ಅಭಿಮಾನಿಗಳಿಗೆ ಸುದೀಪ್ ಬರೆದ ಪ್ರೀತಿಯ ಪತ್ರ

1996 ಜನವರಿ 31.

ಬ್ರಹ್ಮ ಚಿತ್ರದ ಮೊದಲ ದಿನದ ಚಿತ್ರೀಕರಣ. ನಾನು ನನ್ನ ಜೀವನದಲ್ಲಿ ಮೊತ್ತಮೊದಲ ಬಾರಿಗೆ ಬಣ್ಣ ಹಚ್ಚಿಕೊಂಡ ದಿನ. ಈ ಅದ್ಭುತ ಸಿನಿಮಾ ಜಗತ್ತಿಗೆ ಕಾಲಿಟ್ಟ ದಿನ ಅದು.

ಅದಕ್ಕೂ ಮುನ್ನ ನನ್ನ ತಂದೆಯ ಜೊತೆ, ಸ್ನೇಹಿತರ ಜೊತೆ ಚಿತ್ರೀಕರಣದ ಸ್ಥಳಕ್ಕೆ ಬಂದಾಗ ಆಕ್ಷನ್ ಕಟ್ ಎಂಬ ಪದಗಳನ್ನು ಕೇಳುತ್ತಿದ್ದೆ. ಆದರೆ ನಾನೂ ಆ ಆಕ್ಷನ್ ಕಟ್‌ನ ಭಾಗವಾದ ಕ್ಷಣವಿದೆಯಲ್ಲ, ಅದೊಂದು ಅನೂಹ್ಯ ಅನುಭವ. ಅವತ್ತು ತುಂಬಾ ಸರಳವಾದ ದೃಶ್ಯವನ್ನು ನಾನು ಎದುರಿಸಬೇಕಿತ್ತು. ಅಣ್ಣನ ಪಾತ್ರ ಮಾಡಿದ್ದ ಅಂಬರೀಶ್ ಮಾಮ ಅವರಿಂದ ಆಶೀರ್ವಾದ ಪಡೆಯುವ ದೃಶ್ಯ. ಆದರೆ ನನಗೆ ಮಾತ್ರ ಅದು ಸರಳ ದೃಶ್ಯವಾಗಿರಲಿಲ್ಲ. ತುಂಬಾ ಟೇಕ್‌ಗಳನ್ನು ತೆಗೆದುಕೊಂಡೆ. ಅವತ್ತು ಬಹುಶಃ ಅನೇಕರು ನನ್ನ ಮೇಲೆ ಅನುಮಾನ ಪಟ್ಟಿರಬಹುದು. ಅಂದಿನಿಂದ ಇವತ್ತಿನವರೆಗಿನ ಪಯಣದಲ್ಲಿ ನಿಧಾನಕ್ಕೆ ಎಲ್ಲವೂ ಸರಿ ಹೋಯಿತು.

22 ವರ್ಷ ಸರಿದು ಹೋಗಿದೆ. ಸಿನಿಮಾಗೆ ಹೇಗೆ ಧನ್ಯವಾದ ಸಮರ್ಪಿಸಲಿ ಎಂದು ನನಗೆ ಗೊತ್ತಾಗುತ್ತಿಲ್ಲ. ನನ್ನ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹ ನಟ- ನಟಿಯರು, ಪ್ರದರ್ಶಕರು, ವಿತರಕರು, ಮಾಧ್ಯಮ, ನನ್ನ ಸಹೋದ್ಯೋಗಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವು ನನ್ನ ಈ ಪಯಣದಲ್ಲಿ ಭಾಗಿಯಾಗಿದ್ದೀರಿ. ಬೇಷರತ್ ಆಗಿ ನನ್ನನ್ನು ಸಹಿಸಿಕೊಂಡ ಮತ್ತು ನನ್ನನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞ.

ಸಿನಿಮಾ ಅನ್ನುವುದು ನನ್ನ ಬದುಕಿನಲ್ಲಿ ಘಟಿಸಿದ ಅತ್ಯಂತ ಸುಂದರ ಸಂಗತಿ. ಮುಖ್ಯವಾಗಿ ಇವತ್ತು ನಾನು ಏನಾಗಿದ್ದೇನೋ ಅದು ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆ. ಥ್ಯಾಂಕ್ಯೂ.

ನನ್ನ ಜೊತೆ ನಿಂತಿದ್ದಕ್ಕೆ ನನ್ನ ಕುಟುಂಬಕ್ಕೆ ನಾನು ಕೃತಜ್ಞತೆ ಸಲ್ಲಿಸಬೇಕು. ಅವರು ನನಗಾಗಿ ಮಾಡಿದ ತ್ಯಾಗ ಬೆಲೆ ಕಟ್ಟಲಾಗದ್ದು.

ನಾನೂ ಸೋತು ಕೂತ ಕ್ಷಣಗಳಲ್ಲೆಲ್ಲಾ ನನ್ನ ಜೊತೆಯಾದ ಚಿತ್ರರಂಗಕ್ಕೆ ನಾನು ಯಾವತ್ತೂ ಆಭಾರಿ ಮತ್ತು ಚಿತ್ರರಂಗದ ಸೇವೆಗೆ ನಾನು ಸದಾಸಿದ್ಧ.

ತುಂಬು ಪ್ರೀತಿ ಮತ್ತು ಅಪ್ಪುಗೆ

ಕಿಚ್ಚ ಸುದೀಪ

-Ad-

Leave Your Comments