ಥಗ್ಸ್ ಆಫ್ ಮಾಲ್ಗುಡಿ ಸದ್ಯಕ್ಕಿಲ್ಲ . ಯಾಕಂತೆ ?

ಗ್ರೇಟ್ ಕಾಂಬಿನೇಷನ್ನಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾಯ್ತಾ ಇರ್ತಾರೆ. ಒಬ್ಬ ಅದ್ಭುತ ಸ್ಟಾರ್ ಮತ್ತು ಒಬ್ಬ ಅದ್ಭುತ ನಿರ್ದೇಶಕ ಒಟ್ಟಿಗೆ ಕೆಲಸ ಮಾಡಿದರೆ ಆ ಸಿನಿಮಾ ಹೇಗೆ ಬರಬಹುದು ಅನ್ನೋ ಕುತೂಹಲವೇ ಆ ಸಿನಿಮಾಗಾಗಿ ಪ್ರತಿಕ್ಷಣವೂ ಕಾಯುವಂತೆ ಮಾಡುತ್ತದೆ. ಅಂಥಾ ಸಿನಿಮಾ ಥಗ್ಸ್ ಆಫ್ ಮಾಲ್ಗುಡಿ.

ರಕ್ಷಿತ್ ಶೆಟ್ಟಿಯ ಸ್ಕ್ರಿಪ್ಟು. ಕಿಚ್ಚ ಸುದೀಪ್ ನಟನೆ. ಇವೆರಡೂ ಈ ಸಿನಿಮಾದಲ್ಲಿದೆ ಅಂದ್ರೆ ಅದು ಹಬ್ಬ. ಅದರ ಜೊತೆ ಕತೆ ಕೂಡ ಸಕತ್ತಾಗಿದೆ. ಭಾರತದಲ್ಲಿದ್ದ ಥಗ್‌ಗಳ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಅದಕ್ಕಾಗಿ ರಕ್ಷಿತ್ ಶೆಟ್ಟಿ ಸುಮಾರು ತಿಂಗಳುಗಳಿಂದ ಥಗ್ ಇತಿಹಾಸವನ್ನು ಓದುತ್ತಿದ್ದಾರೆ. ಚಿತ್ರಕತೆ ರಚಿಸುತ್ತಿದ್ದಾರೆ. ಈ ಸಿನಿಮಾಗೆ ಈ ವರ್ಷ ಚಿತ್ರೀಕರಣ ಶುರುವಾಗುವ ಸೂಚನೆ ಇತ್ತು. ಕನಿಷ್ಠ ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷಾರಂಭದಲ್ಲಿ ಸಿನಿಮಾ ನೋಡಬಹುದು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಸಿನಿಮಾ ಇನ್ನೂ ತಡವಾಗುವ ಸೂಚನೆ ಸಿಕ್ಕಿದೆ. ಅದನ್ನು ಖುದ್ದು ಸುದೀಪ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಸದ್ಯ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರಕತೆಗಾಗಿ ಸಮಯ ಕೇಳಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ. ಥಗ್ಸ್ ಆಫ್ ಮಾಲ್ಗುಡಿ ಸಿನಿಮಾ ಸ್ವಲ್ಪ ತಡವಾಗಲಿದೆ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಕ್ಷಿತ್, ತಾನು ಯಾವಾಗ ಶ್ರೀಮನ್ನಾರಾಯಣ ಸಿನಿಮಾ ಮುಗಿಯಲಿದೆ ಎಂದು ಕಾಯುತ್ತಿದ್ದೇನೆ. ಚಿತ್ರಕತೆ ಬರೆಯಲು ಕಾತರಿಸುತ್ತಿದ್ದೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಈ ಸಿನಿಮಾದ ನಿರೀಕ್ಷೆ ಮತ್ತಷ್ಟು ಜಾಸ್ತಿಯಾಗಿದೆ. ಯಾಕೆಂದರೆ ಅತ್ತ ಹಿಂದಿಯಲ್ಲಿ ಅಮಿರ್ ಖಾನ್ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ಮಾಡುತ್ತಿದ್ದಾರೆ. ಅದರ ಕತೆಯೂ ಥಗ್‌ಗಳಿಗೆ ಸಂಬಂಧಿಸಿದ್ದು. ಹೀಗಾಗಿ ಥಗ್ಸ್ ಆಫ್ ಮಾಲ್ಗುಡಿ ಕನ್ನಡ ಚಿತ್ರರಂಗದ ದೊಡ್ಡ ಸಿನಿಮಾವಾಗುವುದರಲ್ಲಿ ಅಚ್ಚರಿಯಿಲ್ಲ.

-Ad-

Leave Your Comments