ಮಂದಿರದಲ್ಲಿ “ರಂಗ”ಣ್ಣನನ್ನೇ ಮಖಾಡೆ ಮಲಗಿಸಿದ ಮುಕುಂದ-ಮುರಾರಿ

‘ಉಪ್ಪಿಗಿಂತ ರುಚಿ ಬೇರೆ ಇಲ್ಲ ಒಪ್ಪಿಕೊಂಡೋರು ದಡ್ಡರಲ್ಲ’ ಅಂದು ತನ್ನ ಪ್ರೇಕ್ಷಕರನ್ನು ಬುದ್ಧಿವಂತರೆಂದ , ನಿರಂತರ ಹುಡುಕಾಟದ ಉಪೇಂದ್ರ ಒಂದು ಕಡೆ,” ದುರಂಹಕಾರಿ ” ಪಟ್ಟ ಕಟ್ಟಿದವರಿಗೆ ಕ್ಯಾರೇ ಅನ್ನದೆ ತನ್ನ ಪ್ರತಿಭೆಯನ್ನೇ ಪಣಕ್ಕಿಟ್ಟು ಬೆಳೆದ ಸುದೀಪ್ ಮತ್ತೊಂದು ಕಡೆ . ಇವರಿಬ್ಬರ ಎದುರಿಗೆ ಬಹುತೇಕ ರಾಜಕಾರಣಿಗಳ ನೀರಿಳಿಸುವ, ಸೂಟುಬೂಟಿನ ಹಂಗಿಲ್ಲದೆಯೂ ತೆರೆಯಲ್ಲಿ ಆವರಿಸಿಕೊಂಡ  ಪ್ರಜ್ಞಾವಂತ (ಇತ್ತೀಚಿಗೆ ಪ್ರಜ್ಞೆ ಇಳಿಮುಖ ) ಪತ್ರಕರ್ತ ಎಚ್ ಆರ್ ರಂಗನಾಥ್ ಉರುಫ್ ರಂಗಣ್ಣ . ಇದು ”ರಂಗಮಂದಿರ”

ಸಾಮಾನ್ಯವಾಗಿ ಸಿನಿಮಾದವರು ಅಂದ್ರೆ ಅಯ್ಯೋ ಯಾರೋ ಬರಕೊಟ್ಟಿದ್ ಸ್ಕ್ರಿಪ್ಟ್ ಹೇಳೋದ್ರಲ್ಲಿ ಏನ್ ಮಹಾ ಬುದ್ಧಿವಂತಿಕೆ ಇದೆ ? ಯಾವುದಾದ್ರೂ ಸೋಶಿಯಲ್ ಇಶ್ಯೂ ಬಗ್ಗೆ ಕೇಳಿ ಬೆಬ್ಬೆ ಹೊಡೀತಾರೆ . ಈ ರೀತಿಯ ಮಾತುಗಳು ಮಾಧ್ಯಮ ವಲಯದಲ್ಲಂತೂ ಸರ್ವೇ ಸಾಮಾನ್ಯ . ಸಿನಿಮಾದವರನ್ನ ಸಂದರ್ಶನ ಮಾಡೋಕೆ ಎಡಿಟರ್ಗಳು ಬರೋದು ಅಷ್ಟರಲ್ಲೇ ಇದೆ.

ಹೆಚ್ಚು ಕಡಿಮೆ ಇಂಥದ್ದೇ ಮನಸ್ಥಿತಿಯಲ್ಲಿ ಕಾರ್ಯಕ್ರಮ ಶುರುಮಾಡಿದ ಶ್ರೀಮಾನ್ ರಂಗನಾಥ್ ಮೊದಲಲ್ಲೇ ಈ ರೀತಿಯ ಸಂದರ್ಶನ ನಾನು ಮಾಡುವುದಿಲ್ಲ ಆದರೂ ಹಾಕಿ ಬಿಟ್ಟಿದ್ದಾರೆ ಬಂದಿದ್ದೇನೆ ಅಂತಾನೆ ಹೇಳಿದ್ರು. ಸರೀನಪ್ಪಾ ಏನೀಗ ಮಾಡಿ ಯಾವ ಅಜೆಂಡಾ  ಇಲ್ಲದೆ ತಾವು ಇದನ್ನ ಮಾಡ್ತಿಲ್ಲ ಮಾಡಿ  ನೋಡೋಣ ಅಂತ ಅವರಂತೆ ವಿಶ್ಲೇಷಣಾ ಮನೋಭಾವದವರು ಅಂದುಕೊಂಡರೆ , ಅವ್ರು ಹೇಳಿದ್ದಕ್ಕೆಲ್ಲಾ ಗೋಣು ಆಡಿಸುವ ಮಂದಿ ಈಗ ನೋಡ್ತಾ ಇರಿ ನಮ್ ರಂಗಣ್ಣ ಹೆಂಗ್ ಬಡಿತಾರೆ ಇಬ್ಬರನ್ನು ಅಂತ ರಣೋತ್ಸಾಹದಲ್ಲಿ ಟೀವಿಗೆ ಕಣ್ಣು ನೆಟ್ಟಿದ್ದರು.

ಸರಿ .ಸಾಮಾನ್ಯವಾಗಿ ಅತಿಥಿಗಳನ್ನು ಪರಿಚಯ ಮಾಡಿಕೊಡಬೇಕು ಈ ಪ್ರಕರಣದಲ್ಲಿ ಅದರ ಅವಶ್ಯಕತೆ ಇಲ್ಲ.ಆದರೆ ನಿಮ್ಮ ಮುಂದೆ ಇಬ್ಬರನ್ನು ಹಾಜರು ಪಡಿಸಲೇಬೇಕು  ಎಂದ ಪ್ರಖಾಂಡ ಪತ್ರಕರ್ತರು ಅವರಿಬ್ಬರನ್ನು ಕಟಕಟೆಯಲ್ಲಿ ನಿಲ್ಲಿಸಿ ನೋಡಿ ಹ್ಯಾಗ್ ಬಡಿತೀನಿ ನಿಮ್ಮ ಹೀರೊಗಳನ್ನ ಅನ್ನುವಂಥ ಬಿಲ್ಡ್ ಅಪ್ ಅದ್ಯಾಕೆ ಕೊಟ್ಕೊಂಡ್ರೋ ಅವ್ರಿಗೇ ಗೊತ್ತು. ಪ್ರಕರಣ ಅನ್ನುವುದಿಕ್ಕೆ ಅಂಥಾ ಯಾವ ಘಟನೆಯೂ ನಡೆದಿರಲಿಲ್ಲ.

ದೇವರನ್ನ ನಂಬುತ್ತೀರಾ?

ಮೊದಲ ಪ್ರಶ್ನೆಗೆ ಉಪೇಂದ್ರ -“ಸಿನಿಮಾದಲ್ಲಾ ? ರಿಯಲ್ಲಾಗಾ ?   ದೇವರು ಅಂದ್ರೆ ಏನು ಅನ್ನೋದು ಮೊದಲು ಚರ್ಚೆಯಾಗಬೇಕು” ಅಂದುಬಿಟ್ಟು ಪ್ರತಿ ಅಸ್ತ್ರ ನಮ್ ಹತ್ರಾನು ಇದೆ ಸ್ವಾಮಿ ಅನ್ನುವಂತ ಸೂಚನೆ ಕೊಟ್ರಲ್ಲ.

ಸುದೀಪ್ ಮಾತ್ರ ಕೇಳಿದ ಪ್ರಶ್ನೆಗೆ ಕ್ಲಿಯರ್ ಕಟ್ ಆಗಿ ದೇವ್ರು ಅಂದ್ರೆ ನನ್ನ ಪಾಲಿಗೆ ನನ್ನ ತಂದೆ ತಾಯಿ ಅಂದ್ರಪ್ಪ.

ಅಲ್ಲಲಲಲ್ಲಾ ..ರಾಘವೇಂದ್ರಸ್ವಾಮಿ  ಪಾತ್ರ ಮಾಡ್ಬೇಕಾದ್ರೆ ರಾಜಕುಮಾರ್ಗೆ ಹೆಂಗೆಗೆ ಆಯ್ತು ಅಂತ ಅವ್ರು ಹೇಳಿದ್ದನ್ನ ಕೇಳಿದ್ದೀವಿ . ನಿಮಗೂ ಆ ಥರ ವೈಬ್ರೇಷನ್ನು ಏನಾರ ಆಯ್ತಾ ?

“ದೇವ್ರು ಅಂದಮೇಲೆ ನಂಗೆ ಎಲ್ಲ ಗೊತ್ತಿರಬೇಕಲ್ಲ . ಇವ್ರು ಹೇಳಕ್ಕಿಂತ ಮುಂಚೆನೇ ಗೊತ್ತಿರ್ಬೇಕು ” ಸುದೀಪ್ ಕೊಟ್ಟ ಉತ್ತರಕ್ಕೆ ರಂಗಣ್ಣ ಕಕ್ಕಾಬಿಕ್ಕಿಯಾಗಿದ್ದು  ಅವರ ಹ್ಹೆ ..ಹ್ಹೆ.. ತೋರಿಸ್ತಪ್ಪ.

ಹೀರೋಗಳು ಕೆಲವು ಸಾರಿ ದೇವ್ರಿಗಿಂತ ಮೇಲೆ ಅನ್ನೋ ಥರ ಆಡ್ತಾರಪ್ಪ ಯಾಕೆ ?

ಹೀರೋಗಳು ಅಂದ್ರೆ ? ಮತ್ತೆ ಪ್ರಶ್ನೆಗೇ ಪ್ರಶ್ನೆ ಎಸೆದ ಉಪೇಂದ್ರ ಅದ್ಸರಿ ಒಂದು ಮಾತು ಕೇಳ್ದೆ ಸಿನಿಮಾದವರ ಬಗ್ಗೆ ನಿಮಗೆ ಅಷ್ಟಕಷ್ಟೆ ಅಂತಲ್ಲ ಯಾಕೆ ? ಸ್ವಲ್ಪ ಹೇಳಿ ಸಾರ್ ಅಂದ್ರೆ ರಂಗಣ್ಣ ಮತ್ತೊಂದು ಪ್ರಶ್ನೆಯ ಮೊರೆಹೊಕ್ಕರಲ್ಲ .

ಈಗ ಜನರಲ್ ಆಗಿ ಕೇಳಿದ್ದೀರಾ ಜನರಲ್ ಆಗೇ ಹೇಳ್ತಿನಿ ಒಬ್ಬೊಬ್ಬರದು ಒಂದೊಂದು ದೃಷ್ಟಿ ಇರುತ್ತಪ್ಪಾ ಅಂತ ಉಪೇಂದ್ರ  ಬಗೆಬಗೆಯ ಉದಾಹರಣೆ ಕೊಡ್ತಿರ್ಬೇಕಾದ್ರೆ ಯಥಾಪ್ರಕಾರ ತನಗೆ ಬೇಕಾದ ಉತ್ತರ ಸಿಗದಿದ್ದಾಗ ಮಾತುಗಳನ್ನ ಮಧ್ಯಕ್ಕೆ ಕತ್ತರಿಸುವ ಚಾಳಿ (ಇದ್ದುದ್ದರಲ್ಲಿ ಬೇರೆ ಪತ್ರಕರ್ತರಿಗಿಂತ ವಾಸಿ ) ಮುಂದುವರೆಸಿ ಮತ್ತೊಂದು ದಾಳ ಬಿಟ್ಟರಲ್ಲ

“ನಮಗೂ ನಿಮಗೂ ಲವ್ ಅಂಡ್ ಹೇಟ್ ರಿಲೇಷನ್ ಶಿಪ್ ಬಿಡಿ “ಮತ್ತೆ ಒದ್ದೆ ಕಡ್ಡಿಗೀರಿದ ರಂಗಣ್ಣ

ಸರ್ ಲವ್ ಯಾಕೆ ಬರುತ್ತೆ  ? ಹೇಟ್ ಯಾಕೆ ಬರುತ್ತೆ  ? ಅದನ್ನ ಹೇಳ್ಬಿಡಿ ಈಗ ಅಂದ ಉಪೇಂದ್ರ ವೇಗಕ್ಕೆ ದಾರಿ ಕಾಣದಾಗಿದೆ ರಾಘವೇಂದ್ರನೆ ಅನ್ನೋ ಥರ  ರಂಗಣ್ಣ ಪಕ್ಕದ ಪ್ರಶ್ನೆಗೆ ಪಲ್ಟಿ ಹೊಡೆದು ಕಾವೇರಿ ಕಾಪಾಡು ಅಂತ ಹಳೆ ಕಥೆ ಕಡೆ ತಿರುಗಿ ಬಿಡೋದೆ !?

ಅದ್ಸರಿ ee hero thought that they are elivated to gods position .hence they treat everybody smaller mortals ಎಲ್ಲರನ್ನು ಅವರಿಗಿಂತ ಕೆಳಗಿನವರು ಅನ್ನೋ ಥರ ಅನ್ಕೋಡಿದ್ದಾರೆ ಹೀರೋಗಳು ಅಂತ ನಾವು ಅನ್ಕೊಂಡಿದ್ದೀವಿ

ಅಲ್ಲ ಸಾರ್ ಅನ್ಕೋಳ್ಳೋವರಿಗೇನು ಏನು ಬೇಕಾದ್ರು ಅನ್ಕೋತಾರೆ .ಈಗ ನೀವು ಯಾರಿಗಾದ್ರೂ ಬೈತಿದ್ರೆ ಏನಪ್ಪಾ ಇದು ಹಿಂಗ್ ಮಾತಾಡ್ತಾರೆ ಅಂತ ನಿಮ್ಮನ್ನೇ ಅನ್ನಲ್ವಾ ? ಈಗ ಹತ್ತಿರದಿಂದ ನಿಮ್ಮನ್ನ ತಿಳ್ಕೊಂಡ್ ಮೇಲೆ ತಾನೇ ರಂಗನಾಥ್ ಏನು ಅಂತ ಗೊತ್ತಾಗೋದು ? judgmental ಆಗಿರೋದೇ ದೊಡ್ಡ ಪ್ರಾಬ್ಲಮ್ಮು. ಅದ್ಕೆ ದೊಡ್ಡವರು ಒಂದು ಬೆರಳು ಬೇರೆಯವರ ಕಡೆ ತೋರಿಸಿದ್ರೆ ಉಳಿದ ನಾಲ್ಕು ಬೆರಳು ನಿನ್ನ ಕಡೆಗೇ ತೋರಿಸುತ್ತವೆ .ಪ್ರಪಂಚದ ಬಗ್ಗೆ ಮಾತಾಡೋಕ್ಕಿಂತ ನಮ್ಮನ್ನ ನಾವು ಕರೆಕ್ಟ್ ಮಾಡ್ಕಳಾಣ ಅನ್ನಿಸುತ್ತೆ ಅಲ್ವಾ ಸರ್ ?

ಮತ್ತೆ ಉತ್ತರದೊಳಗೆ ಪ್ರಶ್ನೆ ಹುಟ್ಟಿಸಿ ನಗ್ತಾ ನಗ್ತಾ ಕಾಲೆಳಿತಿದ್ದ ಉಪ್ಪಿಯ ಬುದ್ಧಿವಂತಿಕೆಗೆ ಮಂದಿರದ ರಂಗನೂ ತಲೆದೂಗಲೇ ಬೇಕು ಅಂದಮೇಲೆ ನರಮಾನವ ನಮ್ಮ ರಂಗುರಂಗು ಮಾತಿನ ರಂಗಣ್ಣ ಮಂಕಾಗಿ “ಟ್ರೂ ” ಅನ್ನದೆ ಬೇರೆ ದಾರಿ ಏನಿತ್ತು ?

ಕೆಳಗೆ ಬಿದ್ದರು ಜಟ್ಟಿ ಮೀಸೆ ಮಣ್ಣಾಗಲಿಲ್ಲ ಜಾತಿಯ ರಂಗಣ್ಣ ಹಾ .. ಆರಂಭದಲ್ಲಿ ಎಲ್ಲಾ ಚೆನ್ನಾಗೇ ಇರತ್ತೆ.middle ನಲ್ಲಿ ಒಂದು ನಾಲ್ಕೈದು ಫಿಲಂ ಆದ್ಮೇಲೆ ಏನೋ ಆಟ ಆಡ್ತಾರಪ್ಪ ಅನ್ನಿಸತ್ತೆ . ನಿಮಗನ್ನಿಸಲ್ವಾ ? (ಇತ್ತೀಚಿನ ಬೆಳವಣಿಗೆ ಗಮನಿಸಿದ ಎಲ್ಲರಿಗು ಅರ್ಥವಾಗುವ ಯಶೋಬಾಣವಿದು )

ಸ್ವಲ್ಪ ಖಡಕ್ ಆಗಿ ಸುದೀಪ್ ಯಾರು ಆಟ ಆಡ್ತಾರೆ ? ಅಂದರೂ ಉಪೇಂದ್ರ ಮಾತ್ರ “ಚೆನ್ನಾಗೇ ಇರುತ್ತಲ್ಲ ಸಾರ್ . ಈಗ ಒಂದು ಪಿಕ್ಚರ್ ಬಿಗಿನಿಂಗ್ ಇಂದ ಕಡೆವರೆಗೂ ಎಲ್ಲಾ ಚೆನ್ನಾಗಿದ್ರೆ ನೀವು ನೋಡ್ತೀರಾ ? ಪ್ರಾಬ್ಲೆಮ್ಸ್ ಬರ್ಬೇಕು .ಘಟನೆಗಳಿಗೆ ತಿರುವು ಸಿಗ್ಬೇಕು .ಆಮೇಲೆ ಸರಿಹೋಗಬೇಕು ಆಗ್ಲೇ ಅಲ್ವ ಚೆನ್ನಾಗಿದೆ ಅನ್ನೋದು ಜನ. ಲೈಫು ಅದೇ ಥರ ಅಲ್ವಾ? ಒಬ್ಬೊಬ್ಬರೂ ಒಂದೊಂದು ರೀತಿ ಅದೇ ಮಜಾ ಅಲ್ವಾ ? ಇಲ್ಲದಿದ್ರೆ ಮಾತಾಡಕ್ಕೆ ವಿಷಯಾನೇ ಸಿಕ್ತಾ ಇರಲಿಲ್ಲ . ಮಾರ್ಮಿಕವಾಗಿ ಹೇಳಿದರೂ ಮಾತಿನ ಚಾಟಿ ಸರಿಯಾಗೇ ಬಡಿದಿತ್ತು .

ಆದರೂ ಪಟ್ಟು ಬಿಡದ ಪತ್ರಕರ್ತರು ನಾನಿಲ್ಲದಿದ್ದರೆ ನಿಮ್ಮ ಟೀವಿಗೆ trpನೇ ಇಲ್ಲ ಅಂತ ನನಗೇ ಹೇಳಿದ್ರು ಗೊತ್ತಾ?

ಅದೂ ಕೂಡ ಮಜಕ್ಕೆ ಹೇಳಿದ್ದಾರೆ ಸರ್ ಉಪ್ಪಿ ವರಸೆ ಗೆ ತಬ್ಬಿಬ್ಬಾದರು ತೋರಿಸಿಕೊಳ್ಳದೆ ಈಗ.. ನನ್ನ ಕಲ್ಪನೆಯಲ್ಲಿ ಹೀರೋ ಈ ಥರ ಇರ್ಬೇಕು ಅಂತ ಇದೆಯಾ ನಿಮಗೆ  ಹೇಳಿ ?

ನೋಡಿ ನೋಡಿ ಸಾಕಾಗಿದ್ದ ಸುದೀಪ್ ನನಗೆ ೨ ನಿಮಿಷ ಯಾವುದೇ ಡಿಸ್ಟಿರ್ಬೇನ್ಸ್ ಇಲ್ಲದ ರೀತಿ ಮಾತಾಡೋಕೆ ಬಿಟ್ರೆ ಉತ್ತರ ಕೊಡ್ತೀನಿ .ಆವಾಗಿಂದ ಯಾವ ಉತ್ತರವನ್ನು ಕಂಪ್ಲೀಟ್ ಮಾಡಕ್ಕೆ ಆಗಿಲ್ಲ .

ಸರಕ್ಕನೆ ಬಂದ ಸುದೀಪ್ ಅಸ್ತ್ರಕ್ಕೆ ಪೆನ್ನು ಪಕ್ಕಕ್ಕಿಟ್ಟು ಬೊಂಬಾಯಿ  ಬಾಯಿಗೆ ಬೀಗ ಜಡಿದು  ಕೈ ಕಟ್ ಬಾಯ್ ಮು ಚ್  ಆದರಲ್ಲ ರಂಗಣ್ಣ !

ನಾನು ಒಳ್ಳೆ ಸಿನಿಮಾ ಮಾಡಿದ್ದಕೆ ಫ್ಯಾನ್ಸ್ ಬಂದರೇ ಹೊರತು ಫ್ಯಾನ್ಸ್ ಬಂದ ಮೇಲೆ ನಾನು ಸಿನಿಮಾ ಮಾಡಲಿಲ್ಲ. ಬೇರೆ ಕಡೆ ಡೈವರ್ಟ್  ಆಗೋಕೆ ಹೋದ್ರೆ ಎಲ್ಲ ಕಳೆದು ಕೊಳ್ತೀನಿ . ನಂಗೊತ್ತಿರೋದು ಸಿನಿಮಾ ಚೆನ್ನಾಗಿ ಮಾಡ್ಬೇಕು ಅಷ್ಟೆ .ಫ್ಯಾನ್ಸ್ ಮತ್ತು ಹೀರೋಗಳು ಒಟ್ಟಿಗೆ ಬೆಳೀತಾರೆ .ಆಮೇಲೆ ಹೀರೋಗೆ ಲಾಯಲ್ ಆಗ್ತಾರೆ. ನಾನು ದರ್ಶನ್ ,ಪುನೀತ್ ಒಟ್ಟಿಗೆ ಬಂದ್ವಿ. ಸ್ಪರ್ಧೆ ಇದೆ ಆದ್ರೆ ಟಾಂಟ್ ಗೀನ್ಟ್ ಕೊಟ್ಕೊಂಡು ಬೆಳೀಲಿಲ್ಲ. ಕನ್ನಡ ಚಿತ್ರರಂಗದಲ್ಲಿ ನಾವೆಲ್ಲ ಒಂದೇ .

ಸುದೀಪ್ ಇಂಥಾ ನಿಖರ ಉತ್ತರ ಕೊಟ್ಟ ಮೇಲೆ ಮುಂದಿನ  ವಿವಾದದ ಹುಟ್ಟಿಸುವ middle ಲೀಡರ್ ,ಜೂನಿಯರ್ ಲೀಡರ್ ಪ್ರಶ್ನೆಗಳು ಬಂದ ದಾರಿಗೆ ಸುಂಕವಿಲ್ಲದೆ  ಖಾಲಿ ಕೈಯಲ್ಲಿ ಹೋದವಲ್ಲ .

ಉಪೇಂದ್ರ ವ್ಯವಸ್ಥೆ ಯ ಬಗ್ಗೆ ಸಿನಿಮಾದಲ್ಲಿ ಮಾತಾಡ್ತಿರಲ್ಲ ಲೀಡರ್ ಆಗ್ಬೇಕು ಅಂದ್ಕೊಂಡಿದ್ದೀರಾ ?

ಲೀಡರು ನಾವ್ ಆಗೋದಲ್ಲ . ಎಲ್ಲ ತಿಳ್ಕೊಂಡಿರೋದು ಲೀಡರ್ ಅನ್ನೋದು ನಾವ್ ಮಾಡ್ಕೊಳ್ಳೋದು  ಅಂತ .ಆದ್ರೆ ಅದು ಆಗೋದು . ಜನ ಮಾಡೋದು .ಆ ಗುಣಗಳು ಬರ್ತಿದ್ದ ಹಾಗೆ ಆ ದಾರಿಯಲ್ಲಿ ಹೋಗ್ಬಿಡ್ತಾರೆ .ಇದೆಂಗಪ್ಪ ಮತ್ತೆ ಕನ್ಫ್ಯೂಷನ್ನು ಅನ್ನಬೇಡಿ .ಸತ್ಯ ಹೇಳಿದಾಗೆಲ್ಲ ಕನ್ಫ್ಯೂಶನ್ನೇ . ಇನ್ನು ಸ್ವಲ್ಪ ಕನ್ಫ್ಯೂಶನ್ ಮಾಡ್ಲಾ ?

ಇನ್ನು ನನ್ನ ಲೈಫನಲ್ಲಿ ನಾನು ನಿಮ್ಮ ಹತ್ತಿರ ಕನ್ಫ್ಯೂಶನ್ ಪದ ಬಳಸಲ್ಲ ಆಯ್ತಾ ಅಂತ ಕೈ ಚೆಲ್ಲಿ ಠುಸ್ ಆಯಿತಲ್ಲ ನಮ್ಮ  ಬಿಗ್ ಬುಲೆಟು !!

ಹೀಗೆ ಒಂದಾ? ಎರಡಾ ? ರಂಗಮಂದಿರದೊಳೆಗೆ ರಂಗಣ್ಣನನ್ನೇ ಕಟ್ಟಿ ಹಾಕಿದರು ಮುಕುಂದ ಮುರಾರಿ . ರಂಗಣ್ಣ  ಅನುಭವ,ಅಧ್ಯಯನದಿಂದ ಎದುರಿದ್ದವರ ಎಡೆಮುರಿ ಕಟ್ಟಿರುವುದು ಉಂಟು . ಅನೇಕ ಜನಸಾಮಾನ್ಯರ ಅಚ್ಚುಮೆಚ್ಚಿನ ಪತ್ರಕರ್ತ ನಾಗಿರುವುದು ನಿಜ. ಆದ್ರೆ ಈ ಮಂದಿರದಲ್ಲಿ ರಂಗನೆದುರಿಗೆ ಇದ್ದವರು ರಂಗನಾಥ್ ಜೀ ಇವತಿಂದಿವ್ಸ ಏನಾಗಿದೆ ಅಂದ್ರೆ .. ಅಂತ ಮಾತು ಮಾತಿಗೆ ನೀರು ಬಿಡುವ ಸಚಿವರಾಗಲಿ , ಬ್ರದರ್ ಬ್ರದರ್ ಅಂತ ಪತರ್ ಗುಟ್ಟುವ ರಾಜಕಾರಣಿಗಳಾಗಲಿ ಇರಲಿಲ್ಲ . ಇದ್ದವರು ಸ್ವಂತ ಶಕ್ತಿ ಇಂದ  ಹಲವಾರು ಏಳುಬೀಳುಗಳನ್ನು ಕಂಡು ಕಲೆಯಲ್ಲೇ ಬದುಕನ್ನು ಅರಳಿಸಿಕೊಂಡ ಪ್ರತಿಭಾವಂತ ಕಲಾವಿದರು . ಚಿತ್ರ ನೋಡದೆ , ವಿಷಯ ತಿಳಿದುಕೊಳ್ಳದೆ ಮಾತಾಡುವ ಎಷ್ಟೋ ಜನ ಪತ್ರಕರ್ತರಿಗೆ ಹೋಲಿಸಿದರೆ ರಂಗಣ್ಣ ನೂರು ಪಾಲು ವಾಸಿ . ತಲೆಯಲ್ಲಿ ಬುದ್ದಿ ಇದ್ದರೆ , ಮೈ ಮೇಲೆ ಸಾಧಾರಣ ಬಟ್ಟೆ ಇದ್ದರೂ ತೆರೆಯ ಮೇಲೆ ಬೆಳಗಬಹುದು ಅನ್ನುವುದನ್ನು ಸಾಧಿಸಿರುವುದೂ ನಿಜವೇ . ಆದ್ರೆ ಇತ್ತೀಚೆಗೆ ಯಾಕೋ ಬುದ್ಧಿ ಮಂಕಾದ ಹಾಗೆ ಕಾಣುತ್ತಿದೆ. ಯಾರೋ ಹೇಳಿದ್ದು ಕೇಳಿ 2000ದ ಹೊಸ ನೋಟಿನೊಳಗೆ ನ್ಯಾನೋ ಚಿಪ್ ಸೇರಿದೆ ಅಂತ ನಗ್ನಗ್ತಾ ಹೇಳಿ ನಂಬಿದವರನ್ನ ಬೆಪ್ಪು ತಕಡಿಗಳನ್ನಾಗಿಸಿದರಲ್ಲ . ಅದೇ ಹಾದಿ ಮುಂದುವರೆದಂತೆ ರಂಗಮಂದಿರದಲ್ಲಿ ತಾವೇ ಎಸೆದ ಪ್ರಶೆಗಳ ಒಳಗೆ ತಮ್ಮನ್ನೇ ಸಿಕ್ಕಿಸುತ್ತಾ ಪ್ರಶ್ನೆಗೆ ಪ್ರತಿ ಪ್ರಶ್ನೆ ಎಸೆದ ಬುದ್ಧಿವಂತರ ಮುಂದೆ ಮಖಾಡೆ ಮಲಗುವಂತಾಯ್ತಲ್ಲ!!

-ಭಾನುಮತಿ ಬಿ ಸಿ

 

 

 

 

 

-Ad-

2 COMMENTS

  1. Soooper aagide nimma lekhana. Ranganna is one of my favorite but Yash episode he has taken it too personally….

    He is senior should have handled it better

Leave Your Comments