‘ನಾನು ಕನ್ನಡಿಗ’ ಎಂದು ಹೇಳಿಕೊಂಡ ರಜನಿಕಾಂತ್!

‘ನಾನು ಮತ್ತು ನನ್ನ ಕುಟುಂಬದವರು ಕನ್ನಡಿಗರು. ನಾನು ಕಲಿತಿದ್ದು ಕನ್ನಡ ಮಾಧ್ಯಮದಲ್ಲೇ. ಜೀವನೋಪಾಯಕ್ಕೆ ತಮಿಳು ಭಾಷೆ ಕಲಿತೆ…’ ಇದು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಾನೊಬ್ಬ ಕನ್ನಡಿಗ ಎಂದು ಹೇಳಿಕೊಂಡಿರುವ ಪರಿ.

ಕಳೆದ ಐದು ದಿನಗಳಿಂದ ಚೆನ್ನೈನ ರಾಘವೇಂದ್ರ ಮಂಟಪಂನಲ್ಲಿ ಅಭಿಮಾನಿಗಳ ಜತೆಗಿನ ಸಭೆ ಹಾಗೂ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಜನಿ, ಶನಿವಾರ ತಮ್ಮ ಹಿಂದಿನ ಜೀವನವನ್ನು ಮೆಲಕು ಹಾಕುತ್ತಾ ತಾನೋಬ್ಬ ಕನ್ನಡಿಗ ಎಂಬುದನ್ನು ಹೇಳಿಕೊಂಡರು. ಈ ವೇಳೆ ಅವರು ಹೇಳಿದಿಷ್ಟು…

‘ನಾನು, ನನ್ನ ಕುಟುಂಬದವರು ಕನ್ನಡಿಗರು. ನಾನು ಶಾಲೆಯಲ್ಲಿ ಕಲಿತಿದ್ದು, ಕನ್ನಡ ಮಾಧ್ಯಮದಲ್ಲೇ. ಈಗಲೂ ನನ್ನ ಸಹೋದರರ ಜತೆ ಕನ್ನಡದಲ್ಲೇ ಮಾತನಾಡುತ್ತೇನೆ. ನಮ್ಮದು ಮಧ್ಯಮ ವರ್ಗಕ್ಕಿಂತ ಕೆಳಗಿನ ಬಡ ಕುಟುಂಬದವರಾಗಿದ್ದೆವು. ಹೀಗಾಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ನನಗೆ ಮೊದಲು ತಮಿಳು ಬರುತ್ತಿರಲಿಲ್ಲ. ಇಂಗ್ಲೀಷ್ ಅಂತೂ ಸ್ವಲ್ಪವೂ ಬರುತ್ತಿರಲಿಲ್ಲ. ನನಗೆ ತಮಿಳು ಚಿತ್ರರಂಗ ತಮಿಳು ಭಾಷೆ ಕಲಿಸಿತು.

ನನ್ನಲ್ಲಿರುವ ಪ್ರತಿಭೆಯನ್ನು ಮೊದಲು ಗುರುತಿಸಿದ್ದು, ನನ್ನ ಸ್ನೇಹಿತ ರಾಜ್ ಬಹದ್ದೂರ್. ಅಂದು ಬಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನನ್ನು ನಾಟಕಗಳಿಗೆ ಕರೆದೊಯ್ಯುತ್ತಿದ್ದ. ಆತನಿಗೂ ಸಿನಿಮಾ ನಾಟಕಗಳೆಂದರೆ ಇಷ್ಟ. ನಾವಿಬ್ಬರೂ ಒಟ್ಟಿಗೆ ನಾಟಕಗಳನ್ನು ಮಾಡಿದ್ದೆವು. ನನ್ನ ಪ್ರತಿಭೆ ನೋಡಿ ಆತ ನನಗೆ ಧುರ್ಯೋಧನನ ಪಾತ್ರ ಕೊಟ್ಟ. ಆತನ ಒತ್ತಾಯದ ಮೇರೆಗೆ ನಾನು ಮದ್ರಾಸ್ ಗೆ ಬಂದು ಸೇರಿದೆ.

ಬಾಲಚಂದರ್ ಅವರ ಹೊರತು ನನ್ನ ಜೀವನ ಅಪೂರ್ಣ. ಆರಂಭದಲ್ಲಿ ಅವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ಅಭಿನಯಿಸುವ ಕುರಿತು ಅವಕಾಶ ಕೇಳಿದ್ದೆ. ಅವರು ತಮಿಳಿನಲ್ಲಿ ಯಾವುದಾದರು ಅಭಿನಯ ಮಾಡಿ ತೋರಿಸು ಎಂದರು. ನಾನು ಓದಿದ್ದು, ಕಾರ್ಪೋರೇಷನ್ ಶಾಲೆಯ ಕನ್ನಡ ಮಾಧ್ಯಮದಲ್ಲಿ. ಹೀಗಾಗಿ ತಮಿಳು ಬರಲ್ಲ ಅಂದೆ. ಇಂಗ್ಲೀಷ್ ನಲ್ಲಿ ಮಾಡು ಎಂದರು. ಇಂಗ್ಲೀಷ್ ಕೂಡ ಬರಲ್ಲ ಎಂದೇ. ಆಗ ಬಾಲಚಂದರ್ ಅವರು ನಿನಗೆ ಯಾವ ಭಾಷೆ ಬರುತ್ತದೆಯೋ ಅದರಲ್ಲೇ ಮಾಡು ಎಂದರು. ನಂತರ ಒಂದು ಪುಟ್ಟ ಪಾತ್ರ ಮಾಡು. ಆಮೇಲೆ ಪೂರ್ಣ ಪ್ರಮಾಣದ ಪಾತ್ರ ನೀಡುತ್ತೇನೆ ಎಂದು ಹೇಳಿ ಅಪೂರ್ವ ರಾಗಂಗಳ್ ಚಿತ್ರದಲ್ಲಿ ಅವಕಾಶ ಕೊಟ್ಟರು. ಅಂದು ಅವರು ನೀಡಿದ ಬೆಂಬಲದಿಂದಾಗಿ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ.’

-Ad-

Leave Your Comments