ಉಪ್ಪಿನಷ್ಟೇ ರುಚಿಯಾದ ‘ಉಪ್ಪಿನಕಾಗದ”ದ ಹಾಡುಗಳು

ಬಿ ಸುರೇಶ ನಿರ್ದೇಶನದ  ‘ಉಪ್ಪಿನ ಕಾಗದ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಹಾಗೇ  ಸುಮ್ಮನೆ ನಡೆವಾಗ, ಡ್ರೈವ್ ಮಾಡುವಾಗ , ಸಂಜೆ ಇಳಿವಾಗ , ದಿಂಬಿಗೆ ತಲೆಯಾನಿಸಿ ನಿದಿರೆ ಆವರಿಸುವ ಮುನ್ನ ..ಉಪ್ಪಿನ ಕಾಗದದ ಹಾಡುಗಳನ್ನ ಕೇಳ್ತಾ ಇದ್ದರೆ ನಮ್ಮೊಳಗೇ ನಮ್ಮನ್ನೇ  ಸೆಳೆದು ಬಿಡುವ ಮೌನ, ಮಾಧುರ್ಯ ತುಂಬಿಕೊಳ್ಳುತ್ತದೆ.  ನಿಧನಿಧಾನವಾಗಿ ಹಾಡಿನ ಸಾಲುಗಳು ಆಂತರ್ಯಕ್ಕೆ ಇಳಿಯುತ್ತವೆ.

chetana theerthahalli ಚೇತನಾ ತೀರ್ಥಹಳ್ಳಿ ಬರೆದಿರುವ “ಸಂತೇಲಿ ಸಂತ ನಿಂತಾನ ಸಂಸಾರದ ಸುಖವ ಬೇಡಂತಾನ … ಕೆಡುಕನು ಹುಡುಕಿ ಅಲಿತಾನಾ ಎನಗಿಂತ ಕೆಡುಕಿಲ್ಲ ಅನುತಾನಾ …ತನ್ನೊಳಗೆ ತಾನೆ ತಂದನಾನ … ಆಸೆ ಪಾಸೆ ಕಡಿ ಅಂತಾನ ಆರು ಕೋಟೆಗಳ ಜಿಗಿ ಅಂತಾನ .. “ಏರುದನಿಯಲ್ಲಿ ಫಯಾಜ್ ಖಾನ್ ಹಾಡುತ್ತಿದ್ದರೆ ಒಳ ಒಳಗೆ ಚಿಂತನೆಗೆ ಸರಿಯುವ ಅನುಭವ.

ಬೀಸು ಕೊಟ್ಟಿರುವ ‘ಅಲೆ ಅಲೆ ಸರಿಗಮ.. ಸುಯ್ಯಿ.. ಸುಯ್ಯಿ.. ಗಾಳಿಯ ಧುಮ ಧುಮ ಕೇಳಲೇಬೇಕು.ನಿನ್ನೆಗು ನಾಳೆಗೂ ಸೇತುವೆ  ಕಟ್ಟಿ ಇಂಥಾ ಪ್ರತಿ ಸಾಲುಗಳು ಅಲ್ಲಲ್ಲೇ ಕಟ್ಟಿ ನಿಲ್ಲಿಸಿಕೊಳ್ಳುತ್ತವೆ.

ಜಯಂತ್ ಕಾಯ್ಕಿಣಿಯವರ ಮೂಲಕ ಗಾಂಧೀಜಿಯವರ “ವೈಷ್ಣವ ಜನತೋ’ ಉಪ್ಪಿನ ಕಾಗದಕ್ಕೆ ಬಂದಿದೆ.  ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ ..ಮನುಜ ರೂಪದಲ್ಲಿ ದೇವರ ಕಂಡರೆ ಪುಣ್ಯ ಧಾಮಗಳೇ ಹೃದಯದಲಿ … ಎನ್ನುವಂಥ ಸಾಲುಗಳಾಗಿ ಬಂದಿದೆ.  ಸಂಗೀತ ಕಟ್ಟಿ ಹಾಡಿದ ಮೇಲೆ ಮನಕ್ಕಿಳಿಯದೆ ಇದ್ದೀತೆ !

uppina-kagada-harikrishnaಮತ್ತೆ ಚೇತನಾ ತೀರ್ಥಹಳ್ಳಿಯ ಹಾಡು ಜೀವ ನದಿಗೆ ಬಲೆಯ ಬೀಸಿ ಹರಿವು ಹಿಡಿವ ನೀನು ….ಯಾರಿಗ್ಯಾರು ಯಾಕಾದಾರು ಎಲ್ಲ ಶೂನ್ಯ ಶೂನ್ಯ ...ನೀವು ಸಹೃದಯರು, ಸೂಕ್ಷ್ಮಜ್ಞರಾಗಿದ್ದರೆ ನಿಮ್ಮನ್ನ ಆವರಿಸಿಕೊಳ್ಳದಿದ್ದರೆ ನೋಡಿ. ಉಪ್ಪಿನಕಾಗದದ ಎಲ್ಲ ಹಾಡುಗಳು ಮೌನದಲ್ಲೇ ನಮ್ಮನ್ನು ಮಂಥನಕ್ಕೆ ದೂಡುತ್ತವೆ. ಮಾತು-ಧಾತುಗಳ ಸಮ್ಮಿಲನವಿಲ್ಲಿ ಮೇಳೈಸಿದೆ. ಹರಿಕೃಷ್ಣರ ಸಂಗೀತ ಮೌನದ ಜೊತೆಗೇ ಮೆಲುದನಿಯಲ್ಲಿ ಮಾತಿಗಿಳಿಯುವಂತಿದೆ. ಎಷ್ಟು ಬಾರಿ ಕೇಳಿದರೂ ಸಾಕೆನಿಸದ ಸ್ವರಮಾಧುರ್ಯವಿದೆ. ಹಿನ್ನೆಲೆ ಸಂಗೀತಕ್ಕೆ ಬಳಸಿರುವ ವಾದ್ಯಗಳ ನವಿರಾದ ನಾದ   ತುಂತುಂಬಿಕೊಳ್ಳುವಂತೆ ಮನವನ್ನು ಕರೆಯುತ್ತದೆ.

 ಬೀಸು ಹೇಳಿರುವಂತೆ ಉಪ್ಪಿನ ಕಾಗದವೆಂದರೆ   ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನ ಸಪಾಟು ಮಾಡಿಕೊಳ್ಳುವುದು. ಆಗ ಬದುಕು ಸುಂದರವಾಗುತ್ತದೆ.  ಎಲ್ಲ ಧ್ವನಿಗಳಿಗೆ ಎಲ್ಲ ಬಣ್ಣಗಳಿಗೂ ಬದುಕುವ ಅವಕಾಶ ಸಿಗಬೇಕು.ಬದುಕು ಎಲ್ಲವನ್ನೂ ಒಳಗೊಳ್ಳುವ ನದಿಯಂತಾಗಬೇಕು .ಬಹುತ್ವವೇ ಈ ದೇಶವನ್ನ ಈ ಜಗತ್ತನ್ನು ಒಟ್ಟಾಗಿ ಇಡುವಂತಹ ಒಂದು ತತ್ವ ಎಂದು ಅತ್ಯಂತ ವಿನಯದಿಂದ ಹೇಳಲು ಹೊರಟಿರುವ ಸಿನಿಮಾ.

shyalajanaagಭಾರೀ  ಮಳೆಯ ನಡುವೆ ಭೋರ್ಗರೆಯುವ ನದಿಯ ಪಾತ್ರದಲ್ಲಿ ೧೫  ದಿವಸ ಚಿತ್ರೀಕರಣ ಮಾಡಿರುವ ಬೀಸು ತಂಡದಲ್ಲಿ ಹೊಸಬರಿಗೆ ನಿರ್ದೇಶನದಲ್ಲಿ ಸಹಕರಿಸುವ ಅವಕಾಶ ಸಿಕ್ಕಿದೆ.  ಮಿಲನ ,ಅನುಷಾ,  ರಾಘು ಅರಸ್ ಮಾರುತಿ ಸಹನಿರ್ದೇಶಕರು. ನಿರ್ಮಾಪಕಿ ಶೈಲಜಾ ನಾಗ್.

uppina kagada apoorava

ಚಿತ್ರದಲ್ಲಿ ಇಳೆಯರಾಜರಂತೆ ಕಾಣುವ ನಾಗಾಭರಣ ಮುಖ್ಯ ಪಾತ್ರದಲ್ಲಿದ್ದಾರೆ . ಮಗಳ ಪಾತ್ರದಲ್ಲಿ ಮಣ್ಣಿನ ಬಣ್ಣದ ಗಟ್ಟಿಮುಟ್ಟಾದ ಚೆಲುವೆ ಅಪೂರ್ವ ಅಭಿನಯಿಸಿದ್ದಾರೆ. ಅನುರೂಪ,ವಾರಸುದಾರ ಧಾರಾವಾಹಿಗಳಲ್ಲಿ ನಟಿಸಿರುವ ಅಪೂರ್ವಾಗೆ ಇದು ಮೊದಲ ಸಿನಿಮಾ. ನುರಿತ ಕಲಾವಿದ ಮಂಡ್ಯ ರಮೇಶ್ ಮುಂತಾದವರಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಉಪ್ಪಿನ ಕಾಗದ  ನೋಡಬಹುದು.  ನಂತರದ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ನಿಮ್ಮನ್ನು  ಮುತ್ತಿಕೊಳ್ಳುವ, ಅಪ್ಪಿಕೊಳ್ಳುವ, ಒಳಗೊಳಗೇ ಕಾಡುವ  ಹಾಡುಗಳು ಇಲ್ಲಿವೆ https://youtu.be/1MjmS0EQFqg

 

-Ad-

Leave Your Comments