ಶುರುವಾಯ್ತು ಸ್ಯಾಂಡಲ್ ವುಡ್ -ಬಾಲಿವುಡ್ ಫೈಟ್ ! ಬಗ್ಗುಬಡೀತಾರಾ ಕಿಚ್ಚ ಸುದೀಪ್ ?

ಇದೊಂಥರಾ ಬಾಲಿವುಡ್- ಸ್ಯಾಂಡಲ್ ವುಡ್ ಫೈಟ್ ಅಂತಾನೆ ಹೇಳಬಹುದು. ಯಾಕಂದ್ರೆ ಇಲ್ಲಿ ಸೆಣಸಾಟ ನಡೀತಿರೋದು ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ಮಿಥುನ್ ಚಕ್ರವರ್ತಿ ಹಾಗು ಸ್ಯಾಂಡಲ್ ವುಡ್ ಅಷ್ಟೇ ಅಲ್ಲ ಟಾಲಿವುಡ್ ,ಬಾಲಿವುಡ್ ನಲ್ಲೂ ನಟಿಸಿ ಅಭಿನಯ ಚಕ್ರವರ್ತಿಯಾಗಿರೋ ಕಿಚ್ಚ ಸುದೀಪ್  ನಡುವೆ . ಅಂದಹಾಗೆ ಈ  ಟಗಾಫರ್ ನ ಸೆರೆಹಿಡಿತಿರೋದು ಪ್ರೇಮ್ ನಿರ್ದೇಶನದ “ದಿ ವಿಲನ್” ಚಿತ್ರಕ್ಕಾಗಿ.

ಎಲ್ಲಪ್ಪಾ ಶೂಟಿಂಗ್ ?

“ದಿ ವಿಲನ್ ” ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಕನ್ನಡಕ್ಕೊಂದು ಅದ್ದೂರಿ ಸಿನಿಮಾ ಕೊಡ್ಬೇಕು ಅನ್ನೋ ಮಹಾದಾಸೆಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಕನ್ನಡದ ಸೂಪರ್ ಸ್ಟಾರ್ ಗಳಾದ ಶಿವಣ್ಣ , ಸುದೀಪ್ರನ್ನ ಒಟ್ಟಿಗೆ  ಸೇರಿಸಿದ್ದಾರೆ. ಅಷ್ಟೇ ಅಲ್ಲ ” ದಿ ವಿಲನ್” ಗಾಗಿ ಬಾಲಿವುಡ್ ನ ಮಿಥುನ್ ಚಕ್ರವರ್ತಿಯನ್ನೇ ಕರೆ ತಂದಿದ್ದಾರೆ . ಅಂದ ಮೇಲೆ ಸಿನಿಮಾ ಭರ್ಜರಿಯಾಗೇ ಮಾಡಬೇಕಲ್ಲ . ಒಂದು ಹಂತದ ಚಿತ್ರೀಕರಣ ಮುಗಿದ  ನಂತರ ಸುದೀಪ್ -ಮಿಥುನ್ ನಡುವೆ ನಡೆಯುವ ಮೆಗಾ  ಫೈಟಿಂಗ್ ಸೀನ್ ಗಾಗಿ ಬೆಳಗಾವಿ -ಮಹಾರಾಷ್ಟ್ರದ ನಡುವೆ ಇರುವ ಗಡಿ ಭಾಗವನ್ನ ಆಯ್ಕೆ ಮಾಡಿಕೊಂಡಿದ್ದಾರೆ . ಅದಕ್ಕಾಗಿ ವಿಶೇಷ ಸೆಟ್ ಕೂಡ ಹಾಕಿಸಿದ್ದಾರೆ.

ಮಹಾರಾಷ್ಟ್ರಕ್ಕೆ ನಾಲ್ಕೇ ಹೆಜ್ಜೆನಾ ?

ಗಡಿ ಅಂದ್ರೆ ಹಾಗೇನೇ ಗಡಿ ರೇಖೆಯ ಒಂದು ಹೆಜ್ಜೆ ಹಿಂದೆಯಾದರೆ ನಮ್ಮೂರು  ಮುಂದೆ ಇಟ್ಟರೆ ಮಹಾರಾಷ್ಟ್ರ . ಬೆಳಗಾವಿಯ ಅಥಣಿ ಬಳಿ ಕೇವಲ ನಾಲ್ಕೆಜ್ಜೆ ದಾಟಿದರೆ ಮಹಾರಾಷ್ಟ್ರ ಮುಟ್ಟಬಹುದಾದ ಗಡಿಯಲ್ಲಿ “ದಿ ವಿಲನ್ ” ಬಡಿದಾಟದ ದೃಶ್ಯಗಳನ್ನ ಚಿತ್ರೀಕರಿಸುತ್ತಿದ್ದಾರೆ ಪ್ರೇಮ್ .

ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಭಾಗ್ಯ !

ಹೆಬ್ಬುಲಿ ಸಕ್ಸಸ್ ಯಾತ್ರೆಯಲ್ಲಿ ಬೆಳಗಾವಿಗೆ ದೀಪಣ್ಣ  ಬರಲಿಲ್ಲ ಅಂತ ಅಭಿಮಾನಿಗಳು ಗೋಳಾಡಿದ್ದರು . “ದಿ ವಿಲನ್ ” ಶೂಟಿಂಗ್ ಬೆಳಗಾವಿ ಸಮೀಪದಲ್ಲೇ ಹತ್ತು ದಿನ ನಡೆಯೋದ್ರಿಂದ ಅಭಿಮಾನಿಗಳಿಗೆ ಕಿಚ್ಚನನ್ನ ಕಣ್ ತುಂಬಿಕೊಳ್ಳುವ ಭಾಗ್ಯ ಬಂದಿದೆ. ಭಾರೀ ಸಂಖ್ಯೆಯಲ್ಲಿ ಜನ ಶೂಟಿಂಗ್ ನೋಡಲು ಸೇರುವ ಸಾಧ್ಯತೆ ಇರೋದ್ರಿಂದ ಹತ್ತು ದಿನಗಳ ಕಾಲವೂ ಪೊಲೀಸ್ ಬಿಗಿ ಭದ್ರತೆ ಇರಲಿದೆ.

ಅಂದಹಾಗೆ “ದಿ ವಿಲನ್” ಬೆಳಗಾವಿಯಲ್ಲಿ ಫೈಟಿಂಗ್ ಸೀನ್ ಮುಗಿಸಿ ಲಂಡನ್ ಗೆ ಹಾರಲಿದ್ದಾನೆ .

-Ad-

Leave Your Comments