ನಿಲ್ಲದಿರಲಿ “ಸುಹಾನಾ” ಸುಮಧುರ ಗಾನಯಾನ …

ಇವತ್ತು ವಿಶ್ವ ಮಹಿಳಾ ದಿನಾಚರಣೆ, ಮಹಿಳೆ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಹಾಗೂ ಹೋಗುಗಳಲ್ಲೂ ಪುರುಷನೊಂದಿಗೆ ಕೈಜೋಡಿಸಿದ್ದಾಳೆ. ಆಕೆಯ ಸಾಮರ್ಥ್ಯ ಹರಿದಷ್ಟೂ ವಿಸ್ತಾರವಾಗುವ ಕಡಲಿನಂತಹುದ್ದು.

suhana1

ಮುಂದುವರೆದಿದ್ದೇವೆ ಎಂದು ಭುಜ ಕುಣಿಸುವ ನಮ್ಮವರ ಇಂದಿನ  ವಿಪರ್ಯಾಸ ಅಂದ್ರೆ ಕರ್ನಾಟಕದಲ್ಲಿ ಓರ್ವ ಯುವತಿಯ ಎದೆಗಾರಿಕೆಯನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳ ಮಾಡಲಾಗುತ್ತಿದೆ.. ತಾವು ಮಾಡುತ್ತಿರುವ ಘನಂಧಾರಿ ಕೆಲಸ ಏನೆಂದು ತಿಳಿದುಕೊಳ್ಳಲಾಗದ ಮೂರ್ಖರೆಲ್ಲಾ ಇಂದು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ..
ಸುಹಾನಾ, ಈಕೆ ಹೆಸರು ಕರುನಾಡಿನಲ್ಲಿ ಈಗ ಜನಜನಿತ.. ಹೌದು ಕಳೆದ ಶನಿವಾರ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗುವ ಮೂಲಕ ಇಡೀ ಕರ್ನಾಟಕದ ಕಣ್ಣು ತೆರೆಸಿದ್ದಾರೆ.. ಜೊತೆಗೆ ಕೆಲವೊಂದಿಷ್ಟು ಧರ್ಮಾಂಧರಿಗೆ ಆಹಾರವಾಗಿದ್ದಾರೆ.. ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯ ಹುಡುಗಿ ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ.. ಹಾಗಿದ್ದರೂ ಧರ್ಮ, ಆಚಾರ ವಿಚಾರ ಅಂತಾ ಬೊಗಳೆ ಬಿಡುವ ಮಂದಿ ಒಂದು ಹೆಣ್ಣು ಅನ್ನೋದನ್ನು ಬಿಟ್ಟು ಬಾಯಿಗೆ ಬಂದಂತೆ ಬೊಗಳುತ್ತಿದ್ದಾರೆ..

suhana4ವಿಷಯಕ್ಕೆ ಬರೋಣ, ಮುಸ್ಲಿಂ ಧರ್ಮದಲ್ಲಿ ಕೆಟ್ಟದನ್ನು ಮಾಡಬಾರದು ಅನ್ನೋ ನಿಯಮಗಳಿವೆ.. ಅದಕ್ಕಾಗಿ ಅವರು ಕುಡಿತದ ಚಟಕ್ಕೆ ದಾಸರಾಗುವುದಿಲ್ಲ, ವೇಶ್ಯಾವಟಿಕೆ ನಿಷಿದ್ಧ, ಹಾಗೆಯೇ ಹೆಣ್ಣು ಮಕ್ಕಳು ಸಮಾಜದಲ್ಲಿ ಕೆಟ್ಟ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಅನ್ನೋ ಕಾರಣಕ್ಕೆ ಮುಖ ಮುಚ್ಚಿಕೊಂಡು ಓಡಾಡಲು ಸ್ಕಾರ್ಪ್, ಹಿಜಾಬು, ಬುರ್ಖಾ ಧರಿಸುವಂತೆ ಸಲಹೆ ನೀಡ್ತಾರೆ ಇದನ್ನ ಪಾಲಿಸ್ತಾರೆ ಕೂಡ.. ಇದನ್ನು ನಾವು ಅಂದ್ರೆ ಹೆಣ್ಣು ತೋರಿಕೆ ವಸ್ತುವಲ್ಲ ಅಂತಾ ನಂಬಿರುವ ನಾವೆಲ್ಲ ಒಪ್ಪಿಕೊಳ್ಳೋಣ.. ಆದ್ರೆ ಈ ಯುವತಿ ಮಾಡಿದ ಅಪರಾಧವಾದ್ರು ಏನು..? ಬುರ್ಖಾ, ಸ್ಕಾರ್ಪ್, ಹಿಜಾಬು ಎಲ್ಲವನ್ನೂ ಧರಿಸಿ ಬಂದು ತನ್ನ ಪ್ರತಿಬೆಯನ್ನು ಅನಾವರಣ ಮಾಡಿದ್ದೇ ತಪ್ಪಾಯಿತೆ..? ಇಲ್ಲಾ ಮುಸ್ಲಿಂ ಬಾಲಕಿ ಹಿಂದೂಗಳ ಭಕ್ತಿ ಗೀತೆಯನ್ನು ಹಾಡಿದ್ದು ನಿಮಗೆ ನೋವು ತರಿಸಿದೆಯೇ..? ಕಲೆಗೇಕೆ ಸ್ವಾಮಿ ಧರ್ಮದ ಸಂಕೋಲೆ ?

suhana3ಅದು ಆ ಕಡೆಗೆ ಇರಲಿ, ನಮ್ಮ ಸಮುದಾಯದ ಯುವತಿ ಒಂದು ಭಕ್ತಿ ಗೀತೆಯನ್ನು ಹಾಡಿದಳಲ್ಲಾ ಅನ್ನೋ ಹೆಮ್ಮೆ ಇರಬೇಕಿತ್ತು ಆದ್ರೆ ನಿಮಗೆ ಸಹಿಸಲಾರದ ದುಖಃ ತರಿಸಿದೆ ಅನ್ನೋದೆ ದುರಂತ.. ಆದ್ರೆ ಸುಹಾನಾ ಛಲಗಾತಿ, ಯಾಕಂದ್ರೆ ಆಡಿಷನ್ ನಡೆಯುವಾಗಲೇ ಒಂದು ಮಾತನ್ನಾಡಿದ್ದಾಳೆ.. ನನಗೆ ಯಾವುದೇ ಕಟ್ಟುಪಾಡುಗಳಿಲ್ಲ, ನನ್ನ ಪ್ರತಿಭೆಯನ್ನು ತೋರಿಸಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ.. ನನ್ನನ್ನು ನೋಡಿದ ಮೇಲಾದ್ರು ಇನ್ನೂ ಹಲವಾರು ಪ್ರತಿಭೆಗಳು ಬೆಳಕಿಗೆ ಬರಲಿ, ಕತ್ತಲಲ್ಲೇ ಕಮರಿ ಹೋಗಬಾರದು ಅನ್ನೋ ಅರ್ಥದಲ್ಲಿ ಹೇಳಿದ್ದಾರೆ.. ಇದು ಅಪ್ಪಟ ಸತ್ಯ.. ಯಾಕಂದ್ರೆ ಎಲ್ಲಾ ಸಮುದಾಯಗಳಲ್ಲೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ, ಮುಸ್ಲಿಂ ಸಮುದಾಯದಲ್ಲಿ ಮಾತ್ರ ಅದೇ ಕಟ್ಟುಪಾಡುಗಳನ್ನು ಪಾಲಿಸಲಾಗ್ತಿದೆ..

suhana2

ಸುಹಾನಾ ತಂದೆ ತಾಯಿ ಶಿಕ್ಷಿತ ಕುಟುಂಬದಿಂದ ಬಂದಿದ್ದು, ಪೋಷಕರಿಬ್ಬರೂ ಶಿಕ್ಷಕರಾಗಿದ್ದಾರೆ.. ಅವರಿಗೆ ತಮ್ಮ ಮಗಳನ್ನು ಏನನ್ನು ಮಾಡುತ್ತಿದ್ದಾಳೆ ಅನ್ನೋ ಅರಿವು ಚೆನ್ನಾಗಿದೆ.. ಅಷ್ಟೆಲ್ಲಾ ಇದ್ದರೂ ಧರ್ಮ ಅನ್ನೋ ಏಕೈಕೆ ಅಸ್ತ್ರ ಹಿಡಿದುಕೊಂಡು ಒಂದು ಹೆಣ್ಣನ್ನು ಅಪಮಾನ ಮಾಡುತ್ತಿದ್ದೀನಿ.. ಈ ನಿಮ್ಮ ಮಾತಿಗೆ ಆ ಅಲ್ಲಾಹು ಶಿಕ್ಷೆ ಕೊಡುವುದಿಲ್ಲವೇ..? ಹೆಣ್ಣನ್ನು ಗೌರವಿಸಿ ಅಂತಾ ಕುರಾನ್‍ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಅಲ್ಲವೇ..? ಪಾಕಿಸ್ತಾನದಲ್ಲಿ ಮಲಾಲಾ ಎಂಬಾಕೆ ಶಿಕ್ಷಣ ನಿರಾಕರಿಸುವ ಜನರನ್ನು ಎದುರಿಸಿ ಬಂದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಎಂದಾಗ ತಾಲೀಬಾನಿಗಳು ತೀವ್ರವಾಗಿ ವಿರೋಧಿಸಿದ್ದರು.. ಅವರು ಅಲ್ಲಿ ಮಾಡಿದ ತಪ್ಪನ್ನೇ ನೀವು ಇಲ್ಲಿ ಮಾಡುತ್ತಿದ್ದೀರಿ ಎಂದರೆ ತಾಲಿಬಾನಿಗಳಿಗೂ ನಿಮಗೂ ಇರುವ ವ್ಯತ್ಯಾಸವಾದರೂ ಏನು..? ಒಮ್ಮೆ ನೀವೇ  ಪ್ರಶ್ನೆ ಮಾಡಿಕೊಳ್ಳಿ ಸ್ನೇಹಿತರೇ..!

malalaಅಭಿನಯಿಸುವುದು , ಟಿವಿಯಲ್ಲಿ ಬಂದು ಬಹಿರಂಗವಾಗಿ ಮಾತನಾಡುವುದು ಧರ್ಮ ವಿರೋಧ ಎನ್ನುವ ನೀವುಗಳು ಅದೇ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ ತೆರೆ ಮೇಲೆ ಬಂದಾಗ ಶಿಳ್ಳೆ ಹೊಡೆದು ಕೇಕೆ ಹಾಕುವುದಿಲ್ಲವೇ..? ಪವಿತ್ರ ಇಸ್ಲಾಂ ಧರ್ಮ ಪುರುಷರಿಗೆ ಒಂದು ರೀತಿ, ಹೆಣ್ಣು ಮಕ್ಕಳಿಗೆ ಒಂದು ರೀತಿ ಇದೆಯೇ..?ಭಗವಂತ ಪಕ್ಷಪಾತಿಯಾಗಲು ಸಾಧ್ಯವೇ ? ಭೇಧವೆಣಿಸದ ಉದಾತ್ತನಲ್ಲವೇ ?

ಹೆಣ್ಣಾದ ಮಾತ್ರಕ್ಕೆ ಸಮಾಜದಲ್ಲಿ ಮಾತನಾಡುವುದು ತಪ್ಪು ಎಂದರೆ ಸಂವಿಧಾನ ಕೊಟ್ಟಿರುವ ಹಕ್ಕನ್ನು ಕಿತ್ತುಕೊಂಡಂತೆ ಆಗುವುದಿಲ್ಲವೇ.. ಇಂದು ಒಬ್ಬ ಸುಹಾನ ಎತ್ತಿರುವ ಪ್ರಶ್ನೆಯನ್ನು ಸಮಾಜದ ಎಲ್ಲಾ ಮನೆಯ ಹೆಣ್ಣು ಮಕ್ಕಳು ಕೇಳಿದರೆ ತಂದೆ ತಾಯಿಗಳಾದ ನೀವುಗಳು ಒಪ್ಪುವುದಿಲ್ಲವೇ..? ಕೆಟ್ಟ ಕೆಲಸ ಮಾಡುವುದಕ್ಕೆ ಎಲ್ಲಾ ಧರ್ಮದಲ್ಲೂ ವಿರೋಧವಿದೆ.. ಹಾಗಂದ ಮಾತ್ರಕ್ಕೆ ಕೆಟ್ಟ ಕೆಲಸಗಳು ನಿಂತಿವೆ ಎಂದರ್ಥವೇ..? ಇಲ್ಲ ಗೆಳೆಯರೇ ಎಲ್ಲಾ ಧರ್ಮದಲ್ಲೂ ಒಳ್ಳಯವರು ಕೆಟ್ಟವರು ಇದ್ದೇ ಇರುತ್ತಾರೆ.. ಅದೇ ರೀತಿ ಕೆಟ್ಟವರು ಇರುತ್ತಾರೆ.. ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಆಗದಿದ್ದರೆ ನಿಮ್ಮ ಮನಸ್ಸನ್ನು ಒಮ್ಮೆ ಮುಟ್ಟಿ ಕೇಳಿಕೊಳ್ಳಿ ಸತ್ಯ ಗೊತ್ತಾಗುತ್ತದೆ..
ಸುಹಾನಾ ಎಂದರೆ ಸುಮಧುರ ಹಾಡುಗಳನ್ನು  ಹಾಡುವ ನಾರಿ ಎಂದರ್ಥ.. ಮಲೆನಾಡಿನ ಸೈಯದ್ ಮುನೀರ್ ಹಾಗೂ ನಸ್ರೀನ್ ಪರ್ವಿನ್ ಅವರ ಪುತ್ರಿ ಯಾವುದೋ ಘೋರ ಅಪರಾಧ ಮಾಡಿದ್ದಾರೆ ಎಂದು ಹೆಣ್ಣನ್ನು ಕೀಳಾಗಿ ಕಾಣುವ ಬದಲು ಆಕೆ ನಿಮ್ಮ ಮನೆ ಹುಡುಗಿ ಎಂದು ಪ್ರೀತಿಸಿ, ಸಾಧ್ಯವಾದರೆ ಆಕೆಯನ್ನು ಬೆಂಬಲಿಸಿ.. ಇಲ್ಲದಿದ್ದರೆ ತೆಪ್ಪಗೆ ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ.. ಇನ್ನೊಬ್ಬರನ್ನು ಹಿಯ್ಯಾಳಿಸುವುದಕ್ಕಿಂತ ತಾನು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇನೆ ಅನ್ನೋದನ್ನು ನೋಡಿಕೊಳ್ಳಿ.. ಈಗಾಗಲೇ ಹಿಂದಿ ಸರಿಗಮಪ ಕಾರ್ಯಕ್ರಮದಲ್ಲಿ ಅನೇಕ ಮುಸ್ಲಿಂ ಹೆಣ್ಣು ಮಕ್ಕಳು ಹಾಡಿದ್ದಾರೆ, ಅದೇ ರೀತಿ ಅದೆಷ್ಟೋ ಪಾಕಿಸ್ತಾನಿ ಯುವತಿಯರು ಬಂದು ಹಾಡಿ ಹೋಗಿದ್ದಾರೆ.. ಕಲೆಗೆ ಧರ್ಮ, ಜಾತಿ, ಸಂಪ್ರದಾಯ, ಉಡುಗೆ ತೊಡುಗೆಯ ಅಡ್ಡಿಯಿಲ್ಲ.. ಅವರು ರಾಮನನ್ನು ಭಜಿಸಿದ್ರೆ ಹಿಂದು, ಅಲ್ಲಾಹುನನ್ನ ನೆನೆದರೆ ಮುಸ್ಲಿ, ಯೇಸುವನ್ನು ಆರಾಧಿಸಿದರೆ ಏಸು..
ಇನ್ನೊಂದು ನೀವು ಹೆಮ್ಮೆ ಪಡುವ ವಿಚಾರ ಅಂದ್ರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲ ಇಸ್ಲಾಂ.. ಅದೂ ಅಲ್ಲದೆ ಮುಸ್ಲಿಂ ಹಾಡುಗಾರರ ಪಟ್ಟಿ ನೋಡುವುದಾದರೆ ಮಹೇರ್ ಜಾಯ್ನ್, ಸಮಿ ಯೂಸಫ್, ಮಹಮದ್ ರಫಿ, ಜಾಯ್ನ್ ಮಲ್ಲಿಕ್,  ಇಮ್ರಾನ್ ಖಾನ್, ಅತೀಫ್ ಅಸ್ಲಾಮ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.. ಈ ಹಾಡುಗಾರರ ಮಕ್ಕಳು, ಹೆಣ್ಣುಮಕ್ಕಳು ನಾನು ಹಾಡು ಹಾಡುತ್ತೇನೆ ಎಂದರೆ ಬೇಡ ಎನ್ನುತ್ತಾರೆಯೇ..? ಯೋಚನೆ ಮಾಡಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿ..

suhana5

ನಾನು ಬರೆದಿರುವ ಅಭಿಪ್ರಾಯ ಸರಿಯಾಗಿದೆ ಎನ್ನುವುದಾದರೆ ನೀವು ನೂರಾರು ಜನರಿಗೆ ಇದನ್ನು ಶೇರ್ ಮಾಡುವ ಮೂಲಕ ಬೆಂಬಲಿಸಿ.. ಸುಹಾನ ನೀನು ಹಾಡುವಷ್ಟೂ ದಿವಸ ನಾನು ಸರಿಗಮ ನೋಡುತ್ತೇನೆ ಗೆಳತಿ.. ನೀನಿಟ್ಟ ಹೆಜ್ಜೆ ಹಿಂದಿಡಬೇಡ.. ಮುನ್ನುಗ್ಗು ನಿನ್ನ ಸಾಧನೆಯ ಹಾದಿ ದೊಡ್ಡದಾಗಿರಲಿ.. ನೀನಂದು ಹೇಳಿದ ಮಾತುಗಳು, ಶಿವಮೊಗ್ಗದಲ್ಲಿ ಸೃಷ್ಠಿಯಾಗಿದ್ದ ಕೋಮು ವಿಚಾರ, ಸ್ಕಾರ್ಪ್ ಕಟ್ಟಿಕೊಳ್ಳುವ ವಿಚಾರವನ್ನು ಮರೆಸಿ ನಾವೆಲ್ಲರೂ ಒಂದು ಅನ್ನೋ ಭಾವನೆಯನ್ನು ಹುಟ್ಟು ಹಾಕಿದೆ.. ಇದೇ ನೀನು ಸಾಧಿಸಿದ್ದು.. ನಿನ್ನ ದಾರಿ ಸರಿಯಾಗಿದೆ. ಕಹಿಗಳನ್ನು ಕರಗಿಸುವ ಕಲೆಯ ಮೂಲಕ ಮುನ್ನಡೆ.. ನಾವಿದ್ದೇವೆ ಸದಾ ನಿನ್ನೊಂದಿಗೆ.. 

ಜೋಮ, ಶಿವಮೊಗ್ಗ

-Ad-

Leave Your Comments