಿಸಲು ಕಮರ್ಷಿಯಲ್ ಜಾಗ ಬೇಕು ಎಂದು ಗಣೇಶ್ ರಾವ್ ರನ್ನು ಸಂಪರ್ಕ ಮಾಡಿದ್ದ ಮನೋಜ್, ಕಟ್ಟಡ ಮಾಲೀಕ ಗಣೇಶ್ ರಾವ್ ರಿಂದ ಪಾನ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಕಟ್ಟಡದ ದಾಖಲೆಗಳು ಪಡೆದುಕೊಂಡಿದ್ದ. ಗಣೇಶ್ ರಾವ್ ಮನೆ ದಾಖಲೆಗಳನ್ನು ಅಡವಿಟ್ಟು ವಿಜಯ್ ಬ್ಯಾಂಕ್ ನಲ್ಲಿ ಸಾಲ ಕೇಳಿ ಅರ್ಜಿ ಹಾಕಿದ್ದ ಮನೋಜ್, ಬಾಡಿಗೆ ಕಟ್ಟಡವನ್ನ ಸ್ವಂತದ್ದು ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ. ಬಳಿಕ 3 ತಿಂಗಳ ಬಳಿಕ ಕಚೇರಿ ಬೇಡ ಹೊಸ ಕಚೇರಿ ಮಾಡಲು ಬ್ಯಾಂಕ್ ಲೋನ್ ಆಗಿಲ್ಲ, ನಿಮ್ಮ ಮಳಿಗೆ ಬೇಡ ಎಂದು ಕಟ್ಟಡದ ಕೀಲಿ ವಾಪಸ್ ನೀಡಿದ್ದ, ಅಗ್ರೀಮೆಂಟ್ ದಾಖಲೆಗಳನ್ನ ಕೇಳಿದಾಗ ತಂದು ಕೊಡುತ್ತೇನೆ ಎಂದು ಸತಾಯಿಸಿ ಕೈ ಎತ್ತಿದ್ದ, ಜೊತೆಗೆ ಬ್ಯಾಂಕ್ ಲೋನ್ ಗೆ ಗಣೇಶ್ ರಾವ್ ಶ್ಯೂರಿಟಿ ಎಂದು ಫಾರಂ 16 ರಲ್ಲಿ ಉಲ್ಲೇಖ ಕೂಡ ಮಾಡಿದ್ದ ಎಂದು ತಿಳಿಸಿದ್ದಾರೆ.

ನಟಿ ಸಿಂಧು ಮೆನನ್ ಸಹೋದರನ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಯಶವಂತಪುರ ಪೊಲೀಸರು. ನಟಿ ಸಿಂಧು ಮೆನನ್ ತಾಯಿ ದೇವಿ ಮೆನನ್, ಅಣ್ಣ ಮನೋಜ್ ಕಾರ್ತಿಕೇಯನ್ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.. ಕೇರಳದಲ್ಲಿ ನಟಿ ಸಿಂಧು ಮೆನನ್ ಸಹೋದರ ಹಾಗೂ ಸ್ನೇಹಿತ ಸೂಪರ್ ಮಾರ್ಕೆಟ್ ನಲ್ಲಿ ಗಲಾಟರ ಮಾಡಿಕೊಂಡಿದ್ದ ಪ್ರಕರಣದ ಬಳಿಕ ಒಂದೊಂದೇ ಪ್ರಕರಣಗಳು ಬಯಲಿಗೆ ಬರುತ್ತಿವೆ. ಅದಕ್ಕೆ ಹಿರಿಯರು ಹೇಳಿರೋದು ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ ಎಂದು. ನಟಿ ಸಿಂಧು ಮೆನನ್ ತನ್ನ ಅಭಿನಯದ ಮೂಲಕ ಗಳಿಸಿದ್ದ ಖ್ಯಾತಿ ಹೊಳೆಯಲ್ಲಿ ಹುಣಸೆ ತೊಳೆದಂತೆ ಆಗ್ತಿದೆ.

ಜ್ಯೋತಿಗೌಡ, ನಾಗಮಂಗಲ

-Ad-

Leave Your Comments