ಕಾಂಗ್ರೇಸ್ ಪಕ್ಷದಿಂದ ಸುದೀಪ್ ಸ್ಪರ್ಧೆ !?

ಸುದೀಪ್ ಮತ್ತೊಂದು ಮಹಾ ಸಾಹಸಕ್ಕೆ ಸಜ್ಜಾಗಿದ್ದಾರಾ ?
ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ,ಕ್ರಿಕೆಟ್ ಆಟಗಾರ…ಹೀಗೆ ವೆರೈಟಿ ವೆರೈಟಿ ರೂಪಗಳಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಹೊಸದೊಂದು ಲೋಕಕ್ಕೆ ಕಾಲಿಡುವ ಸಾಧ್ಯತೆ ಇದೆ. ಎಲ್ಲವೂ  ಹಾಕಿದ ಲೆಕ್ಕಾಚಾರದಂತೆ ನಡೆದರೆ ಕಿಚ್ಚ ಕನ್ನಡಿಗರ ಮುಂದೆ ಆ ಡಿಫರೆಂಟ್ ಗೆಟಪ್‌ನಲ್ಲಿ ರಾರಾಜಿಸುವುದು ಸತ್ಯ.
ಕಿಚ್ಚನ ಹೊಸ ರೂಪ ?
ಇಪ್ಪತ್ತು ವರ್ಷಗಳ ಹಿಂದೆ ಈ ವ್ಯಕ್ತಿಯನ್ನು ಯಾರೂ ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಯಾವಾಗ ಹುಚ್ಚ ಸಿನಿಮಾ ಬಂತೊ, ಅಲ್ಲಿಂದ ಶುರುವಾಯಿತು  ಸುದೀಪ್ ಮೇನಿಯಾ. ಅದೊಂದು ಚಿತ್ರ ಮತ್ತು ಆ ಪಾತ್ರ ಅವರನ್ನು ಕನ್ನಡಿಗರ ಮನದಲ್ಲಿ ಮನೆಮಾಡಿಸಿತು . ಅಲ್ಲಿಂದ ಕಿಚ್ಚ ಹಿಂತಿರುಗಿ ನೋಡಲಿಲ್ಲ. ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ಕೊಡುತ್ತಾ, ತಮಗಿಷ್ಟವಾದ ಪಾತ್ರಗಳನ್ನು ಮಾಡುತ್ತಾ, ನಿರ್ದೇಶನದಲ್ಲೂ ಗೆಲ್ಲುತ್ತಾ ಇಲ್ಲಿವರೆಗೆ ಬಂದು ನಿಂತಿದ್ದಾರೆ. ತೆಲುಗಿನ ‘ಈಗ’ ಸಿನಿಮಾದಿಂದ ದೇಶ ವಿದೇಶಗಳಲ್ಲೂ ಅಭಿಮಾನಿಗಳನ್ನು ಗಳಿಸಿದರು.
 ಸದ್ಯಕ್ಕೆ ಹಾಲಿವುಡ್‌ನ ದಿ ರೈಸನ್ ಸಿನಿಮಾ ಒಪ್ಪಿಕೊಂಡು ಅಭಿಮಾನಿಗಳಲ್ಲಿ ಪುಳಕ ಮೂಡಿಸಿದ್ದಾರೆ. ಬರೀ ಇಷ್ಟೇ ಆಗಿದ್ದರೆ ಕಿಚ್ಚ ಈ ಮಟ್ಟಕ್ಕೆ ಹೆಸರು ಮಾಡುತ್ತಿರಲಿಲ್ಲ. ಸಿನಿಮಾದ ಜೊತೆ ಜೊತೆಗೆ ಇವರು ಕ್ರಿಕೆಟ್ ಪಂದ್ಯಗಳಲ್ಲಿ ತೊಡಗಿಸಿಕೊಂಡರು. ಅದರಲ್ಲಿ ಗೆದ್ದು ಕಪ್ ಕೈಗೆತ್ತಿಕೊಂಡರು.
ಹಾಗೆಯೇ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಮನೆ ಮನವನ್ನು ಮುಟ್ಟಿದರು. ಗೆಳೆಯನಂತೆ, ಮಗನಂತೆ, ಅಣ್ಣನಂತೆ ಎಲ್ಲರ ಪ್ರೀತಿಗೆ ಪಾತ್ರರಾದರು. ಅದೇ ರನ್ನ ಈಗ ಹೊಸ ಗೆಟಪ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರಂತೆ. ಅದೇ ರಾಜಕೀಯದ  ಆಟ.
ಸುದೀಪ್ ರಾಜಕೀಯಕ್ಕೆ ಬರುತ್ತಾರೆ ಅನ್ನೋದು ಇಂದು ನಿನ್ನೆಯ ಕತೆಯಲ್ಲ. ಹಲವು ವರ್ಷಗಳ ಹಿಂದೆಯೇ ಈ ಸುದ್ದಿ ಕೇಳಿ ಬಂದಿತ್ತು. ಚಿತ್ರದುರ್ಗದಿಂದ ಸ್ಫರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಸುದೀಪ್ ಅದನ್ನು ತಳ್ಳಿ ಹಾಕಿದ್ದರು. ಇನ್ನೇನು ವಿಧಾನ ಸಭೆ ಚುನಾವಣೆ ಕಣ್ಣ ಮುಂದಿದೆ. ಈಗ ಮತ್ತೆ ಕಿಚ್ಚನ ರಾಜಕೀಯ ಎಂಟ್ರಿಗೆ ಜೀವ ಬಂದಿದೆ. ಕಾಂಗ್ರೆಸ್ ಪಕ್ಷದಿಂದ ಕಿಚ್ಚ ಎಲೆಕ್ಷನ್ ಮೈದಾನಕ್ಕೆ ಇಳಿಯಲಿದ್ದಾರಂತೆ, ಚಿತ್ರದುರ್ಗ ಸಮೀಪದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಫರ್ಧಿಸುತ್ತಾರಂತೆ, ವಿಷ್ಣು ಸ್ಮಾರಕ ಕುರಿತು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಲು ಹೋದಾಗ ಇದರ ಬಗ್ಗೆ ಮಾತು ಕತೆ ನಡೆದಿದೆಯಂತೆ. ಆದರೆ ಇದ್ಯಾವುದಕ್ಕೂ ಅಧಿಕೃತ ಆಧಾರ ಇಲ್ಲ. ಸುದ್ದಿ ಹಬ್ಬಿರುವುದು ಮಾತ್ರ ನಿಜ.
ವಿಧಾನ ಸೌಧ ಮೆಟ್ಟಿಲು ಏರ‍್ತಾರಾ ?
ಇಲ್ಲಿವರೆಗೆ ಸುದೀಪ್ ಯಾವತ್ತೂ ರಾಜಕೀಯದ ಬಗ್ಗೆ ಮಾತಾಡಿಲ್ಲ. ಕೆಲವು ಪಕ್ಷದ ಸ್ನೇಹಿತರಿಗಾಗಿ ಎಲೆಕ್ಷನ್ ಕ್ಯಾಂಪೇನ್‌ಗೆ ಹೋಗಿದ್ದು ಬಿಟ್ಟರೆ ಖಾದಿ ಜೊತೆ ಗುರುತಿಸಿಕೊಂಡವರಲ್ಲ. ಹಾಗಂತ ಈಗ ಎದ್ದಿರುವ ಸುದ್ದಿಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಕಿಚ್ಚ ಶಾಸಕನಾಗದಿದ್ದರೂ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರದೇ ಒಂದು ಫೌಂಡೇಶನ್ ಮೂಲಕ ಅಸಹಾಯಕರು, ಬಡ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಅದರ ಮುಂದುವರೆದ ಭಾಗ ಅಂದರೆ ಅದು ಶಾಸಕನಾಗುವುದು. ಆ ಬಂಗಾರದ ತಟ್ಟೆ ಅವರ ಮುಂದಿದೆ. ಅದರಲ್ಲಿ ಊಟ ಮಾಡುತ್ತಾರಾ ಇಲ್ಲವಾ ? ಸದ್ಯಕ್ಕದು ಸಸ್ಪೆನ್ಸ್ !
ಎಲ್ಲಾ ಬಿಟ್ಟು ಕಿಚ್ಚ ಮೊಳಕಾಲ್ಮೂರು ಕ್ಷೇತ್ರದಿಂದ ಯಾಕೆ ಸ್ಫರ್ಧಿಸುತ್ತಿದ್ದಾರೆ ? ಈ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಕಾರಣ ಇಲ್ಲಿದೆ. ಆ ಕ್ಷೇತ್ರದಲ್ಲಿ ನಾಯಕ ಸಮಾಜಕ್ಕೆ ಸೇರಿದ ಒಂದು ಲಕ್ಷ ಜನರಿದ್ದಾರೆ. ಸುದೀಪ್ ಕೂಡ ಅದೇ ಸಮಾಜಕ್ಕೆ ಸೇರಿದವರು. ಹೀಗಾಗಿ ಕಿಚ್ಚನ ಗೆಲುವು ಸುಲಭ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಇದನ್ನು ಮೀರಿ ಬೇರೆ ಯಾವ ಕ್ಷೇತ್ರ ಕೇಳಿದರೂ ಕಾಂಗ್ರೆಸ್ ಪಕ್ಷ ಕೊಡಲಿದೆಯಂತೆ. ಇದಕ್ಕೆಲ್ಲಾ ಮೀಡಿಯೇಟರ್ ಯಾರು ಗೊತ್ತೆ ? ಸ್ಯಾಂಡಲ್ವುಡ್  ಕ್ವೀನ್ ರಮ್ಯಾ! ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಚಾರದ ಉಸ್ತುವಾರಿ ಹೊತ್ತುಕೊಂಡಿರುವ ರಮ್ಯಾ, ರಾಹುಲ್ ಗಾಂಧಿಗೆ ಹತ್ತಿರವಾಗಿದ್ದಾರೆ. ಅದಕ್ಕೆ ಕಿಚ್ಚನಿಗೆ ಈ ಪದ್ಮಾವತಿ ಕೈ ಜೋಡಿಸಿದ್ದಾರಂತೆ.
ಕಳೆದ ನಾಲ್ಕು ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತಾ ಬಂದಿದೆ. ಅದು ಕಿಚ್ಚನ ಗೆಲುವಿನ ಹಾದಿಯನ್ನು ಇನ್ನಷ್ಟು ಸುಗಮ ಮಾಡಲಿದೆ. ಆದರೆ ಆ ಕ್ಷೇತ್ರದ ಮೇಲೆ ಲೋಕಲ್ ರಾಜಕೀಯ ನಾಯಕರು ಕಣ್ಣು ಹಾಕಿದ್ದಾರೆ. ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಇಲ್ಲಿಂದ ಅಖಾಡಕ್ಕೆ ಇಳಿಯಲು ತಯಾರಾಗಿದ್ದಾರೆ. ನಟ ಶಶಿಕುಮಾರ್ ಕೂಡ ಖಾದಿ ಜುಬ್ಬಾ ಪೈಜಾಮಿಗೆ ಐರನ್ ಮಾಡಿಟ್ಟುಕೊಂಡಿದ್ದಾರೆ. ಆದರೆ ಸುದೀಪ್ ನಿಜಕ್ಕೂ ರಾಜಕೀಯಕ್ಕೆ ಬರಲು ಮನಸು ಮಾಡಿದರೆ ಇವರೆಲ್ಲ ಸೈಡಿಗೆ ಹೋಗುವುದು ಖಚಿತ. ನಿಜಕ್ಕೂ ಕಿಚ್ಚ ವಿಧಾನ ಸೌಧ ಮೆಟ್ಟಿಲು ಹತ್ತಲು ತಯಾರಾಗುತ್ತಾರಾ ? ಅಥವಾ ಬಣ್ಣದ ಲೋಕ ಸಾಕೆಂದು ಸೈಲೆಂಟಾಗುತ್ತಾರಾ ? ಉತ್ತರಕ್ಕಾಗಿ ಇನ್ನೊಂದು ತಿಂಗಳು ಕಾಯಬೇಕಷ್ಟೇ…
-Ad-

Leave Your Comments