ಸೃಜನ್ ಲೋಕೇಶ್ ತಮ್ಮ ಹುಟ್ಟುಹಬ್ಬದಂದು ಜನರಿಗಾಗಿ ಕೊಟ್ಟಿದ್ದೇನು ?

ಮಜಾ ಟಾಕೀಸ್ ಅಂದ್ರೆ ಮೊದಲಿಗೆ ಕಣ್ಣ ಮುಂದೆ ಬರುವುದೇ ಸೃಜನ್ ಲೋಕೇಶ್ . ಅಲ್ಲಿ ಪ್ರತಿಭಾವಂತರ ತಂಡವೇ ಇರಬಹುದು . ಆದ್ರೆ ತನ್ನ ಸಮಯ ಪ್ರಜ್ಞೆ ಮತ್ತು ಚಟ್ ಪಟ್ ಮಾತುಗಾರಿಕೆಯಿಂದ ಇಡೀ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವುದು ಸೃಜನ್ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮನೆ ಮಾತಾಗಿರುವ ಸೃಜನ್ ತಮ್ಮ ಹುಟ್ಟುಹಬ್ಬದ ದಿನವೂ ಜನಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ. ನಿನ್ನೆ ತಾನೇ ಉದ್ಘಾಟನೆಯಾದ ತಮ್ಮ ಅಭಿಮಾನಿ ಸಂಘಗಳ ಮೂಲಕ ಕರ್ನಾಟಕದಾದ್ಯಂತ ಒಂದು ಲಕ್ಷ ಗಿಡ ನೆಡುವ ಮಹಾಯಾನಕ್ಕೆ ನಾಂದಿ ಹಾಡಿದ್ದಾರೆ.

ಕುಟುಂಬದ ಹಿನ್ನೆಲೆಯೇ ಅಂಥಾದ್ದು

ಸೃಜನ್ ತಾತ ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರರಂಗಕ್ಕೆ ಅನುಪಮ ಕೊಡುಗೆ ಕೊಟ್ಟವರು. ಡಾ. ರಾಜ್ ಕುಮಾರ್ ಅಂಥಾ ಮಹಾನ್ ಕಲಾವಿದರಿಗೆ ಪ್ರಾತಃಸ್ಮರಣೀಯರಾಗಿದ್ದವರು .(ಸ್ವತಃ ರಾಜ್ ಕುಮಾರ್ ರವರು ಹಲವು ಬಾರಿ ಹೇಳಿಕೊಂಡಿದ್ದರು)ಸುಬ್ಬಯ್ಯ ನಾಯ್ಡು ಅವರ ಗರಡಿಯಲ್ಲಿ ಪಳಗಿದವರು ಕನ್ನಡ ಚಿತ್ರರಂಗದ ಆಸ್ತಿಯಾಗಿ ಬೆಳಗಿದ್ದಾರೆ. ಅವರ ಪುತ್ರ ಕಾಕನಕೋಟೆಯ ಲೋಕೇಶ್, ಸೊಸೆ ಗಿರಿಜಾ ಲೋಕೇಶ್ ಶ್ರೇಷ್ಠ ಕಲಾವಿದರಾಗಿದ್ದು ಗೊತ್ತೇ ಇದೆ.

ಗಿರಿಜಾ ಲೋಕೇಶ್ ಬ್ರಹ್ಮಾ ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರತೀ ವರುಷ  ಅವಕಾಶ  ಕಳೆದುಕೊಂಡ, ಕಷ್ಟದಲ್ಲಿರುವ  ಪ್ರತಿಭಾವಂತ  ಕಲಾವಿದರನ್ನು (ವಯಸ್ಸಾದವ್ರು ) ಗುರುತಿಸಿ ಅವರಿಗೆ ಧನ ಸಹಾಯ ಮಾಡುತ್ತಿದ್ದಾರೆ (ಲಕ್ಷ್ಮೀಬಾಯಿ ಏಣಗಿ , ರೇವತಿ ಕಲ್ಯಾಣ್ ಕುಮಾರ್) ಅದಕ್ಕಾಗಿ ಯಾವ ಪ್ರಚಾರವನ್ನೂ ಬಯಸಿಲ್ಲ.

ತಾತನ ಹಾದಿಯಲ್ಲೇ ನಡೆ…

ಸುಬ್ಬಯ್ಯ ನಾಯ್ಡು ಹೊಟ್ಟೆ ಪಾಡಿಗಾಗಿ ಅಭಿನಯವನ್ನೇ ನೆಚ್ಚಿಕೊಂಡ ಅನೇಕರಿಗೆ ಆಶ್ರಯವಿತ್ತು ಅವಕಾಶಗಳನ್ನು ನೀಡಿ ಬೆಳೆಸಿದ್ದರು. ಆ ಮಹನೀಯನ ಕುಟುಂಬದ ಕುಡಿ ಸೃಜನ್ ಲೋಕೇಶ್ ಕಿರುತೆರೆಯಲ್ಲಿ ರೂಪಿಸಿ, ನಿರೂಪಿಸಿದ  ಕಾಸ್ ಗೆ ಟಾಸ್ ಕಾರ್ಯಕ್ರಮ ಕಡುಕಷ್ಟದಲ್ಲಿ ಬೇಯುತ್ತಿರುವ 30 ನಿರ್ಗತಿಕರ ಪಾಲಿಗೆ ಆಸರೆ ಕಲ್ಪಿಸಿತ್ತು. ಸಿನಿಮಾ ತಾರೆಯರು , ಸುಪ್ರಸಿದ್ಧರನ್ನು ಕರೆಸಿ , ಆಟವಾಡಿಸಿ ಗೆದ್ದ ಹಣ ನೊಂದವರಿಗೆ ಸೇರುವಂತೆ ಮಾಡಿ  ಬಾಳು ಬೆಳಗಿಸಿದ ಅಪರೂಪದ ಕಾರ್ಯಕ್ರಮವಾಗಿತ್ತು. ಜನರನ್ನು ರಂಜಿಸುತ್ತಾ ಬಡವರ ಬದುಕನ್ನೂ ಅರಳಿಸಿತ್ತು ಸೃಜನ್ ತಂಡ.

ಮಜಾ ಟಾಕೀಸ್ ಮೂಲಕ ಬಹುತೇಕ ಜನರ ಮನಸ್ಸನ್ನು ಗೆದ್ದು ಇನ್ನೂರಕ್ಕೂ ಹೆಚ್ಚು ಸಂಚಿಕೆಗಳನ್ನು  ದಾಟಿ ನಾಗಾಲೋಟದಲ್ಲಿರುವ ಸೃಜನ್ ತನ್ನನ್ನು  ಪ್ರೀತಿಸುತ್ತಿರುವ  ಅಭಿಮಾನಿಗಳ ಮೂಲಕ ಸಮಾಜಮುಖಿ ಕೆಲಸಗಳಿಗೂ ಜೊತೆಯಾಗಿದ್ದಾರೆ. ತಾ ಮುಂದು ನಾ ಮುಂದೆಂದು ಅನೇಕರು ಬಂದು ಅಭಿಮಾನಿ ಬಳಗ ಸ್ಥಾಪಿಸುತ್ತೇವೆ ಎಂದಾಗಲೂ ಒಪ್ಪಿರಲಿಲ್ಲ . ಹಾಗಾದರೆ ಸೃಜನ್ ಈ ಬಾರಿಯ ಹುಟ್ಟುಹಬ್ಬದಲ್ಲಿ ಸಂಘಕ್ಕೆ  ಚಾಲನೆ ಕೊಟ್ಟಿದ್ದೇಕೆ ? ಮನಸ್ಸು ಬದಲಿಸಿದ್ದು ಹೇಗೆ ? ಎಲ್ಲದಕ್ಕೂ ಸೃಜನ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ತೇಜಸ್ವಿ ಉತ್ತರಿಸಿದ್ದು ಹೀಗೆ..

ಹಲವಾರು ವರ್ಷಗಳಿಂದ ಬಹಳಷ್ಟು ಮಂದಿ ಸೃಜನ್ ಅಭಿಮಾನಿ ಸಂಘ ಕಟ್ಟುತ್ತೇವೆ ಅಂತ ಬಲವಂತ ಮಾಡುತ್ತಲೇ ಇದ್ದರು. ಸೃಜನ್ ಟೀಮ್ ನಲ್ಲಿ ನಾನು ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದೇನೆ. ನಮ್ಮ ಆಪ್ತವಲಯದಲ್ಲಿ ಇದರ ಬಗ್ಗೆ ಸಾಕಷ್ಟು ಬಾರಿ ಚರ್ಚೆಗಳು ಆಗಿದ್ದವು. ನಾವು ನೀವು ಕೇಳಿದ  ಹಾಗೆ ಬಹುತೇಕ ಜನ ಅಭಿಮಾನಿ ಸಂಘಗಳ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಅದರಿಂದ ಕಷ್ಟಪಟ್ಟು ಸಂಪಾದಿಸಿದ ಹೆಸರು ಹಾಳಾಗಿ ಹೋಗುತ್ತದೆ. ಆ ಕಾರಣದಿಂದ ಸೃಜನ್, ಅಭಿಮಾನಿ ಸಂಘಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಈ ಬಾರಿ ಸುಮಾರು ೨-೩ ವರುಷದಿಂದ ಅಭಿಮಾನಿಗಳ ಸಂಘ ಮಾಡುತ್ತೇವೆ ಅಂತ ಬಂದವರನ್ನೆಲ್ಲ ಪರಿಪರಿಯಾಗಿ ಪರೀಕ್ಷಿಸಿ, ಕೆಲವರನ್ನಂತೂ ಆರು ತಿಂಗಳು ಕಾಯಿಸಿ ಕೊನೆಗೆ ಅವರ ಬದ್ಧತೆ ನೋಡಿ ಒಪ್ಪಿಗೆ ಕೊಟ್ಟಿದ್ದೇವೆ.

ಈಗ ಬೆಂಗಳೂರಿನ ಪ್ರಧಾನ ಕೇಂದ್ರವನ್ನ ಮಾತ್ರ ಉದ್ಘಾಟಿಸಿದ್ದೇವೆ.  ನಮ್ಮ ಬೆಂಗಳೂರಿನ ತಂಡದಲ್ಲಿ ದೀಪಕ್, ದಯಾನಂದ್, ಅಗ್ನಿಸಾಗರ್ ,ಶಿವಕುಮಾರ್ ,ಕುಮಾರ್ ,ಶಿವಣ್ಣ,ಮಂಜು, ಚಿರಂಜೀವಿ ಎಲ್ಲರಿಗು ಸಂಘದ ಉದ್ದೇಶದ ಅರಿವಿದೆ . ಮುಂದಿನ ದಿನಗಳಲ್ಲಿ ಉಳಿದ ಆರು ಕಡೆ ಅಂದ್ರೆ ಚಿತ್ರದುರ್ಗ , ಹಾಸನ ,ಸಕಲೇಶಪುರ , ಮಂಡ್ಯ,ರಾಮನಗರ ,ಬೆಂಗಳೂರು ದಕ್ಷಿಣದಲ್ಲಿ ಶಾಖೆಗಳನ್ನು ತೆರೆಯುತ್ತೇವೆ. ಪ್ರತೀ ಸಂಘದಿಂದ ವರ್ಷಕ್ಕೆ ಹತ್ತು ಸಾವಿರ ಗಿಡ ನೆಟ್ಟು ಬೆಳೆಸುವ ಯೋಜನೆ ಇದೆ. ವಿಶೇಷವಾಗಿ ಹೆದ್ದಾರಿಗಳಲ್ಲಿ ಮರಬೆಳೆಸುವ ಚಿಂತನೆಯು ನಡೆಯುತ್ತಿದೆ.

ನಮ್ಮ ಕನಸು ..

ಹಿಂದೆ ಇದ್ದಂತೆ ಮನೆಯ ಅಕ್ಕಪಕ್ಕ ಹಸಿರು ನಳನಳಿಸಬೇಕು. ನಮ್ಮ ಅಭಿಮಾನಿ ಸಂಘದ ಎಲ್ಲ ಸದಸ್ಯರಿಗೂ ಇದರ ಜವಾಬ್ದಾರಿ ಕೊಡುತ್ತಿದ್ದೇವೆ. ಸೃಜನ್ ಅಭಿಮಾನಿಗಳ ಕೆಲಸವನ್ನು ಮರಗಳೇ ಮಾತಾಡಬೇಕು. ಅಂದ್ರೆ ಒಳ್ಳೆಯ ತಂಪಾದ ವಾತಾವರಣ, ಕಲುಶಿತವಲ್ಲದ ಗಾಳಿ ಜನರಿಗೆ ದೊರೆಯಬೇಕು ಎನ್ನುವುದು ನಮ್ಮ ಆಶಯ. ಸೃಜನ್ ಹುಟ್ಟುಹಬ್ಬದ ಸಮಾರಂಭದಲ್ಲಿ ಕತ್ರಿಗುಪ್ಪೆ ಗೌರ್ನ್ಮೆಂಟ್ ಶಾಲೆಗೆ  ಐದು ಕಂಪ್ಯೂಟರ್ ಕೊಟ್ಟಿದ್ದೇವೆ. ಕರ್ನಾಟಕ ವೆಲ್ಫೇರ್ ಅಸೋಸಿಯೇಷನ್ ಫಾರ್ ಬ್ಲೈಂಡ್ ನಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಐವತ್ತು ಸಾವಿರ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಪಬ್ಲಿಕ್ ಟಾಯ್ಲೆಟ್ ಗಳಲ್ಲಿ ಸ್ವಚ್ಛತೆ ಕಾಪಾಡುವ ಸಿದ್ಧತೆ ಮಾಡಿಕೊಂಡಿದ್ದೇವೆ. ಬಿ ಬಿ ಎಂ ಪಿ ಜೊತೆ ಮಾತುಕತೆ ನಡೆಯುತ್ತಿದೆ. ಅವರ ಪರ್ಮಿಷನ್ ಸಿಕ್ಕಿದ್ರೆ ಈಗಿರುವ ವ್ಯವಸ್ಥೆಗಿಂತ ಉತ್ತಮ ರೀತಿಯಲ್ಲಿ ಮಾಡಿ ತೋರಿಸುತ್ತೇವೆ. ಒಟ್ಟಿನಲ್ಲಿ ಸೃಜನ್ ಅಭಿಮಾನಿಗಳ  ಸಂಘ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳತ್ತಿದೆ.

ಹುಟ್ಟುಹಬ್ಬದಂದು ಸೃಜನ್ ಅಭಿಮಾನಿಗಳು ಕೈಗೊಂಡಿರುವ ಕಾರ್ಯಕ್ಕೆ ಶುಭವಾಗಲಿ. ಹಾಗೆಯೇ ಬಿಡುಗಡೆಗೆ ಸಿದ್ದವಾಗಿರುವ ಸೃಜನ್ ಅಭಿನಯದ ಹ್ಯಾಪಿ ಜರ್ನಿ  ಚಿತ್ರಕ್ಕೆ  ciniadda.com  ಶುಭ ಕೋರುತ್ತಿದೆ.

ಅಂದಹಾಗೆ ಮಜಾಟಾಕೀಸ್ 250ನೇ ಸಂಚಿಕೆ ಇದೇ ಶನಿವಾರ -ಭಾನುವಾರ ಪ್ರಸಾರವಾಗಲಿದೆ. ರಂಜಿಸಲಿಕ್ಕೆ ಪುನೀತ್ ರಾಜ್ ಕುಮಾರ್ ಬರುತ್ತಿದ್ದಾರೆ. ಅಪ್ಪು ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲದ ಹಲವು ಸಂಗತಿಗಳು ಇರಲಿವೆಯಂತೆ. ಈ ಬಾರಿಯ ಮಜಾಟಾಕೀಸ್ ನೋಡಿ ಮಸ್ತ್ ಮಸ್ತ್ ಮಜಾ ಮಾಡಿ.

 

 

 

 

-Ad-

Leave Your Comments