ನಮ್ಮ ಸುತ್ತ ನಿತ್ಯ ನಡೆಯುವ , ನಾವು ಕೇಳಿಯೂ ಕಿವುಡರಂತಿರುವ, ಕಂಡರೂ ತಲೆ ಕೆಡಿಸಿಕೊಳ್ಳದೇ ಉಫ್… ಎಂದು ಗಾಳಿಗೆ ತೂರಿಬಿಟ್ಟ ಸಂಗತಿಗಳಿಗೆ ರಾಚಿದ ಕನ್ನಡಿ “ಶ್ರೀಕಂಠ”.
ನಿರ್ದೇಶನ :
ನಾಗತೀಹಳ್ಳಿ ಚಂದ್ರಶೇಖರ್ ಅವರ ಕಥೆ “ಸ್ಖಲನ” ಆಧರಿಸಿ ಅದರಲ್ಲಿನ ಕೆಲವು ಸಾಲುಗಳನ್ನು ಕೊಂಚ ಮಾರ್ಪಡಿಸಿ ಬಳಸಿಕೊಂಡಿರುವ ಮಂಜು ಸ್ವರಾಜ್ ಚಿತ್ರಕಥೆಯನ್ನು ಚೆನ್ನಾಗಿಯೇ ಹೆಣೆದಿದ್ದಾರೆ.
ಓಟಿಗಾಗಿ ನಮ್ಮ ರಾಜಕಾರಣಿಗಳು ಹೂಡುವ ತಂತ್ರಗಳು, ಅವರಾಟಗಳು ತಿಳಿದ ಮೇಲೂ ಮರೆತು ಮತ್ತೆ ಅಂಥವರನ್ನೇ ಆಯ್ಕೆ ಮಾಡುವ ಜನರ ಮನಃಸ್ಥಿತಿ, ತನ್ನ ಗುರಿಸಾಧನೆಗಾಗಿ ಅಮಾಯಕರನ್ನು ಬಲಿಪಶು ಮಾಡುವ, ಭಾವನಾತ್ಮಕವಾಗಿ ಜನರನ್ನು ಸುಲಿಯುವ ಸೋಗಲಾಡಿಗಳು, ಬೀದಿಬದಿಯ ಅತಂತ್ರ ಬದುಕು ಎಲ್ಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಒರಟರನ್ನು ಕಂಡಾಗ ಅದರಲ್ಲೂ ಅನಾಥರನ್ನು ಕಂಡಾಗ ಅಸಹ್ಯಿಸಿಕೊಳ್ಳುವ ಮನಸ್ಸುಗಳಿಗೆ ಚಿತ್ರ ನೋಡುತ್ತಾ ಅವರೆಡೆಗೆ ಒಂದು ಕನಿಕರ ಹುಟ್ಟುತ್ತದೆ. ತಂದೆ-ತಾಯಿಯ ಆರೈಕೆಯಲ್ಲಿ, ಮಾರ್ಗದರ್ಶನದಲ್ಲಿ ಬೆಳೆದ ಎಷ್ಟೋ ಮಕ್ಕಳು ಅಡ್ಡದಾರಿ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಗುರುವಿಲ್ಲದೆ , ಗುರಿಯಿಲ್ಲದೆ ತುತ್ತುಣಿಸುವ ಕೈಗಳಿಲ್ಲದೆ ಬೆಳೆದ ಜೀವ ಒರಟಾಗುವುದರಲ್ಲಿ ಆಶ್ಚರ್ಯವಿಲ್ಲ. ಇಂಥಾ ಕಥೆಯನ್ನು ಮನಮುಟ್ಟುವ ಹಾಗೆ ನಿರ್ದೇಶಿಸಿದ್ದಾರೆ ಮಂಜು.
ಮತ್ತೊಂದು ಮಗ್ಗುಲಲ್ಲಿ ಪ್ರೀತಿಗೆ ಸೋಲದ ಜೀವವೇ ಇಲ್ಲ ಎಂಬುದನ್ನೂ ದಾಖಲಿಸಿದ್ದಾರೆ. ಹಣ,ಅಧಿಕಾರದ ಬೆಂಬಲವಿಲ್ಲದ ಸಾಮಾನ್ಯನೊಬ್ಬ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದಾಗ ಕಾಣದ ಕೈಗಳ ಕಬಂಧ ಬಾಹುಗಳು ಹೇಗೆ ಅವನನ್ನ ಅದುಮಲು ನಿಲ್ಲುತ್ತವೆ ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ . ಎಷ್ಟೇ ಹೊಡೆತ ಬಿದ್ದರೂ ಸುಲಭಕ್ಕೆ ಚಾಳಿ ಬಿಡದ ಜನರ ಮನಃಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಮೇಜ್ಗೆ ತಲೆಕೆಡಿಸಿಕೊಳ್ಳದೆ ಶಿವರಾಜ್ ಕುಮಾರ್ ಅವರನ್ನ ಪಾತ್ರ ಬೇಡುವಂತ ರಸ್ತೆ ಬದಿಯಲ್ಲೂ ಮಲಗಿಸಿದ್ದಾರೆ. ಪಾತ್ರಗಳನ್ನೂ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. “ಸ್ಖಲನ” ದಂಥ ಪ್ರಯಾಣಿಸುತ್ತಲೇ ಬದಲಾಗುವ ಮನಃಸ್ಥಿತಿಯ ಕಥೆಗೆ ಸಾಮಾನ್ಯನ ಬದುಕಿನ ನಿತ್ಯದ ಸಂಗತಿಗಳನ್ನು ಸೇರಿಸಿ ಸಮರ್ಥವಾಗಿ ನಿರ್ದೇಶಿಸಿದ್ದಾರೆ.
ಅಭಿನಯ
ಸೀದಾ ಸಾದಾ ,ತಗದಾ -ವಗದಾ ಎನ್ನುವಂಥ, ಕಾಸಿಗಾಗಿ ಹಿಂದು ಮುಂದು ನೋಡದೆ ಕೆಲಸ ಮಾಡುವ, ಅಪ್ಪಟ ಒರಟುತನದ ನಡುವೆಯೂ ಕಷ್ಟಕ್ಕೆ ಕರಗುವ, ಅನ್ಯಾಯ, ಸೋಗಲಾಡಿತನದ ವಿರುದ್ಧ ಸಿಡಿದೇಳುವ ಸಾಮಾನ್ಯನ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯ ಮೆಚ್ಚುವಂಥಾದ್ದು. ಪ್ರೀತಿಸಿ ಮದುವೆಯಾಗಲು ಬಂದ ಹುಡುಗಿಗೆ ತನ್ನ ಅತಂತ್ರ ಬದುಕನ್ನು ಬಯಲಾಗಿಸುವಾಗ, ಮದುವೆಯಾದಮೇಲೂ ಬಿಡದ ಒರಟುತನ, ಪ್ರೀತಿಯ ಅರಿವಾದಾಗ ನಡೆಯುವ ರೀತಿ, ಕಾರು ಓಡಿಸುವಾಗ ಮಡುಗಟ್ಟಿದ ದುಃಖದ ನಡುವೆಯೂ ಗುಟ್ಟು ಬಿಡದ ಗಟ್ಟಿತನ. ಹಣಕ್ಕೆ ತಕ್ಕ ಕೆಲಸದ ಬದ್ಧತೆ ಹೀಗೆ ಎಲ್ಲ ಸನ್ನಿವೇಶಗಳಲ್ಲೂ ಶಿವರಾಜ್ಕುಮಾರ್ ನಟನೆಗೆ ಸಲಾಂ ಹೇಳಲೇ ಬೇಕು.
ಚಾಂದಿನಿ– ನಾಯಕಿ ಚಾಂದಿನಿ ನಾಯಕನಿಗೆ ಚಿಕ್ಕವಳಂತೆ ಕಂಡರೂ ಅಭಿನಯದಲ್ಲಿ ಸೊಗಸಿದೆ. ಮುಗ್ದತೆ ಯ ಜೊತೆಗೆ ಪ್ರಬುದ್ಧತೆ ಬೇಡುವ ಸನ್ನಿವೇಶಗಳಲ್ಲೂ ನಟನೆ ಚೆನ್ನವಿದೆ.
ಪತ್ರಕರ್ತನಾಗಿ ಕಾರಿನಲ್ಲಿ ಊರು ಸೇರುವ ಆಸೆಯಿಂದ ಶ್ರೀಕಂಠನ ಜೊತೆ ಕೂತು ಪಟಪಟನೆ ಮಾತನಾಡುವ, ಆಸೆಯಾದರು ತೀರಿಸಿಕೊಳ್ಳಲಾಗದ ಸಣ್ಣ ಸೋಗಿನ, ಆಗ್ಗಾಗೆ ಬರುವ ಸಿಟ್ಟನ್ನು ತೋರಲಾಗದೆ ತಡೆಹಿಡಿವ, ಸತ್ಯ ತಿಳಿದ ಮೇಲೆ ಭಾವುಕನಾಗುವ ಎಲ್ಲ ಸನ್ನಿವೇಶಗಳಲ್ಲೂ ವಿಜಯ್ ರಾಘವೇಂದ್ರ ಇಷ್ಟವಾಗುವ ಕಲಾವಿದ.
ಅಚ್ಯುತ– ನೀವೇನೇ ಕೊಟ್ರು ಸೈ. ಮಾಡಿ ತೋರಿಸ್ತೀನಿ ರೈ.. ರೈ.. ಅನ್ನುವಂಥ ಕಲಾವಿದ. ನಟನೆಯ ಬಗ್ಗೆ ಎರಡು ಮಾತಿಲ್ಲ.
ಥೇಟ್ ಸಿದ್ದರಾಮಯ್ಯನವರಂತೆ ಕಾಣುವ,ಮಾತನಾಡುವ ಹನುಮಂತೇಗೌಡ್ರು, ಜರ್ನಲಿಸ್ಟ್ ಪಾತ್ರಧಾರಿ ಅಶ್ವಿನಿ ಹೀಗೆ ಎಲ್ಲ ಪಾತ್ರಧಾರಿಗಳು ನ್ಯಾಯ ಒದಗಿಸಿದ್ದಾರೆ.
ಸಂಭಾಷಣೆ– ನಮ್ಮ ನಮ್ಮ ಯೋಚನೆ, ಸಾಮಾಜಿಕವಾಗಿ ನಾವು ನಡೆದುಕೊಳ್ಳುವ ರೀತಿ ಎಲ್ಲವನ್ನು ಎಲ್ಲಿಯೂ ಸಡಿಲಗೊಳಿಸದೆ ಹೆಣೆದ ಸಂಭಾಷಣಾಕಾರನಿಗೆ ಮೆಚ್ಚುಗೆ ಸಲ್ಲಲೇ ಬೇಕು.
“ಶ್ರೀಕಂಠ” ಮನೆಮಂದಿಯೆಲ್ಲ ಕೂತು ನೋಡಬೇಕಾದ, ಪ್ರತಿಯೊಬ್ಬರೂ ನೋಡಲೇ ಬೇಕಾದ ಸಿನಿಮಾ.