ರಿಷಭ್ ಶೆಟ್ಟಿ “ಕಥಾ ಸಂಗಮ” ಶುರು ಮಾಡಿದ್ದು ಯಾಕೆ?

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಸಿನಿಮಾ ನಿರ್ದೇಶಿಸಬೇಕಿದ್ದ ರಿಷಭ್ ಶೆಟ್ಟಿ ಇದ್ದಕ್ಕಿದ್ದಂತೆ ಏಳು ಕಥೆಗಳನ್ನೊಳಗೊಂಡ ಕಥಾ ಸಂಗಮ ಸಿನಿಮಾ ಘೋಷಿಸಿದ್ದು ಯಾಕೆ? ಅಷ್ಟೊಂದು ಬ್ಯುಸಿ ಇರುವಾಗ ಇಂಥದ್ದೊಂದು ಪ್ರಯೋಗಾತ್ಮಕ ಸಿನಿಮಾಗೆ ಕೈ ಹಾಕುವ ಅನಿವಾರ್ಯತೆ ಏನಿತ್ತು? ಆರಂಭದಲ್ಲಿ ಘೋಷಿಸಿಕೊಂಡ ಹಾಗೆ ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ರಿಷಭ್ ಶೆಟ್ಟಿ ನಿರ್ದೇಶಿಸಬೇಕಿತ್ತು. ಆದರೆ ಅದನ್ನೂ ರಿಷಭ್ ನಿರ್ದೇಶಿಸದೆ ಕಥಾ ಸಂಗಮಕ್ಕೆ ಕೈ ಹಾಕಿರುವುದರಲ್ಲಿ ಒಂದು ಗುಟ್ಟು ಇದೆ.

ರಿಷಭ್ ಶೆಟ್ಟಿ ಸಿನಿಮಾ ವ್ಯಾಮೋಹಿ.  ತಾನೊಂದು ಸಿನಿಮಾ ನಿರ್ದೇಶನ ಮಾಡಬೇಕು ಅನ್ನುವ ಕನಸು ಕಟ್ಟಿಕೊಂಡಿದ್ದ ಉತ್ಸಾಹಿ . ಚೆಂದದೊಂದು ಕತೆ ಕೂಡ ರೆಡಿ ಮಾಡಿಟ್ಟುಕೊಂಡಿದ್ದರು . ರಕ್ಷಿತ್ ಮತ್ತು ರಿಷಭ್ ಕೆಲಸವಿಲ್ಲದೆ ಬೈಕಲ್ಲಿ ಅಡ್ಡಾಡುತ್ತಿರುವಾಗ ಅವರ ಮಧ್ಯೆ ಒಂದು ಒಪ್ಪಂದವಾಗಿತ್ತು. ರಿಷಭ್ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುವುದು. ಆ ಆಸೆ ಕೈಗೂಡಿದ್ದು ಸುಮಾರು ವರ್ಷಗಳ ನಂತರ. ಆ ಹೊತ್ತಿಗಾಗಲೇ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಹೆಸರು ಮಾಡಿದ್ದರು. ಹಾಗಾಗಿ ಇದೇ ಸುಸಂದರ್ಭ ಎಂದುಕೊಂಡು ರಿಷಭ್ ತಮ್ಮ ಬತ್ತಳಿಕೆಯಲ್ಲಿದ್ದ ಕತೆಯನ್ನು ಹೊರತೆಗೆದರು.

ಆ ಕತೆಯೇ ಮುಂದೆ ‘ರಿಕ್ಕಿ’ ಸಿನಿಮಾ ಆಗಿದ್ದು. ದುರಂತ ಎಂದರೆ ಸಿನಿಮಾ ಆಗುವ ಹಂತದಲ್ಲಿ ಕಮರ್ಷಿಯಲ್ ನಿರ್ಮಾಪಕರನ್ನು ಒಪ್ಪಿಸುವುದು ತುಂಬಾ ಕಷ್ಟ. ಅವರು ನಾಯಕನಿಗೊಂದು ಹಾಡು ಬೇಕು ಎಂದರು. ಕಾಮಿಡಿ ಟ್ರ್ಯಾಕ್ ಸೇರಿಸಬೇಕು ಎಂದರು. ಹೀಗಾಗಿ ರಿಷಭ್ ಶೆಟ್ಟಿ ತನ್ನ ಕತೆಯನ್ನು ಬದಲಿಸಬೇಕಾದ ಅನಿವಾರ್ಯತೆ ಹುಟ್ಟಿಕೊಂಡಿತು. ಒಂದು ಮೂಲದ ಪ್ರಕಾರ ರಿಷಭ್ ಶೆಟ್ಟಿ ರಿಕ್ಕಿ ಚಿತ್ರಕತೆಯನ್ನು ಹದಿನೈದು ಬಾರಿ ಬರೆದಿದ್ದಾರಂತೆ. ಆ ಸಂದರ್ಭದಲ್ಲಿ ರಿಷಭ್ ಸಿಕ್ಕಾಪಟ್ಟೆ ಬೇಸರಿಸಿಕೊಂಡಿದ್ರು . ತನಗೆ ಇಷ್ಟ ಬಂದಂತೆ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರಂತೆ.

ಬಹುಶಃ ಆ ಸಂದರ್ಭದಲ್ಲೇ ಇರಬೇಕು ಮುಂದೊಂದು ದಿನ ತಾನು ತನಗಿಷ್ಟ ಬಂದಂತೆ ಸಿನಿಮಾ ಮಾಡೇ ಮಾಡುತ್ತೇನೆ ಅಂತ ಅಂದುಕೊಂಡಿದ್ದು. ಈಗ ಕಿರಿಕ್ ಪಾರ್ಟಿ ಗೆದ್ದ ಮೇಲೆ ರಿಕ್ಕಿಯಿಂದಾದ ಗಾಯವನ್ನು ಗುಣ ಮಾಡುವುದಕ್ಕೋಸ್ಕರವೇ ರಿಷಭ್ ಶೆಟ್ಟಿ ಕಥಾ ಸಂಗಮ ಪ್ರೊಜೆಕ್ಟ್ ಎತ್ತಿಕೊಂಡಿದ್ದಾರಂತೆ. ಮೂಲತಃ ತುಂಬಾ ಪ್ಯಾಷನೇಟ್ ಆಗಿರುವ ರಿಷಭ್ ಈಗ ತುಂಬಾ ಪ್ರೀತಿಯಿಂದ ಕಥಾ ಸಂಗಮ ಸಿನಿಮಾ ಮಾಡುತ್ತಿದ್ದಾರೆ. ತನಗಿಷ್ಟ ಬಂದಂತೆಯೇ ತುಂಬಾ ಆಸ್ಥೆಯಿಂದ ಸಿನಿಮಾ ಮಾಡಲು ಹೊರಟಿದ್ದಾರೆ.

ಕಥಾ ಸಂಗಮದಲ್ಲಿ ಒಟ್ಟು ಏಳು ಕತೆಗಳಿವೆ. ಏಳು ನಿರ್ದೇಶಕರು ಆ ಏಳು ಕತೆಗಳನ್ನು ನಿರ್ದೇಶಿಸಲಿದ್ದಾರೆ. ರಿಷಭ್ ಶೆಟ್ಟಿ ಸದ್ಯ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಸಿನಿಮಾ ಮುಗಿಸಲಿದ್ದು, ಅನಂತರ ಕಥಾ ಸಂಗಮದ ಕತೆಯೊಂದನ್ನು ನಿರ್ದೇಶಲಿದ್ದಾರೆ.  ciniadda .com  ರಿಷಭ್ ಶೆಟ್ಟಿ ಹೊಸ ಪ್ರಯತ್ನಕ್ಕೆ ಶುಭ ಕೋರುತ್ತಿದೆ .

-Ad-

Leave Your Comments