ಚೌಕ ಸಿನಿಮಾ ನೋಡಿಲ್ವಾ..? ಭಾನುವಾರ ನಿಮ್ಮ ಮನೆಗೆ ಬರ್ತಿದೆ ನೋಡಿ 

ಕಳೆದ 5 ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ದ್ವಾರಕೀಶ್ ನಿರ್ಮಾಣದ ಮತ್ತೊಂದು ಯಶಸ್ವಿ ಚಿತ್ರ ‘ಚೌಕ’. ಇದು ದ್ವಾರಕೀಶ್ ನಿರ್ಮಾಣದ 50ನೇ ಚಿತ್ರವಾಗಿದ್ದರೆ, ಯುವ ನಿರ್ದೇಶಕ ತರುಣ್ ಶ್ರೀಧರ್ ಅವರ ಚೊಚ್ಚಲ ಪ್ರಯತ್ನವಾಗಿದೆ.

ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಚಿತ್ರದಲ್ಲಿನ ಗಟ್ಟಿಯಾದ ಚಿtv ತ್ರಕಥೆ. 1986 ರಲ್ಲಿ ಬೆಂಗಳೂರು, 1995ರಲ್ಲಿ ಮೈಸೂರು, 2000 ದಲ್ಲಿ ಮಂಗಳೂರು ಹಾಗೂ 2007ರಲ್ಲಿ ವಿಜಯಪುರದಲ್ಲಿ ನಡೆಯುವ ನಾಲ್ಕು ಪ್ರೇಮ ಜೋಡಿಗಳ ಸುತ್ತ ಹೆಣೆದಿರುವ ಕಥೆ ಇದಾಗಿದೆ. ಚಿತ್ರದಲ್ಲಿ ನಾಲ್ಕು ಜನ ನಾಯಕರೂ ತಾವು ಮಾಡದ ತಪ್ಪಿಗಾಗಿ ಜೈಲು ಸೇರುತ್ತಾರೆ. ಆದರೆ ಜೈಲಿನಲ್ಲಿ ಕಾಶೀನಾಥ್ ರಿಂದ ಪ್ರೇರಿತರಾಗುವ ನಾಯಕರು ಜೈಲಿನಿಂದ ಪಾರಾಗುತ್ತಾರೆ. ಚಿತ್ರದಲ್ಲಿ ಖಳನಾದ ಅವಿನಾಶ್ ರಾಜಕಾರಣಿಯಾಗಿದ್ದು, ಕಾಶೀನಾಥ್ ಮಗಳನ್ನು ಕೊಂದು ಆ ಆರೋಪವನ್ನು ಕಾಶೀನಾಥ್ ಮೇಲೆ ಹೊರಿಸಿ ಜೈಲಿಗಟ್ಟಿರುತ್ತಾರೆ. ಹೀಗಾಗಿ ನಾಯಕರು

ಕಾಶೀನಾಥ್ ನಿರಪರಾಧಿ ಎಂದು ನಿರೂಪಿಸಲು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಅವಿನಾಶ್ ಅವರ ಬಾಯಿಂದಲೇ ನಿಜ ಹೇಳಿಸಿ ಕಾಶೀನಾಥ್ ನಿರಾಪರಾಧಿ ಎಂದು ನಿರೂಪಿಸುವುದು ಈ ಚಿತ್ರದ ಕಥೆ. ಇನ್ನು ನಾಯಕರಾದ ವಿಜಯ ರಾಘವೇಂದ್ರ, ಪ್ರೇಮ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡ ಕಾಶೀನಾಥ್ ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೆ, ಚಿತ್ರಕಥೆಗೆ ಅಲ್ಲಲ್ಲಿ ನಗೆಯ ಚಟಾಕಿ ಹಾರಿಸುವಲ್ಲಿ ಚಿಕ್ಕಣ್ಣ ಯಶಸ್ಸು ಕಂಡಿದ್ದಾರೆ. ದರ್ಶನ್ ಅತಿಥಿಯಾಗಿ ಸಾಹಸ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ಚಿತ್ರದ ಓಟಕ್ಕೆ ಮ್ಯೂಸಿಕ್ ಬಹಳ ಸಹಕಾರಿಯಾಗಿದ್ದು ಐದು ಜನ ಸಂಗೀತಜ್ಞರು ಈ ಚಿತ್ರಕ್ಕಾಗಿ ಸಂಗೀತ ನೀಡಿದ್ದು ವಿಶೇಷ. ಗುರುಕಿರಣ್, ವಿ.ಹರಿಕೃಷ್ಣ, ಅರ್ಜುನ್ ಜನ್ಯ, ವಿ.ಶ್ರೀಧರ್ ಹಾಗೂ ಅನೂಪ್ ಸೀಲಿನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ದಿಗ್ಗಜರು. ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ‘ಅಲ್ಲಾಡ್ಸು ಅಲ್ಲಾಡ್ಸು’ ಗೀತೆಯು ಕನ್ನಡದ ಆಲ್ ಟೈಮ್ ಹಿಟ್ ಚಿತ್ರಗೀತೆಯಾಗಿದ್ದರೆ, ಅರ್ಜುನ್ ಜನ್ಯ ಸಂಗೀತದ ಅಪ್ಪ ಐ ಲವ್ ಯು ಪಾ ಹಾಗೂ ವಂದೇ ಮಾತರಂ ಹಾಡು ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ.

ಚೌಕ ಚಿತ್ರವೂ 2017ರ ಸ್ಯಾಂಡಲ್ ವುಡ್ ನ ದೊಡ್ಡ ಹಿಟ್ ಚಿತ್ರವಾಗಿದ್ದು, ಚಿತ್ರ ರಸಿಕರಿಗೆ ಮೂರು ಗಂಟೆ ರಸದೌತಣ ನೀಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಈ ಚಿತ್ರವು ಸಮಾಜಕ್ಕೆ ಹಾಗೂ ಯುವಕರಿಗೆ ಧನಾತ್ಮಕ ಸಂದೇಶವನ್ನು ರವಾನಿಸುವ ಹಲವು ಅಂಶವನ್ನು ಹೊಂದಿರುವುದು ಈ ಚಿತ್ರದ ವಿಶೇಷ. ಇದೇ ಭಾನುವಾರ ಮೊದಲ ಬಾರಿಗೆ ಉದಯ ಟಿವಿಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗಲಿದೆ. ನೋಡಿ ಆನಂದಿಸಿ.

-Ad-

Leave Your Comments