ಅಭಿಮಾನಿಗಳನ್ನು ನೊಂದವರ ಪರವಾಗಿಸಲು ಹೊರಟ ಸುದೀಪ್ ಪತ್ರ !

ನಮಸ್ತೇ ಗೆಳೆಯರೇ,
ಈ ವರ್ಷಗಳಲ್ಲಿ ನೀವು ನನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದನ್ನು ನೋಡಿ ಖುಷಿ ಪಟ್ಟಿದ್ದೇನೆ. ನಾನೇ ಪುಣ್ಯವಂತ ಎಂದುಕೊಂಡಿದ್ದೇನೆ. ಕಳೆದ ಎರಡು ದಶಕಗಳಿಂದ ನೀವೆಲ್ಲರೂ ನನಗೆ ತೋರಿಸಿದ ಬೇಷರತ್ ಪ್ರೀತಿಗೆ ನಾನು ಋಣಿ. ಇದಕ್ಕೆ ಬದಲಾಗಿ ನಾನು ಪ್ರೀತಿಯನ್ನಷ್ಟೇ ನೀಡಬಲ್ಲೆ ಹೊರತು ಬೇರೇನೂ ಕೊಡುವುದಕ್ಕೆ ಸಾಧ್ಯವಿಲ್ಲ. ನನ್ನ ಕಡೇ ಉಸಿರಿನವರೆಗೂ ಆ ಪ್ರೀತಿ ಹಾಗೇ ಇರುತ್ತದೆ.

ಬಹಳಷ್ಟು ಮಂದಿ ಈ ವರ್ಷಗಳಲ್ಲಿ ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕೇಕ್‌ಗಳು, ಹಾರಗಳು ಮತ್ತಿತರ ವಸ್ತುಗಳಿಗಾಗಿ ವ್ಯಯಿಸುವುದನ್ನು ನಾನು ಗಮನಿಸಿದ್ದೇನೆ. ಅನೇಕರು ನನ್ನನ್ನು ನೋಡಲೆಂದು ತಾವು ದುಡಿದ ಹಣವನ್ನು ಖರ್ಚು ಮಾಡಿ ಬಂದಿದ್ದು ನನಗೆ ಗೊತ್ತಿದೆ. ಹುಟ್ಟುಹಬ್ಬದಂದು ರಸ್ತೆಯನ್ನು, ಬೀದಿಯನ್ನು ಮತ್ತು ನನ್ನ ಮನೆಯನ್ನು ಸಿಂಗರಿಸಲು ಹಲವಾರು ಮಂದಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಾರೆ.
ನಾನು ನಿಮ್ಮೆಲ್ಲರ ಹತ್ತಿರ ಮನವಿ ಮಾಡಿಕೊಳ್ಳುವುದಿಷ್ಟೇ. ನೀವು ಖರ್ಚು ಮಾಡುವ ಆ ಎಲ್ಲಾ ಹಣವನ್ನು ಅವಶ್ಯಕತೆ ಇರುವವರಿಗೆ ನೀಡಿ. ಒಂದು ದಿನದ ಊಟಕ್ಕಾಗಿ ಒದ್ದಾಡುವವರ ಹಸಿವು ನೀಗಿಸುವುದಕ್ಕೆ ಈ ಹಣವನ್ನು ಬಳಸಿ. ನೀವು ಕೇಕು ಮತ್ತು ಸಿಂಗಾರಕ್ಕೆ ಬಳಸುವ ಆ ಹಣದಿಂದ ಅದೆಷ್ಟೋ ಮನೆಗಳನ್ನು ಉಳಿಸಬಹುದು. ಅದೆಷ್ಟೋ ಜೀವಗಳನ್ನು ಉಳಿಸಬಹುದು. ನನ್ನನ್ನು ನಂಬಿ.
ಇದು ನೀವು ನನಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ.

ಸಂಭ್ರಮಿಸುವ ಅತ್ಯುತ್ತಮ ವಿಧಾನ ಕೂಡ ಇದೇ ಅಂತ ನಾನಂದುಕೊಂಡಿದ್ದೇನೆ.
ಇದು ಅವಶ್ಯಕತೆಯಲ್ಲಿರುವ ನಮ್ಮ ಜನಕ್ಕೆ ನಾವು ಮಾಡಬಹುದಾದ ಪುಟ್ಟ ಸಹಾಯ.
ಇನ್ನು ಮುಂದೆ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ಅವತ್ತು ನಾನು ಮನೆಯಿಂದ ದೂರ ಇರುತ್ತೇನೆ. ಬಹುಶಃ ನಾನು ನಿಮಗೆ ಏನು ಮಾಡಲು ಹೇಳಿದ್ದೇನೋ ಅದನ್ನೇ ಮಾಡುತ್ತಿರುತ್ತೇನೆ. ನನ್ನ ಈ ಮಾತನ್ನು ನೀವೆಲ್ಲರೂ ಗೌರವಿಸುತ್ತೀರಿ ಅಂತಂದುಕೊಂಡಿದ್ದೇನೆ.

ಬದುಕು ಕೊಟ್ಟಿರುವ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳೋಣ. ಒಂದಷ್ಟು ಮಂದಿಯ ಮುಖದಲ್ಲಿ ನಗು ಮೂಡುವಂತೆ ಮಾಡೋಣ. ಒಂದ್ಸಲ ನಮ್ಮ ಸುತ್ತಮುತ್ತ ನೋಡಿದರೆ ಸಾಕು, ನೆರವಿನ ಅವಶ್ಯಕತೆ ಇರುವ ಹಲವಾರು ಮಂದಿ ನಮ್ಮ ಕಣ್ಣಿಗೆ ಬೀಳುತ್ತಾರೆ. ಅವರ ನೆರವಿಗೆ ಧಾವಿಸೋಣ. ಆ ಕೈಗಳನ್ನು ಹಿಡಿಯೋಣ.
ಮುಂದೊಂದು ದಿನ, ಒಂದೇ ಒಂದು ಬೆಳಕಿನ ಕಿರಣಕ್ಕಾಗಿ ಹಂಬಲಿಸುವ ಹೊತ್ತಲ್ಲಿ, ಬೆಳಕು ನಿಮ್ಮ ಮೇಲೆ ಬಿದ್ದು ಹೊಳೆಯುವುದನ್ನು ನೀವು ಕಾಣುತ್ತೀರಿ.

ತುಂಬು ಪ್ರೀತಿಯಿಂದ
ಕಿಚ್ಚ

-Ad-

Leave Your Comments